ಮಹಿಳಾ ಉದ್ಯಮಿಯಾಗುವ ಕನಸು ಕಾಣುವುದು ತಪ್ಪಲ್ಲ- ದೇಬ್​​ಜಾನಿ ಘೋಷ್​​ರ ಯಶೋಗಾಥೆ

ಟೀಮ್​​ ವೈ.ಎಸ್​​.

ಮಹಿಳಾ ಉದ್ಯಮಿಯಾಗುವ ಕನಸು ಕಾಣುವುದು ತಪ್ಪಲ್ಲ- ದೇಬ್​​ಜಾನಿ ಘೋಷ್​​ರ ಯಶೋಗಾಥೆ

Sunday November 08, 2015,

6 min Read

ದೇಬ್​​ಜಾನಿ ಘೋಶ್ ನಿಸ್ಸಂಶಯವಾಗಿ ಒಬ್ಬ ಸಮರ್ಥ ವ್ಯಾವಹಾರಿಕ ನಾಯಕಿ. ಇಂಟೆಲ್ ಸೇಲ್ಸ್ ಹಾಗೂ ಮಾರಾಟ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅವರು, ಸುಮಾರು 17 ವರ್ಷಗಳ ಕಾಲ ದಕ್ಷಿಣ ಏಷಿಯಾದ ಕಾಯಾಚರಣೆಯ ಮುಖ್ಯಸ್ಥರಾಗಿ ಜವಬ್ದಾರಿ ನಿಭಾಯಿಸಿದ್ದರು. 1996ರಲ್ಲಿ ಇಂಟೆಲ್ ಸಂಸ್ಥೆಗೆ ಸೇರ್ಪಡೆಯಾದ ದೇಬ್​​ಜಾನಿ ಮೊದಲ ದಿನದಿಂದಲೇ ತಾವೇನು ಕೆಲಸವನ್ನು ನಿರ್ವಹಿಸಬೇಕು ಅನ್ನುವುದರ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಅವರು ಇಂಟೆಲ್​​ನ ಭಾರತದ ಕಾರ್ಯಾಚರಣೆಯ ಮುಖ್ಯಸ್ಥರಾಗಿ ಇಚ್ಛೆ ಹೊಂದಿದ್ದರು. ಅದರಂತೆ 16 ವರ್ಷಗಳ ಕಾಲ ಈ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದರು.

image


ಅವರ ಯಾವ ಗುಣ ಅವರನ್ನು ನಾಯಕತ್ವದತ್ತ ಕೊಂಡೊಯ್ಯಿತು ಅನ್ನುವ ಯುವರ್ ಸ್ಟೋರಿ ಪ್ರಶ್ನೆಗೆ ಅವರು ಅತ್ಯಂತ ಉಪಯುಕ್ತವಾದ ಅವರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಕೆಲವು ಅಮೂಲ್ಯವಾದ ಮಾತುಗಳು ಔದ್ಯಮಿಕ ಕ್ಷೇತ್ರದಲ್ಲಿ ಮುಂಬರುವ ಎಲ್ಲಾ ಮಹಿಳೆಯರಿಗೂ ಮಾರ್ಗದರ್ಶನ ನೀಡುವಂತದ್ದಾಗಿದೆ.

ಪರಿಪೂರ್ಣ ಬಾಲ್ಯ

ಅವರದು ಅತಿ ದೊಡ್ಡ ಅವಿಭಕ್ತ ಕುಟುಂಬ. ಅವರ ಕುಟುಂಬದಲ್ಲಿ ಅವರೊಬ್ಬರೇ ಹೆಣ್ಣುಮಗಳು. ಅವರಿಗೆ 12 ಜನ ಅಣ್ಣಂದಿರಿದ್ದರು. ಹುಡುಗರ ಜೊತೆಯೇ ಬಾಲ್ಯ ಕಳೆದ ಹುಡುಗಿಯಾಗಿದ್ದರು ಅವರು. ಹುಡುಗರು ಸಾಧಿಸುವ ಯಾವುದನ್ನಾದರೂ ಅವರು ಸಾಧಿಸಬಲ್ಲರು ಅನ್ನುವ ನಂಬಿಕೆ ಅವರ ತಂದೆಗಿತ್ತು. ಅವರು ಕ್ರಿಕೆಟ್ ಆಡಲು ಇಚ್ಛಿಸಿದರೇ, ಗೋಡೆಯಿಂದ ಕೆಳಗೆ ಹಾರಲು ಬಯಸಿದರೇ, ಮೋಟರ್ ಬೈಕ್ ಚಲಾಯಿಸಲು ಇಷ್ಟಪಟ್ಟರೇ ಅವರು ತಂದೆ ಯಾವಾಗಲೂ ಓಕೆ ಅನ್ನುತ್ತಿದ್ದರು. ಅವರ ತಂದೆಗೆ ಮಗಳ ಸಾಮರ್ಥ್ಯದ ಮೇಲೆ ಅಗಾಧ ವಿಶ್ವಾಸವಿತ್ತು.

ಅವರಿಗೆ ಹಿರಿಯ ಸಹೋದರರ ಸಾಂಗತ್ಯ ಹಾಗೂ ಒಡನಾಟ ಅತ್ಯುತ್ತಮ ಅನುಭವ ದೊರಕಿಸಿಕೊಟ್ಟಿತು. ಹೆಜ್ಜೆ ಹೆಜ್ಜೆಗೂ ಅಣ್ಣಂದಿರು ತಂಗಿಗೆ ಸಾಥ್ ನೀಡುತ್ತಿದ್ದರು. ಅವರ ತಂದೆಯ ಕಾರ್ಯಕಾರಣದಿಂದ ಅವರ ಕುಟುಂಬ ಭಾರತದ ಹಲವಾರು ಪಟ್ಟಣ ಹಾಗೂ ಹಲವು ರಾಷ್ಟ್ರಗಳನ್ನು ನೋಡುವಂತಾಯಿತು. ಅವರ ತಂದೆಗೆ ಮಕ್ಕಳನ್ನು ಹಾಸ್ಟೆಲ್​​ನಲ್ಲಿ ಬಿಟ್ಟು ಓದಿಸಲು ಮನಸಿರಲಿಲ್ಲ. ಹಾಗಾಗಿ ತಮಗೆ ವರ್ಗವಾದೆಲ್ಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದರು. ಇದರಿಂದ ಅವರಿಗೆ ವಿವಿಧ ಪ್ರದೇಶಗಳ ಸಂಸ್ಕೃತಿ ಪರಿಚಯವಾಯಿತು. ಅವರ ತಂದೆಯ ಜೊತೆಗೆ ಪ್ರತೀ ಊರುಗಳನ್ನು ಸಂದರ್ಶಿಸುತ್ತಿದ್ದ ದೇಬ್​​ಜಾನಿ ಸುಮಾರು 7 ಶಾಲೆಗಳಲ್ಲಿ ತಮ್ಮ ಕಲಿಕೆ ನಡೆಸಿದರು. ಬೇರೆ ಬೇರೆ ಪಟ್ಟಣಗಳ ಜನರೊಂದಿಗೆ ಬೆರೆತರು. ಅವರ ಅಣ್ಣಂದಿರಿಂದ ಆತ್ಮಿವಿಶ್ವಾಸ ಸಂಪಾದಿಸಿದರು.

image


ಬಾಲ್ಯದ ಅನುಭವಗಳೇ ನಾಯಕತ್ವ ಗುಣ ಬೆಳೆಸಿತು

ಜಾಗತಿಕ ಉದ್ಯಮ ಕ್ಷೇತ್ರದ ದಿಗ್ಗಜ ವಾರೆನ್ ಬಫೆಟ್​​ಗೂ ಸಾಕಷ್ಟು ಸಹೋದರಿಯರಿದ್ದರು. ಆದರೆ ಅವರು ಹುಟ್ಟಿದ ನಂತರ ಅವರ ಕುಟುಂಬದಲ್ಲಿ ಅವರೇ ಮುಖ್ಯವೆನಿಸಿದರು. ಹೀಗೆ ಭಾರತದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ಹೆಣ್ಣುಮಕ್ಕಳೇ ಅಧಿಕವಾಗಿರುವ ಕುಟುಂಬದಲ್ಲಿ ಗಂಡುಮಗು ಜನಿಸಿದರೇ, ಆ ಕುಟುಂಬದಲ್ಲಿ ಹೆಣ್ಣುಮಕ್ಕಳು ಪ್ರಧಾನ್ಯತೆ ಕಳೆದುಕೊಳ್ಳುತ್ತಾರೆ. ಆದರೆ ದೇಬ್ಜಾನಿಯವರ ವಿಷಯ ಇದಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿತ್ತು. ಅವರು ಅತ್ಯಂತ ಕಿರಿಯ ಸಹೋದರಿಯಾಗಿದ್ದ ಕಾರಣ ಅವರಿಗೆ ಸಾಕಷ್ಟು ಸ್ವಾತಂತ್ರ್ಯ ಹಾಗೂ ಪ್ರಾಮುಖ್ಯತೆ ಸಿಕ್ಕಿತ್ತು. ಅಪ್ಪ ಹಾಗೂ ಅಣ್ಣಂದಿರು ಈ ಮಗಳಿಗೆ ಅಪಾರ ಪ್ರೀತಿ ಹಾಗೂ ಮಮತೆಯಿಂದ ಬೆಳೆಸಿದ್ದರು.

ಬೆಳೆಯುತ್ತಿದ್ದ ಅವಧಿಯಲ್ಲಿ ಸಾಕಷ್ಟು ಪ್ರದೇಶಗಳಿಗೆ ಸುತ್ತಾಟ ನಡೆಸಿದ್ದರಿಂದ ಅವರಿಗೆ ಹೊಸ ಹೊಸ ವ್ಯಕ್ತಿಗಳ ಸ್ನೇಹ ಹಾಗೂ ಸಂಬಂಧ ಸಂಪಾದಿಸಲು ನೆರವಾಯಿತು. ಇದು ಅವರ ಜೀವನದ ಅತ್ಯಂತ ನಿರ್ಣಾಯಕ ಸಂದರ್ಭವೂ ಹೌದು. ಕಾರ್ಪೋರೇಟ್ ವಲಯಕ್ಕೆ ಬೇಕಿರುವ ಅದಮ್ಯ ಆತ್ಮವಿಶ್ವಾಸ ಗಳಿಸಿಕೊಳ್ಳಲು ಇಂತಹ ಅನೇಕ ಚಿಕ್ಕ ಪುಟ್ಟ ಸಂಗತಿಗಳು ಅವರಿಗೆ ಉಪಯುಕ್ತವೆನಿಸಿದವು. ಅವರಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಆತ್ಮವಿಶ್ವಾಸ ಗಟ್ಟಿಯಾಗಲು ಇದು ಪ್ರಮುಖ ಕಾರಣವೂ ಹೌದು.

ಅವರು ಯಾವಾಗಲೂ ಅತ್ಯುತ್ತಮವೆನಿಸಿಕೊಳ್ಳಲು ಹಾತೊರೆಯುತ್ತಿದ್ದರು. ಅವರ ಅತಿ ಮುಖ್ಯ ಉದ್ದೇಶವೂ ಅದೇ ಆಗಿತ್ತು. ಅವರ ಕುಟುಂಬದಲ್ಲಿ ಅವರಿಗೆ ಸಿಗುತ್ತಿದ್ದ ಮಾನ್ಯತೆಯಿಂದ ಅವರು ಉತ್ತೇಜಿತರಾಗಿ ಏನೇ ಕೆಲಸ ಮಾಡಿದರೂ ಅತ್ಯುತ್ತಮ ಫಲಿತಾಂಶ ನೀಡುವಂತೆ ಶ್ರದ್ಧೆ ವಹಿಸುತ್ತಿದ್ದರು. ಇದು ಬೆಳೆಯುತ್ತಿರುವ ಹಂತದಲ್ಲೇ ಅವರ ಗಟ್ಟಿ ಧೋರಣೆ ನೆಲೆಗೊಳ್ಳಲು ಸಹಕಾರಿಯಾಯಿತು.

ಇಂಟೆಲ್​​ನಲ್ಲಿ ಆರಂಭಿಕ ದಿನಗಳು

ಅವರು ಇಂಟೆಲ್ ಇಂಡಿಯಾ ಸಂಸ್ಥೆಗೆ ಸೇರಿದಾಗ ಅಲ್ಲಿ ಕೇವಲ ಐವರು ಉದ್ಯೋಗಿಗಳಿದ್ದರು. ಆ ಸಂದರ್ಭದಲ್ಲಿ ಹೊಸದಾಗಿ ಐವರನ್ನು ನೇಮಿಸಿಕೊಳ್ಳಲಾಯಿತು. ಹಾಗೆ ಹೊಸದಾಗಿ ಸೇರಿಕೊಂಡರ ಐವರ ತಂಡದಲ್ಲಿ ದೇಬ್​ಜಾನಿ ಕೂಡ ಒಬ್ಬರು ಮತ್ತು ಅವರೊಬ್ಬರೇ ಮಹಿಳಾ ಅಭ್ಯರ್ಥಿಯಾಗಿದ್ದರು. ಅವರಿಗೆ ಮಾರ್ಕೆಟಿಂಗ್ ವಿಭಾಗದ ಜವಬ್ದಾರಿ ಕೊಟ್ಟಿದ್ದೂ ಅವರಿಗೆ ಅನುಕೂಲಕಾರಿಯೇ ಆಗಿತ್ತು. ಬಾಲ್ಯದಿಂದಲೂ ಸಂಪಾದಿಸಿಕೊಂಡಿದ್ದ ಆತ್ಮವಿಶ್ವಾಸ ಹಾಗೂ ಸಾಧಿಸಬೇಕೆಂಬ ಪ್ರವೃತ್ತಿ ಅವರನ್ನು ವಿಭಿನ್ನ ಸಾಲಿನಲ್ಲಿ ಸೇರಿಸಿತ್ತು. ಅವರಿಗೆ ತಮ್ಮ ದೌರ್ಬಲ್ಯಗಳನ್ನು ಮೀರಿ ಜವಬ್ದಾರಿಯನ್ನು ಹೇಗೆ ನಿಭಾಯಿಸಬೇಕೆಂಬ ಅರಿವಿತ್ತು.

image


ಅವರು ತಮಗೆ ಪರಿಚಯವೇ ಇಲ್ಲದ ಸಂಪೂರ್ಣ ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಹಾಗೂ ಅಲ್ಲಿ ಅವರಿಗೆ ಸಾಕಷ್ಟು ಸ್ವಾತಂತ್ರ್ಯವನ್ನೂ ನೀಡಲಾಗಿತ್ತು. ತಂತ್ರಜ್ಞಾನ ಜನರಿಗೆ ಎಷ್ಟು ಉಪಯುಕ್ತ ಅನ್ನುವ ವಿಚಾರವನ್ನು ಇಲ್ಲಿ ಕೆಲಸ ನಿರ್ವಹಿಸುವಾಗಲೇ ಅವರು ಅರಿತುಕೊಂಡರು. ಅವರೊಬ್ಬರು ಎಂಜಿನಿಯರ್ ಅಲ್ಲದ ಕಾರಣ ಸಿಪಿಯು ಉಪಕರಣವನ್ನು ಹೇಗೆ ಮಾಡುತ್ತಾರೆ ಅನ್ನುವುದು ಅವರಿಗೆ ತಿಳಿದಿರಲಿಲ್ಲ. ಆದರೆ ಸಿಪಿಯೂ ಜನರಿಗೆ ಎಷ್ಟು ಉಪಕಾರಿಯಾಗುತ್ತದೆ ಅನ್ನುವುದು ಅವರಿಗೆ ಅರ್ಥವಾಗಿತ್ತು. ಇಂಟೆಲ್​​ನಲ್ಲಿ ಅವರು ನಿರ್ವಹಿಸಿದ ಮೊದಲ ಯೋಜನೆಯೇ ಶಿಕ್ಷಣಕ್ಕಾಗಿ ತಂತ್ರಜ್ಞಾನ. ಇದು ಅವರಿಗೆ ಅತ್ಯುತ್ತಮ ಅನುಭವಗಳನ್ನು ನೀಡಿತು.

ಇಂಟೆಲ್​​ನಲ್ಲಿ ಸಾಕಷ್ಟು ಮಾರ್ಗದರ್ಶಕರು ದೊರಕಿದ್ದರು. ಒಬ್ಬ ಮೆಂಟರ್ ಅವರಿಗೆ ಉಪಯುಕ್ತವಾದ ಸಲಹೆಯೊಂದನ್ನು ನೀಡಿದ್ದರು. ಈ ಕ್ಷೇತ್ರದಲ್ಲಿ ಸದಾ ಪ್ರಯೋಗಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ. ಆಗ ಮಾತ್ರ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲು ಸಾಧ್ಯ. ಪ್ರಯೋಗಗಳು ಯಾವುದೇ ಕ್ಷೇತ್ರಕ್ಕೂ ಅತ್ಯಂತ ಅಗತ್ಯ ಅಂಶ ಅನ್ನುವುದು ಆ ಸಲಹೆಯಾಗಿತ್ತು. ಅದರಂತೆ ಅವರು ಮೊದಲ 5 ವರ್ಷ ಕೇವಲ ಹೊಸ ಹೊಸ ಪ್ರಯೋಗಗಳನ್ನು ಮಾಡುವುದರಲ್ಲೇ ಕಳೆದರು. ಸೇಲ್, ರೀಸೇಲ್ ಹಾಗೂ ಮಾರ್ಕೆಟಿಂಗ್​​​ನಂತಹ ವಿಭಾಗಗಳಲ್ಲಿ ಅನೇಕ ಹೊಸ ಪ್ರಯೋಗಗಳನ್ನು ನಡೆಸಿದರು. ಇದು ಕೊನೆಗೆ ಅವರನ್ನು ಇಂಟೆಲ್​​ನ ಸರ್ಕಾರದ ಯೋಜನೆಯವರೆಗೂ ಕರೆತಂದಿತು. ಅವರ ವೃತ್ತಿ ಬದುಕಿನಲ್ಲಿ ಅವರು ಗಳಿಸಿಕೊಂಡ ದೊಡ್ಡ ಅನುಭವಗಳಿಗೆ ಅವರು ನಡೆಸಿದ ಇಂತಹ ಪ್ರಯೋಗಗಳೇ ಕಾರಣ.

ಮಹಿಳೆಯರ ಆತ್ಮವಿಶ್ವಾಸದ ಕೊರತೆ ಹಾಗೂ ಹಿಂಜರಿಕೆ

ಇಂಟೆಲ್ ಸಂಸ್ಥೆಯಲ್ಲಿ ಇಬ್ಬರು ಉನ್ನತ ಹುದ್ದೆಯಲ್ಲಿರುವ ಮಹಿಳೆಯರಿದ್ದರು. ಒಬ್ಬರು ಕುಮುದಾ ಶ್ರೀನಿವಾಸನ್. ಅವರು ಇಂಟೆಲ್ ಇಂಡಿಯಾದ ಅಧ್ಯಕ್ಷರಾಗಿದ್ದರು. ದೇಬ್​​ಜಾನಿ ಸೇಲ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾಗಿದ್ದರು. ತಾವಿಬ್ಬರೂ ಮಹಿಳೆಯರಾಗಿದ್ದು ನಾಚಿಕೆಗೇಡಿನ ಸಂಗತಿ. ನಾವಿಬ್ಬರು ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಏನೂ ಮಾಡಲಿಲ್ಲ ಎಂದು ತಮಾಷೆಯಿಂದ ದೇಬ್​ಜಾನಿ ಹೇಳಿಕೊಂಡು ನಗುತ್ತಾರೆ.

image


ಅವರು ಪುರುಷ ಹಾಗೂ ಮಹಿಳೆಯರೆಂಬ ತಾರತಮ್ಯವಿಲ್ಲದೇ ಸಮುದಾಯದ ವಿಕಾಸ ಹಾಗೂ ಪ್ರಗತಿಗಾಗಿ ಯೋಜನೆಗಳನ್ನು ರೂಪಿಸುತ್ತಿದ್ದರು. ಲಿಂಗ, ಬಣ್ಣ ಹಾಗೂ ಜಾತಿಯನ್ನೂ ಮೀರಿದಂತೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಯಷ್ಟೇ ಅವರ ಗುರಿಯಾಗಿತ್ತು. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಅನ್ನುವುದು ಅವರ ನಿಲುವಾಗಿತ್ತು. ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಉತ್ತೇಜನ ನೀಡುವ ಇಚ್ಛೆಯೂ ಅವರಿಗಿತ್ತು.

ಮಹಿಳೆಯರು ಆತ್ಮವಿಶ್ವಾಸ ಗಳಿಸಿಕೊಳ್ಳದ ಸ್ಥಿತಿ ಈಗಲೂ ಭಾರತದಲ್ಲಿದೆ. ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಮಗು ಜನಿಸಿದರೇ ಅವಳು ಕೇವಲ ಮದುವೆಯಾಗುವುದಕ್ಕೆ ಮಾತ್ರ ಸೀಮಿತ ಹಾಗೂ ಗಂಡು ಮಕ್ಕಳು ಮಾತ್ರ ವೈದ್ಯರೋ ಅಥವಾ ಎಂಜಿನರ್ ಆಗಬಹುದು ಅನ್ನುವ ಮನಸ್ಥಿತಿ ಈಗಲೂ ನಮ್ಮಲ್ಲಿದೆ. ಮಹಿಳೆ ಪರಿಪೂರ್ಣವಾಗಬೇಕಿದ್ದರೇ ಅವಳು ಅಡುಗೆ ಮಾಡುವುದನ್ನು ಬಲ್ಲವಳಾಗಿರಬೇಕು, ಮನೆಯ ನಿರ್ವಹಣೆಯನ್ನು ಸಮರ್ಥವಾಗಿ ನೋಡಿಕೊಳ್ಳಬೇಕು. ಆಗ ಮಾತ್ರ ಅವಳು ಗೃಹದೇವತೆಯಾಗುತ್ತಾಳೆ ಅನ್ನುವ ನಿಯಮ ನಮ್ಮ ಸಮಾಜದಲ್ಲಿದೆ. ಆದರೆ ಮಹಿಳೆ ಒಬ್ಬಳು ಯಶಸ್ವಿ ಉದ್ಯಮಿಯಾಗುತ್ತಾಳೆ ಅನ್ನುವುದನ್ನು ಭಾರತೀಯ ವ್ಯವಸ್ಥೆ ಕಲ್ಪಿಸಿಕೊಳ್ಳುವುದೂ ಇಲ್ಲ. ಹೀಗಾಗಿ ಭಾರತದಲ್ಲಿ ಮಹಿಳೆ ಕೇವಲ ಮನೆಯ ದೇವತೆಯಾಗುವುದಕ್ಕೆ ಮಾತ್ರ ಸೀಮಿತವಾಗಿದ್ದಾಳೆಯೇ ವಿನಃ ಉದ್ಯಮ ಕ್ಷೇತ್ರದ ಸಾಧಕಿಯಾಗಲು ಮುಂದೆ ಬರುತ್ತಿಲ್ಲ. ಈ 10 ವರ್ಷಗಳ ಹಿಂದೆ ಈ ಸ್ಥಿತಿ ಇತ್ತು. ಆದರೆ ಸಂತೋಷದ ಸಂಗತಿ ಎಂದರೆ ಈಗೀಗ ಕಾಲ ಬದಲಾಯಿಸುತ್ತಿದೆ. ಮಹಿಳೆಯರು ಮುಖ್ಯವಾಹಿನಿಯತ್ತ ಹೊರಳುತ್ತಿದ್ದಾರೆ. ಇದು ನಿಜ್ಕೂ ಆಶಾದಾಯಕ ಬೆಳವಣಿಗೆ ಎನ್ನುತ್ತಾರೆ ದೇಬ್ಜಾನಿ.

ನೀವು ಉಳಿದ ಸಂಗತಿಗಳನ್ನು ಚಿಂತಿಸುವುದು ಬಿಡಿ. ಸಮಾಜ ಏನು ಹೇಳುತ್ತದೆ ಅನ್ನುವುದನ್ನೂ ಯೋಚಿಸಬೇಡಿ. ನೀವು ಏನು ಯೋಚಿಸುತ್ತೀರಿ, ಏನ್ನು ನಂಬುತ್ತೀರಿ, ಏನು ಸಾಧಿಸಬೇಕೆಂದು ಬಯಸುತ್ತೀರಿ ಅದರತ್ತ ಮಾತ್ರ ಗಮನಕೊಡಿ. ಮೊದಲು ಕನಸು ಕಾಣುವುದೇ ತಪ್ಪು ಅನ್ನುವ ಹಿಂಜರಿಕೆ ಬಿಡಿ. ಕಾರ್ಫೋರೇಟ್ ಸಂಸ್ಥೆಯ ಹಂತಗಳನ್ನು ಏರುವ ಹಾಗೂ ಸ್ವಂತ ಉದ್ಯಮ ಸ್ಥಾಪಿಸುವ ಯಾವುದೇ ಕನಸನ್ನಾದರೂ ಮುಕ್ತವಾಗಿ ಕಾಣಿ. ನನಸು ಮಾಡಿಕೊಳ್ಳುವತ್ತ ಪ್ರಯತ್ನಿಸಿ. ಇದು ದೇಬ್ಜಾನಿ ಭಾರತೀಯ ಮಹಿಳೆಯರಿಗೆ ಉಪದೇಶಿಸುವ ಮಂತ್ರ. ನಾಳೆ ನೀವು ನಿಮ್ಮ ಮನೆಯ ದೇವತೆಗಳಾಗಿ ಪರವಾಗಿಲ್ಲ ಆದರೆ ಇಂದು ಮಾತ್ರ ಜಾಗತಿಕ ಯಶಸ್ವಿ ಮಹಿಳಾ ಉದ್ಯಮಿಯೋ ಸಾಧಕಿಯೋ, ವ್ಯಾವಹಾರಿಕ ಕ್ಷೇತ್ರದ ನಾಯಕಿಯೋ ಆಗುವತ್ತ ಹೆಜ್ಜೆ ಇಡಿ ಅನ್ನುವ ಸಲಹೆಯನ್ನು ದೇಬ್ಜಾನಿ ನೀಡುತ್ತಾರೆ. ಸಾಮಾಜಿಕ ಕಟ್ಟುಪಾಡುಗಳಿಂದ ಹೊರಬಂದು ಆತ್ಮವಿಶ್ವಾಸ ಗಳಿಸಿಕೊಳ್ಳುವ ಯಾವುದೇ ಮಹಿಳೆಯಾದರೂ ಸೂಪರ್ ಕಾನ್ಫಿಡೆಂಟೆ ಸಾಧಕಿಯಾಗಬಹುದು ಅನ್ನುವುದು ದೇಬ್ಜಾನಿಯವರ ಅಭಿಪ್ರಾಯ.

ಇಂಟೆಲ್​​ನಲ್ಲಿ ಕಾರ್ಯವೈಖರಿ:

ಇಂಟೆಲ್​​ನಲ್ಲಿ ನನ್ನ ಜವಬ್ದಾರಿ ಅತ್ಯಂತ ಉನ್ನತ ಮಟ್ಟದ್ದು ಹಾಗೂ ಜವಾಬ್ದಾರಿಯುತವಾಗಿದ್ದಾಗಿತ್ತು. ಅಷ್ಟೇ ಅಲ್ಲ ಇದು ತಮ್ಮ ಕನಸಿನ ಪಾತ್ರವೂ ಆಗಿತ್ತು ಅಂತಾರೆ ದೇಬ್​ಜಾನಿ. ಅವರಿಗೆ ಇಂಟೆಲ್​ನಲ್ಲಿ ಮೊದಲ ಬಾರಿಗೆ ಅವರ ಮಾರ್ಗದರ್ಶಕರು ಮುಂದೆ ಏನಾಗಬೇಕೆಂದು ಅಂದುಕೊಂಡಿದ್ದೀರಿ ಎಂದು ಪ್ರಶ್ನಿಸಿದಾಗ ಅವರು ಇಂಟೆಲ್​ನ ಭಾರತೀಯ ಕಾರ್ಯಾಚರಣೆಯ ಮುಖ್ಯಸ್ಥರಾಗಬೇಕೆಂದು ಉತ್ತರಿಸಿದ್ದರು. ಅದಾದ ಬಳಿಕ 17 ವರ್ಷಗಳಲ್ಲಿ ಅವರು ಇಂಟೆಲ್ ಭಾರತೀಯ ವಿಭಾಗದ ಮುಖ್ಯಸ್ಥರೂ ಆದರು. ಇದು ನಿಜವಾದ ಸಾಧನೆಯಲ್ಲದೇ ಇನ್ನೇನು. ಅವರ ಬಾಲ್ಯದಲ್ಲಿ ಬಹುಕಾಲ ಭಾರತದಿಂದ ಹೊರಗುಳಿದಿದ್ದರು. ತಂದೆಯ ವರ್ಗಾವಣೆಯ ಕಾರಣ ಅವರು 8 ವರ್ಷ ಭಾರತದಿಂದ ದೂರವಿದ್ದರು. ಅವರು ಪ್ರತೀ ಬಾರಿ ಭಾರತಕ್ಕೆ ಮರಳಿದಾಗಲೂ ಅವರಿಗೆ ಭಾರತದ ನೆಲದ ಮೇಲೆ ವಿಶೇಷ ಪ್ರೀತಿ ಉಂಟಾಗುತ್ತಿತ್ತು. ಭಾರತದಲ್ಲಿ ಕಂಡು ಕೇಳರಿಯದಷ್ಟು ಅವಕಾಶಗಳ ಹರಿವಿದೆ. ಭಾರತ ಕೊಳಚೆಯಲ್ಲಿರುವ ಅಮೂಲ್ಯ ವಜ್ರ. ಇಲ್ಲಿನ ಕೊಳಚೆಯನ್ನು ಹೋಗಲಾಡಿಸಿ ವಜ್ರವನ್ನು ಮಾತ್ರ ಪ್ರಕಾಶಿಸಬೇಕು ಅನ್ನುವುದು ದೇಬ್​​ಜಾನಿಯವರ ಸದಾಶಯ. ಭಾರತವನ್ನು ಔದ್ಯಮಿಕ ಕ್ಷೇತ್ರದಲ್ಲಿ ಮೇಲೆತ್ತುವ ಎಲ್ಲಾ ಅವಕಾಶಗಳೂ ಇಲ್ಲಿವೆ. ಭಾರತದ ಶಿಕ್ಷಣ, ಆರೋಗ್ಯ, ಹಾಗೂ ಸೇವಾವಲಯದಲ್ಲಿ ವಿಫುಲ ಅವಕಾಶಗಳಿವೆ. ಇವನ್ನು ಸಕಾರಾತ್ಮವಾಗಿ ಜಾರಿಗೊಳಿಸಲು ತಂತ್ರಜ್ಞಾನದ ಅಗತ್ಯವಿದೆ. ಇಂದು ಬಹುತೇಕ ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂದರೇ ಅಲ್ಲಿ ಅವರಿಗೆ ಅನುಕೂಲವಾದ ಶೌಚಾಲಯ ವ್ಯವಸ್ಥೆ ಇಲ್ಲ ಅನ್ನುವುದು ಅತಿ ಮುಖ್ಯ ಸಂಗತಿಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ನಿರ್ಮಿಸುವುದು ಮಾತ್ರ ಮುಖ್ಯವಾಗುತ್ತದೆ. ಆಗ ಮಾತ್ರ ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಬೋರ್ಡ್​ರೂಂ ಅಥವಾ ತರಗತಿಗಳಿಲ್ಲದೇ ಹೋದರೆ ಶಾಲೆಗಳ ಬದಲಿಗೆ ಶಿಕ್ಷಣವನ್ನು ಮನೆಯಲ್ಲಿಯೇ ಒದಗಿಸಬಹುದು. ತಂತ್ರಜ್ಞಾನದ ಸೌಕರ್ಯ ಭಾರತದ ಸಾಮಾಜಿಕ ವಲಯವನ್ನು ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ. ಇಂಟೆಲ್ ಅಂತಹ ಹಲವು ಅವಕಾಶಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದೆ. ಶೈಕ್ಷಣಿಕ ತಂತ್ರಜ್ಞಾನದ ಅಭಿವೃದ್ಧಿ ಇಂಟೆಲ್​​ನ ಭವಿಷ್ಯದ ಅತ್ಯುತ್ತಮ ಕನಸು.

image


ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಇಂಟೆಲ್ ಕಾರ್ಯನಿರತವಾಗಿರುವುದು ಹಾಗೂ ತಾವು ಇದರಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದು ತಮ್ಮ ಹೆಮ್ಮೆ ಹಾಗೂ ಅತ್ಯುನ್ನತ ಅವಕಾಶವೂ ಹೌದು ಎನ್ನುತ್ತಾರೆ ದೇಬ್​ಜಾನಿ. ಈ ವಿಚಾರದಲ್ಲಿ ಸಂಸ್ಥೆಯಿಂದ ತಮಗೆ ಸಾಕಷ್ಟು ಸ್ವಾತಂತ್ರ್ಯ, ಉಪಯುಕ್ತ ಸಲಹೆ, ಸೂಚನೆ, ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ಸಹ ಲಭಿಸಿತು. ತಮ್ಮ ತಂಡದಲ್ಲಿದ್ದ ಅನೇಕ ಮಹಿಳೆಯರು ಈ ವಿಚಾರದಲ್ಲಿ ಅತ್ಯಂತ ಆಸಕ್ತಿಯಿಂದ ತೊಡಗಿಕೊಂಡರು. ಇಂಟೆಲ್ ಮುಕ್ತವಾಗಿ ಇವೆಲ್ಲದಕ್ಕೂ ವೇದಿಕೆ ಒದಗಿಸಿಕೊಟ್ಟಿತು. ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಅವರ ಕನಸಾಗಿತ್ತು. ಕೊನೆಗೂ ನನಸಾಯಿತು.

The lighter side of Debjani

ದೇಬ್​​ಜಾನಿಗೆ ಪುಸ್ತಕಗಳನ್ನು ಓದುವುದೆಂದರೆ ಎಲ್ಲಿಲ್ಲದ ಪ್ರೀತಿ. ಪಿ.ಜಿ ವೋಡ್ಹೌಸ್​​ರ ಎ ರೈನಿ ಡೇ ಅವರು ಓದಿದ ಮೊದಲ ಪುಸ್ತಕ. ಟು ಕಿಲ್ ಎ ಮೊಕಿಂಕ್​ ಬರ್ಡ್ ಪುಸ್ತಕವನ್ನು ಅವರು ನೂರಾರು ಬಾರಿ ಓದಿದ್ದಾರೆ.

ದೇಬ್​​ಜಾನಿಯವರ ತಂಡದ ಸದಸ್ಯರು ಅವರ ನಾಯಕತ್ವದ ಗುಣಗಳ ಬಗ್ಗೆ ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸುತ್ತಾರೆ. ಅವರು ಪ್ರಸ್ತುತ ವ್ಯಾವಹಾರಿಕ ಜಗತ್ತಿನ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಕಾರ್ಯಗತಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ ಅನ್ನುವುದು ಅವರೆಲ್ಲರ ಅಭಿಪ್ರಾಯ. ದೇಬ್​​ಜಾನಿಯವರ ಬದುಕಿನ ಅನುಭವಗಳು ಹಾಗೂ ಸಾಧನೆ ಸಾವಿರಾರು ಮಹಿಳಾ ಉದ್ಯಮಿಗಳಾಗುವ ಕನಸು ಕಾಣುವವರಿಗೆ ಸೂಕ್ತ ಮಾರ್ಗದರ್ಶನ ನೀಡಬಲ್ಲದು ಅನ್ನುವುದು ಯುವರ್​​ಸ್ಟೋರಿಯ ಅಭಿಪ್ರಾಯವೂ ಹೌದು.