20ರ ವಯೋಮಾನದೊಳಗಿನ ಉದ್ಯಮಿಗಳಿಗೆ ಹೊಸ ಸವಾಲುಗಳನ್ನು ಎದುರಿಸಲು ಪ್ರೋತ್ಸಾಹಿಸುವ ಒಂದು ಬಹಿರಂಗ ಪತ್ರ

ಟೀಮ್​​ ವೈ.ಎಸ್​​.ಕನ್ನಡ

1

ನೀವಿನ್ನೂ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಿನ ದಿನಗಳು, ಕ್ಯಾಂಪಸ್ ಇಂಟರ್​​ವೀವ್ಯೂನಲ್ಲಿ ನಿಮಗೊಂದು ಕೆಲಸ ಸಿಕ್ಕಿದೆ ಎಂದಿಟ್ಟುಕೊಳ್ಳಿ. ನಿಮಗೆ ನಿಮ್ಮ ಸ್ನೇಹಿತರ ವಲಯದಿಂದ ಶುಭ ಹಾರೈಕೆ ಲಭಿಸುತ್ತಿದೆ. ವಿದ್ಯಾರ್ಥಿ ಸಂಘಟನೆಯ ನೇತೃತ್ವ ವಹಿಸಿದ್ದ ನಿಮಗೆ ಕ್ಯಾಂಪಸ್ ಕರೆಯಲ್ಲಿ ದೊಡ್ಡ ಸಂಸ್ಥೆಯಲ್ಲಿ ಕೆಲಸ ಸಿಕ್ಕಿದೆ. ನಿಮ್ಮನ್ನು ಯಾವುದೋ ಸಂಶೋಧನಾ ಯೋಜನೆಗೆ ನಿಮ್ಮನ್ನು ಮುಖ್ಯಸ್ಥರನ್ನಾಗಿಸಿದ್ದಾರೆ. ನಿಮ್ಮ ಬಗ್ಗೆ ವಿಶ್ವವಿದ್ಯಾನಿಲಯದಲ್ಲೇ ಒಳ್ಳೆಯ ಹೆಸರಿದೆ. ನಿಮಗೆ ಸಂಘಟನಾ ಕೌಶಲ್ಯವಿದೆ. ತಂತ್ರಜ್ಞಾನ ಸಂಬಂಧಿ ಯೋಜನೆಗಳನ್ನು ನಿರ್ವಹಿಸುವುದರಲ್ಲಿ ತಕ್ಕಮಟ್ಟಿನ ಅನುಭವವೂ ಇದೆ. ಕಾಲೇಜಿನಲ್ಲಿ ಅನೇಕ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನೀವು ಬಿಸಿಯಾಗಿರುತ್ತೀರಿ. ಆಗ ನಿಮ್ಮ ಸುತ್ತಲಿನ ಜಗತ್ತು ನಿಮ್ಮನ್ನು ಎಚ್ಚರಿಸುತ್ತದೆ. ನಿಮಗಿನ್ನೂ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಬಾಕಿ ಇವೆ.

ನಿಮಗೆ ಇದಲ್ಲದೆ, ಬೇರೆ ಏನೋ ಬೇಸರವಿದೆ, ಅತೃಪ್ತಿಯಿದೆ. ನಿಮಗೆ ಸಿಕ್ಕಿರುವ ಕೆಲಸ ದೊಡ್ಡ ವೇತನದ ಹುದ್ದೆ, ಇದ್ಯಾವುದೂ ನಿಮಗೆ ಸಮಾಧಾನ ನೀಡುತ್ತಿಲ್ಲ.ಇದರಿಂದ ನಿಮ್ಮ ಸೃಜನಾತ್ಮಕ ಆಲೋಚನೆ ಕೊನೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಮಗೆ ಯೋಚನೆ ಆರಂಭವಾಗುತ್ತದೆ, ನಿಜವಾಗಲೂ ಎಂಎನ್​​ಸಿ ಕೆಲಸ ನಿಮಗೆ ಅನಿವಾರ್ಯವೇ? ಅದರ ಬದಲು ಸ್ಟಾರ್ಟ್ ಅಪ್ ಕಂಪೆನಿಯನ್ನೇಕೆ ಆರಂಭಿಸಬಾರದು? ಹಾಗಿದ್ದರೇ ನೀವು ಸಾವಕಾಶವಾಗಿ ಕುಳಿತು ಸ್ಟಾರ್ಟ್ ಕಂಪೆನಿಗಳ ಬಗ್ಗೆ ಇರುವ ಆನ್​ಲೈನ್ ಬ್ಲಾಗ್ ಬರಹಗಳನ್ನು ಓದಲು ಆರಂಭಿಸಿ. ಜಗತ್ತನ್ನೇ ಬದಲಾಯಿಸಿದ 20 ವರ್ಷದ ಉದ್ಯಮಿ, 3 ಬಿಲಿಯನ್ ಮೈತ್ರಿ ನಿರಾಕರಿಸಿದ 23 ವರ್ಷದ ಸಿಇಓ. ಈ ರೀತಿಯ ತಲೆಬರಹವಿರುವ ಹಲವಾರು ಯಶಸ್ವೀ ಉದ್ಯಮದ ಕಥೆಗಳು ನಿಮಗೆ ಮಾರ್ಗದರ್ಶನ ಮಾಡುತ್ತವೆ. ನೀವು ಉದ್ಯಮವನ್ನು ಆರಂಭಿಸಬೇಕಿದ್ದರೇ, ಇದಕ್ಕಾಗಿ ಯೂನಿವರ್ಸಿಟಿಗೆ ಹೋಗಿ ಕಲಿಯಬೇಕಿಲ್ಲ.

ಎಂಎನ್​​ಸಿ ಆಯ್ಕೆಯನ್ನು ನಿರಾಕರಿಸಿ, ನಿಧಾನಗತಿಯ ಕಾರ್ಯಾಂಗ ವ್ಯವಸ್ಥೆಯನ್ನು ಬಿಟ್ಟು ಕೇವಲ ಮಹತ್ವಾಕಾಂಕ್ಷೆಯನ್ನು ಬೆನ್ನು ಹತ್ತಿ ಹೋಗುವದು ನಿಜಕ್ಕೂ ಕಷ್ಟದ ಸಂಗತಿ. ಎರಡು ವರ್ಷಗಳ ಹಿಂದಿನ ನನ್ನ ಸ್ಥಿತಿಯಿದು. ಭಾರತೀಯ ಮಧ್ಯಮ ವರ್ಗದ ಕುಟುಂಬದವರಾದ ನಾವು ನಮ್ಮ ಗ್ಯಾರಂಟಿ ಉದ್ಯೋಗವನ್ನು ಹಾಗೇ ಹಿಂದೆ ಮುಂದೆ ಯೋಚಿಸದೇ ತಿರಸ್ಕರಿಸುವಂತೆಯೂ ಇರಲಿಲ್ಲ.

ಆದರೆ ಇಂದು ನಾನು ಅಂದು ತೆಗೆದುಕೊಂಡ ನಿರ್ಧಾರ ಸಮರ್ಪಕವಾಗಿತ್ತು ಎಂದು ಸಾಬೀತು ಮಾಡಿದ್ದೇನೆ. 2 ವರ್ಷದ ನಂತರ ಈಗ ಸ್ಪಷ್ಟವಾಗಿ ಎಂಎನ್​ಸಿ ಸಂಸ್ಥೆಯ ಉದ್ಯೋಗ ಯಾಕೆ ನಿರಾಕರಿಸಬಹುದು ಎಂದು ಹೇಳಬಲ್ಲೆ.

1. ಕಲಿಕಾ ಪ್ರಾಧಾನ್ಯತೆ ಹಾಗೂ ಸರ್ವಾಂಗೀಣ ಅಭಿವೃದ್ಧಿ:

ಉದ್ಯಮಿಗಳು ಹೊಸ ಹೊಸ ಮಾರುಕಟ್ಟೆಯ ಬೆಳವಣಿಗೆಯ ಆಯಾಮಗಳನ್ನು ಕಲಿಯುತ್ತಲೇ ಇರಬೇಕಾಗುತ್ತದೆ. ಪ್ರತಿಯೊಂದು ಕಾರ್ಪೋರೇಟ್ ಸಂಸ್ಥೆಯೂ ಇಂತಹ ಕಲಿಕೆಗೆ ಪ್ರಧಾನ್ಯತೆ ನೀಡುತ್ತದೆ. ಔದ್ಯಮಿಕ ವಾತಾವರಣದ ಪ್ರಗತಿ ಇಂತಹ ಪ್ರಗತಿಪರ ಕಲಿಕೆಯ ಮೇಲೆ ಅವಲಂಭಿತವಾಗಿರುತ್ತದೆ. ಬಹುತೇಕ ಸಂದರ್ಭದಲ್ಲಿ ಕಲಿಕೆ ಹಾಗೂ ಹೊಸ ಆಯಾಮಗಳ ಚಿಂತನೆಯಿಂದ ಮಾತ್ರ ಹೊಸ ದೃಷ್ಟಿಕೋನ ಮೂಡಲು ಸಾಧ್ಯ.

ನೀವು ಬೆಳವಣಿಗೆ ಸಾಧಿಸಲು ಯಾವ ಮಾರ್ಗದರ್ಶಕರೂ ನಿಮಗೆ ನೆರವು ನೀಡಲಾರರು. ನಿಮ್ಮ ಸಂಘಟನಾ ಚಾತುರ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ವ್ಯಾವಹಾರಿಕ ನಾಯಕತ್ವ ಗಳಿಸಿಕೊಳ್ಳಲು ನೀವೇ ಸ್ವತಃ ಇಂತಹ ಕಲಿಕೆಯನ್ನು ನಿರ್ವಹಿಸಬೇಕು. ಹೇಗೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕು ಅನ್ನುವುದರಿಂದ ಹಿಡಿದು, ಉತ್ಪಾಧನಾ ಗುಣಮಟ್ಟ ಕೊನೆಗೆ ಸಾಮಾಜಿಕ ಜಾಲತಾಣಗಳ ಮುಖೇನ ಪ್ರಚಾರದಂತಹ ಕೆಲಸಗಳಿಗೂ ನಿಮ್ಮ ಕಲಿಕೆ ಮಾತ್ರ ಮುಖ್ಯವಾಗುತ್ತದೆ.

ಇಂದಿನ ವ್ಯಾವಹಾರಿಕ ವಿಶ್ವದಲ್ಲಿ ಪದವಿಗಳಿಗಿಂತ ಹೆಚ್ಚಿನ ಮೌಲ್ಯ ನಿಮ್ಮಲ್ಲಿರುವ ಕೌಶಲ್ಯಗಳಿಗಿದೆ. ನಿಮ್ಮ ಕೌಶಲ್ಯಗಳನ್ನು ಅಪ್ಗ್ರೇಡ್ ಮಾಡಿಕೊಂಡರೇ, ನಿಮಗೆ ಬೇರೆ ಯಾವ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಪದವಿಗಳ ಅವಶ್ಯಕತೆಯೇ ಮುಂದಿನ ದಿನಗಳಲ್ಲಿ ಒದಗಿ ಬರುವುದಿಲ್ಲ.

ಹಾರ್ವರ್ಡ್ ವಿವಿಯಲ್ಲಿ ಪದವಿ ಪಡೆದಿದ್ದರೂ ಪಡೆಯುದಿದ್ದರೂ ಅಲ್ಲಿ ಕೌಶಲ್ಯಗಳಿದ್ದರೇ ಅವಕಾಶ ಶತಃಸಿದ್ಧ. ಇಲ್ಲಿ ಪರಿಗಣಿಸಲ್ಪಡುವುದು ಬೌದ್ಧಿಕ ಚಾತುರ್ಯ ಮಾತ್ರ.

2. ಕಡಿಮೆ ವಯೋಮಾನ ಇಂದಿನ ಔದ್ಯಮಿಕ ವಿಶ್ವದಲ್ಲಿ ಅಪ್ರಸ್ತುತ ಸಂಗತಿ:

19 ವರ್ಷದ ಯುವಕ ಫೇಸ್​​ಬುಕ್​​ನಂತಹ ದೊಡ್ಡ ಸಂಸ್ಥೆಯೊಂದನ್ನು ಕಟ್ಟಿದ. 20ರ ಹರೆಯದವರು ಸೇರಿ ಗೂಗಲ್ ನಿರ್ಮಿಸಿದರು. ಯುವ ಹಾಗೂ ಅವಿರತ ಶ್ರದ್ಧೆಯ ಸಾಮರ್ಥ್ಯವನ್ನೇ ಇಂದಿನ ಔದ್ಯಮಿಕ ಜಗತ್ತು ಬಯಸುತ್ತಿದೆ.

ಸಿಕೋಯಾ ಕ್ಯಾಪಿಟಲ್​​ನ ಮೈಕಲ್ ಮೋರಿಟ್ಸ್ ಒಂದು ಬಾರಿ ಯುವ ಸಮುದಾಯದ ಸಾಮರ್ಥ್ಯದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾ, ಅವರಿಗೆ ಯಾವ ಚೌಕಟ್ಟೂ ಇಲ್ಲ, ಮಿತಿಗಳೂ ಇಲ್ಲ ಹಾಗೂ ಯಾವ ಅಡೆತಡೆಗಳೂ ಇಲ್ಲ, ಆದರೆ ಅವರು ಸಂಘರ್ಷದಲ್ಲಿದ್ದಾರೆ ಅಂದಿದ್ದರು. ಫೇಸ್ಬುಕ್ನ ಮೊತ್ತಮೊದಲ ಹೂಡಿಕೆದಾರರೂ ಹಾಗೂ ಪೇಪಲ್ ಸಂಸ್ಥೆಯ ಸಹ ಸಂಸ್ಥಾಪಕರೂ ಆಗಿರುವ ಪೀಟರ್ ಥೈಲ್, 2010ರಲ್ಲಿ 20ರ ಒಳಗಿನ ಯುವ ಉದ್ಯಮಿಗಳಿಗಾಗಿಯೇ ಸುಮಾರು 1 ಲಕ್ಷ ಡಾಲರ್ ಹೂಡಿಕೆ ಘೋಷಿಸಿದ್ದರು. ಈ ಯುವ ಪ್ರತಿಭೆಗಳು ತಮ್ಮ ಆಲೋಚನೆಗಳನ್ನು ಜಾರಿಗೊಳಿಸಲು ನಿಧಾನ ಮಾಡುವುದಿಲ್ಲ ಅನ್ನುವುದು ಅವರ ಅಭಿಪ್ರಾಯವಾಗಿತ್ತು.

ಪ್ರತೀ ಮೂರು ವರ್ಷದ ನಂತರ ಸಿಗುವ ಪ್ರಮೋಷನ್, 10 ವರ್ಷದ ನಂತರ ಸಿಗಬಹುದಾದ ಟೀಂ ಲೀಡರ್ ಹುದ್ದೆ ಹಾಗೂ ನೀವು ಕಂಪೆನಿ ಸೇರಿಕೊಂಡು 15 ವರ್ಷವಾದರೂ ಸಿಇಓಗೆ ನಿಮ್ಮ ಪರಿಚಯ ಇರದ ಸನ್ನಿವೇಶದಲ್ಲಿ ಏಕೆ ಎಂಎನ್​​ಸಿ ಸಂಸ್ಥೆಯಲ್ಲಿ ಕೆಲಸ ಮಾಡಬೇಕು.

ಇದು ಭಾರತದಲ್ಲೂ ಸಾಧ್ಯ. ಇತ್ತೀಚೆಗಷ್ಟೇ ಯಾಹೂ ತಂಡ ಖರೀದಿಸಿದ ಬುಕ್​​ಪ್ಯಾಡ್ ಸಂಸ್ಥೆಯ ತಂಡದಲ್ಲಿ 6 ನುರಿತ ಎಂಜಿನಿಯರ್​​ಗಳು 25 ವರ್ಷದ ಕೆಳಗಿನವರು.

3. ಎಂಎನ್​ಸಿ =ಸುರಕ್ಷಿತ ಕೆಲಸ, ಅನ್ನುವುದು ಮೂಢನಂಬಿಕೆ

ಸುಭದ್ರ ಹಾಗೂ ಸುರಕ್ಷಿತ ಎಂಎನ್​ಸಿ ಉದ್ಯೋಗ ಅನ್ನುವುದು 90ರ ದಶಕದ ಮೂಢನಂಬಿಕೆ. 2012ರಲ್ಲಿ ನಾನು ಎರಡು ತಿಂಗಳು ಕೆಲಸ ಮಾಡುತ್ತಿದ್ದ ಇನ್ವೆಸ್ಟ್​​ಮೆಂಟ್ ಬ್ಯಾಂಕಿಂಗ್ ಸಂಸ್ಥೆಯಲ್ಲಿ ನನ್ನ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದ ನಾಲ್ವರು ಸಂಸ್ಥೆ ತೊರೆದರು. ಇನ್ನುಳಿದ ವೈಸ್ ಪ್ರೆಸಿಡೆಂಟ್ ಶ್ರೇಣಿಯ ಹಾಗೂ ಐದು ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿದ್ದ ಉದ್ಯೋಗಿಗಳು ಅಲ್ಲಿ ನಗಣ್ಯರೆನಿಸಿಕೊಂಡಿದ್ದರು.

ಯಾಹೂ ಎಂಜಿನಿಯರ್​​ಗಳ ಅನುಭವದ ಪ್ರಕಾರ ಸ್ಟಾರ್ಟ್ ಅಪ್ ಸಂಸ್ಥೆಗಳು ಎಂಎನ್​ಸಿಗಳಿಗಿಂತ ಅತ್ಯುತ್ತಮ ಆಯ್ಕೆ. ನಿಮ್ಮ ಕಾರ್ಯಾನುಭವಗಳನ್ನು ತಿಳಿಸದಿದ್ದರೂ ನೀವು ಕೆಲಸ ಬಿಟ್ಟ ವಾರದಲ್ಲೇ ನಿಮಗೆ ಸ್ಟಾರ್ಟ್ ಅಪ್ ಸಂಸ್ಥೆಗಳಲ್ಲಿ ಕೆಲಸ ಸಿದ್ಧವಿರುತ್ತದೆ.

4. ಈಗ ಇರುವ ಅವಕಾಶ ಕೈ ಬಿಟ್ಟರೇ ಭಾರತದ ಸ್ಟಾರ್ಟ್ಅಪ್ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶವೇ ಸಿಗುವುದಿಲ್ಲ

ಭಾರತೀಯ ಪ್ರಾರಂಭಿಕ ಸಂಸ್ಥೆಗಳು ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಕಳೆದ ವರ್ಷ ಭಾರತೀಯ ಸ್ಟಾರ್ಟ್ಅಪ್ ಸಂಸ್ಥೆಗಳ ಹೂಡಿಕೆ ಸುಮಾರು 5 ಬಿಲಿಯನ್ ಅಮೇರಿಕನ್ ಡಾಲರ್ ಮುಟ್ಟಿದೆ.

ಇದು ನಮ್ಮ ಅದೃಷ್ಟ, ತಂತ್ರಜ್ಞಾನ ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿರುವ ಸಮಯದಲ್ಲಿ ನಾವು ಜನಿಸಿದ್ದೇವೆ. ನಮ್ಮಲ್ಲಿ ಬಹುತೇಕರು ಫ್ಲಾಪಿಡೆಸ್ಕ್, ಡಯಲ್ ಅಪ್ ಇಂಟರ್ನೆಟ್, ಹಾಗೂ ವೆಬ್​​ಸೈಟ್​​​​ಗಳ ಕ್ರಾಂತಿಕಾರಕ ಅಭಿವೃದ್ಧಿಗೆ ಸಾಕ್ಷಿಯಾಗಿದ್ದಾರೆ. ಈಗ ಮೊಬೈಲ್ ತಂತ್ರಜ್ಞಾನ ಯೋಚಿಸಲೂ ಸಾಧ್ಯವಿಲ್ಲದಷ್ಟು ಪ್ರಗತಿ ಕಂಡಿದೆ. ಮುಂಬರುವ ದಿನಗಳಲ್ಲಿ ನಮ್ಮ ಪಾಕೆಟ್ನಲ್ಲಿ ಇಟ್ಟುಕೊಳ್ಳಬಹುದಾದ ಗಾತ್ರದ ಲ್ಯಾಪ್​​ಟಾಪ್​​ನಲ್ಲಿ ಇ ಮೇಲ್ ಚೆಕ್ ಮಾಡಬಹುದು. ತಂತ್ರಜ್ಞಾನ ಹಾಗೂ ಆವಿಷ್ಕಾರಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗುತ್ತಿರುವ ನಮ್ಮದು ಅದೃಷ್ಟದ ಪೀಳಿಗೆ.

ನೀವು ಇಲ್ಲಿ ಎರಡು ಕೆಲಸಗಳನ್ನು ಮಾಡಬಹುದು. ಒಂದು ಇನ್ನೂ ಎಕ್ಸೆಲ್ ಶೀಟ್​​ನಂತಹ ಸಾಂಪ್ರದಾಯಿಕ ಮಾದರಿಯಲ್ಲಿಯೇ ಕೆಲಸ ಮುಂದುವರೆಸಬಹುದು ಅಥವಾ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿ ಹೊಸ ಆವಿಷ್ಕಾರಗಳಲ್ಲಿ ಭಾಗಿಯಾಗಬಹುದು. ಎರಡನೆಯ ಆಯ್ಕೆ ನಿಮ್ಮ ಮಹತ್ವಾಕಾಂಕ್ಷೆಯತ್ತ ಕೊಂಡೊಯುತ್ತದೆ ಹಾಗೂ ನಿಮಗೆ ಹೆಮ್ಮೆ ಮೂಡಿಸುತ್ತದೆ.

ಐದು ವರ್ಷಗಳ ಹಿಂದೆ ಭಾರತೀಯ ಸ್ಟಾರ್ಟ್ಅಪ್ ಸಂಸ್ಥೆಗಳಿಗೆ ಅಷ್ಟೇನೂ ಪ್ರೋತ್ಸಾಹಗಳಿರಲಿಲ್ಲ. ಆದರೆ ಇಂದು ಜಾಗತಿಕ ಆಸಕ್ತಿ, ವ್ಯಾಪಕ ಹೂಡಿಕೆ ಹಾಗೂ ತಾಂತ್ರಿಕ ಪ್ರಗತಿಯ ಕಾರಣ ಮೇಕ್ ಇನ್ ಇಂಡಿಯಾ ವಿಫುಲ ಅವಕಾಶಗಳೊಂದಿಗೆ ಜಾರಿಯಾಗುತ್ತಿದೆ.

5. ನಿಮ್ಮ ಪೋಷಕರೇನೂ ಮೂರ್ಖರಲ್ಲ-ಅವರ ಮನವೊಲಿಸುವುದು ನಿಮಗೆ ಬಿಟ್ಟ ವಿಚಾರವಷ್ಟೇ

ಬಹಳಷ್ಟು ಯುವಕರ ಸಮಸ್ಯೆ ಎಂದರೆ, ಮನೆಯಲ್ಲಿ ಪೋಷಕರು ಎಂಎನ್​​ಸಿ ಸಂಸ್ಥೆಗಳಿಗೆ ಪ್ರಧಾನ್ಯತೆ ನೀಡುತ್ತಾರೆ. ಅವರಿಗೆ ತಮ್ಮ ಮಗ ಸುಭದ್ರ ಕೆಲಸದಲ್ಲಿರಬೇಕು ಅನ್ನುವ ಇಚ್ಛೆ ಇರುತ್ತದೆ ಅನ್ನುವುದು. ಆದರೆ ಯಾವ ಪೋಷಕರನ್ನಾದರೂ ಮಾತಿನ ಮೂಲಕ ಮನವೊಲಿಸಬಹುದು. ಇಂದು ಫ್ಲಿಫ್​​ಕಾರ್ಟ್, ಝೋಮ್ಯಾಟೋ, ಪೇಟಿಎಂ, ಕ್ವಿಕರ್ ಹಾಗೂ ಓಲಾದಂತಹ ಸಂಸ್ಥೆಗಳು ಜೀವನಶೈಲಿಯನ್ನು ಸರಳಗೊಳಿಸಿವೆ. ಇವೂ ಕೂಡಾ ಒಂದು ಕಾಲದಲ್ಲಿ ಸ್ಟಾರ್ಟ್ಅಪ್ ಸಂಸ್ಥೆಗಳೇ ಆಗಿದ್ದವು. ಈ ವಾದವನ್ನು ಮುಂದಿಟ್ಟು ಪೋಷಕರ ಮನ ಒಲಿಸಲು ಸಾಧ್ಯವಿಲ್ಲವೇ?

ನೀವು ನಿಮ್ಮ ಪೋಷಕರನ್ನು ಮನವೊಲಿಸಲು ಪ್ರಯತ್ನಿಸುತ್ತೀರಾದರೇ ಇಲ್ಲಿರುವ ಮೊದಲ 4 ಅಂಶಗಳನ್ನು ವಿಸ್ಕೃತವಾಗಿ ವಿವರಿಸಿ, ನಿಮ್ಮ ಹಂಬಲದ ಬಗ್ಗೆ ತಿಳಿಸಿ. ಮುಖ್ಯವಾಗಿ ನೀವು ಬದುಕಿನಲ್ಲಿ ಸಾಧಿಸಬೇಕಿರುವ ಗುರಿಯ ಬಗ್ಗೆ ತಿಳಿಸಿ. ನಿಮಗೆ ಸ್ಟಾರ್ಟ್ಅಪ್ ಸಂಸ್ಥೆಗಳಲ್ಲಿ ಕೆಲಸ ಮಾಡುವುದರಿಂದ ತೃಪ್ತಿ ಸುಗುವುದಾದರೇ ಅದನ್ನು ಅರ್ಥ ಮಾಡಿಸಿ. ಅಂತಿಮವಾಗಿ ನಿಮ್ಮ ಪೋಷಕರು ಖಂಡಿತಾ ಒಪ್ಪುತ್ತಾರೆ.

ನಿಮ್ಮ ಹೃದಯ ಹೇಳಿದಂತೆ ಕೇಳಿ- ಹೊಸ ಹೆಜ್ಜೆ ಮುಂದಿಡಿ

ಸೋಶಿಯಲ್ ಕಾಪ್ಸ್ ತನ್ನ ಮುಖ್ಯ ತಂಡಕ್ಕೆ ಪರಿಣಿತರ ಹುಡುಕಾಟದಲ್ಲಿದೆ. ಈಗಾಗಲೆ 10 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವವರ ರೆಸ್ಯೂಮ್ ಅದರ ಬಳಿಯಿದೆ. ಆದರೆ ಸಂಸ್ಥೆ ಮುಖ್ಯವಾಗಿ ಹುಡುಕುತ್ತಿರುವುದು ಮಾತ್ರ ಯುವ ಪರಿಣಿತರನ್ನು. 20 ರ ವಯೋಮಾನದೊಳಗಿನ ಹುರುಪಿನ ತರುಣರನ್ನು ಕಲೆಹಾಕಿ, ತರಭೇತಿ ಕೊಟ್ಟು ತನ್ನ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಈ ಸಂಸ್ಥೆಯ ಉದ್ದೇಶವಾಗಿದೆ.

ಲೇಖಕರು: ಪ್ರಕುಲ್ಪ ಶಂಕರ್​​
ಅನುವಾದಕರು: ವಿಶ್ವಾಸ್​​​​​

Related Stories