ಐದು ರೂಪಾಯಿಯಿಂದ 60 ಲಕ್ಷದ ವಹಿವಾಟು ತನಕ ನಡೆದು ಬಂದ ದಾರಿ..!

ಟೀಮ್​ ವೈ.ಎಸ್​. ಕನ್ನಡ

0

ಮಾಡಬೇಕಾದ ಕನಸು ಸ್ಪಷ್ಟವಿದ್ದು, ಗುರಿಯೂ ಸ್ಪಷ್ಟವಾಗಿದ್ದರೆ ಯಾವುದೂ ಕೂಡ ಅಸಾಧ್ಯವಲ್ಲ. ಆದ್ರೆ ಹಿಡಿದ ಕೆಲಸವನ್ನು ಕೈ ಬಿಡದ ಶ್ರಮ ಮತ್ತು ತಾಳ್ಮೆ ಅತ್ಯಾವಶ್ಯಕ. ಮಹಿಳಾ ಸಬಲೀಕರಣ ಎಂಬ ಪದಕ್ಕೆ ಅಹಮದಾಬಾದ್ ಮಹಿಳೆ ಮಂಜುಳಾ ವಗೇಲಾ ಉತ್ತಮ ಉದಾಹರಣೆ. 10ನೇ ತರಗತಿಯವರೆಗೆ ಮಾತ್ರ ಓದಿದ್ದರೂ ಮಂಜುಳಾ ನಗರದ ನೂರಾರು ಮಹಿಳೆಯರ ಉತ್ತಮ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ. ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಬೀದಿಗಳ ಕಸ ಗುಡಿಸಿ ದಿನಕ್ಕೆ 5 ರೂಪಾಯಿ ಸಂಪಾದಿಸುತ್ತಿದ್ದ ಮಂಜುಳಾ ಈಗ 60 ಲಕ್ಷ ರೂಪಾಯಿ ವಹಿವಾಟು ನಡೆಸುವ "ಸೌಂದರ್ಯ ಸಫಾಯಿ ಉತ್ಕರ್ಷ ಮಹಿಳಾ ಸೇವಾ ಸಹಕಾರಿ ಮಂಡಲಿ ಲಿಮಿಟೆಡ್" ನ ಮುಖ್ಯಸ್ಥೆಯಾಗಿದ್ದಾರೆ.

ಆರು ಮಂದಿ ಒಡಹುಟ್ಟಿದವರನ್ನು ಹೊಂದಿದ್ದ ಮಂಜುಳಾ ತಂದೆ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ಮಂಜುಳಾ 10ನೇ ತರಗತಿಯ ನಂತರ ಓದನ್ನು ಬಿಡಬೇಕಾಯಿತು. ಕೂಲಿ ಮಾಡುತ್ತಿದ್ದ ವ್ಯಕ್ತಿಯ ಜೊತೆ ಮಂಜುಳಾ ಮುಂದಿನ ಬಾಳು ಶುರುಮಾಡಿದರು. ಗಂಡನ ಹಣ ಮನೆ ಸಂಭಾಳಿಸಲು ಸಾಕಾಗುತ್ತಿರಲಿಲ್ಲ. ಹಾಗಾಗಿ ತಾನೂ ಮನೆಯಿಂದ ಹೊರಬಂದು ನಾಲ್ಕು ಕಾಸು ಸಂಪಾದಿಸುವ ನಿರ್ಧಾರಕ್ಕೆ ಮಂಜುಳಾ ಬಂದರು. ದಿನವಿಡಿ ಬೀದಿ ಬೀದಿ ಕಸಗುಡಿಸಿದರೂ ಮಂಜುಳಾ ಕೈಗೆ ಸಿಗ್ತಾ ಇದ್ದದ್ದು ಬರೀ ಐದು ರೂಪಾಯಿ. ಯಾರದೂ ಸಲಹೆ ಮೇರೆಗೆ ಮಂಜುಳಾ ಇಲ್ಲಾಬೆನ್ ಭಟ್ ಸ್ವಯಂ ಸೇವಾ ಮಹಿಳಾ ಅಸೋಸಿಯೇಷನ್ (SEWA) ಸದಸ್ಯರಾದರು. ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುವ ಈ ಸಂಸ್ಥೆಯಲ್ಲಿ ಮಹಿಳೆಯರ ಸಾಮರ್ಥ್ಯಕ್ಕೆ ತಕ್ಕಂತೆ ಅನೇಕ ಮಂಡಳಿಗಳಿದ್ದವು. 1981ರಲ್ಲಿ ಆರಂಭವಾದ ಸೌಂದರ್ಯ ಸಫಾಯಿ ಉತ್ಕರ್ಷ ಮಹಿಳಾ ಸೇವಾ ಸಹಕಾರಿ ಮಂಡಳಿ ಲಿಮಿಟೆಡ್ ನಲ್ಲಿ ಮಂಜುಳಾಗೆ ಸದಸ್ಯತ್ವ ನೀಡಲಾಯ್ತು. ಈ ಮಂಡಳಿ ಸರ್ಕಾರಿ ಹಾಗೂ ಸರ್ಕಾರೇತರ ಕಚೇರಿಗಳ ಸ್ವಚ್ಛತಾ ಕಾರ್ಯ ನಿಭಾಯಿಸುತ್ತಿತ್ತು.

ಮಂಜುಳಾ ಪ್ರಕಾರ ಅವರು ಮೊದಲ ಬಾರಿ ಕಸ ಗುಡಿಸಿ ಶುದ್ಧ ಮಾಡಿದ ಸ್ಥಳ ಅಹಮದಾಬಾದ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಕೇಂದ್ರ. ಪ್ರತಿದಿನ ಅಲ್ಲಿ ಮೂರು ತಾಸು ಕೆಲಸ ಮಾಡಬೇಕಿತ್ತು. ಪ್ರತಿ ತಿಂಗಳು 75 ರೂಪಾಯಿ ಸಿಗುತ್ತಿತ್ತು. ಸ್ವಲ್ಪ ಸಮಯದ ನಂತರ ಮಂಜುಳಾ ಅವರಿಗೆ ಬೇರೆ ಕಡೆ ಕೆಲಸ ಮಾಡಲು ಸೂಚಿಸಲಾಗಿತ್ತು. ನಂತರ ಅವರಿಗೆ ಮೇಲ್ವಿಚಾರಕರಾಗಿ ಬಡ್ತಿ ಸಿಕ್ಕಿತ್ತು. ಕೆಲ ವರ್ಷಗಳ ಬಳಿಕ ಮಂಡಳಿಯ ಕಾರ್ಯದರ್ಶಿಯಾದರು. ಆಗ ಅವರು ಮಂಡಳಿಯ ಕೆಲಸದ ಜೊತೆಗೆ ಕಚೇರಿಯ ಇತರ ಕೆಲಸಗಳನ್ನು ಮಾಡುತ್ತಿದ್ದರು. ಇತರ ಮಹಿಳೆಯರನ್ನೂ ತಮ್ಮ ಜೊತೆ ಸೇರಿಸಿಕೊಳ್ಳುವ ಕಾರ್ಯ ಶುರುಮಾಡಿದರು. 31 ಮಹಿಳೆಯರಿಂದ ಆರಂಭವಾದ ಮಂಡಳಿ ಈಗ 400 ಮಹಿಳೆಯರಿಗೆ ಉದ್ಯೋಗ ನೀಡುವ ಕೆಲಸ ಮಾಡುತ್ತಿದೆ.

ಮಂಜುಳಾರ ಅಚ್ಚುಕಟ್ಟಿನ ಕೆಲಸ ನೋಡಿದ ಮಂಡಳಿ 15 ವರ್ಷಗಳ ಹಿಂದೆ ಅವರನ್ನು ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿತು. ಬಡ ಮಹಿಳೆಯರು ನೆಮ್ಮದಿಯಿಂದ ಹೊಟ್ಟೆತುಂಬ ಊಟ ಮಾಡಬೇಕೆಂದು ಬಯಸುವ ಮಂಜುಳಾ ಆದಷ್ಟು ಬಡ ಮಹಿಳೆಯರನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಂಜುಳಾ ಮೇಲ್ವಿಚಾರಣೆಯಲ್ಲಿ ಈ ಸಂಘಟನೆ ಅಹಮದಾಬಾದ್ ನ 45 ಸ್ಥಳಗಳಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿದೆ. ಸರ್ಕಾರಿ ಕಟ್ಟಡ, ಖಾಸಗಿ ಕಟ್ಟಡ, ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಶಾಲೆಗಳು ಇದರಲ್ಲಿ ಸೇರಿವೆ. ಗುತ್ತಿಗೆ ಪಡೆಯಲು ಟೆಂಡರ್ ಸಿದ್ಧಪಡಿಸುವುದರಿಂದ ಹಿಡಿದು ಎಲ್ಲ ಕೆಲಸವನ್ನು ಮಂಜುಳ ತಾವೇ ಮಾಡುತ್ತಾರೆ.

ಇದನ್ನು ಓದಿ: ಆಟದಲ್ಲಿ ಬೆಳ್ಳಿ ಗೆದ್ರೂ ಹೃದಯ ಗೆದ್ದ ಭಾರತದ ಬಂಗಾರ..!

ಮಂಜುಳಾ ಪ್ರಯತ್ನದಿಂದಾಗಿ ಸಂಘಟನೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಜೀವವಿಮೆ ಹಾಗೂ ಪಿಂಚಳಿ ಸೌಲಭ್ಯ ಸಿಗ್ತಾ ಇದೆ. ಮಂಜುಳಾ ಪ್ರಕಾರ, ಜೀವವಿಮೆ ಪಡೆಯಲು ಮಹಿಳೆಯರು ಪ್ರತಿವರ್ಷ ನಾಲ್ಕು ನೂರು ರೂಪಾಯಿ ತುಂಬಬೇಕು. ಅವರಿಗೆ 1 ಲಕ್ಷ ರೂಪಾಯಿ ಜೀವವಿಮೆ ದೊರೆಯುತ್ತದೆ. ಪಿಂಚಣಿಗಾಗಿ ಪ್ರತಿತಿಂಗಳು ಮಹಿಳೆಯರಿಂದ 50 ರೂಪಾಯಿ ಪಡೆಯಲಾಗುತ್ತದೆ. ಮಂಡಳಿ ಕೂಡ 50 ರೂಪಾಯಿ ತೆಗೆದಿಡುತ್ತದೆ. ಒಟ್ಟಾರೆ ಪ್ರತಿತಿಂಗಳು 100 ರೂಪಾಯಿ ಉದ್ಯೋಗಿಗಳ ಪಿಂಚಣಿ ಖಾತೆಗೆ ಜಮಾ ಆಗುತ್ತದೆ. 60 ವರ್ಷದ ನಂತರ ಮಹಿಳೆಯರು ಎಷ್ಟು ವರ್ಷ ಕೆಲಸ ಮಾಡಿದ್ದಾರೆಂಬ ಆಧಾರದ ಮೇಲೆ ಪಿಂಚಣಿ ನೀಡಲಾಗುತ್ತದೆ. ಪ್ರತಿವರ್ಷ ಮಂಡಳಿ ಉದ್ಯೋಗಿಗಳಿಗೆ ಲಾಭಾಂಶದಲ್ಲಿ ಪಾಲು ನೀಡುತ್ತದೆ

ಸೌಂದರ್ಯ ಸಫಾಯಿ ಉತ್ಕರ್ಷ ಮಹಿಳಾ ಸೇವಾ ಸಹಕಾರಿ ಸಂಘ ಲಿಮಿಟೆಡ್ನ ಇಂದಿನ ವಹಿವಾಟು 60 ಲಕ್ಷ ರೂಪಾಯಿ. ಮುಂದಿನ ವರ್ಷ 1 ಕೋಟಿ ತಲುಪುವ ಗುರಿ ಮಂಜುಳಾ ಅವರದ್ದು. ಅಹಮದಾಬಾದ್ ನಲ್ಲಿ ಮಾತ್ರ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಗುಜರಾತ್ ನ ಇತರೆಡೆ ಕೆಲಸ ಮಾಡುವ ಪ್ರಯತ್ನದಲ್ಲಿದೆ ಮಂಡಳಿ. ಅಹಮದಾಬಾದ್ ನಂತರ ಸೂರತ್ ಹಾಗೂ ಬರೋಡಾದಲ್ಲಿ ಕೆಲಸ ಮಾಡುವ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ಈ ಸಂಘಟನೆಯಲ್ಲಿ 30ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. "ಈ ಸಂಘಟನೆಯಿಂದ ನನ್ನ ಸಹೋದರಿಯರ ಅಭಿವೃದ್ಧಿಯಾಗಿದೆ. ಮಂಡಳಿಯ ಅಭಿವೃದ್ಧಿಯಾಗಿದೆ. ನನ್ನ ಅಭಿವೃದ್ಧಿಯಾಗಿದೆ. ಈ ಸಂಘಟನೆ ನಮಗೆ ಎಲ್ಲವನ್ನೂ ನೀಡಿದೆ" ಅಂತ ಹೇಳುತ್ತಾ ಮಾತು ಮುಗಿಸಿದ್ರು ಮಂಜುಳಾ.

ಇದನ್ನು ಓದಿ:

1. ಡಿಜಿಟಲ್ ಇಂಡಿಯಾ ಕಾನ್ಸೆಪ್ಟ್​ಗೆ ಹೊಸ ಸೇರ್ಪಡೆ- ಹಿರಾಚುನಿ ಗ್ರಾಮಸ್ಥರೆಲ್ಲಾ ಫುಲ್ ಟೆಕ್​ಫ್ರೆಂಡ್ಲಿ..!

2. ಮಾರುಕಟ್ಟೆಯಲ್ಲಿ ನಿಮ್ಮ ಚಿತ್ರಣ ಸೃಷ್ಟಿಸಿ ಉದ್ಯಮದ ಕಹಳೆ ಮೊಳಗಿಸಿ

3. ಕಳವಳಕಾರಿಯಾಗಿ ಹಬ್ಬುತ್ತಿರುವ ಕ್ಯಾನ್ಸರ್..! ಪರಿಸ್ಥಿತಿ ಎದುರಿಸಲು ನಾವು ಸಿದ್ಧರಾಗಿದ್ದೇವೇಯೇ..?