ರೈತರ ಆತ್ಮಹತ್ಯೆಯಿಂದ ಕುಖ್ಯಾತಿ ಪಡೆದಿದ್ದ ಅಮರಾವತಿಯಲ್ಲಿ ಇ-ಕಾಮರ್ಸ್ ಉದ್ದಿಮೆಯ ಹವಾ

ಟೀಮ್​​ ವೈ.ಎಸ್​.

0

ರೈತರ ಆತ್ಮಹತ್ಯೆಗೆ ಕುಖ್ಯಾತವಾದ ವಿದರ್ಭದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಅಮರಾವತಿಯಲ್ಲಿ ಮಾರ್ಕೆಟ್ ವಾರ್ಕೆಟ್ ಎಂಬ ಸಂಸ್ಥೆಯ ಜೊತೆ ಸೇರಿ ಆನ್‌ಲೈನ್ ಮಾರುಕಟ್ಟೆ ಪ್ರವೇಶಿಸಲು ಮೊದಲ ಹೆಜ್ಜೆ ಇಟ್ಟಿದೆ. ಇಲ್ಲಿ ದಿನಸಿ ವಸ್ತುಗಳನ್ನು ಆನ್‌ಲೈನ್ ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ. ಪ್ರಶಾಂತ್ ಮಹಲ್ಲೇ ಮತ್ತು ಪುಷ್ಪಕ್ ದೇಶ್‌ಮುಖ್ ಎಂಬುವ 23 ವರ್ಷದ ಇಬ್ಬರು ಇಂಜನಿಯರಿಂಗ್ ಓದಿದ ತರುಣರಿಂದ ಆರಂಭವಾಗಿದ್ದೇ ಮಾರ್ಕೆಟ್ ವಾರ್ಕೆಟ್. ಮನೆಬಾಗಿಲಿಗೆ ದಿನಸಿ ವಸ್ತುಗಳನ್ನು ತಲುಪಿಸುವ ಬಗ್ಗೆ ಯೋಜನೆ ರೂಪಿಸಿದ್ದು ಪುಷ್ಪಕ್.

ಹಳ್ಳಿಯಲ್ಲಿ ಹುಟ್ಟಿದ ಇವರಿಬ್ಬರೂ ಕೃಷಿಯ ಹಿನ್ನೆಲೆಯನ್ನು ಹೊಂದಿದ್ದಾರೆ. ಪ್ರಶಾಂತ್ ಹೇಳುವಂತೆ, ಇಂಜನಿಯರಿಂಗ್ ಓದುತ್ತಿದ್ದ ವೇಳೆಯಲ್ಲಿ ಪುಷ್ಪಕ್ ಪರಿಚಯವಾಯಿತು. ಅವರಿಬ್ಬರಿಗೂ ಉದ್ಯಮವೊಂದನ್ನು ನಡೆಸಬೇಕೆಂಬ ಉತ್ಸಾಹವಿತ್ತು. ಪುಷ್ಪಕ್‌ ದಿನಸಿಗಾಗಿ ಶಾಪಿಂಗ್ ಹೋಗುವುದು ಬೇಜಾರು ತರಿಸಿತ್ತು. ಕಡಿಮೆ ಸಮಯದಲ್ಲಿ ದಿನಸಿಯನ್ನೇ ಮನೆಬಾಗಿಲಿಗೆ ವಿತರಿಸಿದರೆ ಹೇಗಿರಬಹುದು ಎಂಬ ಕಲ್ಪನೆಯಿಂದಲೇ 2011ರಲ್ಲಿ ಆರಂಭವಾಗಿದ್ದು ಮಾರ್ಕೆಟ್ ವಾರ್ಕೆಟ್ ಎಂಬ ಆನ್‌ಲೈನ್ ದಿನಸಿ ಮಳಿಗೆ.

ಹೊಸ ಯೋಜನೆಗಳ ಆರಂಭ

ಪುಷ್ಪಕ್‌ ಯೋಜನೆಗೆ ಪ್ರೋತ್ಸಾಹ ನೀಡಿದವರು ಮಾಜಿ ರಾಷ್ಟ್ರಪತಿ ದಿವಂಗತ ಎ.ಪಿ.ಜೆ ಅಬ್ದುಲ್ ಕಲಾಂ. ಒಮ್ಮೆ ಯಾವುದೋ ಕಾರ್ಯಕ್ರಮಕ್ಕೆ ಪ್ರಶಾಂತ್ ಹಾಗೂ ಪುಷ್ಪಕ್‌ ಓದುತ್ತಿದ್ದ ಕಾಲೇಜಿಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲಾಂ ಬಳಿ ಪುಷ್ಪಕ್ ತನ್ನ ಯೋಜನೆಯನ್ನು ಹೇಳಿದ್ದರು. ಕಲಾಂ ಈ ಯುವಕರ ಆಶಯಕ್ಕೆ ಪ್ರೋತ್ಸಾಹ ನೀಡಿದ್ದರು. ಪುಷ್ಪಕ್ ಗೃಹಸೇವೆಗಳನ್ನು ನೀಡುವ ಹೌಸ್ ಜಾಯ್ ಕಂಪನಿ ಮತ್ತು ಒಂದು ಇ-ಕಾಮರ್ಸ್ ವೇದಿಕೆಯನ್ನು ಮಾಡಿಬಿಟ್ರು. ಉದ್ಯಮಶೀಲತೆಗೆ ಉತ್ತೇಜನ ಮತ್ತು ಮಾರ್ಗದರ್ಶನ ನೀಡುವ ನಾಗಪುರ್‌ನ ಟಿಐಇ ಸಂಸ್ಥೆಗೆ ಪುಷ್ಪಕ್ ಭೇಟಿ ನೀಡಿದಾಗ ಅಲ್ಲಿ ಪುಷ್ಪಕ್‌ರ ಯೋಜನೆಗಳನ್ನು ಸಾರಾಸಗಟಾಗಿ ತಿರಸ್ಕರಿಸಲಾಯಿತು. ಪುಷ್ಪಕ್‌ ಯೋಜನೆಗಳೂ ಅಪ್ರಾಯೋಗಿಕ ಮತ್ತು ಇಂತಹ ಕಾರ್ಯಕ್ಷೇತ್ರಗಳು ಇರಲು ಸಾಧ್ಯವೇ ಇಲ್ಲವೆಂದು ಅಲ್ಲಿನ ಅಧಿಕಾರಿಗಳು ಹೇಳಿದರು.

ಇದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದ ಪುಷ್ಪಕ್ ತನ್ನ ಯೋಜನೆಯನ್ನು ಪ್ರಶಾಂತ್ ಜೊತೆಗೆ ಚರ್ಚಿಸಿದರು. ಆ ದಿನಗಳಲ್ಲಿ ದೇಶದಲ್ಲಿ ಇ- ಕಾಮರ್ಸ್ ಕ್ಷೇತ್ರವೂ ಹೆಚ್ಚಾಗಿ ಗಮನ ಸೆಳೆದಿತ್ತು. ಆಗ ಈ ಜೋಡಿಗೆ ಹೊಳೆದ ಯೋಜನೆಯೇ ಮಾರ್ಕೆಟ್ ವಾರ್ಕೆಟ್ ಆನ್‌ಲೈನ್ ಮಾರ್ಕೆಟ್.

ಯೋಜನೆಯ ಸವಾಲುಗಳು

ಅವರು ಈ ಯೋಜನೆಯನ್ನು ಆರಂಭಿಸುವಾಗ ವಿದರ್ಭದ ಅಮರಾವತಿಯಲ್ಲಿ ಒಂದೇ ಒಂದು ಇ-ಕಾಮರ್ಸ್ ಸಂಸ್ಥೆಯೂ ಕಾರ್ಯನಿರ್ವಹಿಸುತ್ತಿರಲಿಲ್ಲ. ಅಲ್ಲದೇ ಪ್ರತಿದಿನವೂ ಸಾಮಾನ್ಯ ಜನರು ಅನೇಕ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಇತ್ತು. ಮಹಾರಾಷ್ಟ್ರದ ವಿದರ್ಭದ ಜನರಿಗೆ ವಿದ್ಯುತ್, ಕುಡಿಯುವ ನೀರು, ನಿರುದ್ಯೋಗ ಮತ್ತು ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳು ಕಾಡುತ್ತಿದ್ದವು.

ತಮ್ಮ ಉದ್ಯಮವನ್ನು ವಿಸ್ತರಿಸಲು ಸ್ಥಳೀಯ ಮರಾಠಿ ಭಾಷೆ ಸಹಾಯಕ್ಕೆ ಬಂತು. ಆಟೋರಿಕ್ಷಾಗಳಿಗೆ ಬ್ಯಾನರ್ ಕಟ್ಟುವುದು, ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಯೋಜನೆ ಮಾಡುವುದು, ಕರಪತ್ರಗಳನ ಹಂಚಿಕೆ, ಪ್ರತಿ ಮನೆಗೂ ಹೋಗಿ ತಮ್ಮ ಯೋಜನೆಗಳನ್ನು ತಿಳಿಸುವುದು ಹೀಗೆ ಅನೇಕ ಐಡಿಯಾಗಳನ್ನು ಬಳಸಿಕೊಂಡು ಕೆಲವು ಹೊಸ ಆರ್ಡರ್‌ಗಳನ್ನು ಪಡೆದೆವು ಎನ್ನುತ್ತಾರೆ ಪ್ರಶಾಂತ್.

ಕಠಿಣ ಹಾದಿ

ಏನೇ ಆದರೂ ಅಮರಾವತಿಯಂತಹ ಪ್ರದೇಶದಲ್ಲಿ ಇ-ಕಾಮರ್ಸ್ ಕ್ಷೇತ್ರದಲ್ಲಿ ಬೆಳೆಯುವುದು ಅಷ್ಟೇನೂ ಸುಲಭವಲ್ಲ. ಅವರು ಅನೇಕ ಸವಾಲುಗಳನ್ನು ಎದುರಿಸಬೇಕಾಗಿ ಬಂತು. ಕೆಲವರಿಗೆ ಅಪನಂಬಿಕೆ ಇತ್ತು. ತಾವು ಆರ್ಡರ್ ಮಾಡಿದ ವಸ್ತುವಿನ ಕುರಿತು ಅನೇಕ ಪ್ರಶ್ನೆಗಳನ್ನು ಜನ ಕೇಳುತ್ತಿದ್ದರು. ರಿಯಾಯಿತಿ ಹಾಗೂ ಉಚಿತ ಡೆಲಿವರಿ ನೀಡುತ್ತಿದ್ದರಿಂದ ನಾವು ಸರಿಯಾಗಿ ತೆರಿಗೆ ಕಟ್ಟುತ್ತಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು ಎನ್ನುತ್ತಾರೆ ಪ್ರಶಾಂತ್.

ನಮ್ಮ ಯೋಜನೆ ಹೊಸದಾಗಿತ್ತು. ಹೀಗಾಗಿ 2012ರಲ್ಲಿ ಎಫ್‌ಎಂಸಿಜಿ ಕಂಪನಿಗಳ ಜೊತೆ ಕೈಜೋಡಿಸುವಾಗ ವಸ್ತುಗಳ ಸಾಗಾಣಿಕೆ ಕುರಿತು ಸ್ಥಳೀಯ ವಿತರಕರ ಮನವೊಲಿಸುವುದು ಕಷ್ಟವಾಯಿತು. ದರ ಹೋಲಿಕೆ ಮತ್ತು ಉತ್ಪನ್ನಗಳ ಕ್ವಾಲಿಟಿಯನ್ನು ಕಾಯ್ದುಕೊಳ್ಳುವುದು ನಮ್ಮ ದೃಷ್ಟಿಯಲ್ಲಿ ದೊಡ್ಡ ಸವಾಲಾಗಿತ್ತು ಎನ್ನುತ್ತಾರೆ ಪ್ರಶಾಂತ್.

ಸ್ಪರ್ಧಾತ್ಮಕ ಬೆಲೆಯಲ್ಲಿ, ಸರಿಯಾದ ಸಮಯಕ್ಕೆ ಉತ್ಪನ್ನಗಳನ್ನು ತಲುಪಿಸಲು ಒಂದು ಪೂರೈಕೆ ಸರಪಳಿ ನಿರ್ವಹಣೆ ಜಟಿಲವಾಗಿರುತ್ತದೆ. ದಿನಸಿ ವಸ್ತುಗಳಿಗೆ ಹೆಚ್ಚು ರಿಯಾಯಿತಿ ನೀಡಲು ಸಾಧ್ಯವಿಲ್ಲ. ಇತರ ದೊಡ್ಡ ಉದ್ಯಮಗಳಂತೆ ಮಾರ್ಕೆಟ್ ವಾರ್ಕೆಟ್ ವೇಗವಾಗಿ ಬೆಳೆಯಲು ಸಾಧ್ಯವಿಲ್ಲ. ಆದರೆ ವಿದರ್ಭದಂತಹ ಪ್ರದೇಶದಲ್ಲಿ ನಾವು ಇ- ಕಾಮರ್ಸ್ ಕ್ಷೇತ್ರದಲ್ಲಿ ಹೆಜ್ಜೆಗುರುತುಗಳನ್ನು ಮೂಡಿಸುತ್ತಿದ್ದೇವೆ. ನಾವು ಈಗಾಗಲೇ ಶೇ.95ರಷ್ಟು ಗ್ರಾಹಕರನ್ನು ಸಂಪಾದಿಸುವ ಮೂಲಕ ಯಶಸ್ಸಿನತ್ತ ಸಾಗುತ್ತಿದ್ದೇವೆ ಎನ್ನುತ್ತಾರೆ ಪ್ರಶಾಂತ್.

ವಿದರ್ಭದಂತಹ ಪ್ರದೇಶದಲ್ಲಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಬೇಕಿದೆ. ಹೀಗಾಗಿ ಇಲ್ಲಿ ಇ-ಕಾಮರ್ಸ್ ಜಾಗ ಪಡೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇಂದೂ ಸಹ ಆನ್​ಲೈನ್​​ ಪಾವತಿಯ ಬಗ್ಗೆ ಇಲ್ಲಿ ಅನುಮಾನಗಳಿವೆ. ಹೀಗಾಗಿ ಪ್ರತಿಯೊಬ್ಬರೂ ಕ್ಯಾಶ್ ಆನ್ ಡೆಲಿವರಿ ಪಾವತಿ ವಿಧಾನವನ್ನೇ ಅನುಸರಿಸುತ್ತಿದ್ದಾರೆ.

ಕಡಿಮೆ ದರ, ಕಡಿಮೆ ದರದ ಮಾನವಶಕ್ತಿ, ಸಣ್ಣ ನಗರಗಳು ಮತ್ತು ಗ್ರಾಹಕರ ನಂಬಿಕೆ ಇವೆಲ್ಲಾ ವಿದರ್ಭದಲ್ಲಿ ಇ-ಕಾಮರ್ಸ್ ಉದ್ಯಮವನ್ನು ಆರಂಭಿಸಲು ಕಾರಣಗಳು. ಸರಿಯಾದ ಯೋಜನೆ ಮತ್ತು ನಿಗದಿತ ಮಾರಾಟ ಗುರಿಯಿಂದ ಹೊಸ ಉದ್ಯಮಗಳು ಲಾಭವನ್ನು ತಂದುಕೊಡುತ್ತದೆ. ಈವರೆಗೂ ಮಾರ್ಕೆಟ್ ವಾರ್ಕೆಟ್​ಗೆ 1500 ಮಂದಿ ಗ್ರಾಹಕರಿದ್ದಾರೆ ಹಾಗೂ ಆರ್ಡರ್ನ ಸರಾಸರಿ ಮೊತ್ತ 1450 ರೂ.ಗಳಿವೆ ಎನ್ನುತ್ತಾರೆ ಪ್ರಶಾಂತ್.

ಮಾರುಕಟ್ಟೆ ಮತ್ತು ಮುಂದಿನ ಯೋಜನೆ

ಸದ್ಯಕ್ಕೆ ಮಾರ್ಕೆಟ್ ವಾರ್ಕೆಟ್ ತಂಡ ಬಂಡವಾಳ ಹೂಡಿಕೆಯತ್ತ ಗಮನಹರಿಸುತ್ತಿದೆ. ತನ್ನ ಯೋಜನೆಗಳ ಸಾಕಾರಕ್ಕೆ ಅನುಭವಿ ಹೂಡಿಕೆದಾರರ ತಂಡದ ಅವಶ್ಯಕತೆ ಇದೆ. ಇತರ ಕಂಪನಿಗಳಿಗೆ ಹೋಲಿಸಿದರೆ ಮಾರ್ಕೆಟ್ ವಾರ್ಕೆಟ್ ಆರ್ಡರ್ ತೆಗೆದುಕೊಂಡ 3 ಗಂಟೆಯಲ್ಲಿ ದಿನಸಿ ವಸ್ತುಗಳನ್ನು ವಿತರಿಸುತ್ತಿದೆ. ತಮ್ಮ ಉತ್ಪನ್ನಗಳ ಮೇಲೆ ಸಮರ್ಪಕ ನಿಯಂತ್ರಣವನ್ನೂ ಹೊಂದಿದೆ. ಸದ್ಯದಲ್ಲೇ ಒಂದು ಹೊಸ ಆ್ಯಪ್‌ನ್ನು ಆರಂಭಿಸುವ ಸಿದ್ಧತೆಯಲ್ಲಿದ್ದಾರೆ ಪ್ರಶಾಂತ್ ಮತ್ತು ಪುಷ್ಪಕ್. ತಾವೂ ಸಹ ಕೃಷಿ ಹಿನ್ನೆಲೆಯಿಂದಲೇ ಬಂದವರಾದ್ದರಿಂದ ರೈತರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಹಾಕಿಕೊಳ್ಳಲು ಚಿಂತಿಸುತ್ತಿದ್ದೇವೆ ಎನ್ನುತ್ತಾರೆ ಪ್ರಶಾಂತ್.

2ನೇ ಹಾಗೂ 3ನೇ ಶ್ರೇಣಿಯ ನಗರಗಳಲ್ಲಿ ಇ-ಕಾಮರ್ಸ್

ಭಾರತೀಯ ಇ-ಕಾಮರ್ಸ್ ಮಾರುಕಟ್ಟೆ ಈ ವರ್ಷಾಂತ್ಯದಲ್ಲಿ 6 ಬಿಲಿಯನ್ ಅಮೆರಿಕನ್ ಡಾಲರ್ ಉದ್ಯಮ ನಡೆಸುವ ನಿರೀಕ್ಷೆ ಇದೆ. ಈ ಸ್ಪರ್ಧೆಯಲ್ಲಿ 2 ಮತ್ತು 3ನೇ ಶ್ರೇಣಿಯ ನಗರಗಳೂ ಸಹ ಭಾಗಿಯಾಗಿವೆ. ಅಲ್ಲದೇ ದೇಶದಲ್ಲಿ ಸದ್ಯಕ್ಕೆ ಅಂತರ್ಜಾಲ ಮತ್ತು ಸ್ಮಾರ್ಟ್‌ಫೋನ್‌ಗಳ ಬಳಕೆದಾರರ ಸಂಖ್ಯೆಯೂ ಹೆಚ್ಚಿದೆ. ಶೀಘ್ರದಲ್ಲೇ ಶೇ. 51ರಷ್ಟು ಅಭಿವೃದ್ಧಿ ಸಾಧಿಸಲಿದೆ ಇ-ಕಾಮರ್ಸ್ ಕ್ಷೇತ್ರ. 2013ರ ವೇಳೆಗಾಗಲೇ ಗ್ರಾಮೀಣ ಭಾರತದಲ್ಲಿ 21 ಬಿಲಿಯನ್ ಮೊಬೈಲ್ ಬಳಕೆದಾರರಿದ್ದರು.