ಸಂಗಾತಿಗೆ ನೀವೇ ಗಿಫ್ಟ್ ರೆಡಿ ಮಾಡಿ, ಸಲೋನಿ ಸಹಾಯ ಮಾಡ್ತಾರೆ

ಟೀಮ್​​ ವೈ.ಎಸ್​​.

ಸಂಗಾತಿಗೆ ನೀವೇ ಗಿಫ್ಟ್ ರೆಡಿ ಮಾಡಿ, ಸಲೋನಿ ಸಹಾಯ ಮಾಡ್ತಾರೆ

Saturday October 10, 2015,

3 min Read

ಅದೆಲ್ಲದಕ್ಕೂ ಪ್ರೀತಿಯೇ ಮೂಲ ಕಾರಣ. ಕಾಲೇಜು ದಿನಗಳಲ್ಲಿ ಸಲೋನಿ ಚಂದಾಲಿಯಾ, ರಾಹುಲ್ ಚಂದಾಲಿಯಾರನ್ನು ಪ್ರೀತಿಸುತ್ತಿದ್ದರು. “ನಾನು ನನ್ನ ಪ್ರಿಯಕರನಿಗೆ ಪರ್ಸನಲೈಸ್ಡ್ ಗಿಫ್ಟ್ ಕೊಡಬೇಕು ಅಂತ ಸದಾ ತುಡಿಯುತ್ತಿದ್ದೆ. ಆದರೆ, ಮಾರುಕಟ್ಟೆಯಲ್ಲಿ ಸಖತ್ತಾಗಿದೆ ಎನ್ನುವಂತಹ ಯಾವುದೇ ಉಡುಗೊರೆಗಳು ಇರಲಿಲ್ಲ. ಹೀಗಾಗಿ, ನಾವು ಪರಸ್ಪರ ಗಿಫ್ಟ್ ಕೊಡುವಾಗಲೆಲ್ಲಾ, ಉಡುಗೊರೆಗಳಿಗೆ ವೈಯುಕ್ತಿಕ ಟಚ್ ನೀಡಿ ರೆಡಿ ಮಾಡುತ್ತಿದ್ದೆವು,” ಎನ್ನುತ್ತಾರೆ ಸಲೋನಿ ಚಂದಾಲಿಯಾ. ಅವರು ಈಗ ರೆಡ್ ಎನ್​​ ಬ್ರೌನ್, ಗಿಫ್ಟ್ ಉತ್ಪನ್ನಗಳ ಮಾರಾಟ ಸಂಸ್ಥೆ ಸ್ಥಾಪಿಸಿದ್ದಾರೆ. ಅಷ್ಟೇ ಅಲ್ಲ, ಕಾಲೇಜಿನ ಪ್ರಿಯಕರ ರಾಹುಲ್ ಜೊತೆ ಸುಖ ಸಂಸಾರ ನಡೆಸುತ್ತಿದ್ದಾರೆ.

ವೈಯುಕ್ತೀಕರಿಸಿದ ಉಡುಗೊರೆಗಳಿಗೆ ಇರುವ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ತುಂಬಲು ಸಲೋನಿ ನಿರ್ಧರಿಸಿದರು. ಮದ್ವೆಯಾಗಿ ಎರಡು ವರ್ಷದ ಬಳಿಕ ಪತಿ ರಾಹುಲ್ ಜೊತೆ ಸೇರಿಕೊಂಡು ರೆಡ್ ಎನ್​​ ಬ್ರೌನ್​​ ಮಳಿಗೆ ಆರಂಭಿಸಿದರು. ಈ ನವ್ಯೋದ್ಯಮಕ್ಕೆ ಹೊಸ ಆಯಾಮವೂ ಇದೆ. ರೆಡ್ ಎಂದರೆ ಪ್ರೀತಿ, ಬ್ರೌನ್ ಎಂದರೆ ಮನುಷ್ಯರು. ಮನುಷ್ಯರಿಗೆ ಈ ವೇದಿಕೆ ಮೂಲಕ ಪ್ರೀತಿಯನ್ನು ಹಂಚಿರಿ ಎನ್ನುವ ಉದ್ದೇಶ ಈ ರೆಡ್ ಎನ್​​ ಬ್ರೌನ್ ಹಿಂದಿದೆ.

image


“ಯಾವುದಾದರೂ ಲೈಫ್​​ಸ್ಟೈಲ್​​​ ಮಳಿಗೆಗೆ ಹೋದರೆ, ಅಲ್ಲಿ ನಿಮಗೆ ಬೇಕಾದ ಎಲ್ಲವೂ ಸಿಗುತ್ತವೆ, ಶೂ, ಟ್ರೌಸರ್​​ಗಳು, ಟಾಪ್ಸ್, ಅಕ್ಸೆಸರೀಸ್ ಎಲ್ಲವೂ ಅಲ್ಲಿ ಲಭ್ಯ. ಎಲ್ಲಾ ಬ್ರಾಂಡ್​​ಗಳು ಒಂದೇ ಮಳಿಗೆಯಲ್ಲಿ ಸಿಗುತ್ತವೆ. ಅದೇ ರೀತಿಯಲ್ಲಿ ಎಲ್ಲರಿಗೂ ಬೇಕಾಗುವ, ಎಲ್ಲರಿಗೂ ಇಷ್ಟವಾಗುವ ಉಡುಗೊರೆಗಳು ಒಂದೇ ಜಾಗದಲ್ಲಿ ಸಿಗುವಂತೆ ಮಾಡಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು. ಈಗ ನಾವು ಒಂದೇ ಸೂರಿನಡಿ ಬ್ರಾಂಡೆಡ್ ಕೇಕ್ ಮಳಿಗೆಯನ್ನೂ ಆರಂಭಿಸಿದ್ದೇವೆ” ಎನ್ನುತ್ತಾರೆ ಸಲೋನಿ.

ಆಲ್ಕೋಹಾಲ್ ಮಿನಿಯೇಚರ್ ಬೊಕೆ, ಚಾಕೋಲೇಟ್ ಬೊಕೆ, ಜ್ಯುವೆಲ್ಲರಿ ಬ್ರೀಫ್ಕೇಸ್​​ನಲ್ಲಿ ಸ್ವೀಟ್ ಬಾಕ್ಸ್… ಹೀಗೆ ಪ್ರತಿಯೊಂದು ಉತ್ಪನ್ನವೂ ರೆಡ್ ಎನ್​​ ಬ್ರೌನ್ನ್ನಲ್ಲಿ ವಿಭಿನ್ನವಾಗಿರುತ್ತದೆ.

ಉಡುಗೊರೆಗಳಿಗಿಂತ ಹೆಚ್ಚಾಗಿ ಇದು ನಾವು ಕಳುಹಿಸುವ ಪ್ರತಿ ಉತ್ಪನ್ನದ ಮೂಲಕ ಖುಷಿಯನ್ನು ತಲುಪಿಸುವ ಬದ್ಧತೆಯಾಗಿದೆ, ಎನ್ನುತ್ತಾರೆ ಸಲೋನಿ. ವ್ಯಕ್ತಿಗತ ಉಡುಗೊರೆಗಳ ಸಾಲು ತುಂಬಾ ದೊಡ್ಡದಿದೆ. ದೀಪಗಳಾಗಿ ಪರಿವರ್ತಿಸಿದ ಹಕ್ಕಿಗೂಡು, ವಿಭಿನ್ನ ಸಂದರ್ಭಗಳಿಗೆ ಒದಗುವ ವಿಶಿಷ್ಟ ದೀಪಗಳು, ಹೃದಯಕ್ಕೆ ಹತ್ತಿರವಾಗುವಂತೆ ವೈಯುಕ್ತಿಕ ಸಂದೇಶಗಳನ್ನು ಹೊತ್ತ ಟಿಶ್ಯೂ ರೋಲ್​​ಗಳೂ ಕೂಡಾ ಇಲ್ಲಿನ ವೈವಿಧ್ಯಮಯ ಸಂಗ್ರಹದಲ್ಲಿವೆ.

ರೆಡ್ ಎನ್​​ ಬ್ರೌನ್ ತಂಡವು, ಉಡುಗೊರೆಯನ್ನು ಪ್ಯಾಕಿಂಗ್ ಮಾಡುವುದರಲ್ಲೂ ವಿಶೇಷ ಆಸಕ್ತಿ ವಹಿಸುತ್ತದೆ. ಎಷ್ಟಾದರೂ ಉಡುಗೊರೆಯಷ್ಟೇ, ಅದನ್ನು ನೀಡುವ ವಿಧಾನವೂ ಪ್ರಾಮುಖ್ಯತೆ ಪಡೆದಿದೆ. ಈ ವಿಶಿಷ್ಟ ಟಚ್, ನೀವು ನಿಮ್ಮ ಸಂಗಾತಿಯನ್ನು ಎಷ್ಟು ಪ್ರೀತಿಸುತ್ತೀರಿ ಎನ್ನುವುದನ್ನು ಪ್ರದರ್ಶಿಸುತ್ತದೆ.

ಉದ್ಯಮದ ಆರಂಭ

ಸಲೋನಿಯವರು 2013ರ ಆಗಸ್ಟ್​​ನಲ್ಲಿ ಉದ್ಯಮ ಆರಂಭಿಸಿದರು. ಮುಂಬೈನ ಬೈಕುಲ್ಲಾದಲ್ಲಿ ರಿಟೇಲ್ ಮಳಿಗೆ ಹೊಂದಿದ್ದಾರೆ. ಉದ್ಯಮವು ಈಗ www.rednbrown.com ಮೂಲಕ ಆನ್​​ಲೈನ್ ನಲ್ಲೂ ಶುರುವಾಗಿದೆ. ಅವರ ಕ್ಯಾಟಲಗ್ ಕೂಡಾ ಆಸಕ್ತಿದಾಯಕವಾಗಿದೆ. ಕೇವಲ 20 ಉತ್ಪನ್ನಗಳ ಮೂಲಕ ಆರಂಭವಾದ ಉದ್ಯಮ ಈಗ 1000ಕ್ಕೂ ಹೆಚ್ಚು ಉತ್ಪನ್ನಗಳನ್ನು ಹೊಂದಿದೆ. ಉದ್ಯಮ ಆರಂಭಿಸಿದಾಗಿನಿಂದ ಇಲ್ಲಿಯವರೆಗೆ, ಗ್ರಾಹಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಮತ್ತೆ ಮತ್ತೆ ತಮ್ಮ ಸಂಗಾತಿಗಳಿಗೆ ಅಮೂಲ್ಯ ಉಡುಗೊರೆ ಕೊಡಲು ಇವರಿಂದ ಉಡುಗೊರೆಗಳನ್ನು ಖರೀದಿಸುವ ನಿಶ್ಚಿತ ಗ್ರಾಹಕರ ಸಂಖ್ಯೆಯೂ ದೊಡ್ಡದಿದೆ.

ಈ ಮಹಿಳಾ ಉದ್ಯಮಿಯು ಚಿಲ್ಲರೆ ಉಡುಗೊರೆ ಉದ್ಯಮ ಆರಂಭಿಸಿದರು. ನಿಧಾನಕ್ಕೆ ಕಾರ್ಪೋರೇಟ್ ಉಡುಗೊರೆ, ದೀಪಾವಳಿ, ಕಾನ್ಸೆಪ್ಟ್ ಉಡುಗೊರೆ ಸೇರಿದಂತೆ ಹತ್ತು ಹಲವು ಸಂದರ್ಭಗಳಲ್ಲಿ ವೈಯುಕ್ತೀಕರಿಸಿದ ಉಡುಗೊರೆಗಳನ್ನು ಸರಬರಾಜು ಮಾಡಲು ಆರಂಭಿಸಿದರು.

image


ಫೈನಾನ್ಸ್ ವಿಷಯದಲ್ಲಿ ಎಂಬಿಎ ಪದವಿ ಪಡೆದಿರುವ ಸಲೋನಿ, ಕಾರ್ಪೋರೇಟ್ ಬ್ಯಾಂಕಿಗ್​​ನಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ್ದರು. ಆದರೆ, ಈ ಕಾರ್ಪೋರೇಟ್ ಜೀವನಶೈಲಿ ನನ್ನಂತಹವರಿಗಲ್ಲ ಎಂಬುದನ್ನು ಅವರು ಆರಂಭದಲ್ಲೇ ಅರಿತುಕೊಂಡರು. ಎರಡೇ ವರ್ಷಕ್ಕೆ ಕೆಲಸಕ್ಕೆ ಗುಡ್​ ಬೈ ಹೇಳಿ ಗಂಡನ ಜೊತೆ ಸೇರಿಕೊಂಡು ಈ ಉದ್ಯಮಕ್ಕೆ ಬೇಕಾದ ಸಂಶೋಧನೆ ಆರಂಭಿಸಿದರು.

ಸಂಶೋಧನೆ ಎನ್ನುವುದು ಸಾಕಷ್ಟು ಸಮಯವನ್ನು ತೆಗೆದುಕೊಂಡಿತ್ತು. ಉದ್ಯಮ ಆರಂಭಕ್ಕೂ ಮುನ್ನ ಭರ್ತಿ ಒಂದು ವರ್ಷ ಕಾಲವನ್ನು ಕೇವಲ ಸಂಶೋಧನೆ, ಮಾರುಕಟ್ಟೆ ಸಮೀಕ್ಷೆಗೆ ಮೀಸಲಿಟ್ಟಿದ್ದರು.

ಹಾದಿಯಲ್ಲಿನ ಸವಾಲುಗಳು

ಈ ನವ್ಯೋದ್ಯಮಕ್ಕೆ ಮಾನವ ಸಂಪನ್ಮೂಲವೇ ದೊಡ್ಡ ಸವಾಲಾಗಿತ್ತು. ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ, ಮಾನವ ಸಂಪನ್ಮೂಲದ ಕೊರತೆ ಜಾಸ್ತಿಯಾಗತೊಡಗಿತು. ಪ್ರತಿಯೊಬ್ಬ ಗ್ರಾಹಕನೂ ಭಿನ್ನವಾಗಿದ್ದರಿಂದ, ಪ್ರತಿಬಾರಿಯೂ ಇವರು ಹೊಸ ಐಡಿಯಾಗಳನ್ನು ಹುಡುಕಬೇಕಾಗಿತ್ತು. ಅವರು ತಮ್ಮ ಉತ್ಪನ್ನಗಳಿಗೆ ಎಕ್ಸ್ಟ್ರಾ ಕ್ರಿಯೇಟಿವ್ ಅಂಶಗಳನ್ನು ಅಳವಡಿಸಬೇಕಿತ್ತು. ಆದರೆ, ಆ ಎಕ್ಸ್ಟ್ರಾ ಹುಡುಕುವುದೇ ದೊಡ್ಡ ಕಷ್ಟವಾಗಿತ್ತು ಎನ್ನುತ್ತಾರೆ ಸಲೋನಿ. ಅಷ್ಟೇ ಅಲ್ಲ, ಗ್ರಾಹಕರನ್ನು ಪಡೆಯುವುದು, ದೊಡ್ಡ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಎಲ್ಲವೂ ಭಾರೀ ಸವಾಲುಗಳನ್ನು ಸೃಷ್ಟಿಸಿದ್ದವು.