60 ದಿನಗಳಲ್ಲಿ ಉದ್ಯಮ ಆರಂಭಿಸಿದ ಅರ್ಚನಾ ಝಾ... ವಿಶಿಷ್ಟ ಲೆಗ್ಗಿಂಗ್ಸ್​​ಗಾಗಿ ಆನ್‍ಲೈನ್ ಪೋರ್ಟಲ್

ಟೀಮ್​​ ವೈ.ಎಸ್​ . ಕನ್ನಡ

60 ದಿನಗಳಲ್ಲಿ ಉದ್ಯಮ ಆರಂಭಿಸಿದ ಅರ್ಚನಾ ಝಾ... ವಿಶಿಷ್ಟ ಲೆಗ್ಗಿಂಗ್ಸ್​​ಗಾಗಿ ಆನ್‍ಲೈನ್ ಪೋರ್ಟಲ್

Thursday January 07, 2016,

3 min Read

ಯಾವುದೇ ಒಂದು ಉದ್ಯಮ ಆರಂಭಿಸೋದು ಅಂದ್ರೆ ಸುಲಭದ ಮಾತಲ್ಲ. ಆ ಪರಿಕಲ್ಪನೆಯನ್ನು ಸಾಕಾರಗೊಳಿಸಲು ವರ್ಷವೇ ಹಿಡಿಯುತ್ತೆ. ಆದ್ರೆ ಈ ಸಾಹಸಿ ಮಹಿಳಾ ಉದ್ಯಮಿ ಕೇವಲ 60 ದಿನಗಳಲ್ಲಿ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ, ಅವರೇ ಅರ್ಚನಾ ಝಾ.

ಈಗ ಬಟ್ಟೆ ಖರೀದಿ ಟ್ರೆಂಡ್ ಬಲು ಜೋರಾಗಿದೆ. ಶಾಪಿಂಗ್ ಪ್ರಿಯರು ಅಕ್ಕ ಪಕ್ಕದ ಮಾರ್ಕೆಟ್ ಹೋಗ್ತಾರೆ, ಮಾಲ್‍ಗಳಲ್ಲಿರುವ ಫ್ಯಾನ್ಸಿ ಅಂಗಡಿಗಳಿಗೆ ವಿಸಿಟ್ ಮಾಡ್ತಾರೆ, ಇಲ್ಲವಾದಲ್ಲಿ ಆನ್‍ಲೈನ್‍ನಲ್ಲೇ ಟ್ರೆಂಡಿ ಉಡುಪುಗಳನ್ನು ಕೊಂಡುಕೊಳ್ತಾರೆ. ಬಹುತೇಕ ಎಲ್ಲ ಆನ್‍ಲೈನ್ ಪೋರ್ಟಲ್‍ಗಳು ಫ್ಯಾಷನೇಬಲ್ ಉಡುಪುಗಳನ್ನು ಗ್ರಾಹಕರ ಟೇಸ್ಟ್​​ಗೆ ತಕ್ಕಂತೆ ಪೂರೈಸುತ್ತಿವೆ. ಆದ್ರೆ ಮಹಿಳೆಯರ ಲೆಗ್ಗಿಂಗ್ಸ್ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಈ ಅವಕಾಶವನ್ನು ಅರ್ಚನಾ ಝಾ ಬಳಸಿಕೊಂಡಿದ್ದಾರೆ. YWCAನಲ್ಲಿ ತರಬೇತಿ ಪಡೆದಿರುವ 42ರ ಹರೆಯದ ಫ್ಯಾಷನ್ ಡಿಸೈನರ್ ಅರ್ಚನಾ ಝಾ, ಉತ್ತಮ ಗೃಹಿಣಿ, ಜವಾಬ್ಧಾರಿಯುತ ತಾಯಿ. ಪ್ರತಿದಿನ 20 ಕಿಲೋ ಮೀಟರ್ ದೂರ ಕ್ರಮಿಸಿ ಮಕ್ಕಳನ್ನು ಶಾಲೆಯಿಂದ ಕರೆತರ್ತಾರೆ. ಅರ್ಚನಾ ಝಾ ಅವರ ಕನಸಿನ ಕೂಸು `ಲೆಗ್‍ಸ್ಟೈಲೀ' ಆನ್‍ಲೈನ್ ಪೋರ್ಟಲ್. ಇಲ್ಲಿ ಲೆಗ್ಗಿಂಗ್ಸ್, ಡೆನಿಮ್ ಪ್ಯಾಂಟ್ಸ್, ಪಲಾಝೋ ಪ್ಯಾಂಟ್ಸ್, ಹರೆಮ್ ಪ್ಯಾಂಟ್ಸ್, ಶಾರ್ಟ್ಸ್​​, ಕಾಪ್ರಿಸ್ ಸೇರಿದಂತೆ ಮಹಿಳೆಯರಿಗಾಗಿ ವಿಶಿಷ್ಟ ಲೋವರ್‍ಗಳು ಸಿಗುತ್ತವೆ. ಪೋರ್ಟಲ್ ಆರಂಭಕ್ಕೂ ಮುನ್ನವೇ `ಲೆಗ್‍ಸ್ಟೈಲೀ' ಪರಿಕಲ್ಪನೆ ಬಗ್ಗೆ ಕೇಳಿದವರೆಲ್ಲ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ರು.

image


ಕುಟುಂಬದ ಫ್ಯಾಷನ್ ಗುರು...

ಮನೆಯಲ್ಲಿ ವಿಶೇಷ ಸಂದರ್ಭಗಳಿದ್ದಾಗಲೆಲ್ಲ ಎಲ್ಲರೂ ಅರ್ಚನಾ ಅವರ ಸಲಹೆಯನ್ನೇ ಕೇಳುತ್ತಿದ್ರು. ದೇಹದ ರಚನೆ, ಎತ್ತರ, ಹಾಗೂ ಆರಾಮದಾಯಕವಾದ ಉಡುಪುಗಳನ್ನು ಸೂಚಿಸುತ್ತಿದ್ದವರು ಅರ್ಚನಾ ಝಾ. ಅದಕ್ಕೆ ಮ್ಯಾಚಿಂಗ್ ಆಗಿರುವ ಅಲಂಕಾರಿಕ ಸಾಮಾಗ್ರಿಗಳನ್ನೆಲ್ಲ ಅವರು ಅರ್ಚನಾರ ಸಲಹೆಯಂತೆ ಖರೀದಿಸುತ್ತಾ ಇದ್ರು. ಯಾವ ರೀತಿಯ ಧಿರಿಸು ಅವರಿಗೆ ಚೆನ್ನಾಗಿ ಕಾಣುತ್ತೆ, ಯಾವ ಬಣ್ಣ ಒಪ್ಪುತ್ತೆ, ಯಾವ ಬಗೆಯ ಪ್ರಿಂಟ್ ಚೆನ್ನ ಅನ್ನೋದನ್ನೆಲ್ಲ ಅರ್ಚನಾ ಆಯ್ಕೆ ಮಾಡ್ತಾರೆ. ಫ್ಯಾಬ್ರಿಕ್, ಕಲರ್ ಮತ್ತು ಸ್ಟೈಲ್ ಬಗ್ಗೆ ಅರ್ಚನಾ ಅವರಿಗೆ ಇರುವ ಪ್ರೀತಿ ಕಡಿಮೆಯಾಗಲೇ ಇಲ್ಲ. ಲೇಟೆಸ್ಟ್ ಸ್ಟೈಲ್ ಮತ್ತು ಟ್ರೆಂಡ್‍ಗಳ ಬಗ್ಗೆ ಅರ್ಚನಾ ತಿಳಿದುಕೊಳ್ತಾ ಇದ್ರು. ಒಮ್ಮೆ ಆನ್‍ಲೈನ್‍ನಲ್ಲಿ ಲೆಗ್ಗಿಂಗ್ಸ್ ಖರೀದಿಸಲು ಅರ್ಚನಾ ಮುಂದಾದ್ರು. ಆದ್ರೆ ಕೇವಲ ಲೆಗ್ಗಿಂಗ್ಸ್​​ಗಳನ್ನು ಮಾತ್ರ ಮಾರಾಟ ಮಾಡ್ತಾ ಇರೋ ಆನ್‍ಲೈನ್ ಪೋರ್ಟಲ್ ಇಲ್ಲ ಅನ್ನೋದು ಆಗ ಅವರಿಗೆ ಅರಿವಾಗಿತ್ತು. ಆಗ್ಲೇ ಅವರಿಗೆ ಉದ್ಯಮವೊಂದನ್ನು ಆರಂಭಿಸುವ ಆಲೋಚನೆ ಬಂದಿತ್ತು. ಇ-ಕಾಮರ್ಸ್ ಬ್ಯುಸಿನೆಸ್ ಬಗ್ಗೆ ಇನ್ನೊಂದಿಷ್ಟು ತಿಳಿದುಕೊಂಡ ಅರ್ಚನಾ, ಉದ್ಯಮದ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ರು. ``ನನ್ನ ಪತಿ ಕೂಡ ಸಹಕಾರ ಕೊಟ್ರು, ಜೊತೆಗೆ ಕೂಡಿಟ್ಟಿದ್ದ ಹಣವನ್ನೆಲ್ಲ ಬಂಡವಾಳವನ್ನಾಗಿ ತೊಡಗಿಸಿದ್ರು'' ಎನ್ನುತ್ತಾರೆ ಅರ್ಚನಾ.

image


ತಮ್ಮ ಆನ್‍ಲೈನ್ ಪೋರ್ಟಲ್ ಸೆಟ್‍ಅಪ್‍ಗಾಗಿ ಅರ್ಚನಾ ಸಾಂಪ್ರದಾಯಿಕ ಮತ್ತು ಸಮಕಾಲೀನ ಎರಡೂ ಮಿಶ್ರವಾಗಿರುವಂತಹ ಮಾರ್ಗವನ್ನು ಆಯ್ದುಕೊಂಡ್ರು. ಕೇವಲ 60 ದಿನಗಳಲ್ಲಿ `ಲೆಗ್‍ಸ್ಟೈಲೀ' ಆನ್‍ಲೈನ್ ಪೋರ್ಟಲ್ ಕಾರ್ಯಾರಂಭ ಮಾಡಿದ್ದು ವಿಶೇಷ. ಕಳೆದ ಸಪ್ಟೆಂಬರ್‍ನಲ್ಲಿ `ಲೆಗ್‍ಸ್ಟೈಲೀ' ಅನ್ನು ಲಾಂಚ್ ಮಾಡಲಾಗಿದೆ. `ಇಂಡಿಯಾ ಮಾರ್ಟ್ ಡಾಟ್ ಕಾಮ್'ನಲ್ಲಿ ರಿಜಿಸ್ಟರ್ ಮಾಡಿಸಿರುವ ಅರ್ಚನಾ ಝಾ, ಲೆಗ್ಗಿಂಗ್ಸ್ ಸಪ್ಲೈಯರ್‍ಗಳ ಜೊತೆ ಸಂಪರ್ಕ ಸಾಧಿಸಿದ್ದಾರೆ. ``ನಾನು ವಾಟ್ಸ್​ಆ್ಯಪ್‍ನಲ್ಲಿ ಫೋಟೋಗಳನ್ನು ನೋಡಿ ಅವುಗಳಲ್ಲಿ ಇಷ್ಟವಾದ ಲೆಗ್ಗಿಂಗ್ಸ್​​ಗಳನ್ನು ಆರ್ಡರ್ ಮಾಡುತ್ತೇನೆ. ಗುಜರಾತ್, ರಾಜಸ್ತಾನ ಮತ್ತು ಲುಧಿಯಾನಾದ ಮಾರುಕಟ್ಟೆಗಳಿಗೂ ಭೇಟಿ ಕೊಟ್ಟಿರುವ ನಾನು ಅಲ್ಲಿನ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಪೋರ್ಟಲ್‍ಗೆ ಅಂತರಾಷ್ಟ್ರೀಯ ಲುಕ್ ನೀಡಲು ಲೋಕಲ್ ಡಿಸೈನ್‍ಗಳ ಹೊರತಾಗಿ ಚೀನಾ, ಹಾಂಗ್‍ಕಾಂಗ್‍ನಿಂದ ಆಮದು ಮಾಡಿಕೊಂಡ ಉತ್ಪನ್ನಗಳನ್ನು ಕೂಡ ತರಿಸಿದ್ದೇನೆ'' ಅಂತಾ ಅರ್ಚನಾ ಹೆಮ್ಮೆಯಿಂದ ಹೇಳಿಕೊಳ್ತಾರೆ.

ಸಿಹಿ-ಕಹಿ ನೆನಪುಗಳು...

ಪೂರೈಕೆ ಮೇಲೆ ವಿಶ್ವಾಸವಿಟ್ಟು ಅರ್ಚನಾ `ಪೇ ಯು ಮನಿ' ಹಾಗೂ `ಶಿಪ್ ರಾಕೆಟ್' ಜೊತೆ ಒಪ್ಪಂದ ಮಾಡಿಕೊಂಡು, ಹಣ ಸಂದಾಯ ಹಾಗೂ ಡೆಲಿವರಿ ಸಮಸ್ಯೆಗಳಿಗೆಲ್ಲ ಇತಿಶ್ರೀ ಹಾಡಿದ್ದಾರೆ. ``ನಮ್ಮ ಬಹುತೇಕ ಡೆಲಿವರಿಗಳೆಲ್ಲ ಸಿಓಡಿ ಆಧಾರದಲ್ಲಿರುತ್ತವೆ, ಹಾಗಾಗಿ ಪ್ರಾಡಕ್ಟ್ ಶಿಪ್ಪಿಂಗ್‍ನಲ್ಲಿ, ಹಣ ಸಂದಾಯದಲ್ಲಿ ಯಾವುದೇ ತೊಂದರೆಗಳಿಲ್ಲ'' ಅನ್ನೋದು ಅರ್ಚನಾರ ವಿಶ್ವಾಸದ ನುಡಿ. ಹೆಚ್ಹೆಚ್ಚು ಗ್ರಾಹಕರನ್ನು ಸಂಪಾದಿಸುವುದು ಅವರ ಮುಂದಿರುವ ಗುರಿ. ಫೇಸ್‍ಬುಕ್ ಹಾಗೂ ಗೂಗಲ್ ಅನ್ನು ಬಳಸಿಕೊಂಡು ಅರ್ಚನಾ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ. ದಿನಪತ್ರಿಕೆಗಳಲ್ಲಿ ಜಾಹೀರಾತನ್ನೂ ಕೊಡ್ತಿದ್ದಾರೆ. ತಮ್ಮ ಬ್ರಾಂಡ್‍ಗೆ ಇನ್ನಷ್ಟು ಪ್ರಚಾರ ಸಿಗಲಿ ಅನ್ನೋ ಕಾರಣಕ್ಕೆ ಅಮೇಝಾನ್‍ನಂತಹ ಜನಪ್ರಿಯ ವೆಬ್ ಪೋರ್ಟಲ್‍ಗಳ ಜೊತೆಗೂ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಸವಿ ನೆನಪುಗಳ ಮಧ್ಯೆ ಕೆಲವೊಂದು ಕಹಿ ಘಟನೆಗಳು ಕೂಡ ಅರ್ಚನಾರನ್ನು ಕಾಡುತ್ತವೆ. ಮಹಾರಾಷ್ಟ್ರದ ಮಹಿಳೆಯೊಬ್ಬರು `ಲೆಗ್‍ಸ್ಟೈಲೀ'ನಲ್ಲಿ ಲೆಗ್ಗಿಂಗ್ಸ್ ಖರೀದಿಸಿದ್ರು. ಅದನ್ನು ಮರಳಿಸಲು ಕೂಡ ಮುಂದಾದ್ರು. ಆಗ ಖುದ್ದು ಅರ್ಚನಾ, ಅವರೊಂದಿಗೆ ಮಾತನಾಡಿ ಬೇರೆ ಬೇರೆ ವಿನ್ಯಾಸಗಳ ಲೆಗ್ಗಿಂಗ್ಸ್​​ಗಳನ್ನು ಕಳುಹಿಸಿಕೊಟ್ರು. ಆದ್ರೆ ಅದ್ಯಾವುದೂ ಆ ಮಹಿಳೆಗೆ ಇಷ್ಟವಾಗಲೇ ಇಲ್ಲ.

ಅತ್ಯಂತ ಚುರುಕಿನ ಮಹಿಳಾ ಉದ್ಯಮಿ...

ಅರ್ಚನಾ ಅವರ ವ್ಯವಹಾರ ಜ್ಞಾನ ಅದ್ಭುತವಾಗಿದೆ. ಇಬ್ಬರು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಅವರು, ಆನ್‍ಲೈನ್ ಕಾರ್ಯಾಚರಣೆ ಹಾಗೂ ಮಾರ್ಕೆಟಿಂಗ್‍ಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಯುವತಿಯರು ಹಾಗೂ ಮಹಿಳೆಯರ ಜೊತೆಗೆ ಮಾತನಾಡುವ ಅವಕಾಶವನ್ನು ಅರ್ಚನಾ ಯಾವತ್ತು ಮಿಸ್ ಮಾಡಿಕೊಳ್ಳುವುದಿಲ್ಲ. ಫ್ಯಾಷನ್ ಮತ್ತು ಅಗತ್ಯಗಳ ಬಗ್ಗೆ ಅವರ ಅಭಿಪ್ರಾಯ ಹಾಗೂ ದೃಷ್ಟಿಕೋನ ಏನು ಅನ್ನೋದನ್ನು ತಿಳಿದುಕೊಳ್ತಾರೆ. ``ಯುವತಿಯರು ಲೆಗ್ಗಿಂಗ್ಸ್ ಮತ್ತು ಶಾರ್ಟ್ಸ್​​ಗಳ ಬಗ್ಗೆ ಅನಿಸಿಕೆ ಹಂಚಿಕೊಂಡ್ರೆ, ಮಹಿಳೆಯರು ಹೆಚ್ಚಾಗಿ ಪಲಾಝೋ ಪ್ಯಾಂಟ್‍ಗಳ ಬಗ್ಗೆ ಮಾತನಾಡ್ತಾರೆ. ನಾನು `ಲೆಗ್‍ಸ್ಟೈಲೀ' ಬ್ರಾಂಡ್ ಬಗ್ಗೆ ಅವರಿಗೆ ವಿವರಿಸುತ್ತೇನೆ, ಕೊಂಡುಕೊಳ್ಳುವಂತೆ ಪ್ರೇರೇಪಿಸುತ್ತೇನೆ'' ಎನ್ನುತ್ತಾರೆ ಅರ್ಚನಾ. ಸಮಯ ಸಿಕ್ಕಾಗಲೆಲ್ಲ ಅರ್ಚನಾ, ಆನ್‍ಲೈನ್ ಸ್ಟೋರ್‍ನಲ್ಲಿ ಹೊಸದೇನು ಮಾಡಬಹುದು ಎಂಬುದನ್ನು ಆಲೋಚಿಸ್ತಾರೆ. ಉದ್ಯಮಿಯಾಗಿ ಅರ್ಚನಾ ಆರಂಭಿಕ ಯಶಸ್ಸು ಗಳಿಸಿದ್ದಾರೆ. ಭವಿಷ್ಯದಲ್ಲಿ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು `ಲೆಗ್‍ಸ್ಟೈಲಿ'ಯಲ್ಲಿ ಅಲಂಕಾರಿಕ ಸಾಮಾಗ್ರಿಗಳು ಹಾಗೂ ಬೂಟುಗಳನ್ನು ಕೂಡ ಮಾರಾಟಕ್ಕಿಡಲು ಯೋಜನೆ ರೂಪಿಸಿದ್ದಾರೆ. ಅಷ್ಟೇ ಅಲ್ಲ ರಿಟೇಲ್ ಔಟ್‍ಲೆಟ್ ಒಂದನ್ನು ಕೂಡ ತೆರೆಯಲು ಮುಂದಾಗಿದ್ದಾರೆ. ಖರೀದಿಗೂ ಮುನ್ನ ಗ್ರಾಹಕರಿಗೆ ಟ್ರಯಲ್ ನೋಡಲು ಅವಕಾಶ ಕಲ್ಪಿಸಬೇಕು ಅನ್ನೋದು ಅವರ ಉದ್ದೇಶ. ಅರ್ಚನಾ ಝಾ ಅವರ ಪರಿಶ್ರಮದಿಂದ `ಲೆಗ್‍ಸ್ಟೈಲೀ' ಇನ್ನಷ್ಟು ಯಶಸ್ಸು ಪಡೆಯೋದ್ರಲ್ಲಿ ಅನುಮಾನವಿಲ್ಲ.

ಲೇಖಕರು: ಇಂದ್ರೊಜಿತ್.ಡಿ.ಚೌಧರಿ

ಅನುವಾದಕರು: ಭಾರತಿ ಭಟ್