ಔರಂಗಬಾದ್​​ನ ಈ ಉದ್ಯಮಿಗೆ ನಮ್ಮೊದೊಂದು ಸಲಾಂ..!

ಟೀಮ್​ ವೈ.ಎಸ್​​.

ಔರಂಗಬಾದ್​​ನ ಈ ಉದ್ಯಮಿಗೆ ನಮ್ಮೊದೊಂದು ಸಲಾಂ..!

Saturday October 17, 2015,

3 min Read

ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಆದರೆ, ಸಾಧಿಸುವ ಛಲವಂತೂ ಬೇಕು. ಛಲವೊಂದಿದ್ದರೆ ಏನೂ ಬೇಕಾದರೂ ಮಾಡಬಹುದು ಅನ್ನುವುದಕ್ಕೆ ಉದಾಹರಣೆ ಇವರು. ಹೆಸರು ಸಚಿನ್ ಕಾಟೆ. ಹುಟ್ಟಿ ಬೆಳೆದಿದ್ದು ಮಹಾರಾಷ್ಟ್ರದ ಜೌರಂಗಬಾದ್‌ನಂತಹ ಸಣ್ಣ ಪಟ್ಟಣದಲ್ಲಿ.

ಅಂದಹಾಗೇ ಸಚಿನ್ ಕಾಟೆ ಚಿಕ್ಕವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ಭಾರತದಲ್ಲಿ ಹಲವಾರು ಬಾಡಿಗೆ ಕಾರ್​​ಗಳ ಕಂಪೆನಿಗಳಿವೆ. ಅವುಗಳ ನಡುವೆ ಕ್ಲೀಯರ್ ಕಾರ್ ರೆಂಟಲ್ ಕೂಡಾ ಒಂದು. ಈ ಕಂಪೆನಿಯನ್ನು ಸ್ಥಾಪಿಸಿದ 28ರ ಹರೆಯದ ಯುವಕ ಸಚಿನ್ ಕಾಟೆ ಯಶೋಗಾಥೆ ಎಲ್ಲರಿಗೂ ಪ್ರೇರಕಶಕ್ತಿ. ಸಚಿನ್ ಕಾಟೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಕಡು ಬಡತನದ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ಹುಡುಗ. ಸಚಿನ್ ಓದುತ್ತಿದ್ದ ಗ್ರಾಮೀಣ ಶಾಲೆಯಲ್ಲಿ ಕೇವಲ 4ನೇ ತರಗತಿವರೆಗೆ ಮಾತ್ರ ಶಿಕ್ಷಣವಿತ್ತು. ವಿದ್ಯಾಭ್ಯಾಸ ಅನ್ನುವುದು ಸಚಿನ್ ಪಾಲಿಗೆ ಬಹಳ ಕಷ್ಟಕರವಾಗಿತ್ತು. ಬಡತನದ ನಡುವೆಯೂ ಮಗನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂಬುದು ಸಚಿನ್ ಕಾಟೆ ಅವರ ಪೋಷಕರ ಉದ್ದೇಶವಾಗಿತ್ತು.

image


ಔರಂಗಾಬಾದ್‌ ಬಳಿಯೇ ಇದ್ದ, ಹತ್ತಿರದ ಸ್ನೇಹಿತರೊಬ್ಬರ ಮನೆಗೆ ಸಚಿನ್ ಕಾಟೆ ಅವರನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಿ ಕೊಡಲಾಗಿತ್ತು. ತೀವ್ರ ಬಡತನವಿದ್ದ ಕಾರಣ, ಓದಿನ ನಡುವೆ ಸಚಿನ್ ಕಾಟೆ ದಿನಪತ್ರಿಕೆಗಳನ್ನು ಹಂಚುವ ಕೆಲಸದಲ್ಲಿ ತೊಡಗಿದ್ದರು. ಬದುಕು ಸಾಗಿಸಲು ಏನಾದರೂ ಮಾಡಲೇ ಬೇಕಾದ ಅನಿವಾರ್ಯತೆ ಸಚಿನ್ ಕಾಟೆಗಿತ್ತು. ಕಠಿಣ ಶ್ರಮದ ನಡುವೆಯೇ ಮೊದಲ ಪಿಯುಸಿ ಓದುತ್ತಿದ್ದಾಗ ಸಚಿನ್ ಕಾಟೆಗೆ ಕಂಪ್ಯೂಟರ್ ಇನ್ಸ್‌ಟಿಟ್ಯೂಟ್‌ನಲ್ಲಿ ಆಫೀಸ್ ಬಾಯ್ ಕೆಲಸ ಸಿಕ್ಕಿತ್ತು.

ಸಚಿನ್ ಕಾಟೆ ಅವಕಾಶವನ್ನು ಹಾಳು ಮಾಡಿಕೊಳ್ಳಲಿಲ್ಲ. ಕೇವಲ ಒಂದೇ ಒಂದು ವರ್ಷದಲ್ಲಿ ಕಂಪ್ಯೂಟರ್ ತರಬೇತುದಾರನಾಗಿ ಭಡ್ತಿ ಪಡೆದ್ರು. ಹಗಲು ರಾತ್ರಿಯ ಶ್ರಮಕ್ಕೆ ಮೊದಲ ಯಶಸ್ಸು ಸಿಕ್ಕಿತ್ತು. ಆಫೀಸ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡರೂ, ಕಂಪ್ಯೂಟರ್ ‌ಬಗ್ಗೆ ಬಹಳಷ್ಟು ಮಾಹಿತಿಗಳನ್ನು ತಿಳಿದುಕೊಂಡರು. ಕಾಲೇಜಿನಲ್ಲಿ ವ್ಯಾಸಂಗ ಮಾಡುವುದರ ಜೊತೆ ಜೊತೆಗೆ, ಕಂಪ್ಯೂಟರ್ ವಿಚಾರದಲ್ಲಿ ನೈಪುಣ್ಯತೆ ಹೊಂದಿದರು.

ಪಿಯುಸಿ ಮುಗಿಸಿದ ಸಚಿನ್ ಕಾಟೆ ಮತ್ತೆ ಉನ್ನತ ವ್ಯಾಸಂಗಕ್ಕಾಗಿ ಔರಂಗಾಬಾದ್‌ನತ್ತ ಹೆಜ್ಜೆಯಿಟ್ಟರು. ಈ ವೇಳೆ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಪಾರ್ಟ್ ಟೈಮ್ ಆಗಿ ಕಾರ್ಯ ನಿರ್ವಹಿಸುತ್ತಿದ್ರು. ಇದೇ ಸಚಿನ್ ಜೀವನದ ಟರ್ನಿಂಗ್ ಪಾಯಿಂಟ್ ಎನ್ನಬಹುದು. ಟ್ರಾವೆಲ್ ಏಜಿನ್ಸಿಯಲ್ಲಿ ಕೆಲಸ ನಡೆಸುತ್ತಾ ಸಾರಿಗೆ ವ್ಯವಹಾರದ ಒಂದೊಂದೇ ಪಟ್ಟುಗಳನ್ನ ಕರಗತ ಮಾಡಿಕೊಂಡರು. ನಂತರ ಟ್ರಾವೆಲ್ ಬ್ಯುಸಿನೆಸ್‌ನ್ನೇ ತಮ್ಮ ವೃತ್ತಿಯನ್ನಾಗಿ ಆರಂಭಿಸಿದರು.

“ಟ್ರಾವೆಲ್ ಏಜೆನ್ಸಿಯಲ್ಲಿ ಮೊದಲು ನಾನು ಪಾರ್ಟ್ ಟೈಂ ಉದ್ಯೋಗಿಯಾಗಿ ಸೇರಿಕೊಂಡೆ. ಆದರೆ, ಕಂಪ್ಯೂಟರ್ ಬಗ್ಗೆ ನನಗೆ ಇದ್ದ ಕೌಶಲ್ಯ, ಜ್ಞಾನದಿಂದಾಗಿ ಮುಂದೆ ಫುಲ್ ಟೈಮ್ ಉದ್ಯೋಗಿಯಾಗಿ ನಾನು ಕಾರ್ಯನಿರ್ವಹಿಸಲು ಆರಂಭಿಸಿದೆ. ಇದು ನನ್ನ ವೃತ್ತಿ ಬದುಕಿಗೆ ಮಹತ್ವದ ತಿರುವು ಕೂಡ ಆಯಿತು”ಎಂದು ತಮ್ಮ ಹಳೆಯ ದಿನಗಳನ್ನು ಸಚಿನ್ ಕಾಟೆ ನೆನಪು ಮಾಡಿಕೊಳ್ಳುತ್ತಾರೆ.

ಶ್ರಮಜೀವಿಯಾದ ಸಚಿನ್ ಟ್ರಾವ್‌ಲ್ ಬ್ಯುಸಿನೆಸ್‌ನಲ್ಲಿ ಆತ್ಮವಿಶ್ವಾಸದಿಂದ ಮುಂದಡಿಯಿಡುತ್ತಾ, ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನ ಏರಲಾರಂಭಿಸಿದ್ರು. ತಮ್ಮದೇ ಸ್ವಂತ ಟ್ರಾವೆಲ್ ಏಜೆನ್ಸಿಯೊಂದನ್ನ ಆರಂಭಿಸಿದರು. ಕ್ರಮೇಣ ಅಭಿವೃದ್ಧಿ ಕೆಲಸಗಳ ಬಗ್ಗೆ ವೆಬ್‌ಸೈಟ್‌ಗಳನ್ನ ಆರಂಭಿಸಿ ಸಚಿನ್, ಹೊಟೇಲ್ ಮತ್ತು ಸಾರಿಗೆ ವ್ಯವಹಾರದ ಅಭಿವೃದ್ಧಿ ಕೆಲಸಗಳನ್ನು ತಮ್ಮ ವೆಬ್‌ಸೈಟ್ ಮೂಲಕ ಮಾಡಲು ಪ್ರಾರಂಭಿಸಿದರು.

ಸಚಿನ್ ತಮ್ಮ ತಂಡದ ಜೊತೆಗೂಡಿ ಇದುವರೆಗೆ ಇಂತಹ 600ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನ ನಡೆಸುತ್ತಿದ್ದಾರೆ. ಅದರಲ್ಲಿ NetMantle ಮತ್ತು InfoGird ಪ್ರಮುಖವಾದವು. ಇಂದಿನ ದಿನಗಳಲ್ಲಿ ತಂತ್ರಜ್ಞಾನಕ್ಕೆ ಎಲ್ಲಿಲ್ಲದ ಬೇಡಿಕೆ. ಇದನ್ನರಿತ ಸಚಿನ್ ಕಾಟೆ ತಮ್ಮ ವೆಬ್‌ಸೈಟ್‌ಗಳ ಮೂಲಕ ಹೊಟೇಲ್ ಬುಕಿಂಗ್, ವಿಮಾನದ ಟಿಕೆಟ್ ಬುಕಿಂಗ್‌ಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿದರು. ಇಷ್ಟೆಲ್ಲಾ ತಂತ್ರಜ್ಞಾನಗಳನ್ನು ಅಭಿವೃದ್ಧಿಗೊಳಿಸಿದರೂ, ಪ್ರವಾಸಕ್ಕೆ ಸಂಬಂಧಿಸಿದ್ದ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಅಭಿವೃದ್ಧಿಯಾಗಿಲ್ಲ ಎಂಬ ಕೊರಗು ಸಚಿನ್‌ರನ್ನು ಕಾಡಲಾರಂಭಿಸಿತು. ಈ ಹಿನ್ನೆಲೆಯಲ್ಲಿ ಸಚಿನ್ ಮತ್ತು ತಂಡ ಕ್ಲೀಯರ್ ಕಾರ್ ರೆಂಟಲ್ ಎಂಬ ಸಂಸ್ಥೆಯನ್ನ 2010ರಲ್ಲಿ ಹುಟ್ಟು ಹಾಕಿದ್ದರು.

ಸಚಿನ್ ಕಾಟೆ ಕ್ಲೀಯರ್ ಕಾರ್ ರೆಂಟಲ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾಗ ಅದಾಗಲೇ ಮೇರು, ರೇಡಿಯೋ ಕ್ಯಾಬ್ ಹಾಗೂ ಇನ್ನೀತರ ಹಲವು ಕ್ಯಾಬ್ ಸಂಸ್ಥೆಗಳು ದೇಶದಲ್ಲಿ ನೆಲೆಯೂರಿಸಿದ್ದವು. ತಮ್ಮ ಕೆಲಸ ಮೇಲೆ ಅತೀವ ವಿಶ್ವಾಸ ಹೊಂದಿದ್ದ ಸಚಿನ್ ಕಾಟೆ ಎದೆಗುಂದಲಿಲ್ಲ. ಅಂದುಕೊಂಡ ಕೆಲಸವನ್ನು ಆತ್ಮವಿಶ್ವಾಸದಲ್ಲೇ ಮುಂದುವರೆಸಿದರು. ತಮ್ಮ ಕೆಲಸಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದು ಸಚಿನ್ ಕಾಟೆ ವಿಶ್ವಾಸವಾಗಿತ್ತು.

“ ಕ್ಲಿಯರ್ ಕಾರ್ ರೆಂಟಲ್ ಇಂದು ದೇಶದೆಲ್ಲೆಡೆ ಹೆಮ್ಮರವಾಗಿ ಬೆಳೆದು ನಿಂತಿದೆ. ಒಂದು ಸಣ್ಣ ಸಸಿಯಾಗಿದ್ದ ಕ್ಲಿಯರ್ ಕಾರ್ ರೆಂಟಲ್ ಇಂದು ಆಲದಮರವೇ ಆಗಿದೆ. ದೇಶದೆಲ್ಲೆಡೆ 150 ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದಿನಪೂರ್ತಿ, ಅರ್ಧ ದಿನ ಹಾಗೂ ಟ್ರಾನ್ಸ್ ಫರ್ ಸೇವೆಯನ್ನು ಒದಗಿಸುತ್ತಿದೆ. ಹೊರರಾಜ್ಯಗಳಲ್ಲಿ ಪ್ಯಾಕೇಜ್ ಟ್ರಿಪ್, ನಗರ ಪ್ರದಕ್ಷಿಣೆ, ಒನ್ ವೇ ಹಾಗೂ ಮಲ್ಟಿ ಸಿಟಿ ಪ್ರಯಾಣ ಸೇವೆಯನ್ನು ನೀಡುತ್ತಿದೆ. ಅಂತ ತನ್ನ ವ್ಯವಹಾರದ ಬಗ್ಗೆ ಹೇಳಿಕೊಳ್ಳುತ್ತಾರೆ ಸಚಿನ್ ಕಾಟೆ.

image


ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಕೂಡಲೇ ನಾವು ಇರುವ ಸ್ಥಳಗಳಿಗೆ ಕ್ಯಾಬ್ ಆಗಮಿಸುತ್ತದೆ. ನಮಗೆ ಬೇಕಾದ ಸ್ಥಳಗಳಿಗ ಕ್ಯಾಬ್ ಮೂಲಕ ಕರೆದೊಯ್ಯುತ್ತಾರೆ. ಕ್ಲಿಯರ್ ಕಾರ್ ರೆಂಟಲ್(CCR) ಕಂಪೆನಿ ಇಂದು ದೇಶಾದ್ಯಂತ ಒಟ್ಟು 14,000ಕ್ಕೂ ಹೆಚ್ಚು ಕಾರುಗಳನ್ನ ಹೊಂದಿವೆ. ಹಲವಾರು ಪ್ರತಿಷ್ಠಿತ ಕಂಪೆನಿಗಳು ಇಂದು ಸಂಚಾರ ವ್ಯವಸ್ಥೆಗಾಗಿ ಸಿಸಿಆರ್‌ನ್ನು ಅವಲಂಬಿಸಿದೆ.

ಒಟ್ಟಾರೆ ಇಂದು ಸಚಿನ್ ಕಾಟೆ ನೇತೃತ್ವದ ಕಂಪೆನಿ ದೇಶದ ಸಾರಿಗೆ ವ್ಯವಸ್ತೆಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದೆ. ಮಾತ್ರವಲ್ಲ ಸಚಿನ್ ಅವರು ಹುಟ್ಟು ಹಾಕಿರೋ ಈ ಸಂಸ್ಥೆಯಲ್ಲಿ ಸಾವಿರಾರು ಮಂದಿ ದುಡಿಯುತ್ತಿದ್ದಾರೆ. ಈ ಮೂಲಕ ಸಾವಿರಾರು ಮಂದಿಯ ಬಾಳಿಗೆ ಬೆಳಕಾಗಿದ್ದಾರೆ. ಔರಂಗಾಬಾದ್‌ನಲ್ಲಿ ಆರಂಭಿಸಿದ ಸಣ್ಣ ಕಂಪೆನಿ ಇಂದು ಬೃಹತ್ ಆಗಿ ಬೆಳೆದಿದ್ದು, ದೇಶಾದ್ಯಂತ ಚಾಚಿಕೊಂಡಿದೆ. ಯಾವುದೇ ಕೆಲಸ, ಕಾರ್ಯವನ್ನಾದರೂ ನಾನು ಅತಿ ಆತ್ಮವಿಶ್ವಾಸದಿಂದ ಮಾಡಿದ ಫಲವೇ ಇಂದು ನನ್ನ ಯಶಸ್ಸಿಗೆ ಕಾರಣ ಅನ್ನುತ್ತಾರೆ ಯುವ ಉದ್ಯಮಿ ಸಚಿನ್ ಕಾಟೆ.