ಉದ್ಯಮದ ಯಶಸ್ಸಿಗೆ ವಿನ್ಯಾಸವೇ ಅಸ್ತ್ರ..!

ಟೀಮ್​​ ವೈ.ಎಸ್​. ಕನ್ನಡ

ಉದ್ಯಮದ ಯಶಸ್ಸಿಗೆ ವಿನ್ಯಾಸವೇ ಅಸ್ತ್ರ..!

Wednesday December 23, 2015,

2 min Read

ಒಂದು ಉದ್ಯಮ ತನ್ನ ಉತ್ಪನ್ನದ ಗುಣಮಟ್ಟ ಮತ್ತು ವಿನ್ಯಾಸದಿಂದ ಗುರುತಿಸಿಕೊಳ್ಳುತ್ತದೆ. ಭಾರತದ ಉದ್ಯಮಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಹಸಿವು ಅದ್ಭುತ ವಿನ್ಯಾಸಗಳನ್ನು ಕಾರ್ಯರೂಪಕ್ಕೆ ತರಲು ಕಾರಣವಾಗಿದೆ. ಅದು ಹೇಗೆ ಅನ್ನೋದನ್ನು ಕೂಡ ಕಲಿಸಿಕೊಡಲು ಕೆಲವು ವೇದಿಕೆಗಳಿವೆ.

ವಿನ್ಯಾಸವೇ ನಿರ್ಣಾಯಕ...

ವಿನ್ಯಾಸ ಒಂದು ನಿರ್ಣಾಯಕ ಅಂಶ. ಅತ್ಯಂತ ಶೀಘ್ರವಾಗಿ ಹಾಗೂ ನಿರಂತರವಾಗಿ ಗ್ರಾಹಕರನ್ನು ಅಳವಡಿಸಿಕೊಳ್ಳಲು, ಎಂಗೇಜ್ ಆಗಿರುವಂತೆ ಮಾಡಲು ವಿನ್ಯಾಸ ಅತ್ಯವಶ್ಯಕ ಎನ್ನುತ್ತಾರೆ 500 ಸ್ಟಾರ್ಟ್‍ಅಪ್‍ನ ಪಾಲುದಾರರಾಗಿರುವ ಪಂಕಜ್ ಜೈನ್. ಬಳಕೆಗೆ ಸರಳವಾದ ಮತ್ತು ಕಲಾತ್ಮಕ ಉತ್ಪನ್ನಗಳೇ ಕಂಪನಿಯ ಜೀವಾಳ ಅನ್ನೋದು ಅವರ ಅಭಿಪ್ರಾಯ. ಪಂಕಜ್ ಎನ್‍ವೈಯು ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‍ನಲ್ಲಿ ಪದವಿ ಪಡೆದಿದ್ದಾರೆ. ವಿನ್ಯಾಸದ ಕಡೆಗೆ ಹೆಚ್ಚು ಗಮನಹರಿಸಿದ್ರಿಂದ ಅಮೆರಿಕ ಹಾಗೂ ಭಾರತದಲ್ಲಿ ಅವರು ಪಾಲುದಾರರಾಗಿರುವ ಸಂಸ್ಥೆಗಳು ಯಶಸ್ಸು ಗಳಿಸಿವೆ. ಉಳಿದ ಸಂಸ್ಥೆಗಳಿಗಿಂತ ವಿಭಿನ್ನವಾಗಿ ಗುರುತಿಸಿಕೊಳ್ಳಲು ಭಾರತೀಯ ಗ್ರಾಹಕ ಉದ್ಯಮಗಳು ಉತ್ತಮ ಅನುಭವಗಳನ್ನು ಸೃಷ್ಟಿಸಬೇಕು. ಜಾಗತಿಕ ಮಾರುಕಟ್ಟೆಗಾಗಿ ಕಂಪನಿ ಆರಂಭಿಸುತ್ತಿರುವವರು, ವಿನ್ಯಾಸದ ಮಹತ್ವವನ್ನು ಅರಿತಿರುವ ಗ್ಲೋಬಲ್ ಪ್ಲೇಯರ್‍ಗಳ ಜೊತೆ ಅಂತರ್ಗತವಾಗಿ ಪೈಪೋಟಿ ನಡೆಸುತ್ತಾರೆ. 500 ಸ್ಟಾರ್ಟ್‍ಅಪ್‍ನಲ್ಲಿ ಕೂಡ ವಿನ್ಯಾಸಗಳು ಯಶಸ್ವಿಯಾಗಲು ಹತೋಟಿ ಸಾಧಿಸಬೇಕು ಎನ್ನುತ್ತಾರೆ ಪಂಕಜ್ ಜೈನ್. 2007ರಲ್ಲಿ ದೆಹಲಿಗೆ ಸ್ಥಳಾಂತರವಾಗುವುದಕ್ಕೂ ಮುನ್ನ ಅವರು, ವಾಲ್ ಸ್ಟ್ರೀಟ್‍ನಲ್ಲಿ 12 ವರ್ಷಗಳ ಕಾಲ ನೆಲೆಸಿದ್ರು. ದೇಶೀಯ ಹಾಗೂ ಕೌಶಲ್ಯರಹಿತ ಕಾರ್ಮಿಕರಿಗೆ ಮಾರುಕಟ್ಟೆ ಒದಗಿಸಲು ` Semblr' ಹೆಸರಿನ ಕಂಪನಿಯೊಂದನ್ನು ಆರಂಭಿಸಿದ್ರು.

image


ಬಹುತೇಕ ಉದ್ಯಮಗಳು ವಿನ್ಯಾಸವನ್ನು ಒಂದು ಕಲೆ ಮತ್ತು ಸೌಂದರ್ಯಶಾಸ್ತ್ರವೆಂದು ಪರಿಗಣಿಸಿರುತ್ತವೆ. ಆದ್ರೆ ಆ ನಂಬಿಕೆಯನ್ನು ಪಂಕಜ್ ಜೈನ್ ಹೊಡೆದೋಡಿಸಿದ್ದಾರೆ. ವಿನ್ಯಾಸ ಅನ್ನೋದು ಪ್ರಕ್ರಿಯೆ ಮತ್ತು ವಿಧಾನಗಳನ್ನೊಳಗೊಂಡ ವಿಜ್ಞಾನ ಅನ್ನೋದು ಅವರ ವಾದ. ಅದಕ್ಕೆ ಸಹನೆ ಬೇಕು, ನಿಮ್ಮ ಉದ್ಯಮಕ್ಕೆ ಸಹಕಾರಿಯಾಗುವಂತೆ ಹೇಗೆ ವಿನ್ಯಾಸ ಮಾಡಬೇಕು ಎಂಬುದನ್ನು ವಿಜ್ಞಾನದಂತೆ ಸುದೀರ್ಘವಾಗಿ ಅಧ್ಯಯನ ಮಾಡಬೇಕು. ಒಳ್ಳೆಯ ವಿನ್ಯಾಸ ಕಠಿಣವೇನಲ್ಲ, ಆದ್ರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡಲು ಪರಿಶ್ರಮ ಬೇಕು.

ವಿಜ್ಞಾನದಂತೆ ವಿನ್ಯಾಸ...

ಒಂದು ಉದ್ಯಮಕ್ಕೆ ವಿನ್ಯಾಸ ಮಾಡಬೇಕಾದ ಸಂದರ್ಭದಲ್ಲಿ ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲನೆಯದಾಗಿ, ವಿನ್ಯಾಸ ಪ್ರತ್ಯೇಕವಾಗಿ ಕಾರ್ಯರೂಪಕ್ಕೆ ತರುವಂಥದ್ದಲ್ಲ. ಬಳಕೆದಾರರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಸಹಯೋಗದ ಪ್ರಕ್ರಿಯೆ ಅದು. ನೀವು ನಿಮಗಾಗಿ ವಿನ್ಯಾಸ ಮಾಡುತ್ತಿಲ್ಲ ಅನ್ನೋದನ್ನು ಗಮನದಲ್ಲಿಟ್ಟುಕೊಳ್ಳಿ ಅನ್ನೋದುಬ ಪಂಕಜ್ ಅವರ ಸಲಹೆ. ಎರಡನೆಯದಾಗಿ ಇದೊಂದು ನಿರಂತರ ಪ್ರಕ್ರಿಯೆ, ಮೊದಲ ಪ್ರಯತ್ನದಲ್ಲೇ ನೀವು ಸರಿಯಾದ ವಿನ್ಯಾಸ ಮಾಡುವುದು ನಿಜಕ್ಕೂ ಕಷ್ಟದ ಕೆಲಸ. ವಿನ್ಯಾಸದ ದೃಶ್ಯಕ್ಕಿಂತಲೂ, ವಿನ್ಯಾಸ ನಿಮ್ಮ ಉತ್ಪನ್ನದ ಯಶಸ್ಸಿಗೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅಷ್ಟೇ ಅಲ್ಲ ವಿನ್ಯಾಸವನ್ನು ಅತ್ಯಂತ ವೇಗವಾಗಿ ಕೊಂಡೊಯ್ಯಬೇಕು, ನಿರಂತರತೆಯ ಆಧಾರದಲ್ಲಿ ಪರೀಕ್ಷೆಗೆ ಒಳಪಡಿಸಬೇಕು.

ಸಾಮಾನ್ಯ ವಿನ್ಯಾಸ ತಪ್ಪುಗಳು...

ಯುಐ ಮತ್ತು ಯುಎಕ್ಸ್ ನಡುವಣ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳದೇ ಇರುವುದು ಒಂದು ಸಾಮಾನ್ಯ ವಿನ್ಯಾಸದ ತಪ್ಪು. ಸರಳವಾಗಿ ಹೇಳಬೇಕಂದ್ರೆ, ಜನರು ನಿಮ್ಮ ಉತ್ಪನ್ನದ ಜೊತೆಗೆ ನಡೆಸುವ ಸಂವಹನವೇ ಯುಐ. ಅವರಿಗಾದ ಅನುಭವವನ್ನು ಯುಎಕ್ಸ್ ಅಂತಾ ಕರೆಯಲಾಗುತ್ತದೆ. ಬಹುತೇಕ ಮಂದಿ ಕೇವಲ ಯುಐ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸುತ್ತಾರೆ, ಯುಎಕ್ಸ್ ಅನ್ನು ಮರೆತೇಬಿಟ್ಟಿರುತ್ತಾರೆ.

ಎಂಜಿನಿಯರ್‍ಗಳು ಯುಎಕ್ಸ್​​ನಲ್ಲೂ ತೊಡಗಿಸಿಕೊಳ್ಳುವಂತೆ ಮಾಡಲು, ಯುಎಕ್ಸ್​​ನ ಮೂಲಭೂತ ತತ್ವಗಳು ಮತ್ತು ವಿಧಾನಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಲು ಶೀಘ್ರ ಪರಿಹಾರವಿದೆ. ಪಂಕಜ್ ಜೈನ್ ಅವರ ಪ್ರಕಾರ ಮತ್ತೊಂದು ಸಾಮಾನ್ಯ ತಪ್ಪೆಂದರೆ, ವಿನ್ಯಾಸವನ್ನು ಕೊನೆಯ ಹಂತವೆಂದು ಭಾವಿಸುವುದು. ಬಳಕೆದಾರರ ಅಭಿಪ್ರಾಯಗಳನ್ನು ಸಂಗ್ರಹಿಸದೆ, ಅವರೊಂದಿಗೆ ಸಂವಹನ ನಡೆಸದೇ ವಿನ್ಯಾಸ ಮಾಡುವುದು ಉದ್ಯಮಗಳ ಪಾಲಿಗೆ ಬಹಳ ಅಪಾಯಕಾರಿ ಅನ್ನೋದು ಪಂಕಜ್ ಜೈನ್ ಅವರ ಅಭಿಪ್ರಾಯ. ಅತ್ಯಂತ ಶೀಘ್ರವಾಗಿ ಬಳಕೆದಾರರ ಅಭಿಪ್ರಾಯವನ್ನು ಪಡೆಯಲು ವಿನ್ಯಾಸ ತಂತ್ರಗಳನ್ನು ಬಳಸಬೇಕು. ಅಪೂರ್ಣವಾದ ` MVP 'ಯೊಂದನ್ನು ಸುಂದರವಾಗಿ ನಿರ್ಮಾಣ ಮಾಡಿ ಕಳುಹಿಸುವುದು ವಿನ್ಯಾಸವಲ್ಲ. ವಿನ್ಯಾಸ ಅಂದ್ರೆ ` MVP 'ಯ ಪರಿಕಲ್ಪನೆ, ನಿರ್ವಹಣೆ ಮತ್ತು ಪರೀಕ್ಷೆ. ಪಂಕಜ್ ಜೈನ್ ಅವರ ಪ್ರಕಾರ `ಸೋಶಿಯಲ್ ಕಾಪ್ಸ್', `ಇನ್‍ಸ್ಟಾ ಮೋಜೋ', `ಹೆಡ್ ಔಟ್' ಮತ್ತು `ಪಿಕ್ ಕಾಲೇಜ್' ಅತ್ಯದ್ಭುತವಾಗಿ ವಿನ್ಯಾಸಗೊಳಿಸಿದ ಉತ್ಪನ್ನಗಳು.

500 ಸ್ಟಾರ್ಟ್‍ಅಪ್ಸ್ ಭಾರತದಲ್ಲಿ 500 ಡಿಸೈನ್ ಪ್ರೋಗ್ರಾಮ್ ಅನ್ನು ಆರಂಭಿಸಿದೆ. ಡಿಸೆಂಬರ್ 17ರಂದು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮೊದಲ ವಿನ್ಯಾಸ ಕಾರ್ಯಾಗಾರ ಕೂಡ ನಡೆದಿದೆ.

ಲೇಖಕರು: ಪೂನಂ ಗೋಯೆಲ್

ಅನುವಾದಕರು : ಭಾರತಿ ಭಟ್