ಹೆಲ್ತ್ ಅಶ್ಯೂರ್ ! ಕಾರ್ಪೋರೇಟ್ ಉದ್ಯೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ..

ಟೀಮ್ ವೈ ಎಸ್

1

ನವ್ಯೋದ್ಯಮಗಳಾದ ಪ್ರಾಕ್ಟೋ ಮತ್ತು ಲಿಬ್ರೇಟ್ ಗಳು ವೈದ್ಯರನ್ನು ಆಯ್ಕೆ ಮಾಡಿಕೊಂಡು ಅಪಾಯಿಂಟ್ ಮೆಂಟ್ ಪಡೆಯಲು ನೆರವಾಗುತ್ತಿವೆ. ಆದರೆ, ಹೆಲ್ತ್ ಅಶ್ಯೂರ್ ಕಾರ್ಪೊರೇಟ್ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತದೆ. ಮತ್ತೊಂದೆಡೆ ಆಸ್ಪತ್ರೆಗಳು ಮತ್ತು ವಿಮಾ ಸಂಸ್ಥೆಗಳ ಜೊತೆಗೂ ಒಡಂಬಡಿಕೆ ಮಾಡಿಕೊಳ್ಳುತ್ತದೆ.

ಡಚ್ ಬ್ಯಾಂಕ್ ಮೊದಲಾದ ಗ್ರಾಹಕರ ಜೊತೆ ಒಪ್ಪಂದ ಮಾಡಿಕೊಂಡಿರುವ ಸಂಸ್ಥೆ, ಅವರ ಆರೋಗ್ಯ ಸಂಬಂಧಿ ಕೆಲಸಗಳನ್ನು ನೋಡಿಕೊಳ್ಳುತ್ತಿದೆ. ಅಲ್ಲಿನ ಮಾನವ ಸಂಪನ್ಮೂಲ ವಿಭಾಗವು ಈ ಸಂಸ್ಥೆ ಮೂಲಕ ಲಭ್ಯವಿರುವ ಆರೋಗ್ಯ ಸೇವೆಗಳ ಲಾಭವನ್ನು ತಮ್ಮ ಉದ್ಯೋಗಿಗಳಿಗೆ ಒದಗಿಸಲು ಯತ್ನಿಸುತ್ತಿದೆ.

ವಿಮಾ ಸಂಸ್ಥೆಗಳು ತೃತೀಯ ಏಜೆನ್ಸಿಗಳಾಗಿ ಕೆಲಸ ಮಾಡುತ್ತಿವೆ. ಹೆಲ್ತ್ ಅಶ್ಯೂರ್ ವೇದಿಕೆ ಮೂಲಕ ಯಾವುದೇ ಗ್ರಾಹಕರು ಆರೋಗ್ಯ ಅಥವಾ ಜೀವವಿಮೆ ಬಯಸಿದರೆ, ಇದರ ಪಾಲುದಾರರಾದ ಅಪೋಲೋ ಮ್ಯೂನಿಕ್, ರೆಲಿಗೇರ್, ಅಥವಾ ಸಿಗ್ನಾ ಸಂಸ್ಥೆಗಳು ಮಾಹಿತಿಯನ್ನು ಸಂಗ್ರಹಿಸಿ, ಹೆಲ್ತ್ ಅಶ್ಯೂರ್ ಸಂಸ್ಥೆಗೆ ನೀಡುತ್ತವೆ.

ವಿಭಿನ್ನ ಹಾದಿಯಲ್ಲಿ ಹೊಸ ಪಯಣ..

ಆ ಬಳಿಕ ಹೆಲ್ತ್ಅಶ್ಯೂರ್ ತಂಡವು, ಗ್ರಾಹಕರು ಕಡ್ಡಾಯವಾಗಿ ಮಾಡಬೇಕಾದ ತಪಾಸಣೆ ಮತ್ತು ಆರೋಗ್ಯ ಪರಿಶೀಲನೆಗಳನ್ನು ಮಾಡಿಕೊಳ್ಳಲು ಸಹಾಯ ನೀಡುತ್ತದೆ. ಹೆಲ್ತ್ ಅಶ್ಯೂರ್ ಸಂಸ್ಥೆಯು ದೇಶಾದ್ಯಂತ 800 ನಗರಗಳ 2000 ಆರೋಗ್ಯ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

ತಮ್ಮ ಸೇವಾ ಶೈಲಿಯ ಬಗ್ಗೆ ಹೆಲ್ತ್ಅಶ್ಯೂರ್ ನ ಸಂಸ್ಥಾಪಕ ಮತ್ತು ಸಿಇಒ 45 ವರ್ಷದ ವರುಣ್ ಗೆರಾ ಅವರು ಉದಾಹರಣೆಯೊಂದನ್ನು ನೀಡುತ್ತಾರೆ. ತಮ್ಮ ಜೊತೆ ಒಪ್ಪಂದ ಹೊಂದಿರುವ ಜಾಲಂಧರ್ ನಲ್ಲಿರುವ ಕಂಪನಿಯೊಂದರ ಮಹಿಳೆಯೊಬ್ಬರು ಎಕ್ಸ್-ರೇ, ಇಸಿಜಿ,ಎಂಆರ್ಐ ಸ್ಕ್ಯಾನ್ ಮಾಡಿಸಿಕೊಳ್ಳಲು ಹಾಗೂ ಭಾನುವಾರ ಡಯೆಟೀಷಿಯನ್ ರನ್ನು ಭೇಟಿ ಮಾಡಲು ಬಯಸುತ್ತಾರೆ. ಅಂತಹ ಸಂದರ್ಭದಲ್ಲಿ ಹೆಲ್ತ್ ಅಶ್ಯೂರ್, ಭಾನುವಾರ ತೆರೆದಿರುವ ಹಾಗೂ ಮಹಿಳಾ ಟೆಕ್ನೀಷಿಯನ್ ಹೊಂದಿರುವ ಲ್ಯಾಬ್ಅನ್ನು ತಮ್ಮ ಗ್ರಾಹಕರಿಗೆ ಪರಿಚಯಿಸುತ್ತದೆ.

ಹೆಲ್ತ್ ಅಶ್ಯೂರ್ ಜೊತೆಗೆ ಆರೋಗ್ಯ ಸಂಸ್ಥೆಗಳು ಮತ್ತು ವೈದ್ಯರು ಸಹಭಾಗಿತ್ವ ಹೊಂದಿರುವುದರಿಂದ, ವೈದ್ಯರು ಲಾಗಿನ್ ಆಗಿ ರೋಗಿಗಳ ಮಾಹಿತಿಯನ್ನು ಪರಿಶೀಲಿಸಬಹುದು. ಈ ದತ್ತಾಂಶದಲ್ಲಿ ವಿವಿಧ ಪರೀಕ್ಷೆಗಳ ಫಲಿತಾಂಶಗಳನ್ನೂ ಅಪ್ಲೋಡ್ ಮಾಡಲಾಗುತ್ತದೆ. ಇದನ್ನು ಆಧರಿಸಿ, ಇನ್ಷುರೆನ್ಸ್ ಕಂಪನಿಗಳು ಮುಂದಿನ ಕೆಲಸ ಮಾಡುತ್ತವೆ. ಇದರಿಂದ ವಂಚನೆಯನ್ನು ತಪ್ಪಿಸಲಾಗುತ್ತಿದೆ.

ಆರೋಗ್ಯ ವಿಮಾ ಕ್ಷೇತ್ರದ ಪ್ರತಿನಿಧಿಯೊಬ್ಬರು ಈ ಸೇವೆಯನ್ನು ತುಂಬಾ ಶ್ಲಾಘಿಸುತ್ತಾರೆ. ಹೆಲ್ತ್ ಅಶ್ಯೂರ್ ಜೊತೆ ಕೆಲಸ ಮಾಡುವುದು ಒಳ್ಳೆಯ ಅನುಭವ. ನಾವು ಇವರ ಮೂಲಕ ಕೇವಲ ರೋಗಿಗಳ ಮೂಲಭೂತ ಮಾಹಿತಿಯನ್ನಷ್ಟೇ ಪಡೆಯುತ್ತಿಲ್ಲ. ಜೊತೆಗೆ, ಮಾಹಿತಿ ತಂತ್ರಜ್ನಾನದ ಲಾಭಗಳನ್ನೂ ಪಡೆಯುತ್ತಿರುವುದರಿಂದ ವಹಿವಾಟು ನಡೆಸುವುದು ಒಳ್ಳೆಯ ಅನುಭವ ಕೊಡುತ್ತಿದೆ ಎನ್ನುತ್ತಾರೆ ಅವರು.

ಆರಂಭ :

ಯುನೈಟೆಡ್ ಹೆಲ್ತ್ ಕೇರ್ ಇಂಡಿಯಾದಲ್ಲಿ ಸಿಇಒ ಆಗಿ ಕೆಲಸ ಮಾಡುತ್ತಿದ್ದಾಗ ವರುಣ್ ಅವರಿಗೆ ಭಾರತದ ಆರೋಗ್ಯ ಕ್ಷೇತ್ರದಲ್ಲಿರುವ ಪ್ರಾಥಮಿಕ ಸಮಸ್ಯೆಗಳ ಅರಿವಾಗಿತ್ತು.

ಯುನೈಟೆಡ್ ಹೆಲ್ತ್ ಕೇರ್ ಇಂಡಿಯಾದಲ್ಲಿ ಸಹೋದ್ಯೋಗಿಗಳಾಗಿದ್ದ ನಿನಾದ್ ರಾಜೇ, ಡೆಲ್ಲಿ ಡಿಸೋಜಾ ಹಾಗೂ ಸತೀಶ್ ಪ್ರಭು ಅವರು ಬಹುತೇಕ ಆರೋಗ್ಯ ವಿಮೆಗಳು ವಿಶೇಷ ಮತ್ತು ನಿರ್ದಿಷ್ಟ ಆರೋಗ್ಯ ವಿಚಾರಗಳನ್ನು ಗುರಿಯಾಗಿಸುತ್ತಿವೆ. ನೀವು ಆಸ್ಪತ್ರೆಗೆ ಪ್ರತಿದಿನ ಹೋಗದೇ ಇರಬಹುದು, ಆದರೆ ಕನಿಷ್ಠ 2 ತಿಂಗಳಿಗೆ ಒಮ್ಮೆಯಾದರೂ ನೀವು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುತ್ತೀರಿ. ಭಾರತದಲ್ಲಿ ಪ್ರಾಥಮಿಕ ಆರೋಗ್ಯ ಮಾರುಕಟ್ಟೆಯ ಮೌಲ್ಯ 80-90 ಶತಕೋಟಿ ಡಾಲರ್ ಗಳಷ್ಟಿದೆ ಎನ್ನುತ್ತಾರೆ ವರುಣ್. ಅವರು 2011ರಲ್ಲಿ ಈ ಸಂಸ್ಥೆ ಸ್ಥಾಪಿಸಿದರು. ರಕ್ತ ಪರೀಕ್ಷೆ, ರೇಡಿಯಾಲಜಿ, ಡಯಾಗ್ನಾಸ್ಟಿಕ್, ಎಂಆರ್ಐ, ಇಸಿಜಿ, ಸೇರಿದಂತೆ ಹಲವು ಸೇವೆಗಳು ಪ್ರಾಥಮಿಕ ಸೇವೆಗಳ ಪಟ್ಟಿಯಲ್ಲಿ ಬರುತ್ತವೆ.

ಸಂಸ್ಥೆ ಸ್ಥಾಪಿಸುವಾಗಲೇ ಇವು ತಮ್ಮ ಕಾರ್ಯಕ್ಷೇತ್ರವನ್ನೂ ನಿರ್ಧರಿಸಿದ್ದರು. ಬಿ2ಬಿ ವಹಿವಾಟು ಮಾಡಲು ಆರಂಭಿಸಿದ ಇವರು ಆರಂಭದಲ್ಲ ತಮ್ಮ ಜಾಲ ಹಾಗೂ ದತ್ತಾಂಶ ಹೆಚ್ಚಿಸಲು ಗಮನ ಕೊಟ್ಟರು. ಒಪ್ಪಂದಗಳು ಹಾಗೂ ನಮ್ಮ ಸೇವೆಯ ಲಾಭಗಳಿಂದಾಗಿ, ನಮ್ಮ ದತ್ತಾಂಶವು ಕೇವಲ ಡೈರಕ್ಟರಿಯಾಗಿ ಉಳಿದಿಲ್ಲ. ಪ್ರತಿ ಸಂಸ್ಥೆಗೂ ನಾವು ಗುಣಮಟ್ಟದ ವೈದ್ಯರು ಹಾಗೂ ಗುಣಮಟ್ಟದ ಆರೋಗ್ಯ ಸಂಸ್ಥೆಗಳನ್ನು ಕಲ್ಪಿಸುತ್ತಿದ್ದೇವೆ ಎನ್ನುತ್ತಾರೆ ವರುಣ್.

ಉದ್ಯಮಿಯಾಗುವ ಹಾದಿಯಲ್ಲಿ..

ಉದ್ಯಮಿಯಾಗುವ ತಮ್ಮ ಹಾದಿಯಲ್ಲಿ ವರುಣ್ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ನೀವು ಉದ್ಯೋಗಿಯಾಗಿ ತರಬೇತಿ ಪಡೆದಿರುತ್ತೀರಿ. ಆದರೆ, ಉದ್ಯಮಿಯಾಗಿ ನಿರ್ವಹಿಸುವುದು ಕಠಿಣ ಕೆಲಸ. ಉದ್ಯಮಿಯಾಗಿ ನೀವು ಶೂನ್ಯದಿಂದ ಎಲ್ಲವನ್ನೂ ಆರಂಭಿಸಬೇಕಾಗುತ್ತದೆ. ಎಲೆಕ್ಟ್ರೀಷಿಯನ್, ಪ್ಲಂಬರ್, ತಂಡದ ಸದಸ್ಯ, ನಿಮ್ಮ ಗ್ರಾಹಕ ಹೀಗೆ ಎಲ್ಲರನ್ನೂ ಖುದ್ದಾಗಿ ನಿಭಾಯಿಸಬೇಕಾಗುತ್ತದೆ. ಆರಂಭದಲ್ಲಿ ಇವನ್ನೆಲ್ಲಾ ನಿಭಾಯಿಸುವುದು ಕಷ್ಟದ ಕೆಲಸ ಎನ್ನುತ್ತಾರೆ ವರುಣ್

ಹೆಲ್ತ್ಅಶ್ಯೂರ್ ಕೇಂದ್ರೀಕೃತ ಮಾದರಿಯ ಕಾರ್ಯವಿಧಾನ ಅನುಸರಿಸುತ್ತಿದೆ. ದೇಶಾದ್ಯಂತ ಇರುವ ಎಲ್ಲಾ ಕೇಂದ್ರಗಳೂ ಮುಖ್ಯಕಚೇರಿ ಹಾಗೂ ಕಾಲ್ಸೆಂಟರ್ ಜೊತೆ ಸಂಪರ್ಕ ಹೊಂದಿವೆ. ಇದೇ ತಳಹದಿಯ ಮೇಲೆ ಸಂಸ್ಥೆಯನ್ನು ಕಟ್ಟಲಾಗಿದೆ.

ವಾರ್ಷಿಕ ವಹಿವಾಟು ದ್ವಿಗುಣಗೊಳ್ಳುತ್ತಿದೆ ಎಂದು ಸಂಸ್ಥೆ ಹೇಳುತ್ತದೆ. ಆದರೆ, ಆದಾಯದ ಬಗ್ಗೆ ಮಾತ್ರ ಗುಟ್ಟುಬಿಟ್ಟುಕೊಡುತ್ತಿಲ್ಲ. ಹೆಲ್ತ್ ಅಶ್ಯೂರ್ ಚಂದಾ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಪ್ರತಿಯೊಂದು ಪ್ರಕರಣದಲ್ಲಿ 20% ಚಾರ್ಜ್ ಮಾಡುತ್ತದೆ. ಇವರು ಪ್ರತಿ ತಿಂಗಳೂ ಕನಿಷ್ಟ 15,000 ಪ್ರಕರಣಗಳನ್ನು ನಿಭಾಯಿಸುತ್ತಿದ್ದಾರೆ. ಆರಂಭದಲ್ಲಿ ರಾಹುಲ್ ಗಾರ್ಗ್ ಅವರಿಂದ ಬಂಡವಾಳ ಪಡೆದ ಸಂಸ್ಥೆ ಇದೀಗ ಸುಮಾರು 7 ಮಿಲಿಯನ್ ಡಾಲರ್ ಹೂಡಿಕೆಯನ್ನು ಎದುರು ನೋಡುತ್ತಿದೆ.

ಭಾರತದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯ ಮೌಲ್ಯ 2020ರ ವೇಳೆಗೆ ಸುಮಾರು 280 ಶತಕೋಟಿ ಡಾಲರ್ ತಲುಪುವ ನಿರೀಕ್ಷೆ ಇದೆ. ಜಾಗತಿಕ ಮಟ್ಟದಲ್ಲಿ ಸುಮಾರು 7,500ಕ್ಕೂ ಹೆಚ್ಚು ನವ್ಯೋದ್ಯಮಗಳು ಡಿಜಿಟಲ್ ಆರೋಗ್ಯ ಸೇವೆ ನೀಡುತ್ತಿವೆ.

ಭಾರತದಲ್ಲೂ ಇದರ ಗಾಳಿ ಬಲವಾಗಿ ಬೀಸುತ್ತಿದೆ. ಈ ಕ್ಷೇತ್ರದ ಬೆಳವಣಿಗೆ 33.8% ಎಂದು ಅಂದಾಜಿಸಲಾಗಿದೆ. ಏಷ್ಯಾದ ಮಾರುಕಟ್ಟೆಯಲ್ಲೂ ಭಾರತ ಮತ್ತು ಜಪಾನ್ಗಳ ಹೆಲ್ತ್ಕೇರ್ ಌಪ್ಗಳು ಹೆಚ್ಚು ವಿಶ್ವಾಸಾರ್ಹತೆ ಗಳಿಸಿವೆ. ಹೊಸ ಹೆಲ್ತ್ ಕೇರ್ ಸಂಸ್ಥೆಗಳಿಗೆ ಗ್ರಾಹಕರನ್ನು ಪಡೆಯುವುದೇ ದೊಡ್ಡ ಸವಾಲಾಗಿದೆ . ಇಂತಹದ್ದರಲ್ಲಿ, ಹೆಲ್ತ್ಅಶ್ಯೂರ್ ಕಾರ್ಪೋರೇಟ್ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಂಡಿದೆ.

ಲೇಖಕರು - ಸಿಂಧು ಕಶ್ಯಪ್

ಅನುವಾದಕರು - ಪ್ರೀತಂ

Related Stories

Stories by YourStory Kannada