ಇದು ಎಲ್ಲರೂ ಓದಬೇಕಾದ ‘ಕುರೂಪಿ’ಯೊಬ್ಬಳ ಕಥೆ

ಟೀಮ್​​ ವೈ.ಎಸ್​​.ಕನ್ನಡ

1

ಸ್ಥಳೀಯ ಟಿವಿ ಚಾನೆಲ್ ಒಂದಕ್ಕೆ ಕೊಟ್ಟ ಚಿಕ್ಕ ಸಂದರ್ಶನವೊಂದನು ಆಕೆಯ ಬದುಕನ್ನೇ ಬದಲಾಯಿಸಬಲ್ಲುದು ಎನ್ನುವುದು ಖುದ್ದು ಲಿಜ್ಜಿ ವೆಲಾಸ್ಕ್ವೆಝ್​​ಗೂ ಗೊತ್ತಿರಲಿಲ್ಲ. ದಿ ವರ್ಲ್ಡ್ಸ್​​ ಅಗ್ಲೀಯೆಸ್ಟ್ ವಿಮೆನ್ ಅಂದರೆ ವಿಶ್ವದ ಅತ್ಯಂತ ಗಲೀಜು/ಕುರೂಪಿ ಮಹಿಳೆ ಎಂಬ ಹೆಸರಿನಲ್ಲಿ ಯೂಟ್ಯೂಬ್​ನಲ್ಲಿ ಈಕೆಯ ಸಂದರ್ಶನ ಪ್ರಸಾರವಾಗಿತ್ತು. ಯೂಟ್ಯೂಬ್​​ನಲ್ಲಿ ಈ ವಿಡಿಯೋವನ್ನು ಆಕೆ ವೀಕ್ಷಿಸುವಷ್ಟರಲ್ಲಿ ಆಗಲೂ 40 ಲಕ್ಷ ಮಂದಿ ಇದನ್ನು ವೀಕ್ಷಿಸಿಬಿಟ್ಟಿದ್ದರು. ಕೆಲವು ಕಮೆಂಟ್ ಕೂಡಾ ಮಾಡಿದ್ದರು. “ಲಿಜ್ಜಿ ದಯವಿಟ್ಟು ನೀನು ಒಂದು ಉಪಕಾರ ಮಾಡು, ಗನ್ ತೆಗೆದುಕೊಂಡು ನಿನ್ನನ್ನು ನೀನು ಹತ್ಯೆ ಮಾಡಿಕೊ” ಎಂಬ ಕಮೆಂಟ್ ಕೂಡಾ ಇತ್ತು.

ಲಿಜ್ಜಿಯವರು ಅತ್ಯಂತ ಅಪರೂಪದ ಕಾಯಿಲೆಯೊಂದರಿಂದ ನರಳುತ್ತಿದ್ದಾರೆ. ಈ ಕಾಯಿಲೆಯಿಂದಾಗಿಯೇ ಅವರು ದಪ್ಪಗಾಗುತ್ತಿಲ್ಲ. ಅವರು ಹೊರತುಪಡಿಸಿದರೆ ಜಗತ್ತಿನಲ್ಲಿ ಕೇವಲ ಇಬ್ಬರಷ್ಟೇ ಈ ಕಾಯಿಲೆ ಹೊಂದಿದ್ದಾರೆ. ಇದರಿಂದಾಗಿ ಲಿಜ್ಜಿ ಶರೀರದಲ್ಲಿ ಕೊಬ್ಬಿನಾಂಶ ಶೇಕಡಾ 0ಯಷ್ಟಿದೆ. ಇವರ ದೇಹದಲ್ಲಿ ಕೊಬ್ಬು ನಿಲ್ಲುವುದೂ ಇಲ್ಲ. ! ಹೀಗಾಗಿ ಪ್ರತಿ 15 ನಿಮಿಷಕ್ಕೊಮ್ಮೆ ಈಕೆ ತಿನ್ನಲೇ ಬೇಕು ಇಲ್ಲದಿದ್ದರೆ ಸಾಮಾನ್ಯರಂತೆ ಇರಲು ಸಾಧ್ಯವಿಲ್ಲ. ತನ್ನ ಜೀವನದಲ್ಲಿ ಅತಿ ಹೆಚ್ಚು ತೂಕ ಪಡೆದಿದ್ದೇ ಆಕೆ ಬರೀ 29 ಕೆ.ಜಿ. ಅಷ್ಟೇ ಅಲ್ಲ, ಬಲಗಣ್ಣಿನಲ್ಲಿ ದೋಷವೂ ಇದೆ. ಉಳಿದವರಿಗೆ ಇದು ದೊಡ್ಡ ಸವಾಲಾದರೆ, ಲಿಜ್ಜಿ ಮಾತ್ರ ಇದನ್ನು ಅತಿದೊಡ್ಡ ವರ ಎಂದು ಭಾವಿಸಿದ್ದಾಳೆ. “ನಾನು ದಪ್ಪಗಾಗುವ ಭೀತಿಯಿಲ್ಲದೆ ಏನು ಬೇಕಾದರೂ ತಿನ್ನಬಹುದು” ಎಂದು ನಗುತ್ತಾರೆ ಲಿಜ್ಜಿ.

ಲಿಜ್ಜಿ ಹುಟ್ಟಿದಾಗಲೇ ವೈದ್ಯರು, ಈ ಹುಡುಗಿ ಜೀವನದಲ್ಲಿ ಮಾತನಾಡಲ್ಲ, ತೆವಳಲ್ಲ ಅಷ್ಟೇ ಅಲ್ಲ ತನ್ನ ಕೆಲಸಗಳನ್ನು ತಾನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಷರಾ ಬರೆದಿದ್ದರು. ಈ ಮಾತುಗಳಿಂದ ಲಿಜ್ಜಿ ಪೋಷಕರು ಎದೆಗುಂದಲಿಲ್ಲ. ಬದಲಿಗೆ ತನ್ನ ಮಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಶಕ್ತಿ ತುಂಬಲು ಪ್ರಯತ್ನಿಸಿದರು. ಲಿಜ್ಜಿಗೆ ತನ್ನ ತಾಯಿಯೇ ಅತ್ಯಂತ ದೊಡ್ಡ ಪ್ರೇರಕ ಶಕ್ತಿಯಾಗಿದ್ದು, ತನ್ನಲ್ಲಿ ಹೋರಾಟದ ಮನೋಭಾವ ಬೆಳೆಯಲು ಅವರೇ ಕಾರಣ ಎನ್ನುತ್ತಾರೆ ಲಿಜ್ಜಿ. ಮೊದಲ ಬಾರಿಗೆ ಲಿಜ್ಜಾ ಶಾಲೆಗೆ ಸೇರಿದಾಗ, ಚಿಕ್ಕ ಆಮೆಯ ಹಾಗೆ ಕಾಣುತ್ತಿದ್ದರು. ಲಿಜ್ಜಾಗಿಂತ ಆಕೆಯ ಪಾಠಚೀಲವೇ ದೊಡ್ಡದಾಗಿತ್ತು. ಯಾರೂ ಕೂಡಾ ಆಕೆಯನ್ನು ಮಾತನಾಡಿಸುತ್ತಿರಲಿಲ್ಲ.

ನನ್ನಲ್ಲಿರುವ ವ್ಯತ್ಯಾಸವೇನು ಎಂದು ಲಿಜ್ಜಿ ಒಮ್ಮೆ ಪೋಷಕರಲ್ಲಿ ಕೇಳಿದ್ದಳು. ಹೌದು ನೀನು ಬೇರೆ ಮಕ್ಕಳಿಗಿಂತ ಗಾತ್ರದಲ್ಲಿ ಚಿಕ್ಕವಳು, ನಿನಗೆ ಇದೊಂದು ಕಾಯಿಲೆ. ಆದರೆ ಇದು ನೀನು ಯಾರು ಎನ್ನುವುದನ್ನು ನಿರ್ಧರಿಸುವುದಿಲ್ಲ. ನೀನು ಶಾಲೆಗೆ ಹೋಗಲೇಬೇಕು. ನೀನು ತಲೆ ಎತ್ತಿ ನಡೆಯಬೇಕು. ನೀನು ನೀನಾಗಿ ಬೆಳೆಯಬೇಕು, ಎಂದು ಸ್ಫೂರ್ತಿ ತುಂಬುತ್ತಿದ್ದರು.

“ನನ್ನ ಬಾಹ್ಯ ರೂಪದಿಂದಾಗಿ ನಾನು ಗುರುತಿಸಿಕೊಳ್ಳುತ್ತೇನೆ ಅದು ಕುರೂಪವಾಗಿದೆ ಎನ್ನುವುದು ನನಗೆ ಅರ್ಥವಾಗಿತ್ತು. ಬೆಳಗ್ಗೆ ಎದ್ದು ನನ್ನ ದೇಹ ನೋಡಿದಾಗ ನನಗೆ ಸಿಟ್ಟು ಬರುತ್ತಿತ್ತು. ನನ್ನ ಬದುಕು ನನ್ನ ಕೈಯಲ್ಲೇ ಇದೆ. ನಾನು ಇದನ್ನು ತುಂಬಾ ಚೆನ್ನಾಗಿ ಮಾಡಬಲ್ಲೆ ಅಥವಾ ತುಂಬಾ ಕೆಟ್ಟದಾಗಿಯೂ ಮಾಡಬಲ್ಲೆ. ಎಲ್ಲವೂ ನನ್ನ ಕೈಯಲ್ಲೇ ಇದೆ. ನನ್ನ ಯಶಸ್ಸು ಮಾತ್ರ ನನಗೆ ಕೀರ್ತಿ ತಂದುಕೊಡುತ್ತದೆ ಎಂಬ ನಿರ್ಧಾರಕ್ಕೆ ನಾನು ಬಂದುಬಿಟ್ಟಿದ್ದೆ.

ಲಿಜ್ಜಿ ಈಗ ಪರಿವರ್ತನಾ ಮಾತುಗಾರರು. ಅವರು ಮಾತುಗಳಿಂದಲೇ ಸ್ಫೂರ್ತಿ ತುಂಬುತ್ತಿದ್ದಾರೆ. ಈಗಾಗಲೇ ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಲಿಜ್ಜಿ ಬ್ಯೂಟಿಫುಲ್ ಎನ್ನುವುದು ಅವರ ಮೊದಲ ಪುಸ್ತಕ. ಇದರಲ್ಲಿ ತನ್ನ ಹೋರಾಟ, ಬಾಹ್ಯ ಸೌಂದರ್ಯಕ್ಕೆ ಪ್ರಾಶಸ್ತ್ಯ ನೀಡುವ ಸಮಾಜದಲ್ಲಿ ಬದುಕು ಕಟ್ಟಿಕೊಂಡ ಬಗೆಯನ್ನು ಹೇಳಿಕೊಂಡಿದ್ದಾರೆ. ತಾನು ಚಿಕ್ಕವಳಿದ್ದಾಗ ಅಮ್ಮ ಬರೆದ ಡೈರಿಯಿಂದ ವಿಷಯಗಳನ್ನು ಸಂಗ್ರಹಿಸಿದ್ದಾರೆ. ಈ ಕೃತಿ ಈಗ ಲಕ್ಷಾಂತರ ಮಂದಿಗೆ ಸ್ಫೂರ್ತಿಯ ಸೆಲೆಯಾಗಿದೆ. ಎರಡನೇ ಕೃತಿ –ಬಿ ಬ್ಯೂಟಿಫುಲ್ ಬಿ ಯೂ. ಇದರಲ್ಲಿ ಸ್ವಾಭಿಮಾನ ಕಳೆದುಕೊಂಡಿರುವ ಜನರಿಗೆ ಹೇಗೆ ಬದುಕಬೇಕೆಂಬುದರ ಬಗ್ಗೆ ಸಲಹೆ ನೀಡಿದ್ದಾರೆ. ಧನಾತ್ಮಕತೆ, ವೈಯುಕ್ತಿಕ ಧ್ಯಾನ, ನೈಜ ಗುರಿಗಳನ್ನು ಹಾಕಿಕೊಳ್ಳುವುದು ಮೊದಲಾದ ವಿಚಾರಗಳ ಬಗ್ಗೆಯೂ ಈ ಕೃತಿಯಲ್ಲಿ ಬರೆದಿದ್ದಾರೆ.

“ಬಣ್ಣ ಹಚ್ಚಿದ, ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡ ಸೆಲೆಬ್ರಿಟಿಗಳ ಫೋಟೋಗಳೇ ಆಳುತ್ತಿರುವ ಈ ಜಗತ್ತಿನಲ್ಲಿ, ಲಿಜ್ಜಿ ವೆಲಾಸ್ಕ್ವೆಝ್​​​​ ಅವರು ನಿಜಕ್ಕೂ ಪ್ರಕೃತಿಯ ಆಹ್ಲಾದಕರ ಮುಖವಾಗಿದ್ದಾರೆ. ಇವರ ಕಥೆಯು ಒಂಟಿತನ ಅನುಭವಿಸುತ್ತಿರುವ ಪ್ರತಿಯೊಬ್ಬರಲ್ಲೂ ಸ್ಫೂರ್ತಿ ತುಂಬುತ್ತದೆ,” ಎಂದು ಕೃತಿಯೊಂದರ ರಕ್ಷಾ ಕವಚದಲ್ಲಿ ಬರೆಯಲಾಗಿದೆ.

ಸಧ್ಯಕ್ಕೆ ಲಿಜ್ಜಿಯವರು ಡಾಕ್ಯುಮೆಂಟರಿಯೊಂದನ್ನು ಸಿದ್ಧಪಡಿಸುತ್ತಿದ್ದಾರೆ. ಹೀಯಾಳಿಸುವುದರಿಂದ ಯಾರೂ ಕೂಡಾ ನೊಂದುಕೊಳ್ಳಬಾರದು ಎನ್ನುವುದು ಈ ಡಾಕ್ಯುಮೆಂಟರಿಯ ಉದ್ದೇಶ.

ಅವರ ಈ ಯೋಜನೆ ಯಶಸ್ವಿಯಾಗಲಿ ಎನ್ನುವುದೇ ನಮ್ಮ ಹಾರೈಕೆ. ನಾವೆಲ್ಲಾ ಚಿಕ್ಕಪುಟ್ಟ ವಿಚಾರಗಳಿಗೆ ಕುಗ್ಗಿ ಹೋಗುವಾಗ, ಲಿಜ್ಜಿಯವರು ಇಡೀ ಜಗತ್ತಿಗೇ ಸ್ಫೂರ್ತಿಯಾಗಿ ಬೆಳದಿರುವುದು ನಿಜಕ್ಕೂ ಅಚ್ಚರಿ.

ಲೇಖಕರು: ಆದಿತ್ಯಭೂಷಣ್​​ ದ್ವಿವೇದಿ
ಅನುವಾದಕರು: ಪ್ರೀತಮ್​​​