ನಿಜವನ್ನೇ ನುಡಿಯುತ್ತಂತೆ ಶಿವಾಜಿನಗರದ ಇಲಿ.....

ನಿನಾದ

0

2010ರಲ್ಲಿ ನಡೆದ ಪುಟ್ಬಾಲ್ ವಿಶ್ವಕಪ್ ವೇಳೆ ಅಕ್ಟೋಪಸ್ ನುಡಿದ ಭವಿಷ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಆದ್ರೆ ಇದೇ ವೇಳೆ ನಮ್ಮ ಸಿಲಿಕಾನ್ ಸಿಟಿಯಲ್ಲಿಯೂ ಪುಟ್ಟ ಪ್ರಾಣಿಯೊಂದು ಭವಿಷ್ಯ ನುಡಿದಿತ್ತು. ಅದುವೇ ಶಿವಾಜಿನಗರದಲ್ಲಿ ಗೋವಿಂದರಾಜ್ ಎಂಬುವವರು ಸಾಕುತ್ತಿರುವ ಇಲಿ.

ಗೋವಿಂದರಾಜ್ ಕಳೆದ ಐದು ವರ್ಷಗಳಿಂದ ಶಿವಾಜಿನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸುವಂತಹ ಇಲಿ ಭವಿಷ್ಯ ಹೇಳುತ್ತಾ ಜೀವನ ಸಾಗಿಸುತ್ತಿದ್ದಾರೆ. 58 ವರ್ಷಗಳಿಂದ ಜನ ಭವಿಷ್ಯ ಹೇಳುವ ಕಾಯಕ ಮಾಡಿ ಜೀವನ ಸಾಗಿಸುತ್ತಿರುವ ಗೋವಿಂದ್ ರಾಜ್ ಐದು ವರ್ಷಗಳ ಹಿಂದೆ ಗಿಣಿ ಭವಿಷ್ಯ ಹೇಳುತ್ತಿದ್ದರು. ಆದ್ರೆ ಪ್ರಾಣಿ ದಯಾ ಸಂಘದವರು ನೀಡಿದ ದೂರಿನಿಂದಾಗಿ ಅವರು ಗಿಣಿ ಭವಿಷ್ಯಕ್ಕೆ ವಿದಾಯ ಹೇಳಬೇಕಾಯಿತು. ಅಂದಿನಿಂದ ಜೀವನಕ್ಕೆ ಬೇರೆ ದಾರಿ ಕಾಣದೇ ಗೋವಿಂದರಾಜ್ ಇಲಿ ಭವಿಷ್ಯ ಆರಂಭಿಸಿದ್ರು. ಚೆನ್ನೈಗೆ ತೆರಳಿ ಅದಕ್ಕಾಗಿ ತರಬೇತಿ ಪಡೆದುಕೊಂಡ್ರು. ಬಳಿಕ ಎರಡು ಮುದ್ದಾದ ಇಲಿಗಳಿಗೆ ತರಬೇತಿ ನೀಡಿದ ಇಲಿ ಭವಿಷ್ಯ ಆರಂಭಿಸಿದ್ರು.

ಐದು ವರ್ಷಗಳಿಂದ ಎರಡು ಮುದ್ದಾದ ಇಲಿಗಳ ಮೂಲಕವೇ ಜೀವನ ಸಾಗಿಸುತ್ತಿದ್ದಾರೆ ಗೋವಿಂದ ರಾಜ್. ಇವರು ಇಲ್ಲಿಯವರೆಗೂ ಅದೆಷ್ಟೋ ಮಂದಿಗೆ ಇಲಿ ಭವಿಷ್ಯ ಹೇಳಿದ್ದಾರೆ. 2010ರಲ್ಲಿ ನಡೆದ ಪುಟ್ಬಾಲ್ ವಿಶ್ವಕಪ್ ವೇಳೆಯೂ ಗೋವಿಂದ ರಾಜ್ ಅವರ ಇಲಿಗಳು ಭವಿಷ್ಯ ನುಡಿದ್ದವು. ಆದ್ರೆ ಸ್ಪೇನ್ ಗೆಲ್ಲುತ್ತೆ ಅನ್ನೋ ಇಲಿಯ ಭವಿಷ್ಯ ಸುಳ್ಳಾಗಿತ್ತು. ಇನ್ನು ಖ್ಯಾತ ರಾಜಕಾರಣಿಗಳು ಸಿನಿಮಾ ತಾರೆಯರಿಗೂ ಇವರು ಇಲಿ ಭವಿಷ್ಯ ನುಡಿದಿದ್ದಾರೆ. ನಟಿ ರಮ್ಯಾ, ಅನಿತಾ ಕುಮಾರಸ್ವಾಮಿ ಅವರು ಇವರಿಂದ ಭವಿಷ್ಯ ಹೇಳಿಸಿಕೊಂಡಿದ್ರಂತೆ.

ಇನ್ನು ಬೆಂಗಳೂರಿನ ಸ್ಟಾರ್ ಹೋಟೆಲ್ ಗಳಿಗೂ ಹೋಗಿ ಅಲ್ಲಿಗೆ ಬರೋ ವಿದೇಶಗರಿಗೆ ಭವಿಷ್ಯ ಹೇಳ್ತಾರೆ. ಲೀಲಾ ಪ್ಯಾಲೆಸ್, ಯುಬಿ ಸಿಟಿ, ಅಶೋಕ್ ಪ್ಯಾಲೆಸ್, ತಾಜ್ ವೆಸ್ಟೆಂಡ್ ಹೀಗೆ ವಿವಿಧ ಪಂಚತಾರಾ ಹೋಟೆಲ್ ಗಳಲ್ಲಿ ಅಲ್ಲಿಗೆ ಬರುವ ಅತಿಥಿಗಳಿಗೆ ಭವಿಷ್ಯ ನುಡಿಯುತ್ತಾರೆ. ಭವಿಷ್ಯ ನುಡಿಯಲು ಕೇವಲ 20 ರೂಪಾಯಿ ನಿಗದಿ ಪಡಿಸಿರೋ ಗೋವಿಂದ್ ರಾಜ್ ಬಳಿ, ಯವಕ ಯುವತಿಯರೇ ಹೆಚ್ಚಾಗಿ ಬಂದು ಭವಿಷ್ಯ ಕೇಳ್ತಾರಂತೆ. ನಾನು ಗೋವಿಂದ್ ರಾಜ್ ಅವರ ಬಳಿ ಅನೇಕ ಬಾರಿ ಇಲಿ ಭವಿಷ್ಯ ಕೇಳಿದ್ದೇನೆ. ಅವರು ಹೇಳಿದಂತೆ ನನ್ನ ಜೀವನದಲ್ಲಿ ಅನೇಕ ಘಟನೆಗಳು ನಡೆದಿವೆ ಅನ್ನುತ್ತಾರೆ ಇಲಿ ಭವಿಷ್ಯ ಹೇಳಿಸಿಕೊಂಡ ಮುರಳಿ

ತಮ್ಮ ಜೀವನಕ್ಕೆ ಆಧಾರವಾಗಿರುವ ಇಲಿಗಳನ್ನು ಗೋವಿಂದರಾಜ್ ತಮ್ಮ ಪುಟ್ಟ ಮಕ್ಕಳಂತೆ ಸಾಕುತ್ತಿದ್ದಾರೆ. ಇಲಿಗಳು ಗಣೇಶನ ಪ್ರತಿರೂಪ ಅನ್ನುವ ಗೋವಿಂದರಾಜ್ ಅದಕ್ಕಾಗಿಯೇ ತಿಂಗಳೊಂದಕ್ಕೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಇನ್ನು ಮನುಷ್ಯರು ಏನೆಲ್ಲಾ ತಿನ್ನುತ್ತಾರೋ ಅದೆಲ್ಲವನ್ನೂ ಕೂಡ ನಾನು ನನ್ನ ಮುದ್ದಿನ ಇಲಿಗಳಿಗೆ ನೀಡುತ್ತೇನೆ ಅನ್ನುತ್ತಾರೆ ಗೋವಿಂದರಾಜ್. ಭವಿಷ್ಯ ಹೇಳುವ ಕಾಯಕದ ಜೊತೆಗೆ ಗೋವಿಂದರಾಜ್ ಕೆಲ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಅಗ್ನಿಪಂಜರ, ಅರ್ಜುನ್ ಸೇರಿದಂತೆ ಅಂಬರೀಶ್ ಅವರ ಕೆಲ ಸಿನಿಮಾಗಳಲ್ಲಿಯೂ ಗೋವಿಂದರಾಜ್ ಅಭಿನಯಿಸಿದ್ದಾರಂತೆ. ಭವಿಷ್ಯ ಹೇಳೋದಕ್ಕೆ ಗೋವಿಂದರಾಜ್ ರಾಜ್ಯದೆಲ್ಲೆಡೆ ಸಂಚರಿಸುತ್ತಾರೆ. ಶಾಲೆಯ ಮೆಟ್ಟಿಲನ್ನೇ ಹತ್ತದ ಗೋವಿಂದರಾಜ್ ಐದು ಭಾಷೆಗಳನ್ನು ಸರಾಗವಾಗಿ ಮಾತನಾಡುತ್ತಾರೆ. ಕನ್ನಡ, ಹಿಂದಿ, ಇಂಗ್ಲೀಷ್, ತಮಿಳು, ತೆಲುಗು ಹೀಗೆ ಜನರಿಗೆ ಬೇಕಾದ ಭಾಷೆಗಳಲ್ಲಿ ಭವಿಷ್ಯ ಹೇಳ್ತಾರೆ.

ಅಪ್ಪನಿಂದ ಕಲಿತ ವಿದ್ಯೆಯನ್ನು 68 ವರ್ಷದ ಗೋವಿಂದರಾಜ್ ಇಂದಿಗೂ ಮುಂದುವರೆಸಿಕೆಡು ಹೋಗುತ್ತಿದ್ದಾರೆ. ಅದರಲ್ಲೇ ಜೀವನ ಕಟ್ಟಿಕೊಂಡಿದ್ದಾರೆ. ಖುಷಿ ಕಾಣುತ್ತಿದ್ದಾರೆ. ಆದ್ರೆ ಇವರ ತನ್ನ ನಂತ್ರ ಇದನ್ನು ಯಾರೂ ಮುಂದುವರೆಸಿಕೊಂಡು ಹೋಗಲ್ಲ, ಇದು ಇಲ್ಲಿಗೆ ಅಂತ್ಯವಾಗುತ್ತಲ್ವಾ ಅನ್ನೋ ನೋವು ಮಾತ್ರ ಗೋವಿಂದ್ ರಾಜ್ ಅವರಿಗೆ ನಿರಂತರವಾಗಿ ಕಾಡುತ್ತಿದೆಯಂತೆ.