ರೆಡ್ ಲೈಡ್ ಏರಿಯಾದ ಬಣ್ಣ ಬದಲಿಸುವ ಪ್ರಯತ್ನದಲ್ಲಿ `ಕಟ್-ಕಥಾ’

ಟೀಮ್​ ವೈ.ಎಸ್​. ಕನ್ನಡ

0


ರೆಡ್ ಲೈಟ್ ಏರಿಯಾಗಳಿಗೆ ಹೋಗಿ, ಸುರಕ್ಷಿತವಾಗಿ ವಾಪಸ್ ಗೂಡಿಗೆ ಬರೋದು ಹೇಳಿದಷ್ಟು ಸುಲಭದ ವಿಷಯವಲ್ಲ. ಜನಸಾಮಾನ್ಯರು ಅಲ್ಲಿಗೆ ಹೋಗಲು ಹಿಂಜರಿಯುತ್ತಾರೆ. ಆದರೆ ಎಲ್ಲವನ್ನೂ ಜಯಿಸಿ, ವಿಜಯಿಯಾದವರು ಗೀತಾಂಜಲಿ ಬಬ್ಬರ್. ದೆಹಲಿಯ ರೆಡ್ ಲೈಟ್ ಏರಿಯಾ ಜಿ.ಬಿ ರಸ್ತೆಗೆ ಹೋದ್ರೆ ಅವರಿಗೆ ಸೆಕ್ಸ್ ವರ್ಕರ್ಸ್ ಗಳಿಂದ ಪ್ರೀತಿಯೊಂದೇ ಅಲ್ಲ ಅಪ್ಪುಗೆಯ ಸ್ವಾಗತ ಸಿಗುತ್ತೆ. ರೆಡ್ ಲೈಟ್ ಏರಿಯಾ ಸೆಕ್ಸ್ ವರ್ಕರ್ಸ್ ಕತ್ತಲ ಜೀವನದಲ್ಲಿ ಬೆಳಕು ಮೂಡಿಸುತ್ತಿದ್ದಾರೆ ಗೀತಾಂಜಲಿ ಬಬ್ಬರ್. ತಮ್ಮ ಉದ್ಯೋಗವನ್ನು ತೊರೆದು ರೆಡ್ ಲೈಟ್ ಏರಿಯಾದಲ್ಲಿ ವಾಸಿಸುವ ಸೆಕ್ಸ್ ವರ್ಕರ್ಸ್ ಗಳನ್ನು ತಮ್ಮ ಸಂಸ್ಥೆ `ಕಟ್ –ಕಥಾ’ ಮೂಲಕ ಶಕ್ತರನ್ನಾಗಿ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ.

ಕಟ್-ಕಥಾ ಸಂಸ್ಥೆ ಆರಂಭಕ್ಕೂ ಮುನ್ನ ಗೀತಾಂಜಲಿ ದೆಹಲಿಯ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಶಿಕ್ಷಣ ಮುಗಿಸಿದ್ರು. ಈ ವೇಳೆ `ಅನಂತ’ ಎಂಬ ಹೆಸರಿನ ಥಿಯೇಟರ್ ಗ್ರೂಫ್ ಸೇರಿಕೊಂಡರು.ಅಲ್ಲಿಂದ ಅವರ ಸಾಮಾಜಿಕ ಕಾರ್ಯ ಶುರುವಾಯ್ತು. ನಂತರ ಗಾಂಧಿ ಫಾಲೋಷಿಪ್ ಅಡಿಯಲ್ಲಿ ಅವರು ರಾಜಸ್ಥಾನದ ಚೂರೂ ಜಿಲ್ಲೆಯ ತ್ರಿಪಾಲಿ ಬಡಿ ಎಂಬ ಹಳ್ಳಿಯಲ್ಲಿ ಎರಡು ವರ್ಷ ಕಳೆದ್ರು. ಇದರ ನಂತರ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಘಟನೆ `ನ್ಯಾಕೋ’ದಲ್ಲಿ ಕೆಲಸ ಮಾಡಲು ಆರಂಭಿಸಿದ್ದರು. ಅಲ್ಲಿಂದ ದೆಹಲಿ ರೆಡ್ ಲೈಟ್ ಏರಿಯಾ ಜಿ.ಬಿ ರೋಡ್ ನಂಟು ಶುರುವಾಯ್ತು. ಅಲ್ಲಿನ ಪರಿಸರ ಹೇಗಿದೆ? ಅಲ್ಲಿ ಹೇಗೆ ಕೆಲಸ ಮಾಡಬೇಕು? ಎಂಬ ಪ್ರಶ್ನೆಗಳು ಅವರಲ್ಲಿ ಹುಟ್ಟಿಕೊಂಡಿದ್ದವು.

ಮೊದಲ ಬಾರಿ ಒಂದು ವೇಶ್ಯಾಗೃಹ ಪ್ರವೇಶಿಸಿದ ಗೀತಾಂಜಲಿಗೆ ಅಲ್ಲಿನ ಪರಿಸ್ಥಿತಿ ನೋಡಿ ಮೂರು ದಿನ ನಿದ್ದೆ ಬಂದಿರಲಿಲ್ಲ. ದೆಹಲಿಯ ಹೃದಯ ಭಾಗದಲ್ಲಿ, ಇಂಡಿಯಾ ಗೇಟ್ ಬಳಿಯಲ್ಲೇ ಪ್ರತಿ ಕ್ಷಣ ಹುಡುಗಿ ಮಾರಾಟವಾಗ್ತಿದ್ದಾಳೆ, ಪ್ರತಿ ಕ್ಷಣ ಸಾಯ್ತಿದ್ದಾಳೆ. ಈ ಬಗ್ಗೆ ಯಾರೂ ಯೋಚಿಸುತ್ತಿಲ್ಲ ಎಂಬ ವಿಷಯ ಅವರ ಮನಸ್ಸಿಗೆ ನೋವುಂಟು ಮಾಡಿತು. ದಿನ ಕಳೆದಂತೆ ಗೀತಾಂಜಲಿ ಬೇರೆ ಬೇರೆ ಮಾಳಿಗೆಗಳಿಗೆ ಹೋಗಿ ಅಲ್ಲಿನ ಮಹಿಳೆಯರನ್ನು ಭೇಟಿಯಾಗಲು ಶುರುಮಾಡಿದರು. ಅವರ ನೋವನ್ನು ತಿಳಿಯಲಾರಂಭಿಸಿದ್ರು. ಕೆಲವೇ ದಿನಗಳಲ್ಲಿ ಅಲ್ಲಿನ ಕೆಲವರಿಗೆ ತಂಗಿ, ಮತ್ತೆ ಕೆಲವರಿಗೆ ಅಕ್ಕ, ಇನ್ನೂ ಕೆಲವರಿಗೆ ಮಗಳಾದ್ರು. ಕೆಲ ಸ್ಥಳದಲ್ಲಿ ಕೆಟ್ಟ ಅನುಭವವೂ ಆಗಿದೆ. ಆದರೆ ಛಲಬಿಡದ ಗೀತಾಂಜಲಿ ಅಲ್ಲಿನ ಮಹಿಳೆಯರ ಭೇಟಿಯನ್ನು ಬಿಡಲಿಲ್ಲ.

ಒಂದು ದಿನ ಒಂದು ವೇಶ್ಯಾಗೃಹದಲ್ಲಿ ವಾಸಿಸುವ ಮಹಿಳೆಯರು ಗೀತಾಂಜಲಿಗೆ ಕೆಟ್ಟ ಪದಗಳಿಂದ ಬೈದಿದ್ದಲ್ಲದೇ, ವೇಶ್ಯಾಗೃಹದಿಂದ ಹೊರ ಹಾಕಿದರು. ಇದು ಗೀತಾಂಜಲಿ ಕಣ್ಣಲ್ಲಿ ನೀರು ಬರಿಸ್ತು. ಆದ್ರೆ ಪಕ್ಕದ ವೇಶ್ಯಾಗೃಹದಲ್ಲಿದ್ದ ಮಹಿಳೆಯರು ಗೀತಾಂಜಲಿ ಬಳಿ ಬಂದು ತಮಗೆ ಅಕ್ಷರ ಕಲಿಸುವಂತೆ ಕೇಳಿದ್ರು. ಆಗ ಗೀತಾಂಜಲಿ ಕಣ್ಣಲ್ಲಿ ಬಂದ ನೋವಿನ ಕಣ್ಣೀರು ಸಂತೋಷದ ಕಣ್ಣೀರಾಗಿ ಪರಿವರ್ತನೆಗೊಂಡ್ತು. ಶನಿವಾರ ಹಾಗೂ ಭಾನುವಾರ ಗೀತಾಂಜಲಿ ಅಲ್ಲಿನ ಮಹಿಳೆಯರಿಗೆ ಪಾಠ ಹೇಳಲು ಶುರುಮಾಡಿದರು. ಆರಂಭದಲ್ಲಿ ಜಿ.ಬಿ ರಸ್ತೆಯಲ್ಲಿ ಕ್ಲಿನಿಕ್ ಹೊಂದಿರುವ ಡಾಕ್ಟರ್ ರಯೀಸ್ ಕೂಡ ನೆರವಿಗೆ ಬಂದರು. ಅವರ ಕ್ಲಿನಿಕ್ ನ ಮಹಡಿ ಮೇಲೆ ಮೊದಲು ಗೀತಾಂಜಲಿ ಪಾಠ ಹೇಳ್ತಾ ಇದ್ದರು. ಆದರೆ ಕೆಲ ದಿನಗಳ ನಂತರ ಆ ಸ್ಥಳವನ್ನು ಖಾಲಿ ಮಾಡಬೇಕಾಯ್ತು. ಒಂದು ವೇಶ್ಯಾಗೃಹದ ಮಹಿಳೆಯರು ಇನ್ನೊಂದು ವೇಶ್ಯಾಗೃಹಕ್ಕೆ ಬರುತ್ತಿರಲಿಲ್ಲ. ಹಾಗಾಗಿ ಗೀತಾಂಜಲಿ ಪ್ರತ್ಯೇಕವಾಗಿಯೇ ಪಾಠ ಹೇಳ್ತಾ ಇದ್ದರು.

ಕೆಲ ದಿನಗಳ ನಂತರ ಗೀತಾಂಜಲಿ ಕೆಲಸ ಬಿಟ್ಟು ಏಕಾಂಗಿಯಾಗಿ ಪಾಠ ಹೇಳಲು ಆರಂಭಿಸಿದ್ರು. ಸತ್ಯ, ನಿಷ್ಠೆ ಹಾಗೂ ಪ್ರಾಮಾಣಿಕ ಕೆಲಸಕ್ಕೆ ಗೀತಾಂಜಲಿ ಸ್ನೇಹಿತರು ಮನಸೋತರು. ಗೀತಾಂಜಲಿ ನೆರವಿಗೆ ಅವರು ಧಾವಿಸಿದರು. ಪ್ರತಿದಿನ ಒಂದೊಂದು ವೇಶ್ಯಾಗೃಹಕ್ಕೆ ಹೋಗಿ ಅವರು ಪಾಠ ಹೇಳಲು ಶುರು ಮಾಡಿದರು. ಮಹಿಳೆಯರಿಗೆ ನೀಡ್ತಾ ಇದ್ದ ಶಿಕ್ಷಣದ ಪರಿಣಾಮ ಮಕ್ಕಳ ಮೇಲಾಯ್ತು. ಅವರು ಓದುವಲ್ಲಿ ಆಸಕ್ತಿ ತೋರಿಸಿದರು. ಮಕ್ಕಳಿಗೂ ಪಾಠ ಹೇಳಿಕೊಡುವ ನಿರ್ಧಾರಕ್ಕೆ ಗೀತಾಂಜಲಿ ಬಂದ್ರು. ಎರಡೂ ಕಡೆಯಿಂದ ಆಸಕ್ತಿ ಕಂಡು ಬಂದಿದ್ದರಿಂದ ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ಗೀತಾಂಜಲಿ ಯಶಸ್ವಿಯಾದ್ರು. ಮಕ್ಕಳ ಜೊತೆ ಉತ್ತಮ ಬಾಂಧವ್ಯ ಬೆಳೆಯಿತು. ಪಾಠದ ಜೊತೆಗೆ ಆಟ ಹಾಗೂ ಸಿನಿಮಾ ತೋರಿಸುವ ಕೆಲಸಕ್ಕೂ ಗೀತಾಂಜಲಿ ಮುಂದಾದರು. ದಿನ ಕಳೆದಂತೆ ಪಾಠ ಕೇಳಲು ಬರುವ ಮಕ್ಕಳ ಸಂಖ್ಯೆ ಜಾಸ್ತಿಯಾಯ್ತು. ಆಗ ಜಿಬಿ ರಸ್ತೆಯಲ್ಲಿ ಒಂದು ಜಾಗವನ್ನು ಗೀತಾಂಜಲಿ ಬಾಡಿಗೆಗೆ ಪಡೆದರು. ಈಗ ಗೀತಾಂಜಲಿ ಶಾಲೆಯಲ್ಲಿ ಕಲಿತ ನಾಲ್ಕು ಮಕ್ಕಳು ನಿಜಾಮುದ್ದೀನ್ ಪ್ರದೇಶದ ಒಂದು ಶಾಲೆಗೆ ಹೋಗ್ತಿದ್ದಾರೆ. ಒಬ್ಬ ವಿದ್ಯಾರ್ಥಿಗೆ ಫೆಲೋಷಿಪ್ ಕೂಡ ಸಿಕ್ಕಿದೆ. ಗೀತಾಂಜಲಿ ಕಲಿಸುತ್ತಿರುವ ಮಕ್ಕಳಲ್ಲಿ ಕೆಲವರು ಫೋಟೋಗ್ರಫಿ ಮಾಡಿದ್ರೆ ಮತ್ತೆ ಕೆಲವರು ನಾಟಕಗಳಲ್ಲಿ ಪಾಲ್ಗೊಳ್ತಾರೆ. ಇನ್ನು ಕೆಲ ಮಕ್ಕಳು ಡ್ಯಾನ್ಸರ್​ ಕೂಡ ಹೌದು. ಇಷ್ಟೇ ಅಲ್ಲ ಅಲ್ಲಿನ ನಾಲ್ಕು ಮಕ್ಕಳ ಎಡ್ಮಿಷನ್ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎಎನ್ ಎಎಸ್ ಡಿ)ನಲ್ಲಾಗಿದೆ. ಮಕ್ಕಳಿಗೆ ಗೀತಾಂಜಲಿ ಕೇವಲ ಕನಸು ಕಾಣುವುದನ್ನು ಕಲಿಸಿಲ್ಲ, ಕನಸಿನೊಂದಿಗೆ ಬದುಕುವುದನ್ನೂ ಹೇಳಿ ಕೊಟ್ಟಿದ್ದಾರೆ.

ವೇಶ್ಯಾಗೃಹದಲ್ಲಿರುವ ಮಹಿಳೆಯರ ಬಳಿ ವೋಟರ್ ಕಾರ್ಡ್ ಕೂಡ ಇರಲಿಲ್ಲ. ಕಟ್-ಕಥಾ ಸಂಸ್ಥೆಯ ಮೂಲಕ ಮಹಿಳೆಯರಿಗೆ ವೋಟರ್ ಐಡಿ ಸಿಕ್ಕಿದೆ. ಸಂಸ್ಥೆ ಸಹಯೋಗದಲ್ಲಿ ಜಿ.ಬಿ ರೋಡ್ ನಲ್ಲಿ ವಾಸಿಸುವ ಸುಮಾರು 500 ಮಹಿಳೆಯರಿಗೆ ವೋಟರ್ ಐಡಿ ಕಾರ್ಡ್, ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಮಾಡಿಸಿಕೊಡಲಾಗಿದೆ. ಮಹಿಳೆಯರನ್ನು ಸಶಕ್ತರನ್ನಾಗಿಸಲು ಬ್ಯಾಂಕ್ ನಲ್ಲಿ ಖಾತೆ ತೆರೆಯಲಾಗಿದೆ. ನೋಟ್ಬುಕ್ ಪ್ರಾಜೆಕ್ಟ್ ಮೂಲಕ ಜಿ.ಬಿ ರಸ್ತೆಯ ಕತ್ತಲು ಹಾಗೂ ಏಕಾಂಗಿ ಜಗತ್ತಿನಲ್ಲಿ ಜೀವನ ಮಾಡುತ್ತಿರುವ ಮಹಿಳೆಯರು ಗೌರವಯುತವಾಗಿ ಬಾಳಲು ಕಟ್-ಕಥಾ ನೆರವಾಗ್ತಾ ಇದೆ. ವೇಶ್ಯಾಗೃಹದಲ್ಲಿರುವ ಮಹಿಳೆಯರು,ಶಿಲ್ಪಕಲೆ, ಪೋಟೋ ಫ್ರೇಮ್, ಬಿಂದಿ, ಕಿವಿಯೋಲೆ ತಯಾರಿಸುವ ಕೆಲಸವನ್ನೂ ಮಾಡ್ತಿದ್ದಾರೆ. ಅವರನ್ನು ಒಂದುಗೂಡಿಸಲು ದೀಪಾವಳಿ, ಹೊಸ ವರ್ಷ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಟ್-ಕಥಾ ತಂಡದಲ್ಲಿ 7 ಜನರ ಬಲಿಷ್ಠ ಟೀಂ ಇದೆ. 100ಕ್ಕೂ ಹೆಚ್ಚು ಸ್ವಯಂ ಸೇವಕರು ಕೈ ಜೋಡಿಸಿದ್ದಾರೆ.

ಗೀತಾಂಜಲಿ ಹಾಗೂ ಅವರ ಸಂಸ್ಥೆ ಪ್ರತ್ಯಕ್ಷವಾಗಿ ಹಾಗೂ ಅಪ್ರತ್ಯಕ್ಷವಾಗಿ ಜಿ.ಬಿ ರಸ್ತೆಯಲ್ಲಿ ವಾಸಿಸುವ 66 ಮಕ್ಕಳೊಂದಿಗೆ ವಿಶೇಷ ಬಾಂಧವ್ಯ ಹೊಂದಿದೆ. ಇದರಲ್ಲಿ ನಾಲ್ಕು ವರ್ಷದ ಮಕ್ಕಳಿಂದ ಹಿಡಿದು 18 ವರ್ಷದ ಯುವಕರಿದ್ದಾರೆ. ಮಕ್ಕಳ ಅವಶ್ಯಕತೆಗೆ ತಕ್ಕಂತೆ ಕಟ್-ಕಥಾ ಸಹಾಯ ಮಾಡ್ತಿದೆ. ಹೆಚ್ಚು ನೆರವಿನ ಅಗತ್ಯವಿರುವ ಮಕ್ಕಳ ಜೊತೆ ರಾತ್ರಿ-ಹಗಲು ಕಾರ್ಯಕರ್ತರಿರುತ್ತಾರೆ. ತಾವು ಜಿ.ಬಿ ರಸ್ತೆಯಲ್ಲಿ ವಾಸಿಸುತ್ತೇವೆಂದು ಬೋಲ್ಡಾಗಿ ಹೇಳುವಷ್ಟು ವಿಶ್ವಾಸ ಮಕ್ಕಳಿಗೆ ಬಂದಿದೆ. ಆಗಸ್ಟ್ ಹದಿನೈದನ್ನು ಸರ್ಕಾರ `ಸೆಕ್ಸ್ ಫ್ರೀ ಡೇ ‘ಎಂದು ಘೋಷಿಸಬೇಕೆಂಬುದು ಗೀತಾಂಜಲಿ ಅಭಿಲಾಷೆ. ಅಂದು ಎಲ್ಲ ವೇಶ್ಯಾಗೃಹ ಬಂದ್ ಆಗಿ, ಅಲ್ಲಿನ ಮಹಿಳೆಯರು ತಮಗಿಷ್ಟ ಬಂದಂತೆ ಆ ಒಂದು ದಿನ ಕಳೆಯಲಿ

ಎಂಬುದು ಗೀತಾಂಜಲಿ ಆಸೆ.


ಲೇಖಕರು: ಹರೀಶ್ ಬಿಶ್ತ್​

ಅನುವಾದಕರು: ರೂಪಾ ಹೆಗಡೆ

Related Stories

Stories by YourStory Kannada