ಉದ್ಯೋಗಕ್ಕೆ ರಾಜೀನಾಮೆ : ಗ್ರಾಮೀಣ ಶಾಲೆಗಳ ಅಭ್ಯುದಯಕ್ಕೆ ಬದುಕು ಮೀಸಲು - ''ನನ್ನ ಕಥೆ'' 

ಟೀಮ್ ವೈ.ಎಸ್.ಕನ್ನಡ 

0

ನಾನು ಸಾತ್ವಿಕ್ ಮಿಶ್ರಾ. ಬಿಹಾರದ ಪುರ್ನಿಯಾ ನನ್ನೂರು. ವಿಐಟಿ ವಿಶ್ವವಿದ್ಯಾನಿಲಯದಲ್ಲಿ ಬಿಟೆಕ್ ಪದವಿ ಪಡೆದಿದ್ದೇನೆ. ಇಡಿಐನಲ್ಲಿ ಡಿಇಬಿಎಂ ಪದವಿ ಪೂರೈಸಿದ್ದೇನೆ. ಲಾಭದಾಯಕ ಉದ್ಯೋಗಕ್ಕೆ ರಾಜೀನಾಮೆ ನೀಡಿದಾಗ ಬದುಕಿನ ಅರ್ಥ ಕಂಡುಕೊಳ್ಳಬೇಕೆಂಬ ಏಕೈಕ ಗುರಿ ನನ್ನಲ್ಲಿತ್ತು. ಆರ್ಥಿಕವಾಗಿ ನಾನು ಸದೃಢವಾಗಿದ್ದೆ, ಆದ್ರೆ ಮನಸ್ಸಿಗೆ ತೃಪ್ತಿ ಇರಲಿಲ್ಲ. ಭಾರತದ ಗ್ರಾಮೀಣ ಭಾಗದ ಜನರಿಗಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿ 2016ರ ಎಸ್ಬಿಐ ಯೂತ್ ಫಾರ್ ಇಂಡಿಯಾ ಫೆಲೋಶಿಪ್ಗೆ ಅರ್ಜಿ ಹಾಕಿದೆ. ಫೆಲೋಶಿಪ್ ಬಳಿಕ ನಮ್ಮನ್ನು ಎನ್ಜಿಓ ಮೂಲಕ ಗ್ರಾಮೀಣಾಭಿವೃದ್ಧಿಗಾಗಿಗಾಗಿ ನಿಯುಕ್ತಿಗೊಳಿಸಲಾಯ್ತು. ಓಡಿಶಾದಲ್ಲಿರುವ ಗ್ರಾಮ್ ವಿಕಾಸ್ ಎನ್ಜಿಓಗೆ ನನ್ನನ್ನು ನೇಮಕ ಮಾಡಿದ್ರು. ಗ್ರಾಮ್ ವಿಕಾಸ್ ಸಂಸ್ಥೆ 4 ಶಾಲೆಗಳನ್ನು ನಡೆಸುತ್ತಿದೆ. ಕನಿಕಾ ವಿಕಾಸ್ ರೆಸಿಡೆನ್ಷಿಯಲ್ ಸ್ಕೂಲ್ ಕೂಡ ಅವುಗಳಲ್ಲೊಂದು. ಸಮೀಕ್ಷೆ ವೇಳೆಯ ಶಾಲೆಯ ಬಗ್ಗೆ ಒಳ್ಳೆಯ ಸಂಗತಿಗಳು ಹಾಗೂ ಅಲ್ಲಿನ ಕೆಲ ಸಮಸ್ಯೆಗಳು ನನ್ನ ಗಮನಕ್ಕೆ ಬಂದವು. ಈ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ನನ್ನ ಕರ್ತವ್ಯ ಅನ್ನೋದು ನನಗೆ ಅರಿವಾಯ್ತು.

ಒಮ್ಮೆ ಮನೋಜ್ ಎಂಬ ವಿದ್ಯಾರ್ಥಿ ನನ್ನ ವಿದ್ಯಾಭ್ಯಾಸದ ಬಗ್ಗೆ ಕೇಳಿದ. ನಾನು ಎಂಜಿನಿಯರಿಂಗ್ ಪದವೀಧರ ಅನ್ನೋದನ್ನು ಕೇಳಿ ಅವನ ಮುಖ ಅರಳಿತ್ತು, ಆದ್ರೆ ಮರುಕ್ಷಣವೇ ನಿರಾಸೆ ಆವರಿಸಿತ್ತು. ಮನೋಜ್​ಗೂ ಎಂಜಿನಿಯರಿಂಗ್ ಮಾಡಬೇಕೆಂಬ ಆಸೆ, ಆದ್ರೆ ಅದು ಅಸಾಧ್ಯ ಅನ್ನೋ ಬೇಸರ ಅವನಲ್ಲಿತ್ತು. ಇನ್ನು ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ತಾ ಇದ್ರೂ ವಿದ್ಯಾರ್ಥಿಗಳ ಫಲಿತಾಂಶ ಚೆನ್ನಾಗಿ ಬರುತ್ತಿರಲಿಲ್ಲ. ಇದಕ್ಕೆ ಕಾರಣವನ್ನೂ ನಾನು ಕಂಡುಕೊಂಡೆ, ವಿದ್ಯಾರ್ಥಿಗಳು ಪ್ರಯೋಗಾತ್ಮಕವಾಗಿ ಕಲಿಯಲು ಶಾಲೆಯಲ್ಲಿ ಪ್ರಾಕ್ಟಿಕಲ್ ಲ್ಯಾಬ್ ಇರಲಿಲ್ಲ. ಡೆಮೊನ್ಸ್​ಟ್ರೇಶನ್ ಮತ್ತು ಪ್ರಯೋಗಗಳಿಲ್ಲದೆ ಶಿಕ್ಷಕರು ಹೇಗೆ ವಿಜ್ಞಾನ ವಿಷಯವನ್ನು ಕಲಿಸುತ್ತಾರೆ ಅನ್ನೋದೇ ನನಗೆ ಅಚ್ಚರಿ ಹುಟ್ಟಿಸಿತ್ತು. ಬೋಧನಾ ಗಂಟೆಗಳ ಬಗ್ಗೆ ಶಾಲೆಯಲ್ಲಿ ಹೆಚ್ಚು ಗಮನಹರಿಸಲಾಗ್ತಿದೆ ಆದ್ರೆ ಶಿಕ್ಷಣದ ಗುಣಮಟ್ಟವನ್ನು ನಿರ್ಲಕ್ಷಿಸಲಾಗುತ್ತಿತ್ತು. ಗುಣಮಟ್ಟ ಅನ್ನೋದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೇ ಅಂತರ್ಗತವಾಗಿರುತ್ತದೆ.

ನಾನು ಶಾಲೆಯಲ್ಲಿ ಪ್ರಯೋಗಾಲಯವೊಂದನ್ನು ಆರಂಭಿಸಿದೆ. ಶಾಲೆಯಲ್ಲಿ ಡಿಜಿಟಲ್ ಲೈಬ್ರರಿ ಆರಂಭಿಸಲು ಭುವನೇಶ್ವರ್​ನ ಆರ್​ಬಿಐ ಕೂಡ ಕೆಲ ಕಂಪ್ಯೂಟರ್ಗಳನ್ನು ಕೊಡುಗೆಯಾಗಿ ನೀಡಿದೆ. ವಿದ್ಯಾರ್ಥಿಗಳು ಲ್ಯಾಬ್ನಲ್ಲಿ ಕಲಿಯುವ ವೈಜ್ಞಾನಿಕ ಪ್ರಯೋಗಗಳಿಗೆ ಸಂಬಂಧಪಟ್ಟಂತೆ 50ಕ್ಕೂ ಹೆಚ್ಚು ವಿಡಿಯೋ ಟ್ಯುಟೋರಿಯಲ್ಗಳನ್ನು ಅಭಿವೃದ್ಧಿಪಡಿಸಿದೆ. ಈ ಡಿಜಿಟಲ್ ಲೈಬ್ರರಿಯ ಎಲ್ಲಾ ಕಂಪ್ಯೂಟರ್ಗಳಲ್ಲೂ ಆ ವಿಡಿಯೋಗಳನ್ನು ಲೋಡ್ ಮಾಡಲಾಗಿದೆ. ಇವುಗಳನ್ನು ನೋಡಿ ವಿದ್ಯಾರ್ಥಿಗಳು ಕಠಿಣ ಪಾಠಗಳನ್ನು ಕೂಡ ಸುಲಭವಾಗಿ ಅರ್ಥಮಾಡಿಕೊಳ್ತಾರೆ. ನನ್ನ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಯೋಜನೆಯನ್ನು ಯಶಸ್ವಿಯಾಗಿಸಲು ಈ ಡಿಜಿಟಲ್ ಲೈಬ್ರರಿ ನೆರವಾಗಿದೆ.

ನಾನು 7-10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದೆ. ಬೇಸಿಕ್ ಕಂಪ್ಯೂಟರ್ ಕೌಶಲ್ಯಗಳಾದ ಪೇಂಟಿಂಗ್, ಕ್ಯಾಲ್ಕುಲೇಟರ್, ಎಂಎಸ್ ಆಫೀಸ್ ಇವನ್ನೆಲ್ಲ ಹೇಳಿಕೊಡುತ್ತೇನೆ. ಮಕ್ಕಳಲ್ಲಿ ಕಂಪ್ಯೂಟರ್ ಬಗ್ಗೆ ಆಸಕ್ತಿ ಬೆಳೆಸಲು ಫೋಟೋಶಾಪ್ ಕೂಡ ಹೇಳಿಕೊಡುತ್ತೇನೆ. ಎಂಜಿನಿಯರಿಂಗ್​ನಲ್ಲಿ ಕೂಡ ಇದೇ ರೀತಿಯ ಸಾಫ್ಟ್​ವೇರ್ ಮತ್ತು ಪ್ರಯೋಗಗಳು ಇರುತ್ತವೆ ಎಂಬುದನ್ನು ತಿಳಿಹೇಳಿದಾಗ ಮಕ್ಕಳ ಮುಖದಲ್ಲಿ ನಗುಮೂಡುತ್ತೆ. ನಮಗೇನು ಬೇಕೋ ಅದನ್ನು ಪಡೆದಾಗ ಸಿಗುವುದು ತೃಪ್ತಿಯಲ್ಲ, ನಮ್ಮಿಂದಾದ ಕೊಡುಗೆ ನೀಡಿದಾಗ ಸಿಗುವುದೇ ನಿಜವಾದ ತೃಪ್ತಿ ಅನ್ನೋದು ನನಗೀಗ ಅರ್ಥವಾಗಿದೆ. ನೀವು ಸಮಾಜಕ್ಕೆ ಎಷ್ಟು ಕೊಡುಗೆ ನೀಡುತ್ತೀರೋ ಅದಕ್ಕಿಂತ ಹೆಚ್ಚನ್ನು ಪಡೆದುಕೊಳ್ಳುತ್ತೀರಾ.

ಇದನ್ನೂ ಓದಿ..

ಸಿನಿಮಾ ತಾರೆಯರಿಗೆಲ್ಲ ಮಾದರಿ ಎವೆಲಿನ್ ಶರ್ಮಾರ ಸಮಾಜ ಸೇವೆ..! 

ಬಿಸಿಯೂಟದ ಖದೀಮ ಕಳ್ಳರಿಗೆ ರಾಜಸ್ತಾನ ಸರ್ಕಾರದ ಶಾಕ್​..!