ಬೆಂಗಳೂರಿಗೂ ಬಂತು ಕೆಲ್ಲರ್ ಕಿಚನ್ಸ್... ಬೆಂಗಳೂರಿನಲ್ಲಿ ಭಾರತದ ಮೊದಲ ಮಳಿಗೆ..!

ವಿಶಾಂತ್​

ಬೆಂಗಳೂರಿಗೂ ಬಂತು ಕೆಲ್ಲರ್ ಕಿಚನ್ಸ್... ಬೆಂಗಳೂರಿನಲ್ಲಿ ಭಾರತದ ಮೊದಲ ಮಳಿಗೆ..!

Saturday January 02, 2016,

3 min Read

image


ಡಚ್ ಮೂಲದ ಕಿಚನ್ ಬ್ರಾಂಡ್ ಕೆಲ್ಲರ್ ಕಿಚನ್ಸ್ ಕಳೆದ ವಾರವಷ್ಟೇ ಬೆಂಗಳೂರಿಗೆ ಪದಾರ್ಪಣೆ ಮಾಡಿದೆ. ಈ ಮೂಲಕ ಭಾರತಕ್ಕೂ ಎಂಟ್ರಿ ಕೊಟ್ಟಿದೆ. ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ 5 ಸಾವಿರ ಚದರಡಿಯ ಸುಸಜ್ಜಿತ ಮಳಿಗೆಯಲ್ಲಿ ಕೆಲ್ಲರ್ ಕಿಚನ್ಸ್ ಪ್ರಾರಂಭವಾಗಿದೆ.

ಕೆಲ್ಲರ್ ಕಿಚನ್ಸ್ ಹಿನ್ನೆಲೆ

ಅಂದ್ಹಾಗೆ ಡಚ್ ಮೂಲದ ಕೆಲ್ಲರ್ ಕಿಚನ್ಸ್ ಪ್ರಾರಂಭವಾಗಿದ್ದು 1935ರಲ್ಲಿ. ಈ ಕಿಚನ್ ಬ್ರಾಂಡ್‍ ಸದ್ಯ 80ನೇ ವರ್ಷಾಚರಣೆಯ ಸಂದರ್ಭದಲ್ಲಿ ಭಾರತಕ್ಕೆ, ಅದರಲ್ಲೂ ಬೆಂಗಳೂರಿಗೆ ಬಂದಿರೋದು ವಿಶೇಷವೇ ಸರಿ. ಇನ್ನು ನೆದರ್‍ಲೆಂಡ್‍ನಲ್ಲಿ ಶೇಕಡಾ 75ರಷ್ಟು ಪ್ರತಿಶತಃ ಮಾರುಕಟ್ಟೆಯನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿರುವ ಕೆಲ್ಲರ್ ಕಿಚನ್ಸ್, ನಂಬರ್ ಒನ್ ಕಿಚನ್ ಬ್ರಾಂಡ್​​ ಎನಿಸಿಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿ ಐಶಾರಾಮಿ ಸೌಲಭ್ಯಗಳನ್ನು ನೀಡುವ ಮೂಲಕ ಜನರಿಗೂ ಹತ್ತಿರವಾಗಿದೆ.

image


‘ಹಣವಂತರು ತಮಗೆ ಬೇಕಾದ ಸೌಲಭ್ಯಕ್ಕಾಗಿ ಹೆಚ್ಚು ಹಣ ತೆರುತ್ತಾರೆ. ಹೀಗಾಗಿಯೇ ಶ್ರೀಮಂತರ ಬೇಡಿಕೆಗಳನ್ನು ಪೂರೈಸುವುದು ಕಷ್ಟವಾಗುವುದಿಲ್ಲ. ಆದ್ರೆ ಮಧ್ಯಮ ವರ್ಗದ ಜನರಿಗೆ, ಅವರ ಕೈಗೆಟುಕುವ ಬೆಲೆಯ, ಜೇಬಿಗೆ ಕತ್ತರಿ ಹಾಕದೇ, ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಹಾಗೂ ಐಶಾರಾಮಿ ಸೌಲಭ್ಯಗಳನ್ನು ನೀಡುವುದೇ ನಮ್ಮ ಉದ್ದೇಶ. ಇನ್ನು ಭಾರತದ ಮುಕ್ಕಾಲು ಪ್ರತಿಶತಃ ಜನಸಂಖ್ಯೆ ಮಧ್ಯಮವರ್ಗದವರೇ ಆಗಿರುವ ಕಾರಣ ಇಲ್ಲಿಗೆ ಬಂದಿದ್ದೇವೆ. ಇನ್ನು ಬೆಂಗಳೂರು ಒಂದು ಮೆಟ್ರೋಪಾಲಿಟನ್ ನಗರ ಹಾಗೂ ನಮ್ಮಂತಹ ಹೊಸ ಕಂಪನಿಗಳಿಗೆ ಹೆಚ್ಚಿನ ಅವಕಾಶಗಳು ಅಲ್ಲಿ ಸಿಗುತ್ತವೆ. ಹೀಗಾಗಿಯೇ ಬೆಂಗಳೂರಿನ ಮೂಲಕವೇ ಭಾರತಕ್ಕೆ ಪದಾರ್ಪಣೆ ಮಾಡಿದ್ದೇವೆ.’ ಅಂತಾರೆ ಕೆಲ್ಲರ್ ಕಿಚನ್ಸ್​ನ ಮಾತೃಸಂಸ್ಥೆಯಾದ ಡಿಕೆಜಿ ಇಂಟರ್‍ನ್ಯಾಶನಲ್‍ನ ವ್ಯವಸ್ಥಾಪಕ ನಿರ್ದೇಶಕ ರಾನ್ ವ್ಯಾನ್ ಡೆನ್ ಬರ್ಗ್.

image


ಕೆಲ್ಲರ್ ಕಿಚನ್ಸ್ ಒದಗಿಸುವ ಸೇವೆ

2010ರಲ್ಲಿ ಡಿಕೆಜಿ ಕಂಪನಿಯ ಬ್ರ್ಯುಂಜೀಲ್ ಹೋಲ್ಡಿಂಗ್ ಜೊತೆ ಕೈಜೋಡಿಸಿದ ಕೆಲ್ಲರ್ ಕಿಚನ್ಸ್ ಇಂಟೀರಿಯರ್ಸ್ ಈಗ ಭಾರತಕ್ಕೆ ಕಾಲಿಟ್ಟಿದೆ. ‘ಅಡುಗೆ ಮನೆ ಒಳಾಂಗಣವನ್ನು ಅತ್ಯುತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಿ, ಐಶಾರಾಮಿ ಎನಿಸುವಂತಹ ಅನುಭವ ನೀಡುವುದೇ ಕೆಲ್ಲರ್ ಕಿಚನ್ಸ್ ವಿಶೇಷತೆ. 4 ಲಕ್ಷ ರೂಪಾಯಿಯಿಂದ 40 ಲಕ್ಷ ರೂಪಾಯಿಯವರೆಗೂ ಇಲ್ಲಿ ಅಡುಗೆ ಮನೆಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಇನ್ನು ಅಪಾರ್ಟ್‍ಮೆಂಟ್‍ಗಳ ಸಾಮಾನ್ಯ ಅಡುಗೆಮನೆಗೆ ಸರಿ ಸುಮಾರು 7 ಲಕ್ಷ ರೂಪಾಯಿಯಲ್ಲಿ ಅಡುಗೆ ಮನೆಯಲ್ಲಿ ವಿಶೇಷ ಪಾಕಲೋಕವನ್ನೇ ಸೃಷ್ಟಿಸಿಕೊಡ್ತೀವಿ. ಇನ್ನು 2016ರ ಮುಗಿಯುವುದರೊಳಗೆ 1000 ಅಡುಗೆ ಮನೆಗಳನ್ನು ವಿನ್ಯಾಸಗೊಳಿಸುವ ಗುರಿ ಕಂಪನಿಯದ್ದು’ ಅಂತ ಕೆಲ್ಲರ್ ಕಿಚನ್ಸ್ ಕುರಿತು ಹೆಚ್ಚು ಮಾಹಿತಿ ಹಂಚಿಕೊಳ್ತಾರೆ ಭಾರತದಲ್ಲಿನ ಕೆಲ್ಲರ್ ಕಿಚನ್ಸ್ ನಿರ್ದೇಶಕ ಅಭಿಜಿತ್ ಘಾತಕ್.

ಭಾರತದಲ್ಲಿ ಭವಿಷ್ಯದ ಯೋಜನೆಗಳು

ಸದ್ಯ ಬೆಂಗಳೂರಿನ ಮೂಲಕ ಭಾರತಕ್ಕೆ ಎಂಟ್ರಿ ಕೊಟ್ಟಿರುವ ಕೆಲ್ಲರ್ ಕಿಚನ್ಸ್ ಭಾರತದಾದ್ಯಂತ ತನ್ನ ಕಾರ್ಯಕ್ಷೇತ್ರ ವಿಸ್ತರಿಸಲು ಈಗಾಗಲೇ ಯೋಜನೆ ರೂಪಿಸಿದೆ. ಇನ್ನು ಕೆಲವೇ ದಿನಗಳಲ್ಲಿ ತಿರುವನಂತಪುರಂನಲ್ಲಿ ಎರಡನೇ ಮಳಿಗೆ ಪ್ರಾರಂಭಿಸಲಾಗುವುದು. ಬಳಿಕ ಮುಂದಿನ ವರ್ಷ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ತಲಾ ಒಂದೊಂದು ಮಳಿಗೆಗಳನ್ನು ಲಾಂಚ್ ಮಾಡಲಾಗುವುದು. ಈ ವರ್ಷ ಅರ್ಥಾತ್ 2015ರಲ್ಲಿ ಕೇವಲ ಭಾರತದಲ್ಲಿ ಮಾತ್ರವಲ್ಲ ಕೆಲ್ಲರ್ ಕಿಚನ್ಸ್ ದುಬೈನಲ್ಲೂ ಪದಾರ್ಪಣೆ ಮಾಡಿದೆ. ದುಬೈನಲ್ಲಿ 2016ರಲ್ಲಿ 2000 ಅಡುಗೆ ಮನೆಗಳನ್ನು ವಿನ್ಯಾಸಗೊಳಿಸುವ ಗುರಿ ಕೆಲ್ಲರ್ ಕಿಚನ್ಸ್ ಕಂಪನಿಯದು. ನೆದರ್‍ಲೆಂಡ್ ಒಂದರಲ್ಲೇ ಬರೊಬ್ಬರಿ 5000 ಮಳಿಗೆಗಳನ್ನು ಹೊಂದಿರುವ ಕೆಲ್ಲರ್ ಕಿಚನ್ಸ್​​ಗೆ ಯುನೈಟೆಡ್ ಕಿಂಗ್‍ಡಮ್‍ನಲ್ಲೂ 75 ಮಂದಿ ಡೀಲರ್‍ಗಳಿದ್ದಾರೆ. ಉಳಿದಂತೆ ಉತ್ತರ ಅಮೆರಿಕಾ ಹಾಗೂ ಮೊರಾಕೋಗಳಲ್ಲೂ ಕೆಲ್ಲರ್ ಕಿಚನ್ಸ್ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿದ್ದು, ಇನ್ನೂ ಬೇರೆ ಬೇರೆ ದೇಶಗಳಿಗೆ ಎಂಟ್ರಿ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

image


‘ನೆದರ್‍ಲೆಂಡ್ ಮಾರುಕಟ್ಟೆಗಿಂತ ಭಾರತೀಯ ಮಾರುಕಟ್ಟೆ ತುಂಬಾ ವಿಭಿನ್ನ. ಎರಡು ದೇಶಗಳ ನಡುವೆಯೂ ಜನರ ಟೇಸ್ಟ್​ ಗಳಲ್ಲಿ ತುಂಬಾ ಡಿಫರೆನ್ಸ್ ಇದೆ. ಹೀಗಾಗಿಯೇ ಇಲ್ಲಿನ ಸ್ಥಳೀಯರ ಇಷ್ಟಗಳಿಗೆ ತಕ್ಕಂತೆ ನಾವು ಅಡುಗೆ ಮನೆಗಳನ್ನು ವಿನ್ಯಾಸಗೊಳಿಸುತ್ತಿದ್ದೇವೆ. ಅಲ್ಲದೇ ಭಾರತೀಯರು ಹೆಚ್ಚಾಗಿ ಅಡುಗೆ ಪದಾರ್ಥಗಳು, ಧಾನ್ಯ ಹಾಗೂ ಅಕ್ಕಿಬೇಳೆಗಳನ್ನು ಶೇಖರಿಸಿ ಇಡುತ್ತಾರೆ. ಹೀಗಾಗಿಯೇ ಅವರಿಗೆ ಶೇಖರಣೆ ಮಾಡಲು ಹೆಚ್ಚು ಜಾಗ ಬೇಕು. ಅದಕ್ಕೆ ತಕ್ಕಂತೆ ನಾವೂ ಕೂಡ ಇಲ್ಲಿ ಅಡುಗೆ ಮನೆಗಳನ್ನು ಡಿಸೈನ್ ಮಾಡುತ್ತೇವೆ. ಮರದ ಹಲಗೆಗಳು, ಗಾಜು, ಮೆಲಮೈನ್, ಅಕ್ರಿಲಿಕ್ ಹಾಗೂ ಥರ್ಮಾಫಾಯಿಲ್‍ಗಳನ್ನು ನಾವು ಅಡುಗೆ ಮನೆಗಳನ್ನು ವಿನ್ಯಾಸ ಮಾಡುತ್ತೇವೆ. ಅವುಗಳಲ್ಲಿ ಭಾರತದಲ್ಲಿ ಮೆಲಮೈನ್‍ಗೆ ಹೆಚ್ಚು ಬೇಡಿಕೆ ಇದೆ’ ಅಂತ ಭಾರತದ ಮಾರುಕಟ್ಟೆ ಕುರಿತು ಮಾಹಿತಿ ನೀಡ್ತಾರೆ ಎಕ್ಸ್​​ಪೋರ್ಟ್ ಮ್ಯಾನೇಜರ್ ಮಾರ್ಟಿನ್ ಬಾಯ್ಲಿನ್ಸ್.

ಮಾಡರ್ನ್, ಕಾಂಟೆಂಪರರಿ, ಕಾಟೇಜ್, ಟ್ರೆಡಿಷನಲ್, ಹ್ಯಾಂಡಲ್​​ಲೆಸ್ ಹಾಗೂ ಫಾರ್ಮ್ ಹೌಸ್... ಹೀಗೆ ಆರು ವಿಭಿನ್ನ ಶೇಡ್‍ಗಳಲ್ಲಿ ಅಡುಗೆ ಮನೆಗಳನ್ನು ವಿನ್ಯಾಸ ಮಾಡಲಾಗುತ್ತದೆ.

ಇನ್ನು ನೆದರ್‍ಲೆಂಡ್ಸ್​​ನಲ್ಲಿ 75 ಸಾವಿರ ಚದರಡಿ ವಿಶಾಲ ವಿಸ್ತೀರ್ಣ ಹೊಂದಿರುವ ಕಾರ್ಖಾನೆಯಲ್ಲಿ ಪ್ರತಿ ಶಿಫ್ಟ್​ನಲ್ಲಿ, ಪ್ರತಿ ದಿನ ಬರೊಬ್ಬರಿ 500 ಅಡುಗೆ ಮನೆ ವಿನ್ಯಾಸಗಳನ್ನು ನಿರ್ಮಿಸಲಾಗುತ್ತೆ. ಹೀಗೆ ಕೆಲ್ಲರ್ ಕಿಚನ್ಸ್ ಪ್ರತಿ ವರ್ಷ ಸರಾಸರಿ 2000 ಕೋಟಿ ರೂಪಾಯಿಗೂ ಹೆಚ್ಚು ವ್ಯಾಪಾರ ವಹಿವಾಟು ನಡೆಸುತ್ತದೆ. ಶೇಕಡಾ 85 ಪ್ರತಿಶತಃ ಮಾರುಕಟ್ಟೆ ನೆದರ್‍ಲೆಂಡ್ಸ್​​ನಲ್ಲೇ ಇದ್ದು, ಉಳಿದ 15 ಪ್ರತಿಶತಃ ಆದಾಯ ವಿದೇಶೀ ಮಾರುಕಟ್ಟೆಗಳಿಂದ ಹರಿದುಬರುತ್ತದೆ.