ತೊಗರಿ ಬೇಳೆ ಸಂಪತ್ತಿನ ಗಣಿ ಕಲ್ಬುರ್ಗಿ

ಟೀಮ್​ ವೈ.ಎಸ್​. ಕನ್ನಡ

ತೊಗರಿ ಬೇಳೆ ಸಂಪತ್ತಿನ ಗಣಿ ಕಲ್ಬುರ್ಗಿ

Tuesday February 02, 2016,

2 min Read

ಕಲ್ಬುರ್ಗಿ ಎಂದಾಕ್ಷಣ ಮೊದಲು ಮನಸ್ಸಿನಲ್ಲಿ ಮೂಡುವ ಚಿತ್ರಣ ಬಿಸಿಲು. ರಣ ಬಿಸಿಲು.. ಆದರೂ ಬಿಸಿಲು ಎಂದೂ ಕೈಗಾರಿಕಾ ಬೆಳವಣಿಗೆಗೆ ಅಡ್ಡಿಯಾಗಿಲ್ಲ. ಬದಲಿಗೆ ವರವಾಗಿ ಪರಿಣಮಿಸಿದೆ. ಇದು ಬೇರೆ ಜಿಲ್ಲೆಯ ಕಥೆಯಲ್ಲ. ಕಲ್ಬುರ್ಗಿ ಜಿಲ್ಲೆಯ ಯಶೋಗಾಥೆ..

image


ಕಲ್ಬುರ್ಗಿ ಜಿಲ್ಲೆಯಲ್ಲಿ ಕೈಗಾರಿಕಾ ಕ್ರಾಂತಿ

ತೊಗರಿ ಬೇಳೆಗೆ ಇಡೀ ರಾಷ್ಟ್ರದಲ್ಲಿಯೇ ಕಲ್ಬುರ್ಗಿ ಜಿಲ್ಲೆ ಹೆಸರುವಾಸಿಯಾಗಿದೆ. ದೇಶದ ಒಟ್ಟು ತೊಗರಿ ಬೇಳೆಯ ಉತ್ಪಾದನೆಯಲ್ಲಿ ಕಲ್ಬುರ್ಗಿ ಜಿಲ್ಲೆಯ ಕೊಡುಗೆ ಸಿಂಹಪಾಲು. ಶೇಕಡಾ 40ರಷ್ಟು ಇಲ್ಲಿ ಉತ್ಪಾದನೆಯಾಗುತ್ತಿದೆ. ಇದು ಪರಿಸ್ಥಿತಿಯ ವಾಸ್ತವ ಚಿತ್ರಣವನ್ನು ಬಿಡಿಸಿಡುವುದರ ಜೊತೆಗೆ ಜಿಲ್ಲೆಯ ಮಹತ್ವವನ್ನು ಮನಗಾಣಿಸುತ್ತಿದೆ.

ಕಲ್ಬುರ್ಗಿ ಸಿಮೆಂಟ್ ಉತ್ಪಾದನೆಗೆ ಹೇಳಿ ಮಾಡಿದ ಪರಿಸರವನ್ನು ಹೊಂದಿದೆ. ಅಗತ್ಯ ಇರುವ ಕಚ್ಚಾ ವಸ್ತುಗಳು ಇಲ್ಲಿ ಹೇರಳವಾಗಿ ಲಭಿಸುತ್ತಿರುವುದರಿಂದ ಸಿಮೆಂಟ್ ಕಾರ್ಖಾನೆಗಳು ಇದನ್ನು ಅಚ್ಚುಮೆಚ್ಚಿನ ತಾಣವಾಗಿ ಪರಿಗಣಿಸಿವೆ.

ಕಲ್ಬುರ್ಗಿ ಜಿಲ್ಲೆ ಏಳು ಕಂದಾಯ ತಾಲೂಕುಗಳನ್ನು ಹೊಂದಿದೆ. ಪ್ರತಿಯೊಂದು ತಾಲೂಕು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ತನ್ನದೇ ಆದ ಸಂಪನ್ಮೂಲ ಹೊಂದಿದೆ. ಕೃಷ್ಣಾ ಕೊಳ್ಳದ ವ್ಯಾಪ್ತಿಯಲ್ಲಿ ಬರುವ ನದಿಗಳು ಇಲ್ಲಿನ ಮೂಲ ಜಲಾಧಾರ.

ಸಿಮೆಂಟ್ ಉತ್ಪಾದನೆ- ರಾಜ್ಯದಲ್ಲಿಯೇ ಮುಂಚೂಣಿಯಲ್ಲಿ

ಅತ್ಯಧಿಕ ಕಚ್ಚಾ ವಸ್ತುಗಳ ಲಭ್ಯತೆಯಿಂದಾಗಿ ಕಲ್ಬುರ್ಗಿ ಜಿಲ್ಲೆ ಇಡೀ ರಾಜ್ಯದಲ್ಲಿ ಸಿಮೆಂಟ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.

ಫಲವತ್ತಾದ ಮಣ್ಣು- ಕೃಷಿಗೆ ವರದಾನ

ಕೈಗಾರಿಕಾ ಕ್ಷೇತ್ರದಲ್ಲಿ ಕಲ್ಬುರ್ಗಿ ಜಿಲ್ಲೆ ಸಾಧನೆ ಮಾಡುತ್ತಿದ್ದರೂ, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸುವ ಹಾಗಿಲ್ಲ. ಕಲ್ಬುರ್ಗಿ ಜಿಲ್ಲೆಯ ಮಣ್ಣು ಅತ್ಯಂತ ಫಲವತ್ತತೆಯಿಂದ ಕೂಡಿದೆ. ಉತ್ಕೃಷ್ಟ ಗುಣ ಹೊಂದಿದೆ. ಇಲ್ಲಿ ಬೆಳೆಯುವ ತೊಗರಿ ಬೇಳೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಇಡೀ ದೇಶದಲ್ಲಿ ಹೆಸರುವಾಸಿಯಾಗಿರುವ ತೊಗರಿ, ಕಲ್ಪುರ್ಗಿ ಜಿಲ್ಲೆಯ ಕೊಡುಗೆ ಎಂದು ಹೆಮ್ಮೆಯಿಂದ ಹೇಳಲು ಹರ್ಷವಾಗುತ್ತಿದೆ. ಇದು ಇಲ್ಲಿನ ಮಣ್ಣಿನ ಕೊಡುಗೆ.

ಶಿಕ್ಷಣ ಕ್ಷೇತ್ರದ ಕೊಡುಗೆ

ಕಲ್ಬುರ್ಗಿ ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲಿ ಮುಂದುವರಿಯಲು ಅಲ್ಲಿನ ಶಿಕ್ಷಣ ಸಂಸ್ಥೆಗಳ ಪಾತ್ರ ಕೂಡ ಇದೆ. ಆರಂಭದಿಂದಲೂ ಶ್ರಮ ಜೀವನಕ್ಕೆ ಹೆಸರುವಾಸಿಯಾದ ಕಲ್ಬುರ್ಗಿ ಜಿಲ್ಲೆಯ ಜನತೆ, ಅತ್ಯುನ್ನತ ಶಿಕ್ಷಣ ವನ್ನು ಪಡೆಯುವ ಮೂಲಕ ತಮ್ಮಲ್ಲಿರುವ ಉದ್ಯಮ ಶೀಲತೆಗೆ ನೀರೆರೆದು ಪೋಷಿಸಿದರು. ಜಿಲ್ಲೆಯಲ್ಲಿ 4 ಮೆಡಿಕಲ್ ಕಾಲೇಜು ಮತ್ತು 4 ಇಂಜಿನಿಯರಿಂಗ್ ಕಾಲೇಜುಗಳು ಅಗತ್ಯ ಮಾನವ ಸಂಪನ್ಮೂಲವನ್ನು ಒದಗಿಸುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಯೂ ಜಿಲ್ಲೆಯ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಿದೆ.

ತೋಟಗಾರಿಕಾ ಬೆಳೆಯಲ್ಲಿ ಕಲ್ಬುರ್ಗಿಗೆ ವಿಶೇಷ ಸ್ಥಾನ

ತೋಟಗಾರಿಕಾ ಬೆಳೆಗಳಿಗೂ ಕಲ್ಬುರ್ಗಿ ಹೆಸರುವಾಸಿಯಾಗಿದೆ. ಮಾವಿನ ಹಣ್ಣು ಬೆಳೆ ಇಲ್ಲಿ ಪ್ರಸಿದ್ಧಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವಕಾಶಕ್ಕೆ ದಾರಿ ಮಾಡಿಕೊಟ್ಟಿದೆ. ಜೇವರ್ಗಿಯಲ್ಲಿ ಆಗ್ರೋ ಫುಡ್ ಪಾರ್ಕ್ ಈ ನಿಟ್ಟಿನಲ್ಲಿ ಇಟ್ಟಿರುವ ದಿಟ್ಟ ಹೆಜ್ಜೆಯಾಗಿದೆ.

ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಅತ್ಯುತ್ತಮವಾಗಿದೆ. ದೇಶದ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಜಾಲವಿದೆ. ಇದು ಉತ್ಪನ್ನಗಳ ತ್ವರಿತ ವಿಲೇವಾರಿಗೆ ಸಹಾಯಕವಾಗಿದೆ. ಅದೇ ರೀತಿ ರೈಲು ವ್ಯವಸ್ಥೆ ಕೂಡ ಉತ್ತಮ ಪೂರಕ ಜಾಲವಾಗಿ ನೆರವು ನೀಡಿದೆ.

ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶ

ಕಲ್ಬುರ್ಗಿ, ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಬಂಡವಾಳ ಹರಿದು ಬರಬೇಕಿದೆ. ಇದು ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಲಿದೆ. ಹೂಡಿಕೆದಾರರ ಮನಸ್ಸನ್ನು ಗೆದ್ದಿರುವ ಕಲ್ಬುರ್ಗಿ, ಮುಂದಿನ ದಿನಗಳಲ್ಲಿ ಕೈಗಾರಿಕಾ ಕ್ರಾಂತಿಯ ತವರು ಜಿಲ್ಲೆ ಎಂದೇ ಗುರುತಿಸಲಿದೆ.