ಮೂವರು ಎಂಜಿನಿಯರ್ ಗಳ ಐಸ್ ಕ್ರೀಮ್ ಮಾರಾಟ

ಟೀಮ್​​ ವೈ.ಎಸ್​​.ಕನ್ನಡ

0

ಐಸ್ ಕ್ರೀಮ್ ತಯಾರಿಸಲು ದ್ರವರೂಪದ ನೈಟ್ರೋಜನ್ ಅನ್ನು ಬಳಸುವುದು ಹೊಸ ವಿಚಾರವೇನಲ್ಲ. ಆದರ ಎಂಜಿನಿಯರಿಂಗ್​​ ಕಾಲೇಜಿನ ಮೂವರು ಮಿತ್ರರು – ಅಮೇರಿಕನ್ ಎಕ್ಸಪ್ರೆಸ್ ನಲ್ಲಿ ಬಿಜಿನೆಸ್ ಕನ್ಸಲ್ ಟಂಟ್ ಆಗಿದ್ದ ರೋಹನ್ ಬಾಜ್ಲಾ, ಡಾಯಿಷ್ ಬ್ಯಾಂಕ್ ನಲ್ಲಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿದ್ದ ಸಾರಾಂಶ್ ಗೋಯಲ್ ಹಾಗೂ ಎಸ್ಎಎಸ್ ಸರ್ಟಿಫೈಡ್ ಇಂಜಿನಿಯರ್ ಮತ್ತು ಕಾಮಿಕ್ ಪುಸ್ತಕ ಲೇಖಕ ಅನಿರುದ್ಧ್ ಸಿಂಗ್ – ಇದೇ ಆಲೋಚನೆಯನ್ನು ಬ್ಯಾಂಕಾಕ್ ನಲ್ಲಿ ಕಾರ್ಯರೂಪಕ್ಕೆ ಇಳಿಸಿದಾಗ, ಇದು ತಮ್ಮ ಔದ್ಯೋಗಿಕ ವೃತ್ತಿಯ ಆರಂಭ ಎಂದು ಮೂವರಿಗೂ ಗೊತ್ತಾಗಿತ್ತು. ಹೀಗೆ, ದಿಢೀರ್ ಐಸ್ ಕ್ರೀಮ್ ಕೇಂದ್ರವಾದ ಚೆರ್ರಿ ಕಾಮೆಟ್ ಜನ್ಮತಾಳಿತು.

“ದ್ರವ ನೈಟ್ರೋಜನ್ ಮೂಲಕ ನಾವು ಯಾವುದೇ ಕೃತಕ ಬಣ್ಣ, ರುಚಿ ಅಥವಾ ಪ್ರಿಸರ್ವೇಟಿಸ್ ಬಳಸದೇ ತಾಜಾ ಐಸ್ ಕ್ರೀಮ್ ತಯಾರಿಸುತ್ತೇವೆ. ನಾವು ದೆಹಲಿ-ಎನ್ ಸಿ ಆರ್ ನಲ್ಲಿ ಎರಡು ಔಟ್ ಲೆಟ್ ಗಳ ಮೂಲಕ ಕಾರ್ಯನಿರ್ವಹಿಸುತ್ತೇವೆ. ಮೊದಲನೆಯದು ಗುಡಗಾಂವ್ ನ ಡಿಎಲ್ಎಫ್ ಸೈಬರ್ ಹಬ್. ಎರಡನೆಯದು ಹೊಸದಾಗಿ ಆರಂಭವಾಗಿರುವ ಆರ್ ಕೆ ಪುರಂನಲ್ಲಿನ ಸಂಗಮ್ ಕೋರ್ಟ್ ಯಾರ್ಡ್ ಮಾಲ್” ಎಂದು ರೋಹನ್ ತಿಳಿಸುತ್ತಾರೆ.

ಸವಾಲುಗಳು ಹಾಗೂ ಕಲಿತ ಪಾಠಗಳು

ಈ ತಂಡದ ಬಳಿ ಹೊಸ ಆಲೋಚನೆ ಇದ್ದರೂ ಕೂಡ ಅವರು ಪ್ರವೇಶಿಸುತ್ತಿರುವ ಕ್ಷೇತ್ರ ಹೊಸದಾಗಿತ್ತು. ರೋಹನ್ ಅವರ ಪ್ರಕಾರ, ದಿಢೀರನೇ ಐಸ್ ಕ್ರೀಮನ್ನು ಫ್ರೀಝ್ ಮಾಡುವುದು ಸರಳವಾದ ವಿಚಾರದಂತೆ ಕಂಡುಬಂದರೂ, ಆ ವಿಚಾರ ತುಂಬಾ ಶಕ್ತಿಯುತವಾಗಿತ್ತು. “ನಾವು ಮೂವರು ಕಳೆದ ಆ ಕ್ಷಣಗಳು ನನಗೆ ಚೆನ್ನಾಗಿ ನೆನಪಿದೆ. ಈ ತಂತ್ರಜ್ಞಾನದಿಂದ ನಮಗೆ ಬೇಕಾದ ತಾಜಾ ಐಸ್ ಕ್ರೀಮನ್ನು, ನಮಗೆ ಬೇಕಾದ ಹಾಗೆ ತಯಾರಿಸಬಹುದು ಎಂಬುದು ನಮಗೆ ಗೊತ್ತಿತ್ತು” ಎನ್ನುತ್ತಾರೆ ರೋಹನ್.

ಹೀಗಿದ್ದರೂ ಕೂಡ, ದ್ರವ ರೂಪದ ನೈಟ್ರೋಜನ್ ಬಳಕೆ ಕೇವಲ ಅತೀ ವೈಜ್ಞಾನಿಕ ಕ್ಷೇತ್ರಗಳಿಗೆ ಮಾತ್ರ ಮೀಸಲಾಗಿದೆ. ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಆಹಾರ ಹಾಗೂ ಪಾನೀಯ ಕ್ಷೇತ್ರಕ್ಕೆ ಇದನ್ನು ಬಳಸಿಕೊಂಡಿದ್ದರಿಂದ, ಚೆರ್ರಿ ಕಾಮೆಟ್ ಗೆ ಪ್ರತಿಯೊಂದನ್ನೂ, ವಿಷಯವನ್ನು ತಿಳಿದುಕೊಳ್ಳುವುದರಿಂದ ಹಿಡಿದು ತಂತ್ರಜ್ಞಾನದ ಅಭಿವೃದ್ಧಿಯವರೆಗೆ, ತಳಮಟ್ಟದಿಂದ ತಯಾರಿಸುವುದು ಸವಾಲಿನ ಕೆಲಸವಾಗಿತ್ತು.

ತಂಡದಲ್ಲಿ ಇಂಜಿಯಿನರ್ ಗಳು ಇದ್ದ ಪರಿಣಾಮ, ವೈಜ್ಞಾನಿಕ ಸಿದ್ಧಾಂತ ಹಾಗೂ ಸೂತ್ರಗಳನ್ನು ಪಾಲಿಸುವುದು ಅವರಿಗೆ ಸುಲಭವಾಯಿತು. ತಿಂಗಳುಗಟ್ಟಲೆ ಇವರು, ಆಯಾ ಕ್ಷೇತ್ರದ ನಿಪುಣರೊಂದಿಗೆ ಕೆಲಸ ಮಾಡಿ, ತಂತ್ರಜ್ಞಾನ ಅಭಿವೃದ್ಧಿಪಡಿಸಿ, ಮಾದರಿಗಳನ್ನು ತಯಾರಿಸಿದರು. ಇದರ ಜೊತೆಗೆ, ವಿವಿಧ ಸುರಕ್ಷಾ ವಿಷಯಗಳನ್ನೂ ಅಳವಡಿಸಿಕೊಂಡರು.

ಮುಂದಿನ ಸವಾಲು, ಸೂಕ್ತವಾದ ಐಸ್ ಕ್ರೀಮ್ ಅನ್ನು ತಯಾರಿಸುವುದಾಗಿತ್ತು. ರುಚಿಯಾದ ಐಸ್ ಕ್ರೀಮ್ ಹೀಗಿರುತ್ತದೆ ಎಂದು ಗ್ರಾಹಕರಿಗೆ ತಿಳಿಸುವ ಜವಾಬ್ದಾರಿ ಐಸ್ ಕ್ರೀಮ್ ತಯಾರಿಸುವವರ ಮೇಲಿತ್ತು. ಹಾಲಿಗೆ ಡೈರಿಯ ಕೊಬ್ಬಿನ ಮಿಶ್ರಣ, ರುಚಿಗಳ ಸರಿಯಾದ ಬಳಕೆ ಹಾಗೂ ಸಕ್ಕರೆಯ ಪ್ರಮಾಣ ರುಚಿಯಾದ ಐಸ್ ಕ್ರೀಮ್ ನ ತಯಾರಿಕೆಯಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಿತ್ತು.

ವೈಜ್ಞಾನಿಕ ರಹಸ್ಯ

“ಎರಡು ವರ್ಷಗಳ ನಿರಂತರ ಪ್ರಯೋಗಗಳು, ಹಾಗೂ ಪ್ರತಿನಿತ್ಯವೂ ಮನೆಯಲ್ಲಿ ದ್ರವ ರೂಪದ ನೈಟ್ರೋಜನ ಬಳಸಿ ಐಸ್ ಕ್ರೀಮ್ ಮಾಡಿದ್ದರಿಂದ ಇದರ ಎಲ್ಲ ಸೂಕ್ಷ್ಮತೆಗಳು ಗಮನಕ್ಕೆ ಬಂದವು. ಇಂದು ನಮಗೆ ನಮ್ಮ ರೆಸಿಪಿಗಳು ಬಾಯಿಪಾಠವಾಗಿದ್ದು, ಯಾವ ವಸ್ತು ಹೇಗೆ ಐಸ್ ಕ್ರೀಮ್ ರುಚಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಹಜವಾಗಿ ಹೇಳಬಲ್ಲವರಾಗಿದ್ದೇವೆ” ಎನ್ನುತ್ತಾರೆ ರೋಹನ್. ಈ ಪ್ರಕ್ರಿಯೆಯಲ್ಲಿ ಕೆಲ ಐಸ್ ಕ್ರೀಮ್ ಗಳು ಹಿಟ್ ಆದರೆ, ಕೆಲವು ಫ್ಲಾಪ್ ಆದವು. ಜಾಮೂನು ಐಸ್ ಕ್ರೀಮ್ ಹಿಟ್ ಆದರೆ ಜಿಲೇಬಿ ಐಸ್ ಕ್ರೀಮ್ ಫ್ಲಾಪ್ ಆಯಿತು.

ರೋಹನ್ ಪ್ರಕಾರ ಇದರ ಹಿಂದಿನ ವಿಜ್ಞಾನ ಸರಳವಾಗಿಯೇ ಇತ್ತು. ದ್ರವ ರೂಪದ ನೈಟ್ರೋಜನ್ ಮೊದಲು -196.4 ಡಿಗ್ರಿ ಸೆಲ್ಸಿಯಸ್ ತಲುಪಬೇಕು.ಐಸ್ ಕ್ರೀಮ್ ಬೇಸ್ ನಲ್ಲಿ ಇದನ್ನು ಹಾಕಿದಾಗ, ದ್ರವ ರೂಪದ ನೈಟ್ರೋಜನ್ ಕುದ್ದು, ಕ್ಷಣಗಳಲ್ಲಿಯೇ ಅನಿಲ ರೂಪಕ್ಕೆ ಪರಿವರ್ತನೆಗೊಂಡು, ಐಸ್ ಕ್ರೀಮ್ ಬೇಸ್ ನಲ್ಲಿ ಅಡಗಿರುವ ಹೆಚ್ಚಿನ ತಾಪವನ್ನು ಹೊರ ಹಾಕುತ್ತದೆ.

ಇದರಿಂದ ತಳ ಫ್ರೀಜ್ ಆಗಿ, ದಿಢೀರನೇ ಐಸ್ ಕ್ರೀಮ್ ತಯಾರಾಗುತ್ತದೆ. ಈ ಪ್ರಕ್ರಿಯೆ ಕ್ಷಿಪ್ರವಾಗಿ ಆಗುವುದರಿಂದ ಈ ಐಸ್ ಕ್ರೀಮ್ ನಲ್ಲಿರುವಮಂಜುಗಡ್ಡೆಯ ಹರುಳುಗಳು, ಸಾಂಪ್ರದಾಯಿಕವಾಗಿ ಮಾಡುವ ಐಸ್ ಕ್ರೀಮ್ ನಲ್ಲಿರುವ ಹರಳುಗಳಿಗಿಂತ ಚಿಕ್ಕದಾಗಿರುತ್ತವೆ ಹಾಗೂ ಐಸ್ ಕ್ರೀಮ್ ಗೆ ವಿಶೇಷ ಹದವನ್ನು ನೀಡುತ್ತದೆ. “ಈ ಪ್ರಕ್ರಿಯೆಯಿಂದಾಗಿ ಯಾವುದೇ ಕೃತಕ ಪ್ರಿಸರ್ವೇಟಿವ್ ಬಳಸುವ ಅಗತ್ಯ ಕಂಡುಬರುವುದಿಲ್ಲ. ಹೀಗಾಗಿ, ನಮ್ಮ ಐಸ್ ಕ್ರೀಮ್ ತಾಜಾತನದಿಂದ ಕೂಡಿದ್ದು, ರುಚಿಕಟ್ಟಾಗಿಯೂ ಆರೋಗ್ಯಪೂರ್ಣವಾಗಿಯೂ ಇರುತ್ತವೆ” ಎನ್ನುತ್ತಾರೆ ರೋಹನ್.

ಬೆಳವಣಿಗೆ

ಚೆರ್ರಿ ಕಾಮೆಟ್ ನ ಮೊದಲ ಔಟ್ ಲೆಟ್ ಪ್ರಾರಂಭವಾಗಿದ್ದು ಜುಲೈ 2014 ಗುಡಗಾಂವ್ ನ ಡಿಎಲ್ಎಫ್ ಸೈಬರ್ ಹಬ್ ನಲ್ಲಿ. ಅಂದಿನಿಂದಲೂ ಚೆರ್ರಿ ಕಾಮೆಟ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾವು ಹಾಕಿದ ಬಂಡವಾಳ ವಾಪಸ್ ಬರಲು ಮೊದಲ ತಿಂಗಳು ಸಾಕಾಯಿತು ಎಂದು ರೋಹನ್ ಹೇಳುತ್ತಾರೆ. ಅಂದಿನಿಂದ ಖಾಯಂ ಗ್ರಾಹಕರು ದೊರೆತಿದ್ದು, ಐಸ್ ಕ್ರೀಮ್ ರುಚಿ ಮತ್ತು ರೆಸಿಪಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

“ನಮ್ಮ ಎಲ್ಲ ಬೆಳವಣಿಗೆ ಯಾವುದೇ ಮಾರ್ಕೆಟಿಂಗ್ ಮಾಡದೆಯೇ ಅದಾಗಿ ಅದೇ ಆಗಿರುವಂಥದ್ದು. ನಮ್ಮ ಎರಡನೇ ಸ್ಟೋರ್ ಅನ್ನು ನಾವು ಸರಿಯಾಗಿ ಒಂದು ವರ್ಷದ ನಂತರ ಜುಲೈ 2015 ರಂದು ಆರ್ ಕೆ ಪುರಂನ ಸಂಗಮ್ ಕೋರ್ಟ್ ಯಾರ್ಡ್ ನಲ್ಲಿ ಆರಂಭಿಸಿದೆವು. ಇದೀಗ ನಮ್ಮ ಮೂರನೆಯ ಔಟ್ ಲೆಟ್ ತೆರೆಯಲು ನಾವು ದೆಹಲಿಯಲ್ಲಿ ಒಂದು ಮಾಲ್ ನ ಜೊತೆ ಮಾತುಕತೆ ನಡೆಸುತ್ತಿದ್ದೇವೆ” ಎಂದು ರೋಹನ್ ಹೆಮ್ಮೆಯಿಂದ ಹೇಳುತ್ತಾರೆ.

ಯಾವುದೇ ಕೃತಕ ಬಣ್ಣ ಅಥವಾ ರುಚಿಯಿಲ್ಲದೆ ಚೆರ್ರಿ ಕಾಮೆಟ್ ಪ್ರಸ್ತುತ 20 ಫ್ಲೇವರ್ ಗಳನ್ನು ಮಾರುತ್ತಿದೆ. ದ್ರವ ರೂಪದ ನೈಟ್ರೋಜನ್ ಮೂಲಕ ಐಸ್ ಕ್ರೀಮ್ ತಯಾರಾಗುವುದು ವಿಶೇಷವಾದರೂ, ಇದಕ್ಕೆ ಖಾಯಂ ಗ್ರಾಹಕರು ಹುಟ್ಟಿಕೊಂಡಿರುವುದು ಕೇವಲ ಇದರ ರುಚಿಗಾಗಿ.

ಭವಿಷ್ಯದ ಯೋಜನೆಗಳು

ಪ್ರಸ್ತುತ ಚೆರ್ರಿಕಾಮೆಟ್ ಗೆ ಮಿತ್ರರು ಹಾಗೂ ಕುಟುಂದವರು ಹಣ ಹೂಡಿರುವುದನ್ನು ಹೊರತುಪಡಿಸಿದರೆ, ಬೇರೆ ಯಾರೂ ಆರ್ಥಿಕ ಸಹಾಯ ಮಾಡಿಲ್ಲ. ತಮಗೆ ಅಪರಿಚಿತವಾಗಿದ್ದ ಕ್ಷೇತ್ರದಲ್ಲಿ ಮೂವರು ಇಂಜಿನಿಯರ್ ಗಳು ಈ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದು ಮೊದಲ ಬಾರಿಯಾಗಿತ್ತು. ಮೊದಲ ಒಂದೂವರೆ ವರ್ಷದ ಅವಧಿಯಲ್ಲಿ ಸಾಗಾಟಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲಾಗಿದ್ದು, ಇದೀಗ ಚೆರ್ರಿ ಕಾಮೆಟ್ ಹೆಚ್ಚು ಔಟ್ ಲೆಟ್ ಗಳನ್ನು ತೆರೆಯಲು ಸಿದ್ಧವಾಗಿದೆ.

ಚೆರ್ರಿ ಕಾಮೆಟ್ ತಂಡ, ಐಸ್ ಕ್ರೀಮ್ ಕಲ್ಚರ್ (ಜನ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಬಂದು ಕಾಲ ಕಳೆಯುವುದು) ಮತ್ತೆ ಆರಂಭಿಸಲು ಮುಂದಾಗಿದೆ. ತಮ್ಮ ಬಳಿ ಐಸ್ ಕ್ರೀಮ್ ಕುರಿತಂತೆ ಸಾಕಷ್ಟು ವಿನೂತನ ಆಲೋಚನೆಗಳಿದ್ದು, ಇದು ಐಸ್ ಕ್ರೀಮ್ ಅನ್ನು ನೋಡುವ ಗ್ರಾಹಕನ ದೃಷ್ಟಿಯನ್ನು ಸಂಪೂರ್ಣವಾಗಿ ಬದಲಿಸಲಿದೆ ಎಂದು ರೋಹನ್ ಹೇಳುತ್ತಾರೆ.

ಲೇಖಕರು: ಸಿಂಧೂ ಕಶ್ಯಪ್​​​
ಅನುವಾದಕರು: ಸುಘೋಷ್​​​​​​

Related Stories