ಒಂದು ಹಾರ್ಟ್​ಬೀಟ್​​​​ ಕಥೆ..!

ವಿಸ್ಮಯ

0

ಒಂದು ಹೃದಯದ ನೋವು, ಮತ್ತೊಂದು ಹೃದಯಕ್ಕೆ ಅರ್ಥವಾಗುತ್ತೆ ಅಂತ ಭಾವನಾ ಜೀವಿಗಳು ಹೇಳುತ್ತಾರೆ. ಮೌನವಾಗಿ ಮಿಡಿವ ಹೃದಯದ ಭಾವನೆ ಮತ್ತೊಂದು ಹೃದಯಕ್ಕೆ ಅರ್ಥವಾಗುತ್ತೆ. ಇತ್ತೀಚೆಗೆ ಹೆಚ್ಚಾಗ್ತಿರೋ ಹೃದಯ ರವಾನೆಯ ವಿದ್ಯಮಾನಗಳೇ ಅದಕ್ಕೆ ಉದಾಹರಣೆ. ಇದು ನಮ್ಮ ಹೃದಯವಂತರ ನಗರಿ ಬೆಂಗಳೂರು.

ಮನುಷ್ಯನ ದೇಹಕ್ಕೆ ಸಾವಿದೆಯೇ ಹೊರತು, ಆತ್ಮಕ್ಕಲ್ಲ ಅನ್ನೋ ಮಾತಿದೆ. ಹಾಗೇ ದೇಹ ಮಣ್ಣು ಸೇರಿದ್ರೂ ಹೃದಯ ಮಾತ್ರ ಮತ್ಯಾರದೋ ದೇಹಕ್ಕೆ ಸೇರಿ ಮತ್ತೆ ಚಟುವಟಿಕೆಯಿಂದ ಬಡಿತ ಆರಂಭಿಸುತ್ತೆ. ಹೀಗೆ ಸಾವಿನ ನಂತ್ರವೂ ಹೃದಯದ ಬಡಿತ ಸ್ಥಭ್ದವಾಗದೇ ಮತ್ತೊಂದು ದೇಹದೊಳಗೆ ಲಬ್ ಡಬ್ ಅನ್ನುತ್ತೆ. ಮೃತ ಕುಟುಂಬದ ರೋಧನೆಯ ನಡುವೆಯೂ ನಿಸ್ವಾರ್ಥಿಗಳು ಹೃದಯ ದಾನ ಮಾಡಿ ಮಾನವೀಯತೆ ತೋರುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನಗಳಲ್ಲಿ ಹೃದಯ ದಾನ ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ. ದೇಹದ ಅಂಗಾಂಗಗಳು ಮಣ್ಣು ಸೇರದೇ, ಮತ್ತೊಂದು ದೇಹಕ್ಕೆ ಜೀವ ನೀಡುವ ಕಾರ್ಯ ಮುಂದುವರೆದಿದೆ.

2014ರಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಹೃದಯ ರವಾನೆ ಮಾಡಲಾಯ್ತು. ಒಬ್ಬ ಮಹಿಳೆಯ ಹೃದಯವನ್ನು, ಮತ್ತೊಬ್ಬ ವ್ಯಕ್ತಿಗೆ ಜೋಡಿಸಲಾಗಿತ್ತು. ಮತ್ತೆ ಡಿಸೆಂಬರ್ ತಿಂಗಳಲ್ಲಿ 2 ವರ್ಷದ ಮಗುವಿನ ಜೀವಂತ ಹೃದಯ ರವಾನೆ ಮಾಡಲಾಯಿತು. 2014ರಲ್ಲಿ ಬೆಂಗಳೂರಿನಿಂದ ಚೆನ್ನೈಗೆ ರವಾನೆ ಮಾಡಿ. ಇನ್ನೊಂದು ಜೀವದ ಹೃದಯದ ಬಡಿತಕ್ಕೆ ಸಾಕ್ಷಿ ಆಯ್ತ್ತು.

ಎಲ್ಲೋ ಆಗೋ ಸಾವಿಗೆ, ಇನ್ನೆಲ್ಲೋ ಸಾವಿನ ಅಂಚಿನಲ್ಲಿರೋ ಹೃದಯ ಮಾತನಾಡಿದಾಗ ನಿಜಕ್ಕೂ ಅದೇ ಸಾರ್ಥಕ ಜೀವನ. ಮೃತರ ಅಗಲಿಕೆಯ ನೋವಿನಲ್ಲೂ ಮತ್ತೊಬ್ಬರ ಬಾಳನ್ನು ಬೆಳಗುವ ಹೃದಯವಂತರ ಸಂಖ್ಯೆ ಹೆಚ್ಚಾಗ್ತಿದೆ. ಎಲ್ಲೋ ಒಂದು ಕಡೆ ಮೃತ ವ್ಯಕಿಯು ತಮ್ಮ ಜೊತೆಯಲ್ಲೇ ಇರುವ ತೃಪ್ತಿ ಅವರ ಕುಟುಂಬ ಹಾಗೂ ಬಂಧುಗಳದ್ದು.

ಸಿಲಿಕಾನ್ ಸಿಟಿ ಅಂತ ಕರೆಸಿಕೊಳ್ಳೋ ಬೆಂಗಳೂರಿನಲ್ಲಿ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚಾಗ್ತಿದೆ. ಅಪರಾಧಿ ಮನೋಭಾವ ಹೆಚ್ಚಾಗುತ್ತಿದ್ದು ಮಾನವೀಯತೆ ಇಲ್ಲದಂತಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಇದ್ರ ನಡುವೆಯೂ ಮಾನವೀತಯೆ ಕರುಣೆ, ಪ್ರೀತಿ, ಒಬ್ಬರ ನೋವಿಗೆ ಇನ್ನೊಬ್ಬರು ಸ್ಪಂದಿಸುವ ಮನೋಭಾವ ಇರುವುದು ನಿಜಕ್ಕೂ ಹೆಮ್ಮೆ ಪಡುವ ವಿಚಾರ.

ಸಹಜ ಅಪಘಾತಗಳಲ್ಲಿ ಮೃತ ಪಡುವವರ ಹೃದಯವನ್ನು ಸಹ, ಸಾವು ಬದುಕಿನ ನಡುವೆ ಸಂಕಟ ಪಡುತ್ತಿರೋ ಇನ್ನೊಂದು ದೇಹಕ್ಕೆ ದಾನ ಮಾಡುವವರ ಮೂಲಕ ಸಹೃದಯವಂತಿಕೆ ಮೆರೆಯಲಾಗ್ತಿದೆ. ತಮ್ಮವರನ್ನು ಕಳೆದುಕೊಂಡ ಅಸಾಧ್ಯ ನೋವಿನ ನಡುವೆಯೂ ಅವರ ಬಂಧುಗಳು ಮತ್ತೊಬ್ಬರ ಬದುಕಿಗೆ ಜೀವ ತುಂಬುವ ಪರೋಪಕಾರಿ ಮನೋಭಾವನೆಯನ್ನು ತೋರುತ್ತಿದ್ದಾರೆ.

ಹೃದಯ ದಾನ ಮಾಡುವವರ ಸಂಖ್ಯೆ ಈ ವರ್ಷವೂ ಹೆಚ್ಚಾಗಿದೆ. ಜನವರಿ 3ನೇ ತಾರೀಖು 21 ವರ್ಷದ ಬಾಲಾಜಿ ಎಂಬುವವರ ಜೀವಂತ ಹೃದಯದ ರವಾನೆ ಮಾಡಿದ್ರು. ಬಾಲಾಜಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ರು. ಬಾಲಾಜಿಯ ಕುಟುಂಬದವರು ಅಂಗಾಂಗ ದಾನ ಮಾಡುವಂತೆ ಕೇಳಿಕೊಂಡಾಗ, ವೈದ್ಯರು ಪಶ್ಚಿಮಬಂಗಾಳದ ಯುವಕನಿಗೆ ಆತನ ಹೃದಯ ಜೋಡಿಸಿದ್ರು. ಮತ್ತೊಂದು ಘಟನೆ ನಡೆದಿದದ್ದು ಜುಲೈ 24 ರಂದು. ಚೇತನ್ ಎಂಬಾತ ರಸ್ತೆ ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಕಾರಣ, ಆತನ ಮೆದುಳು ನಿಷ್ಕ್ರಿಯವಾಗಿತ್ತು. ಪರಿಣಿತ ವೈದ್ಯರೂ ಸಹ ಆತ ಬದುಕುವ ಸಾಧ್ಯತೆ ಕಡಿಮೆ ಇದೆ ಅಂತ ಕೈಚೆಲ್ಲಿದ್ರು. ಹೀಗಾಗಿ ಕುಟುಂಬದವರು ಒಮ್ಮತದಿಂದ ಮತ್ತೊಂದು ಜೀವಕ್ಕೆ ಈತನ ಹೃದಯದಾನ ಮಾಡುವ ಉದಾರ ನಿರ್ಧಾರ ತಳೆದ್ರು. ಅದೇ ತಿಂಗಳ 26 ರಂದು ಮತ್ತೊಂದು ಅಪಘಾತಗೊಂಡ ವ್ಯಕ್ತಿಯ ದೇಹದ ಜೀವಂತ ಹೃದಯವನ್ನು ಸಾಗರ್ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಸಾಗಿಸಲಾಗಿತ್ತು.

ಅಕ್ಟೋಬರ್ 21ರಂದೂ ಗೀತಾ ಎಂಬುವವರ ಜೀವಂತ ಹೃದಯವನ್ನು ಮೈಸೂರಿನಿಂದ ಬೆಂಗಳೂರಿಗೆ ರವಾನೆ ಮಾಡಲಾಯ್ತು. ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಗೀತಾ ಮೃತಪಟ್ಟರು. ಹೀಗಾಗಿಯೇ ಮಣ್ಣು ಸೇರಬೇಕಿದ್ದಅವರ ಹೃದಯ, ಈಗ ಮತ್ತೊಬ್ಬರ ದೇಹದಲ್ಲಿ ಹಾಡಲಾರಂಭಿಸಿದೆ. ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಲ್ಲಿ ದಾನ ಮಾಡಲಾದ ಗೀತಾರ ಹೃದಯವನ್ನು ಬೆಂಗಳೂರಿಗೆ ರವಾನಿಸಲಾಯ್ತು. ಜೀವಂತ ಹೃದಯ ನಿರಾತಂಕವಾಗಿ ಹಾಗೂ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಗಮ್ಯ ತಲುಪಲು, ಬೆಂಗಳೂರು-ಮೈಸೂರು ನಡುವೆ ಪೊಲೀಸರು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ರು.

ಹೀಗೆ ಸಾವಿನಲ್ಲೂ, ನೋವಿಗೆ ಮಿಡಿಯುವ ಹೃದಯಗಳ ಸಂಖ್ಯೆ ಹೆಚ್ಚಾಗ್ತಿರೋದು ನಿಜಕ್ಕೂ ಶ್ಲಾಘನೀಯ. ಅಂಗಾಂಗ ದಾನಗಳ ಬಗ್ಗೆ ಇನ್ನಷ್ಟು ಜಾಗೃತಿಯನ್ನು ಮೂಡಿಸಿದ್ರೆ, ಮುಂದಿನ ದಿನಗಳಲ್ಲಿ ಮಣ್ಣಲ್ಲಿ ಮಣ್ಣಾಗುವ ಮಾನವ ದೇಹದ ಅಂಗಾಂಗಗಳು ಮತ್ತೊಬ್ಬರ ಬಾಳು ಬೆಳಗಲು ಸಹಾಯ ಆಗುತ್ತೆ, ಕತ್ತಲ್ಲ ಕುಟುಂಬಕ್ಕೆ ಬೆಳಕು ನೀಡಿದ ತೃಪ್ತಿ ನಿಮ್ಮದಾಗುತ್ತೆ. ತಂತ್ರಜ್ಞಾನ ಮುಂದುವರೆಯುತ್ತಿರುವ ಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಬೆನ್ನಲೇ,. ಹೀಗೆ ಮತ್ತೊಬ್ಬರ ಜೀವವನ್ನು ಉಳಿಸಲು ಮುಂದಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ.