Time is Money ಅಂತೀವಿ. ಈ ಮಾತು ಅಕ್ಷರಶಃ ನಿಜ. ಯಾಕಂದ್ರೆ ಸಮಯವೇ ಹಣ ಅನ್ನೋದನ್ನು ಹಲವಾರು ಮಂದಿ ಯಶಸ್ವೀ ಉದ್ಯಮಿಗಳು ಸಾಬೀತು ಮಾಡಿದ್ದಾರೆ. ಇಂತಹ ಸಕ್ಸಸ್‍ಫುಲ್ ಬ್ಯುಸಿನೆಸ್‍ಮನ್‍ಗಳ ಸಾಲಿಗೆ ಹೊಸ ಸೇರ್ಪಡೆ ಬೆಂಗಳೂರಿನ ಇನಾಯತ್ ಅನ್ಸಾರಿ. ಹೌದು, ಸಮಯವೇ ಹಣವಾದ್ರೆ, ಆ ಸಮಯಕ್ಕೇಕೆ ನೀವು ಹಣ ತೆರಬಾರದು ಅಂತ ತಮ್ಮ ಉದ್ಯಮದ ಮೂಲಕವೇ ಪ್ರಶ್ನಿಸುತ್ತಿದ್ದಾರೆ ಇನಾಯತ್.
ಇನಾಯತ್ ಅನ್ಸಾರಿ ಮೂಲತಃ ಕೊಲ್ಕತ್ತಾ ನಗರದವರು. ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಜೆನೆಟಿಕ್ಸ್ನಲ್ಲಿ ಬಿಎಸ್‍ಸಿ ಪದವಿ ಪಡೆದಿದ್ದಾರೆ. ಕೆಲ ಕಾಲ ದುಬೈನಲ್ಲೂ ಕೆಲಸ ಮಾಡಿದ ಅನುಭವವಿದೆ. ಆದ್ರೆ ಬೆಂಗಳೂರು ಅವರಿಗೆ ತುಂಬಾ ಪ್ರೀತಿಯ ನಗರವಾದ್ದರಿಂದ ಗಾರ್ಡನ್ ಸಿಟಿಗೆ ವಾಪಸ್ ಬಂದರು. ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಫೋಟೋಗ್ರಾಫರ್ ಆಗಿ ಕೆಲ ವರ್ಷ ಕೆಲಸ ಮಾಡಿದರು. ಕ್ರಮೇಣ ರೆಸ್ಟೋರೆಂಟ್ ಒಂದನ್ನು ಪ್ರಾರಂಭಿಸಿದ್ರು. ಆದ್ರೂ ಅವರಿಗೆ ಸಮಾಧಾನವಿರಲಿಲ್ಲ. ಹೀಗಾಗಿಯೇ ಅವರಿಗೆ ಹೊಸದಾಗಿ, ವಿನೂತನ-ವಿಭಿನ್ನ- ವಿಶೇಷವಾಗಿ ಏನಾದ್ರೂ ಮಾಡಬೇಕು ಅನ್ನೋ ಆಸೆ ಆರಂಭವಾಯ್ತು. ಆಗ ಅವರಿಗೆ ಹೊಳೆದ ಆಲೋಚನೆಯೇ ‘ದಿ ಮೈನ್ಯೂಟ್ ಬಿಸ್ಟ್ರೋ’.
ಮನೆಯಿಂದ ಹೊರಗೆ ಹೋದ್ರೂ ಮನೆಯಲ್ಲಿರುವಂತಹ ಅನುಭವ ನೀಡುವ ಪರಿಕಲ್ಪನೆಯೇ ಈ ದಿ ಮೈನ್ಯೂಟ್ ಬಿಸ್ಟ್ರೋ. ಇಲ್ಲಿ 55 ಇಂಚಿನ ಟಿವಿ ಇದೆ, ಉಚಿತ ವೈಫೈ ಸಿಗುತ್ತೆ, ಗೇಮ್ಸ್ ಪ್ರಿಯರಿಗೆ ಪ್ಲೇ ಸ್ಟೇಷನ್ ಇದೆ, ಪುಸ್ತಕಗಳಿವೆ, ಮ್ಯಾಗಝೀನ್‍ಗಳಿವೆ, 15ಕ್ಕೂ ಹೆಚ್ಚು ಬಗೆಯ ಬೋರ್ಡ್ ಗೇಮ್‍ಗಳಿವೆ ಜೊತೆಗೆ ಹಸಿರು ಹಾಗೂ ಸ್ವಚ್ಛ ವಾತಾವರಣವಿದೆ. ಜೊತೆಗೆ ತಮಗೆ ಬೇಕಾದಷ್ಟು ತಿಂಡಿ, ತಿನಿಸುಗಳನ್ನು ಸೇವಿಸಬಹುದು. ಇದ್ಯಾವುದಕ್ಕೂ ಹಣ ತೆರಬೇಕಿಲ್ಲ. ಬದಲಿಗೆ ನೀವು ದಿ ಮೈನ್ಯೂಟ್ ಬಿಸ್ಟ್ರೋನಲ್ಲಿರುವಷ್ಟೂ ಸಮಯ ಒಂದು ನಿಮಿಷಕ್ಕೆ 5 ರೂಪಾಯಿಯಂತೆ ಕೊಟ್ರೆ ಸಾಕು. ಉಳಿದದ್ದೆಲ್ಲಾ ಉಚಿತ, ಉಚಿತ ಹಾಗೂ ಉಚಿತ.
ಈ ರೀತಿಯ ಪರಿಕಲ್ಪನೆ ಈಗಾಗಲೇ ಜರ್ಮನಿಯಲ್ಲಿದೆ. ಲಂಡನ್‍ನಲ್ಲೂ ಇತ್ತೀಚೆಗಷ್ಟೇ ಪ್ರಾರಂಭವಾಗಿದೆ. ಆದ್ರೆ ಬೆಂಗಳೂರಿನಲ್ಲಿದು ಸಂಪೂರ್ಣ ಹೊಸ ಕಾನ್ಸೆಪ್ಟ್. ಇನಾಯತ್ ಅನ್ಸಾರಿ ಅವರ ಈ ‘ದಿ ಮೈನ್ಯೂಟ್ ಬಿಸ್ಟ್ರೋ’ ಸಾಹಸಕ್ಕೆ ಅವರ ಗೆಳೆಯ ನಿಖಿಲ್ ಕಾಮತ್ ಕೂಡ ಸಾಥ್ ನೀಡಿದ್ದಾರೆ. ‘ನಿಖಿಲ್ ಅವರ ಅಮ್ಮ ರೇವತಿ ಕಾಮತ್ ಅವರೇ ದಿ ಮೈನ್ಯೂಟ್ ಬಿಸ್ಟ್ರೋ ಇಂಟೀರಿಯರ್ ಡಿಸೈನ್ ಮಾಡಿದ್ದಾರೆ. ಗೋಡೆಗೇ ಪೈಪ್‍ಗಳನ್ನು ಜೋಡಿಸಿ ಹನಿ ನೀರಾವರಿ ಪದ್ಧತಿ ಅನುಸರಿಸುತ್ತಿದ್ದೇವೆ. ಅಲ್ಲಿ ಗಿಡ ಬೆಳೆಯುವ ಕಾರಣ ನಾವಿಲ್ಲಿ ನಾಲ್ಕನೇ ಮಹಡಿಯಲ್ಲಿ ಕುಳಿತಿದ್ದರೂ ಉದ್ಯಾನದಲ್ಲಿ ಕುಳಿತಿರುವ ಅನುಭವ ನೀಡುತ್ತೆ. ಜೊತೆಗೆ ಮಳೆ ನೀರು ಕೊಯ್ಲನ್ನೂ ನಾವು ಈ ಕಟ್ಟಡಕ್ಕೆ ಅಳವಡಿಸಿದ್ದೇವೆ’ ಅಂತ ‘ದಿ ಮೈನ್ಯೂಟ್ ಬಿಸ್ಟ್ರೋ’ ಕುರಿತು ಹೇಳುತ್ತಾರೆ ಇನಾಯತ್ ಅನ್ಸಾರಿ.
ಇಲ್ಲಿ ಸಮಯ ಕಳೆಯಲು ಬರುವ ಜನರಿಗೆ ಸಹಾಯ ಮಾಡಲೆಂದು ಕೆಲ ಸಿಬ್ಬಂದಿಗಳೂ ಇದ್ದಾರೆ. ಇಲ್ಲಿ ಕೆಲಸ ಮಾಡುವ ಬೇಕರ್ ರುಚಿ ರುಚಿಯಾದ ಮೂರು ಬಗೆಯ ಬ್ರೆಡ್ ಮತ್ತು ಕುಕೀಸ್‍ಗಳನ್ನು ಮಾಡಿಕೊಡ್ತಾರೆ. ಹಾಗೇ ಇಲ್ಲಿ ಹಣ್ಣು – ತರಕಾರಿಗಳಿವೆ. ಗ್ರಾಹಕರು ತಮಗಿಷ್ಟ ಬಂದ ಹಣ್ಣನ್ನು ತಾವೇ ತೆಗೆದುಕೊಂಡು ತಿನ್ನಬಹುದು. ಸ್ಯಾಂಡ್‍ವಿಚ್ ಟೋಸ್ಟರ್ ಇದೆ. ಗ್ರಾಹಕರು ತಾವೇ ಸ್ಯಾಂಡ್‍ವಿಚ್ ಮಾಡಿಕೊಂಡು ತಿನ್ನಬಹುದು. ಆವರಣದ ಶುಚಿತ್ವ ಹಾಗೂ ತಿಂಡಿ, ತಿನಿಸುಗಳು ಖಾಲಿಯಾದಾಗ ಅದನ್ನು ಮತ್ತೆ ತುಂಬಿಡಲೆಂದೇ ಇಬ್ಬರು ಕೆಲಸಗಾರರಿದ್ದಾರೆ. ಉಪಹಾರ, ಹಾಲು, ಕಾಫಿ ಮತ್ತು ಟೀ ಸೇರಿದಂತೆ ಇನ್ನೂ ಹಲವಾರು ಬಗೆಯ ತಿಂಡಿಗಳು ಹಾಗೂ ಪಾನೀಯಗಳು ಕೂಡ ಮೆನುನಲ್ಲಿದೆ. ಇತ್ತೀಚೆಗಷ್ಟೇ ಇನಾಯತ್ ಮತ್ತು ನಿಖಿಲ್ ‘ದಿ ಮೈನ್ಯೂಟ್ ಬಿಸ್ಟ್ರೋ’ನಲ್ಲಿ ಹೊಸದಾಗಿ ಮೊಟ್ಟೆ ಹಾಗೂ ಚಿಕನ್ ಉಪಹಾರಗಳನ್ನೂ ಕೊಂಚ ಹೆಚ್ಚು ಬೆಲೆಗೆ ನೀಡಲಾಗುತ್ತಿದೆ.
ಹೀಗೆ ಇಲ್ಲಿಗೆ ಬಂದು ತಮಗಿಷ್ಟ ಬಂದಂತೆ ಆಟವಾಡಿಕೊಂಡು, ಟಿವಿ ನೋಡಿಕೊಂಡು, ಪುಸ್ತಕ ಓದಿಕೊಂಡು, ತಮಗಿಷ್ಟ ಬಂದ ತಿಂಡಿಯನ್ನು ತಿನ್ನುತ್ತಾ, ಮನೆಯಲ್ಲಿದ್ದಂತೆಯೇ ಕಾಲ ಕಳೆಯಬಹುದು. ಪ್ರತಿ ನಿಮಿಷಕ್ಕೆ ಐದು ರೂಪಾಯಿಯಂತೆ ಹಣ ಕೊಟ್ಟು ಕುಟುಂಬ ಸಮೇತರಾಗಿ ಅಥವಾ ಗೆಳೆಯ/ ಗೆಳತಿಯರೊಂದಿಗೆ, ಹುಟ್ಟುಹಬ್ಬದ ಆಚರಣೆ, ಅಫಿಶಿಯಲ್ ಮೀಟಿಂಗ್ ಸೇರಿದಂತೆ ಸುಮ್ಮನೆ ಟೈಂ ಪಾಸ್ ಮಾಡಲು ಬರುತ್ತಾರೆ. ಕೆಲ ಕಾಲವಿದ್ದು ಸಣ್ಣ ಸಣ್ಣ ಖುಷಿಗಳೊಂದಿಗೆ ವಾಪಸ್ಸಾಗುತ್ತಾರೆ.
ಇನಾಯತ್ ಅನ್ಸಾರಿ ಹಾಗೂ ನಿಖಿಲ್ ಕಾಮತ್‍ರ ಈ ಕಾನ್ಸೆಪ್ಟ್ಗೆ ಗ್ರಾಹಕರಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಹೀಗಾಗಿಯೇ ಕಸ್ತೂರಿನಗರದಲ್ಲಿರುವ ‘ದಿ ಮೈನ್ಯೂಟ್ ಬಿಸ್ಟ್ರೋ’ಗೆ ಬರುವವರಲ್ಲಿ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಕಾರ್ಪೊರೇಟ್ ಕಂಪನಿ ಉದ್ಯೋಗಿಗಳೇ ಹೆಚ್ಚು. ಒಟ್ಟಾರೆ ಹೊಸತನಕ್ಕೆ ಎಂದಿದ್ದರೂ ಜನ ಮಣೆ ಹಾಕ್ತಾರೆ ಅನ್ನೋದಕ್ಕೆ ಈ ‘ದಿ ಮೈನ್ಯೂಟ್ ಬಿಸ್ಟ್ರೋ’ ಉತ್ತಮ ಉದಾಹರಣೆ.
Related Stories
March 14, 2017
March 14, 2017
March 14, 2017
March 14, 2017
March 14, 2017
March 14, 2017
Stories by VISHANTH
March 14, 2017
March 14, 2017