ಪೋಷಕರಿಗೆ ಸಹಕಾರಿಯಾಗಿ ನಿಂತ ಕಿಡ್ಸ್ ಸ್ಟಾಪ್ ಪ್ರೆಸ್.ಕಾಮ್

ಟೀಮ್​ ವೈ.ಎಸ್​​.

0

ಮಾನ್ಸಿ ಝವೇರಿ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಗ ಎಷ್ಟು ಸಂತೋಷಗೊಂಡಿದ್ದರೋ ಅಷ್ಟೇ ಆತಂಕಿತರಾಗಿದ್ದರು. ಅವರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡಿದ್ದವು. ಮಗುವಿನ ಆರೋಗ್ಯ ಹದಗೆಟ್ಟರೆ ಅದು ನನಗೆ ತಿಳಿಯುತ್ತದೆಯೇ? ಮಗುವಿಗೆ ಆಹಾರ ನೀಡುವುದರಲ್ಲಿ ಹೆಚ್ಚು ಕಡಿಮೆ ಆಗಿಬಿಟ್ಟರೆ ಏನು ಮಾಡುವುದು? ಮನೆ ಹಾಗೂ ಆಫೀಸ್ ಎರಡನ್ನೂ ಸಂಭಾಳಿಸಬಲ್ಲೆನೆ ಎಂಬ ಆತಂಕ ಮೂಡಿತ್ತು ಎನ್ನುತ್ತಾರೆ ಮಾನ್ಸಿ ಝವೇರಿ.

ಮಾನ್ಸಿ ಝವೇರಿ

ಮಗು ಜನಿಸಿದ ಮೇಲೆಯೂ ತಾವು ಮಗುವಿನ ಕುರಿತು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೋ ಇಲ್ಲವೋ ಎಂಬುದನ್ನು ಚಿಂತಿಸುತ್ತಿದ್ದರು. ಇಬ್ಬರು ಮಕ್ಕಳು, ನೆಮ್ಮದಿಯ ಕೆಲಸ, ಗಂಟೆಗಟ್ಟಲೆ ಕೆಲಸ, ಮಕ್ಕಳೊಂದಿಗೆ ಪಾರ್ಕ್‌ನಲ್ಲಿ ಆಟ, ಅನೇಕ ತಾಯಂದಿರ ಭೇಟಿ ಮತ್ತು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಾ ತಾನೊಬ್ಬ ತಾಯಿಯಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಆತ್ಮವಿಶ್ವಾಸದಿಂದ ಯೋಚಿಸಲು ಪ್ರಯತ್ನಿಸುತ್ತಿದ್ದರು.

ಕಲಿಯುವಿಕೆಯ ಹಂತದಲ್ಲಿ ಪ್ರತಿ ಪೋಷಕರು ಇದೇ ಪರಿಸ್ಥಿತಿಯನ್ನು ಎದುರಿಸುತ್ತಾರೆ ಎಂಬುದನ್ನು ಮಾನ್ಸಿ ಮನಗಂಡಿದ್ದರು. ಅಂತಹ ಪೋಷಕರಿಗೆ ನೆರವಾಗಲು ಮಾನ್ಸಿ ನಿರ್ಧರಿಸಿದರು. ಹೀಗಾಗಿ ಕಿಡ್ಸ್ ಸ್ಟಾಪ್ ಪ್ರೆಸ್.ಕಾಮ್ ಎಂಬ ವೆಬ್‌ಸೈಟ್ ಅನ್ನು ಆರಂಭಿಸಿದರು. ಈ ವೆಬ್‌ಸೈಟ್‌ನಲ್ಲಿ ಮಕ್ಕಳ ಬಗ್ಗೆ ತೆಗೆದುಕೊಳ್ಳಬಹುದಾದ ಸರಿಯಾದ ನಿರ್ಧಾರಗಳ ಕುರಿತು ಮಾಹಿತಿ ನೀಡುತ್ತದೆ.

ಮಗುವಿನ ಜೀವನ, ಆಹಾರ, ಪ್ರಯಾಣ, ಚಟುವಟಿಕೆಗಳು, ಕಾರ್ಯಕ್ರಮಗಳು, ಸೇವೆ ಅಥವಾ ಶಾಪಿಂಗ್ ಬಗ್ಗೆ ಸರಿಯಾದ ಮಾಹಿತಿ ನೀಡುತ್ತದೆ ಕಿಡ್ಸ್ ಸ್ಟಾಪ್ ಪ್ರೆಸ್.ಕಾಮ್. ಅಲ್ಲದೇ ಇಲ್ಲಿ ಪೋಷಕರು ತಮ್ಮ ಅನುಭವಗಳನ್ನೂ ಸಹ ಹಂಚಿಕೊಳ್ಳುವ ಅವಕಾಶ ಇದೆ.

“ನನ್ನ ಮಗುವಿಗೆ ಏನೇನು ಒಳ್ಳೆಯದು ಎಂಬುದನ್ನು ಹುಡುಕುತ್ತಾ ಹೋದಂತೆ, ನನ್ನ ಮಗುವಿನ ಬಗ್ಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತೊಬ್ಬ ತಾಯಿಯೇ ನನಗೆ ಮಾರ್ಗದರ್ಶಿಯಾಗಬಹುದೇ ಹೊರತು ಇನ್ನಾರೂ ಅಲ್ಲ ಎಂಬುದನ್ನು ನಾನು ಮನಗಂಡೆ” ಎನ್ನುತ್ತಾರೆ ಮಾನ್ಸಿ.

ಇದು ಕೇವಲ ತಾಯಂದಿರ ಬ್ಲಾಗ್ ಅಲ್ಲ

ಮಕ್ಕಳನ್ನು ಬೆಳೆಸುವುದು ಮತ್ತು ಬೆಳೆಸುತ್ತಾ ಮೋಜಿನ ಅನುಭವ ಪಡೆಯುವುದರ ಕುರಿತು ಈ ವೆಬ್‌ಸೈಟ್‌ನಲ್ಲಿ ತಿಳಿಸುವುದು ಮಾನ್ಸಿಯವರ ಚಿಂತನೆಯಾಗಿತ್ತು. ಈ ಬಗ್ಗೆ ಆನ್‌ಲೈನ್‌ನಲ್ಲಿ ಬಹಳಷ್ಟು ಮಾಹಿತಿ ಸಿಕ್ಕುತ್ತವೆ. ಆದರೆ ಅದ್ಯಾವುದೂ ಭಾರತದ ವಾತಾವರಣಕ್ಕೆ ಹೊಂದಿಕೆಯಾಗುವುದಿಲ್ಲ. ಇಲ್ಲಿ ಪ್ರತಿಯೊಂದು ನಗರವೂ ತನ್ನದೇ ಆದ ಸವಾಲನ್ನು ಎದುರಿಸುತ್ತಿದೆ. ಪೂರ್ಣಕಾಲಿಕ ವೃತ್ತಿ ಮಾಡುತ್ತಿರುವವರಿಗೆ ಮಕ್ಕಳ ಒಳಿತು ಕೆಡುಕುಗಳ ಕುರಿತು ಬೇರೆ ತಾಯಂದಿರು ಏನು ಹೇಳುತ್ತಾರೆ ಎಂದು ತಿಳಿಯುವುದು ಕಷ್ಟಕರ. ಹೀಗಾಗಿ ತಂತ್ರಜ್ಞಾನ ಮೊರೆ ಹೋಗುವುದು ಅನಿವಾರ್ಯ. ಇದರಿಂದ ವೃತ್ತಿ ಜೀವನ ಹಾಗೂ ಸಾಂಸಾರಿಕ ಜೀವನವೆರಡನ್ನೂ ಸರಿದೂಗಿಸಿಕೊಂಡು ಹೋಗಬಹುದು ಎನ್ನುವುದು ಮಾನ್ಸಿಯವರ ಅಭಿಪ್ರಾಯ.

ರೆಸ್ಟೋರೆಂಟ್‌ಗಳು, ಚಲನಚಿತ್ರಗಳು, ಕಚೇರಿಗಳು ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ಮತ್ತು ಸೇವೆ ಒದಗಿಸುವ ಅನೇಕ ಸಂಸ್ಥೆಗಳಿವೆ. ಆದರೆ ಹೊಸ ಉದ್ಯಾನವನದ ಬಗ್ಗೆ ಮಾಹಿತಿ, ಫ್ಲೆಮಿಂಗೋ ಹಕ್ಕಿಗಳ ಆಗಮನ, ದೆಹಲಿಯ ಮಕ್ಕಳ ಮ್ಯೂಸಿಯಂನಲ್ಲಿ ಯಾವ ಕಾರ್ಯಕ್ರಮವಿದೆ, ರಾಣಿಬಾಗ್‌ನಲ್ಲಿ ಮಕ್ಕಳು ಏನೇನು ಆಡಬಹುದು, ಬೈಕುಲ್ಲಾ ಮೃಗಾಲಯ, ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್‌ನಂತಹ ವಿಚಾರಗಳ ಬಗ್ಗೆ ಯಾರೂ ತಿಳಿಸಿಕೊಡುವುದಿಲ್ಲ. ಆದರೆ ಕಿಡ್ಸ್ ಸ್ಟಾಪ್ ಪ್ರೆಸ್.ಕಾಮ್‌ನಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಗುವುದು ಎನ್ನುತ್ತಾರೆ ಮಾನ್ಸಿ.

ತಮಾಷೆಯಲ್ಲ!

ತಮ್ಮ ಮೊದಲ ಮಗು ಹುಟ್ಟಿದ 2 ವರ್ಷಗಳ ಬಳಿಕ ಅಂದರೆ 2011ರ ಜೂನ್‌ನಲ್ಲಿ ಮುಂಬೈನಲ್ಲಿ ಕಿಡ್ಸ್ ಸ್ಟಾಪ್ ಪ್ರೆಸ್.ಕಾಮ್ ಆರಂಭಿಸಿದರು ಮಾನ್ಸಿ. ನಂತರ ಅಲ್ಲಿನ ಬ್ಲಾಗ್ ವಿಭಾಗದ ಮುಖ್ಯಸ್ಥೆಯಾದರು. ಇದಕ್ಕೂ ಮೊದಲು ಮಾನ್ಸಿ, ಫ್ರೆಂಚ್ ಕನೆಕ್ಷನ್ ಎಂಬ ಸಂಸ್ಥೆಯಲ್ಲಿ ಜಾಹೀರಾತು ಮತ್ತು ಬ್ರಾಂಡಿಂಗ್, ಚಿಲ್ಲರೆ ವಹಿವಾಟು ಮತ್ತು ಲೈಫ್ ಸ್ಟೈಲ್, ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದ ಮುಖ್ಯಸ್ಥೆಯಾಗಿ 8 ವರ್ಷಗಳ ಅನುಭವ ಹೊಂದಿದ್ದರು. ಆದರೆ ವೆಬ್‌ಸೈಟ್ ಒಂದನ್ನು ಹುಟ್ಟುಹಾಕುವುದು ಅವರಿಗೆ ಹೊಸ ಅನುಭವವಾಗಿತ್ತು. ಅಲ್ಲದೇ ಸವಾಲಿನ ಕೆಲಸವೂ ಆಗಿತ್ತು.

ತಾಯಂದಿರ ಬ್ಲಾಗ್ ಅಥವಾ ಬೇಬಿಸೆಂಟರ್ ಆಗುವುದಕ್ಕಿಂತ ಹೆಚ್ಚಾಗಿ ಕಿಡ್ಸ್ ಸ್ಟಾಪ್ ಪ್ರೆಸ್.ಕಾಮ್ ಮಕ್ಕಳ ಜೀವನ ಶೈಲಿಗಾಗಿ ಬಂದಿರುವ ನೂತನ ಬ್ರಾಂಡ್‌ಗಳು, ಸೇವೆ, ಕಾರ್ಯಕ್ರಮಗಳು ಕುರಿತು ಮಾಹಿತಿ ನೀಡುತ್ತಿದೆ.

ಆನ್‌ಲೈನ್ ಮತ್ತು ಡಿಜಿಟಲ್ ಮೀಡಿಯಾಗಳಲ್ಲಿ ಬ್ರಾಂಡ್‌ಗಳ ಮಾಲೀಕರು ಮತ್ತು ಸೇವೆಗಳ ವಿಚಾರದಲ್ಲಿ ವ್ಯತ್ಯಾಸವಿರುತ್ತದೆ. ಇವು ಉದ್ಯಮಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಇದರ ಕುರಿತು ಮಾಹಿತಿ ಸಂಗ್ರಹಿಸುವುದು ಅತೀ ಕಷ್ಟಕರವಾದ ಕೆಲಸ ಎನ್ನುತ್ತಾರೆ ಮಾನ್ಸಿ.

ಇಂದು ಅವುಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಪಡೆಯಬಹುದಾದ ಅವಕಾಶ ಇದೆ. ಈಗ ಬ್ರಾಂಡ್‌ಗಳ ಮಾಲೀಕರೂ ಸಹ ಆನ್‌ಲೈನ್‌ ವ್ಯವಸ್ಥೆಯ ಪ್ರಸ್ತುತತೆಯನ್ನು ಅರ್ಥಮಾಡಿಕೊಂಡಿದ್ದಾರೆ. ಆನ್‌ಲೈನ್ ಮೂಲಕ ಯಾವುದೇ ಅಪ್‌ಡೇಟ್‌ಗಳ ಕ್ಷಿಪ್ರ ಪ್ರಚಾರ ಮತ್ತು ಉತ್ಪನ್ನಗಳನ್ನು ವಿಸ್ತಾರವಾಗಿ ಹಂಚಲು ಸಾಧ್ಯ ಎಂಬುದನ್ನು ಮನಗಂಡಿದ್ದಾರೆ.

ಕಳೆದ 2 ವರ್ಷಗಳಲ್ಲಿ ಕಿಡ್ಸ್ ಸ್ಟಾಪ್ ಪ್ರೆಸ್.ಕಾಮ್, ಯುವ ಮತ್ತು ಉತ್ಸಾಹಿ ಜನರ ತಂಡವನ್ನೇ ಹೊಂದಿದೆ. ಇವರಲ್ಲಿ ಅರೆಕಾಲಿಕ ಹಾಗೂ ಪೂರ್ಣಕಾಲಿಕ ಉದ್ಯೋಗಿಗಳೂ ಸೇರಿದ್ದಾರೆ.

ಕಿಡ್ಸ್ ಸ್ಟಾಪ್ ಪ್ರೆಸ್.ಕಾಮ್‌ಗೆ ಮೊದಲು ಕೇವಲ 100 ಮಂದಿ ಭೇಟಿ ನೀಡುತ್ತಿದ್ದರು. ಈಗ ಈ ಸಂಖ್ಯೆ 60,000 ಮಂದಿಗೆ ಏರಿಕೆಯಾಗಿದೆ. ತಿಂಗಳಿನಲ್ಲಿ1,20,000ಕ್ಕೂ ಹೆಚ್ಚು ಜನರು ಇವರ ವೆಬ್‌ಸೈಟ್‌ ನೋಡುತ್ತಿದ್ದು, ಇವರಲ್ಲಿ ಶೇ.35ರಷ್ಟು ಪುನಃ ಭೇಟಿ ನೀಡುತ್ತಿದ್ದಾರೆ.

ಕಿಡ್ಸ್ ಸ್ಟಾಪ್ ಪ್ರೆಸ್.ಕಾಮ್ ವಿವಿಧ ನಗರಗಳ ಅನೇಕ ಮಕ್ಕಳ ಕಾರ್ಯಕ್ರಮಗಳಿಗೆ ಆಫ್‌ಲೈನ್ ಸಹಭಾಗಿಗಳೂ ಆಗಿದ್ದಾರೆ. ಅನೇಕ ಬ್ರಾಂಡ್‌ಗಳು ಮತ್ತು ಸೇವೆಗಳು ಕಿಡ್ಸ್ ಸ್ಟಾಪ್ ಪ್ರೆಸ್.ಕಾಮ್‌ ಸಂಸ್ಥೆಯೊಂದಿಗೆ ಸೇರಿದ್ದಾರೆ ಮತ್ತು ಮಕ್ಕಳ ವಸ್ತುಗಳ ಉತ್ಪನ್ನಗಳ ಉದ್ಯಮದ ಕುರಿತು ಕಿಡ್ಸ್ ಸ್ಟಾಪ್ ಪ್ರೆಸ್.ಕಾಮ್‌ನ ಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ. 2012ರ ದೀಪಾವಳಿಯಲ್ಲಿ ಮೊದಲ ಬಾರಿಗೆ ಬಜಾರ್ ಎಂಬ ಮಕ್ಕಳ ಉತ್ಪನ್ನಗಳ ಪ್ರದರ್ಶನವನ್ನೂ ಏರ್ಪಡಿಸಿದ್ದರು. ಇದೇ ಪ್ರದರ್ಶನ 2013ರಲ್ಲೂ ನಡೆದಿತ್ತು. ಬೇಸಿಗೆ ಶಿಬಿರಗಳು, ಹಾಲೂಡಿಸುವುದರ ಮಹತ್ವ ಸೇರಿದಂತೆ ಹಲವು ವಿಚಾರಗಳ ಕುರಿತು ಪೋಷಕರಿಗೆ ಮಾಹಿತಿ ನೀಡುತ್ತಿದೆ ಕಿಡ್ಸ್ ಸ್ಟಾಪ್ ಪ್ರೆಸ್.ಕಾಮ್.

ಕಿಡ್ಸ್ ಸ್ಟಾಪ್ ಪ್ರೆಸ್.ಕಾಮ್‌ನಿಂದ ಪಡೆದ ಮಾಹಿತಿ ಮತ್ತು ವಸ್ತುನಿಷ್ಠ ತೀರ್ಮಾನಗಳಿಂದ ತಮಗೆ ಹೇಗೆ ಸಹಾಯವಾಯಿತು ಎಂದು ತಾಯಂದಿರು ಹೇಳುವುದೇ ತಮಗೆ ಸಲ್ಲುವ ಗೌರವ, ಬಹುಮಾನ ಎಂದು ಹೆಮ್ಮೆಯಿಂದ ನಗುತ್ತಾರೆ ಮಾನ್ಸಿ.