ಹಣವಿಲ್ಲದೆ ಬೈಕ್ ಮಾರಿದ್ದ ಭಾರದ್ವಾಜ್..! ಈಗ ಎರಡು ಕಂಪನಿಗಳಿಗೆ ಒಡೆಯ..!

ಟೀಮ್​​ ವೈ.ಎಸ್​​. ಕನ್ನಡ

0

ಎಂಟು ವರ್ಷಗಳ ಹಿಂದೆ ಸಚಿನ್ ಭಾರದ್ವಾಜ್, ಬೆಂಕಿಪೊಟ್ಟಣದಂತಹ ಚಿಕ್ಕ ಮನೆ, ಕಿಷ್ಕಿಂದೆಯಂತಹ ಕಚೇರಿಯಲ್ಲಿ 2 ವರ್ಷಗಳ ಕಾಲ ವಾಸವಾಗಿದ್ರು. ಬೆಂಗಳೂರಲ್ಲಿ ನೆಲೆಸಿದ್ದ ತಮ್ಮ ಪೋಷಕರನ್ನು ಪುಣೆಗೆ ಆಹ್ವಾನಿಸಲು ಇದೇ ಕಾರಣಕ್ಕೆ ಸಚಿನ್ ಭಾರದ್ವಾಜ್‍ಗೆ ಮುಜುಗರವಾಗ್ತಿತ್ತು. ಆಗಷ್ಟೆ ಸಚಿನ್ ಭಾರದ್ವಾಜ್ ಅವರ ಆಹಾರ ಡೆಲಿವರಿ ಉದ್ಯಮ `ಟೇಸ್ಟಿ ಖಾನಾ' ಕಾರ್ಯಾರಂಭ ಮಾಡಿತ್ತು. ಮನೆ ಬಾಡಿಗೆ ಕಟ್ಟಲು ಹಣವಿರಲಿಲ್ಲ. ಹಣಕಾಸಿನ ಅಡಚಣೆಯಿಂದಾಗಿ ಅವರು ತಮ್ಮ ಬಳಿಯಿದ್ದ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕನ್ನು 13,000 ರೂಪಾಯಿಗೆ ಮಾರಾಟ ಮಾಡಿದ್ರು. ಆದ್ರೆ ಈಗ ಸ್ಪ್ಲೆಂಡರ್ ಜಮಾನಾ ಇಲ್ಲ, ಸಚಿನ್ ಭಾರದ್ವಾಜ್ ಮಿನುಗುವ ಬಿಎಂಡಬ್ಲ್ಯೂ ಕಾರಲ್ಲಿ ಓಡಾಡ್ತಾರೆ. ಒಂದು ತಿಂಗಳ ಗಂಡು ಮಗುವಿನ ತಂದೆ ಅವರು. ತಮ್ಮ ಎರಡನೇ ಉದ್ಯಮ `ಸ್ಮಿಂಕ್' ಆರಂಭಿಸುವ ಸಿದ್ಧತೆಯಲ್ಲಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಸಚಿನ್ ಅವರ ಬದುಕೇ ಬದಲಾಗಿದೆ. ಕಳೆದ ನವೆಂಬರ್‍ನಲ್ಲಿ ಸಚಿನ್ ಒಡೆತನದ `ಟೇಸ್ಟಿಖಾನಾ' 120 ಕೋಟಿ ರೂಪಾಯಿಗೆ `ಫುಡ್‍ಪಾಂಡಾ'ವನ್ನು ಸ್ವಾಧೀನಪಡಿಸಿಕೊಂಡಿದೆ.

`ಫುಡ್‍ಪಾಂಡಾ'ದೆಡೆಗೆ ಮೃದು ಪರಿವರ್ತನೆಯಲ್ಲ...

ಸ್ವಾಧೀನ ಮಾತುಕತೆ ಶುರುವಾಗಿದ್ದು ಇದೇ ವರ್ಷ ಆಗಸ್ಟ್​​​ನಲ್ಲಿ. ಎರಡೂ ಪಾರ್ಟಿಗಳು ಶೀಘ್ರವೇ ಒಮ್ಮತಕ್ಕೆ ಬಂದಿದ್ವು. ಬೇರೆ ಯಾರಾದ್ರೂ ಅದರ ಮೇಲೆ ಕಣ್ಣು ಹಾಕುವಷ್ಟರಲ್ಲಿ ಒಪ್ಪಂದಕ್ಕೆ ಮುದ್ರೆ ಬಿದ್ದಿತ್ತು. ಬರ್ಲಿನ್ ಮೂಲದ `ಡೆಲಿವರಿ ಹೀರೋ' ಸಂಸ್ಥೆ 2011ರಲ್ಲಿ 5 ಮಿಲಿಯನ್ ಡಾಲರ್ ಹಣವನ್ನು `ಟೇಸ್ಟಿಖಾನಾ'ದಲ್ಲಿ ಹೂಡಿಕೆ ಮಾಡುವ ಮೂಲಕ, ಬಹುತೇಕ ಷೇರುಗಳನ್ನು ವಶಕ್ಕೆ ಪಡೆದಿತ್ತು.

`ಫುಡ್‍ಪಾಂಡಾ' ಸ್ವಾಧೀನಪಡಿಸಿಕೊಂಡ ಕೆಲ ತಿಂಗಳುಗಳ ಬಳಿಕ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿರಲಿಲ್ಲ. ಎರಡೂ ಆಡಳಿತ ಮಂಡಳಿಗಳ ನಡುವೆ ತಿಕ್ಕಾಟ ಶುರುವಾಗಿತ್ತು. ಈ ಬಗ್ಗೆ ಸಚಿನ್ ಮಾಹಿತಿ ಕೇಳಿದಾಗ `ಫುಡ್‍ಪಾಂಡಾ'ದ ಶೆಲ್ಡನ್ ಅದನ್ನು ನೀಡಲು ನಿರಾಕರಿಸಿದ್ರು. ಚರ್ಚೆಗೂ ಸಿದ್ಧರಿರಲಿಲ್ಲ. ಟೇಸ್ಟಿಖಾನಾದ 100 ಸದಸ್ಯರ ಕಾರ್ಯವೈಖರಿಗಿಂತ `ಫುಡ್‍ಪಾಂಡಾ'ದ ಕಾರ್ಯಾಚರಣೆ ವಿಭಿನ್ನ ಎಂದು ಉಲ್ಲೇಖಿಸಿದ್ರು. `ಫುಡ್‍ಪಾಂಡಾ'ದ ಕಾರ್ಯವೈಖರಿ ಹೇಗಿದೆ? ಅಥವಾ ಉದ್ಯಮ ಹೇಗೆ ಮುನ್ನಡೆಯುತ್ತಿದೆ ಎಂಬ ಬಗ್ಗೆ ತಮ್ಮ ಕಡೆಯಿಂದ ಯಾವುದೇ ಕಾಮೆಂಟ್ ಇಲ್ಲ ಅಂತಾ ಸಚಿನ್ ಭಾರದ್ವಾಜ್ ಸ್ಪಷ್ಟಪಡಿಸಿದ್ರು. ನನ್ನ ಕಾರ್ಯವೈಖರಿಯೇ ಸರಿ ಎಂಬ ಭಾವನೆ ಕೂಡ ತಮಗಿಲ್ಲ ಅನ್ನೋದನ್ನೂ ತಿಳಿಸಿದ್ರು. ಶೆಲ್ಡನ್ ಮತ್ತು `ಟೇಸ್ಟಿಖಾನಾ'ದ ಆಡಳಿತ ಮಂಡಳಿ ಮಾರ್ಚ್ ಮೊದಲ ವಾರದಲ್ಲಿ `ಫುಡ್‍ಪಾಂಡಾ'ದಿಂದ ಹೊರನಡೆದಿತ್ತು. `ಫುಡ್‍ಪಾಂಡಾ'ದ ಸಂಸ್ಥಾಪಕರು ಕೋಟ್ಯಂತರ ರೂಪಾಯಿ ಷೇರುಗಳನ್ನು ಬಿಟ್ಟು ಹೊರನಡೆದಿದ್ದಾರೆ ಎಂಬ ಸುದ್ದಿ ಕೂಡ ಹಬ್ಬಿತ್ತು.

ಆದ್ರೆ ಸೂಕ್ತ ಮಾರ್ಗದಲ್ಲಿ ಉದ್ಯಮವನ್ನು ಕಟ್ಟಿ ಬೆಳೆಸುವ ಜೊತೆಗೆ ನೈತಿಕತೆ ಮತ್ತು ಆದರ್ಶಗಳು ಕೂಡ ಬಹಳ ಮುಖ್ಯ. ಅವುಗಳ ಜೊತೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಸಚಿನ್ ಭಾರದ್ವಾಜ್. ಅನೈತಿಕ ಮಾರ್ಗ ಅನುಸರಿಸುವ ಬದಲು, ನಿಧಾನಗತಿಯ ಬೆಳವಣಿಗೆಗೆ ಒತ್ತು ನೀಡುತ್ತೇನೆ ಅನ್ನೋದು ಅವರ ಸ್ಪಷ್ಟ ನುಡಿ. ಸಚಿನ್ ಯಾವತ್ತೂ ಪೊಲೀಸ್ ಅಧಿಕಾರಿಗಳಿಗೆ ಲಂಚ ಕೊಟ್ಟವರಲ್ಲ, ಒಮ್ಮೆ 6 ತಿಂಗಳ ಕಾಲ ಅವರನ್ನು ಅಮಾನತು ಮಾಡಲಾಗಿತ್ತು. ಆ ಸಂದರ್ಭದಲ್ಲೂ ಲಂಚ ಕೊಟ್ಟು ಬಿಡುಗಡೆಯಾಗುವ ಗೋಜಿಗೆ ಅವರು ಹೋಗಿರಲಿಲ್ಲ. ಇರುವುದರಲ್ಲೇ ತೃಪ್ತಿ ಇದೆ, ಹೆಚ್ಚಿನದೇನನ್ನೂ ಬಯಸುವುದಿಲ್ಲ. ಸಂಸ್ಥೆ ಬಿಟ್ಟು ಹೋದವರಿಗೆ ನನ್ನ ಜೇಬಿನಿಂದ ಹಣ ಕೊಟ್ಟಿದ್ದೇನೆ ಅನ್ನೋದು ಸಚಿನ್ ಅವರ ಸ್ಪಷ್ಟನೆ.

`ಸೀ ಮಿ ಇನ್ ನೋ ಕ್ಯೂ' ಜನ್ಮ ತಳೆದಿದ್ದು ಹೇಗೆ?

ಫುಡ್‍ಪಾಂಡಾದಲ್ಲಿನ ಚಿಕ್ಕ ಪಯಣದ ಬಳಿಕ ಸಚಿನ್ ಭಾರದ್ವಾಜ್ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಅಪ್ಪನಾಗುತ್ತಿರುವ ಖುಷಿ ಅವರನ್ನು ಆವರಿಸಿತ್ತು. ಅಲ್ಟ್ರಾ ಸೋನೋಗ್ರಫಿಗಾಗಿ, ಗೈನಕಾಲಜಿಸ್ಟ್​​​ಗಳ ಅಪಾಯಿಂಟ್‍ಮೆಂಟ್‍ಗಾಗಿ ಕಾದಿದ್ದು ಹೀಗೆ ಎಲ್ಲ ಅನುಭವಗಳನ್ನೂ ಅವರು ಹಂಚಿಕೊಳ್ತಾರೆ. ಘಂಟೆಗಟ್ಟಲೆ ಕಾಯುವುದು ಅಂದ್ರೆ ನಿಜಕ್ಕೂ ಯಾತನಾಮಯ, ಆದ್ರೆ ಈ ಸಮಯವನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳುವುದು ಎಂಬ ಬಗ್ಗೆ ಅವರು ಯೋಚಿಸುತ್ತಿದ್ರು. ಹಲವು ಬಾರಿ ಸಚಿನ್ ಮತ್ತವರ ಪತ್ನಿ ಊಟಕ್ಕೆ ಹೋಗಿದ್ದಾಗ ಅವರ ಅಪಾಯಿಂಟ್‍ಮೆಂಟ್ ಮಿಸ್ ಆಗ್ತಾ ಇತ್ತು. ಆಸ್ಪತ್ರೆಗಳಲ್ಲಿ ರೋಗಿಗಳ ಕ್ಯೂವನ್ನು ಸರಿಯಾಗಿ ನಿರ್ವಹಿಸಲು ಯಾಕೆ ಸಾಧ್ಯವಾಗ್ತಿಲ್ಲ ಅನ್ನೋ ಪ್ರಶ್ನೆ ಸಚಿನ್ ಅವರನ್ನು ಕಾಡುತ್ತಿತ್ತು. ತಂತ್ರಜ್ಞಾನದ ಮೂಲಕ ಇದಕ್ಕೆ ಪರಿಹಾರ ಹುಡುಕಬೇಕು ಎನಿಸಿತ್ತು. ಇದರ ಫಲವಾಗಿಯೇ `ಸ್ಮಿಂಕ್' ಜನ್ಮ ತಳೆದಿದೆ. ಸಚಿನ್ ಅವರ ಜೊತೆಗೆ ಮಾಜಿ ಸಹ ಸಂಸ್ಥಾಪಕ ಶೆಲ್ಡನ್, ಟೇಸ್ಟಿಖಾನಾದ ಮುಖ್ಯ ಮಾರಾಟಾಧಿಕಾರಿ ಸಂತೋಷ್ ಜೊತೆಯಾಗಿ `ಸ್ಮಿಂಕ್' ಅನ್ನು ಕಟ್ಟಿದ್ದಾರೆ. ಪುಣೆಯ 8 ಕ್ಲಿನಿಕ್‍ಗಳ ಜೊತೆ `ಸ್ಮಿಂಕ್' ಒಪ್ಪಂದ ಮಾಡಿಕೊಂಡಿದೆ.

`ಸ್ಮಿಂಕ್' ಕಾರ್ಯಾಚರಣೆ ಹೇಗಿದೆ?

`ಸ್ಮಿಂಕ್' ಅನ್ನೋದು ಒಂದು ಮೊಬೈಲ್ ಆ್ಯಪ್, ಕಂಪನಿಗಳಿಗೆ ತಮ್ಮ ಗ್ರಾಹಕರ ನಿರ್ವಹಣೆ ಮಾಡಲು ಇದು ನೆರವಾಗುತ್ತದೆ. ಆಸ್ಪತ್ರೆಗಳಲ್ಲಿ ರೋಗಿಗಳು ಕ್ಯೂ ನಿಲ್ಲಬೇಕಾದ ಅವಶ್ಯಕತೆಯಿಲ್ಲ, ಅವರ ಸರದಿ ಬಂದಾಗ ಸ್ಮಿಂಕ್ ಆ್ಯಪ್ ನೋಟಿಫಿಕೇಷನ್ ಕಳಿಸುತ್ತೆ. ಗ್ರಾಹಕರು ಆರ್ಡರ್ ಮಾಡಿದ್ದ ಉತ್ಪನ್ನ ರೆಡಿ ಇದೆ ಎಂದಾದಲ್ಲಿ ಅದನ್ನು ಕೊಂಡೊಯ್ಯುವಂತೆ ಕೂಡ ನೋಟಿಫಿಕೇಷನ್ ಕಳಿಸುತ್ತೆ. ನೇರ ಸ್ಥಿತಿ ಏನಿದೆ ಅನ್ನೋದನ್ನು ಇದು ತಿಳಿಸುತ್ತೆ. ಪ್ರತಿ ತಿಂಗಳು 1,000ಕ್ಕೂ ಹೆಚ್ಚು ಮಂದಿ ಸ್ಮಿಂಕ್‍ನಲ್ಲಿ ಬುಕ್ಕಿಂಗ್ ಮಾಡ್ತಿದ್ದಾರೆ. ವಾಕ್-ಇನ್-ಇಂಟರ್‍ವ್ಯೂಗಳಿಗೆ ನೆರವಾಗಲು ಎಚ್‍ಆರ್ ಸಂಸ್ಥೆಗಳ ಜೊತೆಗೂ `ಸ್ಮಿಂಕ್' ಮಾತುಕತೆ ನಡೆಸ್ತಾ ಇದೆ. ಸ್ಮಿಂಕ್‍ನ ವ್ಯಾಪ್ತಿ ಅತ್ಯಂತ ವಿಸ್ತಾರವಾಗಿದೆ, ಆಸ್ಪತ್ರೆ, ಕಂಪನಿಗಳು, ಸರ್ಕಾರಿ ಕಚೇರಿಗಳು, ಪಾಸ್‍ಪೋರ್ಟ್ ಕೇಂದ್ರಗಳು, ಆರ್‍ಟಿಓ, ಕಾರ್ ಅಥವಾ ಬೈಕ್ ಸರ್ವೀಸ್ ಸ್ಟೇಶನ್ ಹೀಗೆ ವಿವಿಧ ವಿಭಾಗಗಳಲ್ಲಿ ಇದನ್ನು ಉಪಯೋಗಿಸಿಕೊಳ್ಳಬಹುದು.

ವ್ಯಾಪಾರಿಗಳು ಕೂಡ ತಮ್ಮ ಗ್ರಾಹಕರ ನಿರ್ವಹಣಾ ಪ್ರಕ್ರಿಯೆಗೆ `ಸ್ಮಿಂಕ್' ಆ್ಯಪ್ ಅನ್ನು ಬಳಸಿಕೊಳ್ಳಬಹುದು. ತಿಂಗಳಿಗೆ ಸುಮಾರು 2000 ರೂಪಾಯಿ ವೆಚ್ಚವಾಗುತ್ತೆ. ಸದ್ಯ `ಮೈಟೈಮ್' ಮತ್ತು `ಕ್ಯೂ-ಲೆಸ್' ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಅಂಗಡಿಯಲ್ಲಿ ಭವಿಷ್ಯಕ್ಕೇನಿದೆ..?

ಈ ಪಯಣದಲ್ಲಿ ತಾವು ಕಲಿತಿದ್ದು ಅಪಾರ ಎನ್ನುತ್ತಾರೆ ಸಚಿನ್ ಭಾರದ್ವಾಜ್. `ಟೇಸ್ಟಿಖಾನಾ' ಮೂಲಕ ಎಲ್ಲರೂ ಜೊತೆಯಾಗಿ ಯಶಸ್ವಿ ಉದ್ಯಮವೊಂದನ್ನು ಮುನ್ನಡೆಸಿದ್ದೇವೆ, ಅದೇ ಪ್ರಯತ್ನವನ್ನು `ಸ್ಮಿಂಕ್'ನಲ್ಲೂ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅದರರ್ಥ ಅದೇ ಕಿಷ್ಕಿಂದೆಯಂತಹ ಕೋಣೆಯಲ್ಲಿ ಮಲಗುತ್ತಾರೆ, ಬೈಕ್ ಮಾರಾಟ ಮಾಡುತ್ತಾರೆ ಎಂದಲ್ಲ. ಅವರ ಉದ್ಯಮ ಪಯಣ ಹೀಗೇ ಮುಂದುವರಿಯಲಿದೆ ಎಂದರ್ಥ.

ಲೇಖಕರು: ಅರ್ಪಣಾ ಘೋಷ್​​
ಅನುವಾದಕರು: ಭಾರತಿ ಭಟ್​​​​

Related Stories