ಬೆಂಗಳೂರಿಗೆ ಅಂದದ ಟಚ್​- ಗಪ್​ಚುಪ್​ ಆಗಿ ಮಾಡ್ತಿದ್ದಾರೆ ವರ್ಕ್​..!

ಟೀಮ್​​ ವೈ.ಎಸ್​. ಕನ್ನಡ

ಬೆಂಗಳೂರಿಗೆ ಅಂದದ ಟಚ್​- ಗಪ್​ಚುಪ್​ ಆಗಿ ಮಾಡ್ತಿದ್ದಾರೆ ವರ್ಕ್​..!

Thursday September 08, 2016,

3 min Read

ಬೆಂಗಳೂರು ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ..? ಇಲ್ಲಿನ ಹೈ, ಫೈ ಲೈಫ್​, ಸೂಪರ್​ ಫಾಸ್ಟ್​ ಜೀವನ ಎಲ್ಲವೂ ಸೂಪರ್​. ಆದ್ರೆ ಬೆಂಗಳೂರಿನ ಮತ್ತೊಂದು ಮುಖ ಕೂಡ ಇದೆ. ಸ್ಲಂಗಳು, ಪ್ಲಾನ್​ ಇಲ್ಲದ ಲೇ ಔಟ್​ಗಳು ಸಾಕಷ್ಟು ಕಿರಿಕಿರಿ ಮಾಡುತ್ತಿವೆ. ಟ್ರಾಫಿಕ್​​ಜಾಮ್​ಗೆ ಪರಿಹಾರವಂತೂ ಇಲ್ಲವೇ ಇಲ್ಲ. ಅದೆಷ್ಟೇ ಫ್ಲೈ ಓವರ್​ಗಳನ್ನು ಕಟ್ಟಿದ್ರೂ ಅದೆಲ್ಲಾ ತುಂಬಿ ತುಳುಕುತ್ತಿವೆ. ಆದ್ರೆ ಸಿಲಿಕಾನ್​ ಸಿಟಿಯ ಫ್ಲೈ ಓವರ್​ಗೆ ಹೊಸ ಲುಕ್​ ಬಂದಿದೆ.

image


ಬೆಂಗಳೂರಿನ ಫ್ಲೈಓವರ್ ಕಂಬಗಳು ಬಣ್ಣಗಟ್ಟಿವೆ. ಮೆಟ್ರೋ ಪಿಲ್ಲರ್‍ಗಳಲ್ಲಿ ಚಿತ್ತಾರಗಳು ಅರಳಿವೆ, ಕಲರ್‍ಫುಲ್ ಪೈಂಟ್ಸ್ ಮಾತ್ರವಲ್ಲ ಪ್ರತಿಯೊಂದು ಕಂಬವೂ ಈಗ ಒಂದೊಂದು ಕಥೆಯನ್ನ ಸಾರಿ ಹೇಳ್ತಾ ಇವೆ. ಅದೆಷ್ಟೋ ಕಸ ಹಾಕುವ ಜಾಗಗಳಲ್ಲಿ, ಅಚ್ಚರಿಯೆಂಬಂತ ಬದಲಾವಣೆ ಆಗಿದೆ. ರಾತ್ರಿಯ ಲೈಟ್ ನಲ್ಲಿ ಕಂಬಗಳ ಮೇಲಿರುವ ಆಕೃತಿಗಳು ಎದ್ದುಬಂದಂತಿವೆ. ಹರಿದ ಚಪ್ಪಲಿಗಳು, ಎಸೆದ ಕಸಪೊರಕೆಗಳು, ಸೇದಿ ಬಿಸಾಡಿದ ಸಿಗರೆಟ್ ತುಂಡುಗಳು, ಕಸದಿಂದ ರಸ ಎನ್ನುವಂತೆ ವೇಸ್ಟ್ ಆಗಿದ್ದೂ ಇಲ್ಲಿ ಉಪಯೋಗಕ್ಕೆ ಬಂದಿದೆ. ಹೀಗೆ ಬೆಂಗಳೂರು ನಗರವನ್ನ ಅಂದಗಾಣಿಸುತ್ತಿರುವುದು 'ಬೆಂಗಳೂರು ರೈಸಿಂಗ್ ತಂಡ'. ಹೌದು, ದೇಶಾದ್ಯಂತ ಹೆಸರುವಾಸಿಯಾಗಿರುವ 'ಅಗ್ಲಿ ಇಂಡಿಯನ್' ನ ಒಂದು ಭಾಗವೇ ಈ ಬೆಂಗಳೂರು ರೈಸಿಂಗ್. ಹಣಕ್ಕಾಗಿ ಈ ತಂಡದ ಸದಸ್ಯರು ಹಪಹಪಿಸುವುದಿಲ್ಲ. ತಮ್ಮ ಹೆಸರನ್ನ ಹೇಳಲು ಇಚ್ಚಿಸುವುದಿಲ್ಲ. ನಾವು ಫೇಮಸ್ ಆಗಬೇಕು ಅನ್ನೋ ಉದ್ದೇಶವಂತೂ ಇಲ್ಲವೇ ಇಲ್ಲ. ಅವರ ಉದ್ದೇಶ ಒಂದೆ ಬೆಂಗಳೂರನ್ನ ಅಂದಗಾಣಿಸುವುದು.

image


ಭಿತ್ತಿಪತ್ರಗಳಿಂದ ಮುಕ್ತಿ..!

ನಗರದ ಅಂದಗೆಡಿಸುವ ಭಿತ್ತಿ ಪತ್ರಗಳಿಗೆ ಮುಕ್ತಿ ಹಾಡಲಾಗಿದೆ. ಎಲ್ಲೆಂದರಲ್ಲಿ ಅಂಟಿಸಲಾಗ್ತಿದ್ದ ಸಿನಿಮಾ ಪೋಸ್ಟರ್‍ಗಳಿಗೂ ಕೂಡ ಬ್ರೇಕ್ ಬಿದ್ದಿದೆ. ಕೊಳೆಗಟ್ಟಿದ ಕಂಬಗಳನ್ನ ತಿಕ್ಕಿತೊಳೆದು, ಬಣ್ಣ ಬಳಿಯಲಾಗುತ್ತಿದೆ. ಒಂದೊಂದು ಕಂಬಕ್ಕೆ ಒಂದೊಂದು ಡಿಸೈನ್, ಅದು ಹೂವುಗಳಾಗಿರಬಹುದು, ಬಣ್ಣಬಣ್ಣದ ಸೊನ್ನೆಗಳಾಗಿರಬಹುದು, ತ್ರಿಕೋನಾಕೃತಿಗಳು, ಮಿಶ್ರಬಣ್ಣಗಳಲ್ಲಿ ರೂಪುಗೊಂಡ ಮತ್ತೊಂದು ಚಿತ್ರ ಹೀಗೆ, ಒಟ್ಟಿನಲ್ಲಿ ನೋಡೋಕೆ ಚೆಂದವಾಗಿ ಕಾಣುವ ಬಣ್ಣಗಳು ನೋಡುವ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗ್ತಾ ಇದೆ.

image


ಕಲರ್‍ಫುಲ್ ಕಂಬಗಳು

ಬಿಬಿಎಂಪಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಇವರು ನಗರದ ಒಂದೊಂದೆ ಮೇಲ್ಸೇತುವೆಗಳ ಕಂಬಗಳಲ್ಲಿ ಚಿತ್ತಾರ ಬಿಡಿಸ್ತಾ ಇದ್ದಾರೆ. ರಿಚ್‍ಮಂಡ್ ಸರ್ಕಲ್ ಫ್ಲೈಓವರ್, ಡೈರಿ ಸರ್ಕಲ್ ಫ್ಲೈ ಓವರ್, ಕೆಆರ್ ಪುರಂ ಫ್ಲೈ ಓವರ್, ದೇವರಬೀಸನಹಳ್ಳಿ ಮೇಲ್ಸೇತುವೆ. ಔಟರ್ ರಿಂಗ್ ರೋಡ್, ಹೆಚ್ ಎಸ್ ಆರ್ ಲೇಔಟ್ ಮೇಲ್ಸೇತುವೆ ಈಗಾಗ್ಲೇ ಕಲರ್‍ಫುಲ್ ಆಗಿವೆ. ಮೆಟ್ರೋ ನಿಗಮವೂ ಇವರ ಆಸಕ್ತಿಗೆ ಮನಸೋತು ಕಂಬಗಳನ್ನ ಬಿಟ್ಟುಕೊಟ್ಟಿದೆ. ಕೇವಲ ಮೇಲ್ಸೇತುವೆ ಮೆಟ್ರೋ ಕಂಬಗಳು ಮಾತ್ರವಲ್ಲ, ಅಲ್ಲಲ್ಲಿ ಕಸ ತುಂಬಿ ನಗರದ ಅಂದಗೆಡಿಸುತ್ತಿದ್ದ ಜಾಗಗಳೂ ಶುಚಿತ್ವ ಪಡೆದುಕೊಂಡಿವೆ . ಮಿನಿ ಡಂಪಿಂಗ್ ಯಾರ್ಡ್ ಅನಿಸಿಕೊಂಡು ಪಾದಾಚಾರಿಗಳಿಗೆ ನರಕವಾಗಿದ್ದ ಸ್ಥಳಗಳೂ ಕೂಡ ಈಗ, ವಾಹ್ ಎನ್ನುವಂತಾಗಿದೆ. ಹೀಗೆ ನಗರದಾದ್ಯಂತ ಇರುವ ಮೇಲ್ಸೇತುವೆ ಕಂಬಗಳು, ಮಿನಿ ಡಂಪಿಂಗ್ ಯಾರ್ಡ್‍ಗಳು ಅಚ್ಚರಿ ಮೂಡಿಸುವಂತೆ ಬದಲಾಗಿವೆ.

image


ಸಾರ್ವಜನಿಕರ ಸಪೋರ್ಟ್

ಬಿಬಿಎಂಪಿಯಿಂದ ಪೈಂಟಿಂಗ್ ಮಾಡಲು ಪರ್ಮಿಶನ್ ಪಡೆಯಲಾಗಿದೆ. ಹಾಗಂತ ಬಿಬಿಎಂಪಿ ಇವ್ರಿಗೆ ಹಣ ನೀಡಲ್ಲ. ಬದಲಾಗಿ ತಮ್ಮ ಸ್ವಇಚ್ಚೆಯಿಂದ ಹಣವನ್ನೂ ಸಂಗ್ರಹಿಸುತ್ತಾರೆ. ಅಂದಿಗೆ ಬೇಕಾಗಿರುವ ಪೈಂಟ್‍ಗೆ ಅಗತ್ಯವಿರುವಷ್ಟು ಹಣವನ್ನ ಅಲ್ಲಿ ಸೇರುವವರೇ ನೀಡ್ತಾರೆ. ಬೆಂಗಳೂರು ರೈಸಿಂಗ್ ಅನ್ನೋದು ಯಾರ ನಾಯಕತ್ವವೂ ಇಲ್ಲದ, ಖಾಯಂ ಸದಸ್ಯರೂ ಇಲ್ಲದ ಅನಾಮಿಕ ತಂಡ. ಇಂತಾ ದಿನ ಇಂತಾ ಒಂದು ಈವೆಂಟ್ ನಡೆಯತ್ತೆ. ಆಸಕ್ತರು ಭಾಗವಹಸಿಬಹುದು ಅಂತಾ, ಫೇಸ್‍ಬುಕ್ ಪೇಜ್‍ನಲ್ಲಿ ಅಥವಾ ವಾಟ್ಸಾಪ್‍ನಲ್ಲಿ ಒಂದು ಕರೆ ಕೊಟ್ರೆ ಸಾಕು ಕನಿಷ್ಟ ಐವತ್ತು ಮಂದಿ ಅಲ್ಲಿ ಹಾಜರಿರ್ತಾರೆ. ಬೆಂಗಳೂರು ರೈಸಿಂಗ್ ಎಷ್ಟರ ಮಟ್ಟಿಗೆ ಸಾರ್ವಜನಿಕರ ಮೇಲೆ ಪರಿಣಾಮ ಬೀರಿದೆ ಅಂದ್ರೆ, ಇವರು ಹೋಗುವ ಕಡೆಗಳಲ್ಲೆಲ್ಲಾ ಸ್ಥಳೀಯರು ಇವ್ರಿಗೆ ಸಾಥ್ ನೀಡ್ತಿದ್ದಾರೆ. ಮತ್ಯಾರೋ ಬಂದು, ನಮ್ಮ ಏರಿಯಾವನ್ನ ಇಷ್ಟು ಕ್ಲೀನ್ ಮಾಡ್ತಿರುವಾಗ ನಾವ್ಯಾಕೆ ಅವರೊಂದಿಗೆ ಕೈಜೋಡಿಸಬಾರದು ಅನ್ನೋ ಮನೋಭಾವ ಸ್ಥಳೀಯರಲ್ಲಿ ಮೂಡುತ್ತಿದೆ. ಹೀಗಾಗಿ, ಬೆಂಗಳೂರು ರೈಸಿಂಗ್ ಕೆಲಸ ಆರಂಭಿಸಿದ್ರೆ ಅಲ್ಲಿ ಸ್ಥಳೀಯರು ಸೇರಿ ನೂರಕ್ಕೂ ಹೆಚ್ಚು ಮಂದಿ ಒಟ್ಟಾಗಿ ಕೆಲಸ ಮಾಡ್ತಾರೆ. ಇದ್ರಿಂದ ಕೆಲಸವೂ ಬೇಗ ಆಗತ್ತೆ. ನಗರವೂ ಚೆಂದ ಕಾಣತ್ತೆ.

" ನಮ್ಮ ನಗರವನ್ನ ನಾವು ಸುಂದರವಾಗಿಡಲು ಪ್ರಯತ್ನಿಸಬೇಕು ಅದಕ್ಕಾಗಿ ನಮ್ಮ ಏರಿಯಾದಲ್ಲಿ ಮೊದಲು ಕೆಲಸ ಮಾಡಬೇಕು, ಇನ್ನೊಬ್ಬರ ನೆರವನ್ನ ಅಪೇಕ್ಷಿಸದೆ, ನಾವು ಮೊದಲು ಕೆಲಸ ಆರಂಭಿಸಿದ್ರೆ ಆ ನಂತ್ರ ಎಲ್ಲರೂ ನಮ್ಮ ಜೊತೆ ಕೈಜೋಡಿಸುತ್ತಾರೆ, ಈಗಾಗ್ಲೇ ನಾವು ಹಲವು ಭಾಗಗಳಲ್ಲಿ ಕೆಲಸ ಮಾಡಿದ್ದೇವೆ, ನಮ್ಮ ಪ್ರದೇಶವನ್ನ ಸ್ವಚ್ಛವಾಗಿ ನೋಡೋಕೆ ನಮಗೂ ಖುಷಿಯಾಗತ್ತೆ"
- ಹೆಸರು ಹೇಳಲು ಇಚ್ಚಿಸದ ಬೆಂಗಳೂರು ರೈಸರ್.

ಅಗ್ಲಿ ಇಂಡಿಯನ್ ಎನ್ನುವ ಅನಾಮಿಕ ತಂಡದಿಂದ ಸ್ಪೂರ್ತಿಪಡೆದು ಬೆಂಗಳೂರು ರೈಸಿಂಗ್ ಹುಟ್ಟಿಕೊಂಡಿದೆ. ಕಳೆದ ಐದು ವರ್ಷಗಳ ಹಿಂದೆ ಆರಂಭವಾದ ಅಗ್ಲಿ ಇಂಡಿಯನ್ ದೇಶದಾದ್ಯಂತ ಹೆಸರು ಪಡೆದುಕೊಂಡಿದ್ರೆ, ಕಳೆದ ಒಂದೂವರೆ ವರ್ಷಗಳಿಂದಷ್ಟೇ ಕೆಲಸ ಮಾಡ್ತಿರುವ ಬೆಂಗಳೂರು ರೈಸಿಂಗ್ ಹೆಚ್ಚಾಗಿ ಯುವಜನತೆಯನ್ನ ತನ್ನತ್ತ ಸೆಳೆಯುತ್ತಿದೆ.

ಇದನ್ನು ಓದಿ:

1. ಕ್ರೇಝಿ ವೀಡಿಯೋಗಳಿಗೆ ಸ್ಪೆಷಲ್​ ಟಚ್​- 360° ವೀಡಿಯೋ ಈಗ ಸಖತ್​ ಫೇಮಸ್​

2. ಪೂಜಾ ಐಟಂಗಳ ಬಗ್ಗೆ ಟೆನ್ಷನ್​ ಬಿಟ್ಟುಬಿಡಿ- ರೆಡಿಪೂಜಾ.ಕಾಂನಲ್ಲಿ ಆರ್ಡರ್​ ಮಾಡಿ..!

3. ಟೇಸ್ಟಿ "ಟೀ" ಮ್ಯಾಜಿಕ್​- ಒಂದೇ ಕಪ್​ ಚಹಾದಲ್ಲಿ ಸಿಗುತ್ತೆ ಉತ್ಸಾಹದ ಕಿಕ್​..!