ಭಾರತದ ಸ್ಟಾರ್ಟ್ ಅಪ್ ಗಳಿಗೆ ಸುವರ್ಣ ಯುಗ 2015 : ವಿವಿಧ ಕಂಪನಿಗಳಿಂದ 9 ಬಿಲಿಯನ್ ಡಾಲರ್ ಹೂಡಿಕೆ

ಟೀಮ್​ ವೈ.ಎಸ್​. ಕನ್ನಡ

ಭಾರತದ ಸ್ಟಾರ್ಟ್ ಅಪ್ ಗಳಿಗೆ ಸುವರ್ಣ ಯುಗ 2015 : ವಿವಿಧ ಕಂಪನಿಗಳಿಂದ 9 ಬಿಲಿಯನ್ ಡಾಲರ್ ಹೂಡಿಕೆ

Tuesday January 05, 2016,

3 min Read

ಈಗ ಎಲ್ಲಿ ನೋಡಿದ್ರೂ ಸ್ಟಾರ್ಟ್ ಅಪ್ ಗಳದ್ದೇ ಮಾತು, ಅದ್ರದ್ದೇ ಸದ್ದು. ಯಾರೇ ಹೊಸ ಬ್ಯುಸಿನೆಸ್ ಆರಂಭಿಸುವ ಬಗ್ಗೆ ಯೋಚಿಸಿದ್ರೂ ಅದು ಶುರುವಾಗೋದು ಸ್ಟಾರ್ಟ್ ಅಪ್ ನಿಂದಲೇ. ಹೀಗೆ ಅಸ್ಥಿತ್ವಕ್ಕೆ ಬಂದಿರೋ ಸ್ಟಾರ್ಟ್ ಅಪ್ ಗಳಿಗಂತೂ ಲೆಕ್ಕವಿಲ್ಲ. ಅದ್ರಲ್ಲೂ ಭಾರತದ ಮಾರುಕಟ್ಟೆ ಸ್ಟಾರ್ಟ್ ಅಪ್ ಗಳಿಗೆ ಭರ್ಜರಿ ವೇದಿಕೆಯನ್ನ ಒದಗಿಸಿಕೊಟ್ಟಿದೆ. ಇನ್ನು 2015 ಸ್ಟಾರ್ಟ್ ಅಪ್ ಗಳ ಸುಗ್ಗಿ ಕಾಲ. ಯಾಕಂದ್ರೆ ಈ ವರ್ಷದುದ್ದಕ್ಕೂ ಶುರುವಾಗಿರುವ ಸ್ಟಾರ್ಟ್ ಅಪ್ ಗಳಿಗೆ ಲೆಕ್ಕವಿಲ್ಲ. ವಿಶೇಷ ಅಂದ್ರೆ ಇದಕ್ಕೆ ಹೂಡಿಕೆಯಾಗಿರುವ ಮೊತ್ತ ಈ ಹಿಂದಿನ ಹಲವು ದಾಖಲೆಗಳನ್ನ ಅಳಿಸಿ ಹಾಕಿದೆ. ಕಳೆದ ಒಂದು ವರ್ಷದಲ್ಲಿ ಸ್ಟಾರ್ಟ್ ಅಪ್ ಗೆ ಹರಿದು ಬಂದಿರುವ ಬಂಡವಾಳ 9 ಬಿಲಿಯನ್ ಡಾಲರ್. ಇನ್ನು ಯುವರ್ ಸ್ಟೋರಿ ನೀಡಿರುವ ಅಂಕಿ ಸಂಖ್ಯೆಗಳ ಪ್ರಕಾರ ಭಾರತದಾದ್ಯಂತ 1,005ಕ್ಕೂ ಹೆಚ್ಚು ಡೀಲ್ ಗಳಾಗಿವೆ. ಇದ್ರ ಪ್ರಕಾರ 2010 ರಿಂದ 2015ರ ಅವಧಿಯೊಳಗಿನ ಹೂಡಿಕೆಯ ಲೆಕ್ಕಾಚಾರವನ್ನ ನೋಡಿದ್ರೆ ಸಿಗುವ ಅಂದಾಜು ಮೊತ್ತ 18 ಮಿಲಿಯನ್ ಡಾಲರ್.

ಇನ್ನು 2014ರ ಒಟ್ಟು ಡೀಲ್ ಗಳ ಒಟ್ಟು ಮೌಲ್ಯ 5 ಬಿಲಿಯನ್ ಡಾಲರ್. ಅಂದ್ರೆ ಇದು 300ಕ್ಕೂ ಹೆಚ್ಚು ಡೀಲ್ ಗಳಿಗೆ ಸಮಾನವಾಗಿದೆ. ಕಳೆದ ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಹಾಗೂ ಕೊನೆಯ ಮೂರು ತಿಂಗಳಲ್ಲಿ ಒಂದೇ ರೀತಿಯ ಮೊತ್ತ ಹೂಡಿಕೆಯಾಗಿವೆ. ಅಂದ್ರೆ ಅಂದಾಜು ಮೊತ್ತ 1.7 ಬಿಲಿಯನ್ ಡಾಲರ್. ಇನ್ನು ಎರಡನೇ ಅವಧಿಯಲ್ಲಿ ಹೂಡಿಕೆಯಾಗಿರುವ ಮೊತ್ತ ಒಟ್ಟು 1.8 ಬಿಲಿಯನ್ ಡಾಲರ್. ಆದ್ರೆ ಮೂರನೇ ತ್ರೈಮಾಸಿಕ ಹೂಡಿಕೆಗೆ ಬ್ಲಾಕ್ ಬಸ್ಟರ್ ಎನಿಸಿತ್ತು. ಯಾಕಂದ್ರೆ ಈ ಅವಧಿಯಲ್ಲಿ ಸ್ಟಾರ್ಟ್ ಅಪ್ ಡೀಲ್ ಗಳಿಗಾಗಿ ಹರಿದು ಬಂದಿರುವ ಮೊತ್ತ 3.8 ಬಿಲಿಯನ್ ಡಾಲರ್. ಅದ್ರಲ್ಲೂ ವಿಶೇಷವಾಗಿ ಆನ್ ಲೈನ್ ಹಾಗೂ ಮೊಬೈಲ್ ಗೆ ಸಂಬಂಧಿಸಿದ ಡೀಲ್ ಗಳು ಹೆಚ್ಚು ಗಮನ ಸೆಳೆದಿವೆ. ಇದಕ್ಕೆ ಕಾರಣ ಭಾರತದಲ್ಲಿ ಇಂಟರನ್ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿರೋದು. ಕಳೆದ ವರ್ಷಕ್ಕೆ ಹೋಲಿಸಿದ್ರೆ ದೇಶದ ಶೇಕಡಾ 50ರಷ್ಟು ಹೆಚ್ಚು ಮಂದಿ ಇಂಟರ್ ನೆಟ್ ಬಳಸುತ್ತಿದ್ದಾರೆ. ಇದನ್ನ ಸ್ವತಃ ಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾ ತಾನು ನಡೆಸಿರುವ ಸರ್ವೆಯಲ್ಲಿ ತಿಳಿಸಿದೆ.

image


ಮೊದಲ ತ್ರೈಮಾಸಿಕದ ಹೈಲೈಟ್ಸ್

ಮೊದಲ ತ್ರೈಮಾಸಿಕದಲ್ಲಿ ಆನ್ ಲೈನ್ ಡಾಕ್ಟರ್ ಅಪಾಯಿಂಟ್ ಮೆಂಟ್ ಬುಕ್ಕಿಂಗ್ ಗೆ ಸಂಬಂಧಿಸಿದ ಸ್ಟಾರ್ಟ್ ಅಪ್ ಗಳು ಹೆಚ್ಚು ಗಮನ ಸೆಳೆದಿವೆ. ಅದ್ರಲ್ಲೂ ಹೆಲ್ತ್ ಕೇರ್ ಸ್ಟಾರ್ಟ್ ಅಪ್ ಗಳಾದ ಕ್ವಿಕ್ ವೆಲ್, ಇನ್ಸ್​​ಟಾ ಹೆಲ್ತ್ ಹಾಗೂ ಜಿನ್ನಿಯ ಭಾಗವಾಗದಂತಿರುವ ಫಿಥೋ ಮುಂಚೂಣಿಯಲ್ಲಿವೆ. ಅಲ್ಲದೆ ಜಾಗತಿಕ ಮಟ್ಟಕ್ಕೆ ಲಗ್ಗೆ ಇಡುವುದಾಗಿ ಈಗಾಗಲೇ ಘೋಷಿಸಿಕೊಂಡಿರುವ ಈ ಸ್ಟಾರ್ಟ್ ಅಪ್ ಗಳು ಸಿಂಗಾಪುರ್, ಇಂಡೋನೇಷ್ಯಾ ಹಾಗೂ ಮಲೇಷ್ಯಾದ ಮಾರುಕಟ್ಟೆ ಮೇಲೆ ಕಣ್ಣಿಟ್ಟಿವೆ. ಮತ್ತೊಂದೆಡೆ ಕಡಿಮೆ ದರಕ್ಕೆ ವಸತಿ ಸೌಕರ್ಯದ ಬಗ್ಗೆ ಮಾಹಿತಿ ನೀಡುವ ಸ್ಟಾರ್ಟ್ ಅಪ್ ಓಯೋ ರೂಮ್ಸ್ ಅದ್ವಿತೀಯ ವೇಗದಲ್ಲಿ ಬೆಳೆದು ಅಚ್ಚರಿ ಮೂಡಿಸಿದೆ. ಅಲ್ಲದೆ ಓಯೋ ರೂಮ್ಸ್ 2015ರ ಮೂರು ತ್ರೈಮಾಸಿಕದಲ್ಲಿ ಬೆಳವಣಿಗೆಯ ಗ್ರಾಫ್ ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ.

ಎರಡನೇ ತ್ರೈಮಾಸಿಕದ ಹೈಲೈಟ್ಸ್

ಎರಡನೇ ತ್ರೈಮಾಸಿಕದಲ್ಲಿ ಟ್ಯಾಕ್ಸಿ ಫರ್ ಶ್ಯೂರ್ ನ ನಿಕಟ ಸ್ಪರ್ಧಿ ಓಲಾ ಮಾರ್ಕೆಟ್ ಶೇರಿಂಗ್ ನಲ್ಲಿ ತನ್ನ ದರ್ಬಾರ್ ತೋರಿಸಿದೆ. ಅಲ್ಲದೆ ಎರಡು ಹಂತದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡುವ ಮೂಲಕ ಗಮನ ಸೆಳೆದಿದೆ. ಇನ್ನು ಭಾರತ ಮೂಲದ ಉದ್ಯಮ ಚೈಲ್ಡ್ ಫ್ರೆಶ್ ಡೆಸ್ಕ್ ಸಿರೀಸ್ ಇ ನಲ್ಲಿ ಉತ್ತಮ ಪ್ರಗತಿಯನ್ನ ಕಂಡ್ರೂ ಈ ಸಂಸ್ಥೆ ಲಿಂಕ್ಡ್ ಇನ್ ಇಂಡಿಯಾ ಸಂಸ್ಥೆಯ ಅಧೀನಕ್ಕೆ ಒಳಪಟ್ಟಿದೆ. ಮತ್ತೊಂದೆಡೆ ಪ್ರತಿಷ್ಠಿತ ಸಾಸ್ ( SaaS ) ಕಂಪೆನಿ ವಿಡಿಯೋ ಚಾಟಿಂಗ್ ಹಾಗೂ ಬ್ರೌಸಿಂಗ್ ಕಂಪನಿಯಾದ 1CLICK.io ಖರೀದಿಸುವ ಮೂಲಕ ಪೈಪೋಟಿಗಿಳಿಯಿತು. ಇದ್ರ ನಡುವೆ ಆನ್ ಲೈನ್ ಬೇಬಿ ಕೇರ್ ಹಾಗೂ ಮಕ್ಕಳ ಉಡುಪು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫಸ್ಟ್ ಕ್ರೈ ಸ್ಟಾರ್ಟ್ ಅಪ್ ಕಳೆದ ವರ್ಷದಲ್ಲಿ ಎರಡು ದೊಡ್ಡ ಮಟ್ಟದ ಹೂಡಿಕೆ ಮಾಡಿದೆ. ಇದು ಫೆಬ್ರವರಿಯಲ್ಲಿ 26 ಮಿಲಿಯನ್ ಡಾಲರ್ ವ್ಯಯಿಸಿದ್ರೆ, ಏಪ್ರಿಲ್ ನಲ್ಲಿ 10 ಮಿಲಿಯನ್ ಡಾಲರ್ ನಷ್ಟು ಮೊತ್ತವನ್ನ ತೊಡಗಿಸಿತು.

ಆನ್ ಲೈನ್ ದೈತ್ಯ ಕ್ವಿಕರ್ ಕೂಡ 2015ರಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಮುಂಬೈನಿಂದ ಬೆಂಗಳೂರಿಗೆ ತನ್ನ ಮುಖ್ಯ ಕಚೇರಿಯನ್ನ ವರ್ಗಾಯಿಸಿರುವ ಕ್ವಿಕರ್, ದೊಡ್ಡ ಮಟ್ಟದ ಹೂಡಿಕೆಯಲ್ಲಿ ಗಮನ ಸೆಳೆದಿದೆ. ಅಲ್ಲದೆ ತನ್ನ ಅಂಗ ಸಂಸ್ಥೆಗಳಾಗಿ ಕ್ವಿಕರ್ ಕಾರ್ಸ್, ಕ್ವಿಕರ್ ಹೋಮ್ಸ್ ಗಳನ್ನ ಶುರುಮಾಡಿದೆ.

image


ಮೂರನೇ ತ್ರೈಮಾಸಿಕದ ಹೈಲೈಟ್ಸ್

ಮೂರನೇ ತ್ರೈಮಾಸಿಕದ ಅವಧಿಯಲ್ಲಿ ಒಟ್ಟು 259 ಡೀಲ್ ಗಳಿಗೆ ಹೂಡಿಕೆ ಮಾಡಲಾಗಿರುವ ಅಂದಾಜು ಮೊತ್ತ 3.8 ಬಿಲಿಯನ್ ಡಾಲರ್. ಅದ್ರಲ್ಲೂ ಈ ಅವಧಿಯಲ್ಲಿ ಭಾರತದ ಅತೀ ದೊಡ್ಡ ಈ ಕಾಮರ್ಸ್ ಕಂಪನಿಗಳಾದ ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್ ಹಾಗೂ ಪೇಟಿಯಂ ಮೂರನೇ ತ್ರೈಮಾಸಿಕ ಅವಧಿಯಲ್ಲಿ ನೇರ ಪೈಪೋಟಿಗಿಳಿದವು. ಇದ್ರಲ್ಲಿ ಅಲಿಬಾಬಾ ಸ್ಯ್ನಾಪ್ ಡೀಲ್ ಹಾಗೂ ಪೇಟಿಯಂನ ಶೇರು ಪಡೆಯಿತು. ಇದನ್ನ ಹೊರತು ಪಡಿಸಿದ್ರೆ ಇತರೆ ಆನ್ ಲೈನ್ ಕಂಪೆನಿಗಳಾದ ಝೋಮಾಟೋ, ಯಪ್ಮಿ, ಪೆಪ್ಪರ್ ಫ್ರೈ, ಪ್ರ್ಯಾಕ್ಟೋ ಹಾಗೂ ಬ್ಯಾಂಕ್ ಬಝಾರ್ ಮೂರನೇ ತ್ರೈಮಾಸಿಕದಲ್ಲಿ ಭರ್ಜರಿ ಡೀಲ್ ಗಳನ್ನ ನಡೆಸಿ ಗಮನ ಸೆಳೆದಿವೆ.

ನಾಲ್ಕನೇ ತ್ರೈ ಮಾಸಿಕದ ಹೈಲೈಟ್ಸ್

ಈ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ಪ್ರತಿಸ್ಪರ್ಧಿಯಾಗಿರುವ ಉಬಾರ್ ಕಂಪನಿಗೆ ಪೈಪೋಟಿ ನೀಡಲು ಓಲಾ 500 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು ಪ್ರಮುಖ ಬೆಳವಣಿಗೆಗಳಲ್ಲಿ ಒಂದು. ಜೊತೆಗೆ ಓಲಾ ಚೈನಾ ಮೂಲದ ಟ್ಯಾಕ್ಸಿ ಕಂಪನಿ ದಿಡಿ ಕೌಡಿ ಜೊತೆ ಹೊಂದಾಣಿಕೆ ಮಾಡಿಕೊಂಡಿತು. ಮತ್ತೊಂದೆಡೆ ಉಬಾರ್ ಲಿಫ್ಟ್ ಹಾಗೂ ಗ್ರ್ಯಾಬ್ ಟ್ಯಾಕ್ಸಿ ಜೊತೆ ದೊಡ್ಡ ಒಪ್ಪಂದಕ್ಕಿಳಿಯಿತು. ಇದರೊಂದಿಗೆ ನಾಲ್ಕು ಟ್ಯಾಕ್ಸಿ ಕಂಪೆನಿಗಳು ಜಾಗತಿಕ ಮಟ್ಟದಲ್ಲಿ ಪೈಪೋಟಿಗಿಳಿದವು.

ಈ ಬೆಳವಣಿಗೆಗಳ ನಡುವೆ ಕಳೆದ ವರ್ಷ ಹಲವು ಹೊಸ ಸ್ಟಾರ್ಟ್ ಅಪ್ ಗಳು ಮಾರುಕಟ್ಟೆ ಪ್ರವೇಶಿಸಿದ್ದು ವಿಶೇಷ. ಇವುಗಳಲ್ಲಿ ಹಲವು ಕಳೆದ 8 ತಿಂಗಳಲ್ಲಿ 500 ರಿಂದ 30 ಸಾವಿರವರೆಗೂ ವಿವಿಧ ಆರ್ಡರ್ ಗಳನ್ನ ಯಶಸ್ವಿಯಾಗಿ ನಿರ್ವಹಿಸಿವೆ. ಹೀಗೆ 2015 ಭಾರತದ ಸ್ಟಾರ್ಟ್ ಅಪ್ ಗಳಿಗೆ ಸ್ವರ್ಣ ಯುಗವಾಗಿದ್ದು ದೊಡ್ಡ ಮಟ್ಟದ ಹೂಡಿಕೆಗಳಿಗೆ ವೇದಿಕೆ ಕಲ್ಪಿಸಿದೆ.

ಲೇಖಕರು – ಇಮಾನ್ಯುಯೆಲ್ ಅಮೇರ್ಬರ್

ಅನುವಾದ – ಬಿ ಆರ್ ಪಿ, ಉಜಿರೆ