ಬಾಯಿ ಕ್ಯಾನ್ಸರ್ ವಿರುದ್ಧ ಒಡಹುಟ್ಟಿದವರ ಹೋರಾಟ

ಟೀಮ್​​ ವೈ.ಎಸ್​​.ಕನ್ನಡ

ಬಾಯಿ ಕ್ಯಾನ್ಸರ್ ವಿರುದ್ಧ ಒಡಹುಟ್ಟಿದವರ ಹೋರಾಟ

Tuesday November 24, 2015,

3 min Read

ಬಾಯಿ ಕ್ಯಾನ್ಸರ್ ಅನ್ನೋ ಮಹಾಮಾರಿ ಅದೆಷ್ಟೋ ಜನರನ್ನು ಬಲಿ ಪಡೆದಿದೆ. ಅದ್ರಲ್ಲೂ ಹಳ್ಳಿಗಳಲ್ಲಿ ಈ ಮಾರಕ ರೋಗದ ಹಾವಳಿ ಹೆಚ್ಚು. ಬಾಯಿ ಕ್ಯಾನ್ಸರ್‍ನ ರಾಜಧಾನಿಯಂತಾಗಿರುವ ಹಳ್ಳಿಗಳ ಪಾಲಿಗೆ `ಇತಿದಿರ್ಖಾ' ಆಶಾ ಕಿರಣವಾಗಿದೆ. ಡಾ.ಪ್ರೀತಿ ಆದಿಲ್ ಚಂದ್ರಕರ್ ಮತ್ತವರ ಸಹೋದರ ಎಂಜಿನಿಯರ್ ಪ್ರವೀಣ್ ಆದಿಲ್ ಸೆಕೆಂಡ್ ಹ್ಯಾಂಡ್ ಟ್ರಕ್‍ನಲ್ಲಿ ಸಂಚರಿಸುತ್ತ ಛತ್ತೀಸ್‍ಗಢದ ಗ್ರಾಮಸ್ಥರ ಹಲ್ಲಿನ ಸಮಸ್ಯೆಗೆ ಪರಿಹಾರ ಒದಗಿಸ್ತಿದ್ದಾರೆ. ತಮ್ಮ ಮೊಬೈಲ್ ಡೆಂಟಿಸ್ಟ್ ಲ್ಯಾಬ್ ಅನ್ನು ಬಳಸಿಕೊಂಡು ಇವರು ಅಸಾಮಾನ್ಯ ರೋಗಿಗಳ ಬಳಿ ತಲುಪ್ತಾರೆ. ಇವರನ್ನ ಅಲೆಮಾರಿಗಳು ಅಂತ ಟೀಕಿಸಿದವರೂ ಇದ್ದಾರೆ. ಕೆಲವರು ಒಂದು ಹಲ್ಲು ಕೀಳಲು 20 ರೂಪಾಯಿಗಿಂತ ಕಡಿಮೆ ಹಣ ತೆಗೆದುಕೊಳ್ತಾರೆ, ಆದ್ರೆ ನೀವ್ಯಾಕೆ ಜಾಸ್ತಿ ಹಣ ಪಡೆಯುತ್ತೀರಾ ಅಂತ ಪ್ರೀತಿ ಅವರ ಬಳಿ ಗ್ರಾಮಸ್ಥರು ಕೇಳ್ತಾರೆ. ಆದ್ರೆ ಒಮ್ಮೆ ಇವರ ಬಳಿ ಚಿಕಿತ್ಸೆ ಪಡೆದ್ರೆ, ತಮ್ಮ ಪರಿಚಯಸ್ಥರನ್ನೂ ಇಲ್ಲಿಗೇ ಕರೆತರ್ತಾರೆ. ಪ್ರೀತಿ ಅವರಿಗೆ ಧನ್ಯವಾದ ಅರ್ಪಿಸಲು ಕ್ಯಾಂಪ್‍ನಲ್ಲೇ ಭೋಜನ ಕೂಟವನ್ನೂ ಏರ್ಪಡಿಸ್ತಾರೆ.

image


ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಶೇ. 1.5ರಷ್ಟು ದಂತವೈದ್ಯರು ಮಾತ್ರ ದೇಶದ ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದರರ್ಥ ಉಳಿದ ಶೇ.98.5ರಷ್ಟು ದಂತವೈದ್ಯರು ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಕಾಲು ಭಾಗದಷ್ಟು ಜನರನ್ನು ಮಾತ್ರ ತಲುಪುತ್ತಿದ್ದಾರೆ. ಪ್ರತಿ ಹಳ್ಳಿಗೂ ದಂತವೈದ್ಯಕೀಯ ಸೇವೆಯನ್ನು ವಿಸ್ತರಿಸಲು ಸರ್ಕಾರ ಕ್ಯಾಂಪ್‍ಗಳನ್ನು ಹಮ್ಮಿಕೊಂಡಿದೆ. ಆದ್ರೆ ಅದರ ಫಲಿತಾಂಶ ಮಾತ್ರ ತೃಪ್ತಿಕರವಾಗಿಲ್ಲ. ಸರ್ಕಾರ ಆಯೋಜಿಸುವ ಶಿಬಿರಗಳಲ್ಲಿನ ಸಮಸ್ಯೆ ಅಂದ್ರೆ ಅದೇ ಜಾಗದಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರೆಯುವುದಿಲ್ಲ. ರೋಗಿಗಳು ಸರ್ಕಾರಿ ಆಸ್ಪತ್ರೆ ಹುಡುಕಿಕೊಂಡು ಕಿಲೋಮೀಟರ್‍ಗಟ್ಟಲೆ ದೂರ ಹೋಗಬೇಕು. ಅಲ್ಲಿ ಇವರನ್ನು ಕನ್‍ಸಲ್ಟ್ ಮಾಡಿದ ಬೇರೊಬ್ಬ ವೈದ್ಯರು ಚಿಕಿತ್ಸೆಯ ಅಗತ್ಯವೇ ಇಲ್ಲ ಅಂತಾ ಹೇಳುವ ಸಾಧ್ಯತೆಗಳೇ ಹೆಚ್ಚು. ಚಿಕಿತ್ಸಾ ವ್ಯವಸ್ಥೆ, ವೈದ್ಯಕೀಯ ಸಿಬ್ಬಂದಿ, ಔಷಧಗಳ ಕೊರತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಮೂಲಾಗಿಬಿಟ್ಟಿದೆ. ಇದ್ರಿಂದ ಭ್ರಮನಿರಸಗೊಂಡು ರೋಗಿಗಳು ನಿರಾಸೆಯಿಂದ ವಾಪಸ್ಸಾಗ್ತಾರೆ ಅನ್ನೋದು ಪ್ರವೀಣ್ ಅವರ ಬೇಸರದ ನುಡಿ.

image


ಇದೇ ಕಾರಣಕ್ಕೆ ಪ್ರೀತಿ ಮತ್ತು ಪ್ರವೀಣ್ ಹಳ್ಳಿ ಹಳ್ಳಿಗೂ ಹೋಗಿ ಚಿಕಿತ್ಸೆ ನೀಡ್ತಿದ್ದಾರೆ. ಆರಂಭದಲ್ಲಿ ಅನೇಕರು ಇದನ್ನು ವಿರೋಧಿಸಿದ್ರು. ಆದ್ರೆ ಹೀಗೆ ಸಂಚರಿಸುತ್ತಲೇ 2 ವರ್ಷಗಳಲ್ಲಿ 3000ಕ್ಕೂ ಅಧಿಕ ರೋಗಿಗಳಿಗೆ ಇವರು ಚಿಕಿತ್ಸೆ ನೀಡಿದ್ದಾರೆ. ಟ್ರೀಟ್‍ಮೆಂಟ್ ಪಡೆದ ರೋಗಿಗಳು ಕೂಡ 100ಕ್ಕೆ ನೂರರಷ್ಟು ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಒಡಹುಟ್ಟಿದವರ ಮಧ್ಯೆ ವೃತ್ತಿ ಸಾಮ್ಯತೆಯಿಲ್ಲ. 2008ರಲ್ಲಿ ಪ್ರೀತಿ ಬಿಡಿಎಸ್ ಪದವಿ ಪಡೆದಿದ್ದಾರೆ. ಭಿಲಾಯ್‍ನಲ್ಲಿ ಸ್ವತಂತ್ರವಾಗಿ ಸೇವೆ ಸಲ್ಲಿಸುತ್ತಿರುವ ಅತಿ ಕಿರಿಯ ವೈದ್ಯೆ ಎನಿಸಿಕೊಂಡಿದ್ರು. ಮದುವೆಗೂ ಮೊದಲೇ ಪ್ರೀತಿ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸ್ತಾ ಇದ್ರು. ಇನ್ನು ಪ್ರವೀಣ್ ಐಐಟಿ ಕಾನ್ಪುರದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಭಾರತ ಹಾಗೂ ಸಿಂಗಾಪುರದ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಪ್ರವೀಣ್ ಕೆಲಸ ಮಾಡಿದ್ದಾರೆ. ಮೈಸೂರಿನಲ್ಲಿ ಉದ್ಯಮವೊಂದಕ್ಕೆ ಕೈಹಾಕಿದ್ರು. ಅದು ಕೈಗೂಡದೇ ಇದ್ದಿದ್ರಿಂದ ಸಲಹೆಗಾರರಾಗಿ ಕಾರ್ಯಾರಂಭ ಮಾಡಿದ್ರು.

image


ಕೊನೆಗೆ ಅಣ್ಣ - ತಂಗಿ ಜೊತೆಯಾಗಿ ತಮ್ಮ ತವರು ಛತ್ತೀಸ್‍ಗಢಕ್ಕೆ ಏನಾದ್ರೂ ಒಳ್ಳೆಯದು ಮಾಡಬೇಕು ಅನ್ನೋ ಆಲೋಚನೆ ಬಂದಿತ್ತು. ಗ್ರಾಮೀಣ ಹಿನ್ನೆಲೆ ಹೊಂದಿರುವ ಇವರ ಕುಟುಂಬ ಕೂಡ ಈಗಲೂ ಆ ಹಳ್ಳಿಗಳೊಂದಿಗೆ ನಂಟು ಇಟ್ಟುಕೊಂಡಿದೆ. ಚಿಕ್ಕಂದಿನಿಂದ್ಲೂ ಹಳ್ಳಿಗಳಲ್ಲಿನ ವೈದ್ಯರ ಕೊರತೆ, ಕಳಪೆ ಮೌಖಿಕ ನೈರ್ಮಲ್ಯ, ಅತಿಯಾದ ತಂಬಾಕು ಸೇವನೆ ಬಗ್ಗೆ ಪ್ರೀತಿ ಹಾಗೂ ಪ್ರವೀಣ್ ಅರಿತುಕೊಂಡಿದ್ರು. ಅತಿಯಾದ ತಂಬಾಕು ಸೇವನೆಯಿಂದ ಅವರ ಕೆಲ ಸಂಬಂಧಿಕರು ಕೂಡ ಸಾವನ್ನಪ್ಪಿದ್ರು. ಗ್ರಾಮೀಣ ಭಾರತ ದೇಶದ ಬಾಯಿ ಕ್ಯಾನ್ಸರ್‍ನ ರಾಜಧಾನಿಯಂತಾಗಿದೆ ಎನ್ನುತ್ತಾರೆ ಪ್ರವೀಣ್. ಉಪನಗರ ಪ್ರದೇಶದಲ್ಲಿ ಸ್ಪೆಷಲಿಸ್ಟ್ ಕ್ಲಿನಿಕ್‍ಗಳನ್ನು ಸ್ಥಾಪಿಸುವುದು ಇವರ ಮೊದಲ ಗುರಿಯಾಗಿತ್ತು. ಮೊದಲು ರೋಗಿಗಳ ನಂಬಿಕೆ ಗಳಿಸಬೇಕು ಅನ್ನೋ ಕಾರಣಕ್ಕೆ ಪ್ರೀತಿ ಹಾಗೂ ಪ್ರವೀಣ್ ಹಳ್ಳಿಗಳಲ್ಲಿ ಕ್ಯಾಂಪ್‍ಗಳನ್ನು ಆಯೋಜಿಸಲು ಆರಂಭಿಸಿದ್ರು. ನಿಖರವಾದ ರೋಗನಿರ್ಣಯ, ಒಳ್ಳೆಯ ಚಿಕಿತ್ಸೆ ಮೂಲಕ ತಮ್ಮ ವೃತ್ತಿಪರತೆಯನ್ನು ಸಾಬೀತುಪಡಿಸಿದ್ರು.

ರೋಗ ಗುಣಪಡಿಸುವುದಕ್ಕಿಂತ ಹೆಚ್ಚಾಗಿ ಅದನ್ನು ತಡೆಗಟ್ಟುವುದಕ್ಕೆ ಇವರು ಹೆಚ್ಚು ಆದ್ಯತೆ ನೀಡ್ತಿದ್ದಾರೆ. ಹಲ್ಲಿನ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸ್ತಿದ್ದಾರೆ. ಅಗತ್ಯ ಚಿಕಿತ್ಸೆ ಮತ್ತು ಅದಕ್ಕಾಗುವ ವೆಚ್ಚದ ಬಗ್ಗೆ ಮಾಹಿತಿಯುಳ್ಳ ಕಾರ್ಡ್‍ಗಳನ್ನು ಹಳ್ಳಿ ಜನರಿಗೆ ನೀಡಲಾಗುತ್ತೆ. ಅದೇ ಸ್ಥಳದಲ್ಲಿ ಗ್ರಾಮಸ್ಥರು ಚಿಕಿತ್ಸೆ ಪಡೆಯಬಹುದು, ಅಥವಾ ಮೂರು ತಿಂಗಳೊಳಗೆ ಇವರ ಕ್ಲಿನಿಕ್‍ಗೆ ಬಂದು ಟ್ರೀಟ್‍ಮೆಂಟ್ ಪಡೆದುಕೊಳ್ಳಬಹುದು. ಕ್ಯಾಂಪ್‍ಗಳಲ್ಲಿ ಚಿಕಿತ್ಸೆಗೆ ಕೊಂಚ ಕಡಿಮೆ ವೆಚ್ಚವಾಗುತ್ತೆ.

image


ಹಳ್ಳಿಗಳಲ್ಲಿ ಅದೆಷ್ಟೋ ಜನರಿಗೆ ತಮಗೆ ಡೆಂಟಲ್ ಸಮಸ್ಯೆ ಇದೆ ಎಂಬ ಅರಿವೇ ಇರುವುದಿಲ್ಲ, ಸಹಿಸಲಸಾಧ್ಯವಾದಂಥ ನೋವು ಶುರುವಾದಾಗಲೇ ಅವರು ಆಸ್ಪತ್ರೆ ಮೆಟ್ಟಿಲೇರ್ತಾರೆ. ಹಾಗಾಗಿ ಹಳ್ಳಿ ಹಳ್ಳಿಗೆ ಹೋಗಿ ಶಿಬಿರಗಳನ್ನು ಆಯೋಜಿಸಲು ಪ್ರೀತಿ ಮತ್ತು ಪ್ರವೀಣ್ ನಿರ್ಧರಿಸಿದ್ರು. ಸದ್ಯ `ಇತಿದಿರ್ಖಾ' ಅತ್ಯಂತ ಕಡಿಮೆ ಹಣ ಪಡೆದು ಚಿಕಿತ್ಸೆ ಮತ್ತು ಔಷಧಗಳನ್ನು ಗ್ರಾಮಸ್ಥರಿಗೆ ನೀಡ್ತಾ ಇದೆ. ಸ್ಥಳದಲ್ಲೇ ಚಿಕಿತ್ಸೆ ದೊರೆಯೋದ್ರಿಂದ ರೋಗಿಗಳಿಗೆ ದೂರ ಹೋಗುವ ಅವಶ್ಯಕತೆಯೂ ಇರುವುದಿಲ್ಲ. ಓರಲ್ ಹೆಲ್ತ್‍ಕೇರ್ ಉತ್ಪನ್ನಗಳನ್ನು ತಯಾರಿಸ್ತಾ ಇರೋ ಸಂಸ್ಥೆಗಳೊಂದಿಗೂ ಬಾಂಧವ್ಯ ಬೆಳೆಸಿಕೊಳ್ಳುವ ಮೂಲಕ ಕಡಿಮೆ ವೆಚ್ಚದಲ್ಲಿ ಔಷಧ ಪೂರೈಸಲು ಯೋಜನೆ ರೂಪಿಸಲಾಗಿದೆ. ಇನ್ನು ಹಲವು ಸಂಸ್ಥೆಗಳು ಕೂಡ `ಇತಿದಿರ್ಖಾ'ದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿವೆ. ತಜ್ಞ ಕೇಂದ್ರಗಳನ್ನು ತೆರೆಯುವ ಮೂಲಕ ತಮ್ಮ ಸೇವೆಯನ್ನು ವಿಸ್ತರಿಸಲು `ಇತಿದಿರ್ಖಾ' ಮುಂದಾಗಿದೆ.

ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಳ್ಳಿ ಹಳ್ಳಿಗಳಲ್ಲಿ ಪ್ರತಿನಿಧಿಗಳನ್ನು ನೇಮಿಸಲಾಗುತ್ತದೆ. ಅವರು ಚಿಕಿತ್ಸೆಗೆ ಸೂಕ್ತ ಕೇಂದ್ರ ಹಾಗೂ ದಿನಾಂಕವನ್ನು ನಿಗದಿಪಡಿಸ್ತಾರೆ. ಇನ್ನು `ಇತಿದಿರ್ಖಾ' ಕ್ಯಾಂಪ್‍ನ ಸೆಕೆಂಡ್ ಹ್ಯಾಂಡ್ ಟ್ರಕ್‍ನಲ್ಲಿ ಎಲ್ಲಾ ರೀತಿಯ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಟ್ರಕ್‍ನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸುತ್ತ ಪ್ರೀತಿ ಹಾಗೂ ಪ್ರದೀಪ್ ಬಾಯಿ ಕ್ಯಾನ್ಸರ್‍ಗೆ ಬ್ರೇಕ್ ಹಾಕಲು ಪರಿಶ್ರಮಪಡ್ತಿದ್ದಾರೆ.

ಲೇಖಕರು: ಫ್ರಾನ್ಸೆಸ್ಕೊ ಫೆರಾರೊ

ಅನುವಾದಕರು: ಭಾರತಿ ಭಟ್​​​​