ಇರಾಕಿ ರ್ಯಾಂಬೋ- ಐಸಿಸ್ ವಿರುದ್ಧ ಹೋರಾಡ್ತಿರೋ ಸಾವಿನ ದೇವತೆ

ವಿಶಾಂತ್​​

0

ಇವತ್ತು ಪ್ರಪಂಚವನ್ನೇ ಕಾಡುತ್ತಿರುವ ರಾಕ್ಷಸ ಸಮಸ್ಯೆ ಅಂದ್ರೆ ಅದು ಭಯೋತ್ಪಾದನೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿರುವ ಭಯೋತ್ಪಾದನೆ ಸಂಘಟನೆ ಐಸಿಸ್ ಅರ್ಥಾತ್ ಐಎಸ್‍ಐಎಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ & ಲಿಬಿಯಾ). ಇಂತಹ ಐಸಿಸ್ ಈಗಾಗಲೇ ಅಫ್ಘಾನಿಸ್ತಾನ, ಲಿಬಿಯಾ ಹಾಗೂ ಇರಾಕ್‍ಗಳಲ್ಲಿ ತನ್ನ ಕಬಂದಬಾಹು ಚಾಚಿದ್ದು, ಬೇರೆ ರಾಷ್ಟ್ರಗಳಲ್ಲೂ ತನ್ನ ಭಯೋತ್ಪಾದನೆ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಈಗಾಗಲೇ ಗಲ್ಫ್ ಹಾಗೂ ಇತರೆ ರಾಷ್ಟ್ರಗಳ ತಲೆಮಾಸಿದ ಶ್ರೀಮಂತ ಜನರಿಂದ ಹಣ ಪಡೆಯುತ್ತಿರುವ ಐಸಿಸ್ ಜನ ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಬೇರೆ ದೇಶಗಳಲ್ಲೂ ಆತ್ಮಾಹುತಿ ದಾಳಿಗಳನ್ನು ಮಾಡುತ್ತಾ, ಜನರನ್ನು ಬಲಿ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ಒಂದಾಗಿರುವ ಅಮೆರಿಕಾ ಮತ್ತು ನ್ಯಾಟೋ ಪಡೆಗಳು ಹಾಗೂ ಇರಾಕ್, ಲಿಬಿಯಾ ಮತ್ತು ಅಫ್ಘಾನಿಸ್ತಾಗಳ ಸ್ಥಳೀಯ ಸೇನೆಗಳು, ಐಸಿಸ್‍ಅನ್ನು ಮಟ್ಟ ಹಾಕಲು ಇನ್ನಿಲ್ಲದಂತೆ ಪ್ರಯತ್ನ ನಡೆಸಿವೆ. ಸಾವಿರಾರು ಮಂದಿ ಐಸಿಸ್ ವಿರುದ್ಧ ಹೋರಾಡಲು ತಾವೇ ಖುದ್ದಾಗಿ ಬಂದು ಕೈಜೋಡಿಸಿದ್ದಾರೆ. ಅಂತವರಿಗೆ ತರಬೇತಿ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸಿ ಐಸಿಸ್ ವಿರುದ್ಧ ಹೋರಾಡಲು ಕಳುಹಿಸಲಾಗುತ್ತಿದೆ. ಹೀಗೆ ತಾನಾಗಿಯೇ ಬಂದು ಐಸಿಸ್ ಭಯೋತ್ಪಾದಕರಿಗೆ ನೀರು ಕುಡಿಸುತ್ತಿರುವ ಸಾವಿರಾರು ಜನರಲ್ಲಿ ಪ್ರಮುಖರಾದವರು ಇರಾಕಿ ರ್ಯಾಂಬೋ.

ಇವರು ಇರಾಕಿ ರ್ಯಾಂಬೋ!!!

‘ರ್ಯಾಂಬೋ’. ಹಾಲಿವುಡ್‍ನ ಅತ್ಯಂತ ಯಶಸ್ವೀ ಸಿನಿಮಾ ಸರಣಿಗಳಲ್ಲೊಂದು. ನಾಯಕ ಸಿಲ್ವಸ್ಟರ್ ಸ್ಟಲ್ಲೋನ್, ಏಕಾಂಗಿಯಾಗಿ ಬೇರೆ ಬೇರೆ ದೇಶಗಳಲ್ಲಿ ಹೋರಾಡುವ ಸ್ಟೋರಿ. ಇರಾಕ್‍ನಲ್ಲೂ ಈಗ ಅಂತಹ ಒಬ್ಬ ನಾಯಕ ಇದ್ದಾನೆ. ಆತನೇ ಅಜು ಅಜ್ರೇಲ್. ಅಬು ಅಜ್ರೇಲ್ ಮೂಲ ಹೆಸರು ಆಯುಬ್ ಫಲೇಹ್ ಆಲ್ ರುಬಾಯ್, ಆದ್ರೆ ಸದ್ಯ ಇರಾಕ್‍ನಲ್ಲಿ ಐಸಿಸ್ ವಿರುದ್ಧ ಹೋರಾಡ್ತಿರೋ ಈತ ಏಂಜಲ್ ಆಫ್ ಡೆತ್ (ಸಾವಿನ ದೇವತೆ) ಹಾಗೂ ಇರಾಕಿ ರ್ಯಾಂಬೋ ಅಂತಲೇ ಫೇಮಸ್.

ಯಾರು ಈ ಅಬು ಅಜ್ರೇಲ್?

ಅಬು ಅಜ್ರೇಲ್ ಕುರಿತು ಹಲವು ಸುದ್ದಿಗಳಿವೆ. ಆದ್ರೆ ಅದರಲ್ಲಿ ಯಾವುದು ನಿಜ, ಯಾವುದು ಸುಳ್ಳು ಅನ್ನೋದು ಮಾತ್ರ ಯಾರಗೂ ಗೊತ್ತಿಲ್ಲ. ಸುಮಾರು 40 ರಿಂದ 45 ವರ್ಷದ ಅಬು ಶಿಯಾ ಪಂಗಡಕ್ಕೆ ಸೇರಿದವ. ಈ ಹಿಂದೆ ವಿಶ್ವವಿದ್ಯಾಲಯವೊಂದರಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದನಂತೆ. ಅಲ್ಲದೇ ಆತ ಸಮರ ಕಲೆಯಾದ ಟೆಕ್ವಾಂಡೋ ಚಾಂಪಿಯನ್ ಕೂಡ ಆಗಿದ್ದ ಅನ್ನೋ ಮಾಹಿತಿಯೂ ಇದೆ. ಅಬು ಅಜ್ರೇಲ್‍ಗೆ ಮದುವೆಯಾಗಿದ್ದು, ಐವರು ಮಕ್ಕಳಿದ್ದಾರಂತೆ. ಯುದ್ಧದಲ್ಲಿ ಇರದ ಸಮಯದಲ್ಲಿ ಆತನೂ ಸಾಮಾನ್ಯ ಜನರಂತೆ ಜೀವನ ಸಾಗಿಸುತ್ತಾನೆ ಎನ್ನಲಾಗಿದೆ. ಈತ ಒಬ್ಬ ಇರಾಕಿ ಕ್ರೈಸ್ತ ಅಂತಲೂ ಹೇಳಲಾಗುತ್ತಿದೆ. ಅಲ್ಲದೇ ಕಳೆದ 2014ರ ಜೂನ್‍ನಲ್ಲಿ ಇರಾಕ್‍ನಲ್ಲಿ ಐಸಿಸ್ ಉಪಟಳ ಹೆಚ್ಚಾದ ಕಾರಣ, ಸ್ಥಳೀಯ ಮುಸ್ಲಿಂ ಗುರು ಒಬ್ಬರು ಸಾಮಾನ್ಯ ಜನರೂ ನಾಡಿನ ರಕ್ಷಣೆಗೆ ಶಸ್ತ್ರಗಳನ್ನು ಹಿಡಿದು ಹೋರಾಟಕ್ಕಿಳಿಯಬೇಕು ಅಂತ ಘೋಷಿಸಿದ್ದರು. ಅವರ ಮಾತುಗಳಿಂದ ಪ್ರೇರೇಪಿತನಾಗಿ ಅಬು ಅಜ್ರೇಲ್ ಐಸಿಸ್ ವಿರುದ್ಧದ ಹೋರಾಟಕ್ಕೆ ಇಳಿದಿರಬಹುದು ಅಂತಲೂ ಹಲವರು ಅಭಿಪ್ರಾಯಿಸಿದ್ದಾರೆ.

ಮತ್ತೊಂದು ಮಾಹಿತಿ ಪ್ರಕಾರ ಈ ಅಬು ಅಜ್ರೇಲ್ ಇರಾನ್‍ನ ಸೃಷ್ಟಿಸಿರುವ ಸುಳ್ಳು ನಾಯಕ ಅಂತಲೂ ಹೇಳಲಾಗ್ತಿದೆ. ಯಾಕಂದ್ರೆ ಅಬು ಅಜ್ರೇಲ್ ಇರಾಕ್‍ನ ಶಿಯಾ ಸೇನೆಯ ವಿಭಾಗವಾದ ಕತೈಬ್ ಆಲ ಇಮಾಮ್ ಅಲಿಯ ಕಮಾಂಡರ್ ಆಗಿದ್ದು, ಅವರಿಗೆ ಇರಾನ್‍ನ ಬೆಂಬಲವಿದೆ. ಜೊತೆಗೆ ಮತ್ತೊಂದೆಡೆ ಸೌದಿ ಅರೇಬಿಯಾ, ಯೆಮೆನ್‍ನಲ್ಲಿ ಹೌತಿ ಬಂಡುಕೋರರ ವಿರುದ್ಧ ದಂಡೆತ್ತಿ ಹೋಗಿದೆ. ಹೌತಿ ಮುಜಾಹಿದ್ದೀನ್‍ನೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಇರಾನ್ ಈಗ ಅವರ ಬೆಂಬಲಕ್ಕೆ ನಿಲ್ಲುವುದು ಅನಿವಾರ್ಯವಾಗಿದೆ. ಆದ್ರೆ ತಾನು ನೇರವಾಗಿ ಈ ವಿಷಯದಲ್ಲಿ ತಲೆ ಹಾಕದೇ ಅಬು ಅಜ್ರೇಲ್ ಮೂಲಕ ಸೌದಿ ಅರೇಬಿಯಾಗೆ ಎಚ್ಚರಿಕೆ ನೀಡಿಸುತ್ತಿದೆ ಅನ್ನೋದು ಕೆಲವರ ಅಭಿಪ್ರಾಯ. ಅದರ ಫಲಿತಾಂಶವೇ ಇದೇ ಅಕ್ಟೋಬರ್‍ನಲ್ಲಿ ಬಿಡುಗಡೆ ಮಾಡಿದ ವೀಡಿಯೋ. ಅದರಲ್ಲಿ ಹೌತಿ ಮುಜಾಹಿದ್ದೀನ್ ನಾಯಕರೊಂದಿಗೆ ನಿಂತಿರುವ ಅಬು ಅಜ್ರೇಲ್ ಸೌದಿ ಅರೇಬಿಯಾಗೆ ಹೋರಾಟವನ್ನು ಕೈಬಿಡುವಂತೆ ಸೂಚಿಸಿದ್ದಾನೆ.

ಐಸಿಸ್ ವಿರುದ್ಧ ಹೋರಾಟ

ಅಬು ಅಜ್ರೇಲ್ ಈ ಒಂದೂವರೆ ವರ್ಷದಲ್ಲಿ ಬರೊಬ್ಬರಿ 1,500ಕ್ಕೂ ಹೆಚ್ಚು ಐಸಿಸ್ ಉಗ್ರರನ್ನು ಕೊಂದಿದ್ದಾನೆ ಎನ್ನಲಾಗಿದೆ. ಈ ಮಾಹಿತಿಯೂ ನಿಜವೋ ಸುಳ್ಳೋ ಗೊತ್ತಿಲ್ಲ. ಆದ್ರೆ ಇದೇ ಸುದ್ದಿಯಿಂದಲೇ ಅಬು ಅಜ್ರೇಲ್ ಇರಾಕಿ ರ್ಯಾಂಬೋ ಹಾಗೂ ಏಂಜೆಲ್ ಆಫ್ ಡೆತ್ ಅನ್ನೋ ಖ್ಯಾತಿ ಪಡೆದಿದ್ದಾನೆ.

ಬೋಳು ತಲೆ, ಕೆನ್ನೆ ತುಂಬಾ ನೀಳ ಗಡ್ಡ, ಹುರಿಗೊಳಿಸಿದ ದೇಹ, ಸೇನಾ ಸಮವಸ್ತ್ರ, ಆಧುನಿಕ ಮೆಷಿನ್‍ಗನ್‍ಗಳು, ರಾಕೆಟ್ ಲಾಂಚರ್, ಗ್ರೆನೇಡ್ ಬಾಂಬ್... ಹೀಗೆ ಅಬು ಅಜ್ರೇಲ್ ಲುಕ್ಕೇ ಎಂಥವರನ್ನೂ ಸೆಳೆಯುವಂತಿದೆ. ಹಲವು ಬಗೆಯ ನೂತನ ಶಸ್ತ್ರಗಳ ಜೊತೆಗೆ ಡ್ಯಾಗರ್, ಖಡ್ಗ ಹಾಗೂ ಕೊಡಲಿಗಳನ್ನೂ ಅಬು ಅಜ್ರೇಲ್ ಬಳಸುತ್ತಾನೆ. ಹಾಗೂ ಯುದ್ಧದ ಸಮಯದಲ್ಲಿ ತಾನೇ ವೀಡಿಯೋಗಳನ್ನು ಶೂಟ್ ಮಾಡಿ, ಸೆಲ್ಫೀ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಫೇಸ್‍ಬುಕ್ ಸೇರಿದಂತೆ ಇತರೆ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಅಪ್‍ಲೋಡ್ ಮಾಡ್ತಾನೆ. ಇದನ್ನೆಲ್ಲಾ ನೋಡಿದ್ರೆ ಪ್ರಚಾರಪ್ರಿಯನಂತೆ ಕಾಣುವ ಅಬು ಅಜ್ರೇಲ್ ಪೇಜ್‍ಅನ್ನು ಬರೊಬ್ಬರಿ 3 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಹೆಚ್ಚಾಗಿ ಇರಾಕಿನವರೇ ಈತನನ್ನು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಫಾಲೋ ಮಾಡುತ್ತಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಅಬು ಅಜ್ರೇಲ್ ಅಪ್‍ಲೋಡ್ ಮಾಡಿದ್ದ ವೀಡಿಯೋ ಒಂದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಯಾಕಂದ್ರೆ ಸೆರೆಹಿಡಿದ ಐಸಿಸ್ ಉಗ್ರನನ್ನು ಜೀವಂತ ಸುಟ್ಟು, ನಂತರ ಆತನ ತೊಡೆ ಕತ್ತರಿಸಿ ಅದರಲ್ಲಿನ ಮಾಂಸ ತೆಗೆದು ಕ್ಯಾಮರಾ ಮುಂದೆ ತೋರಿಸಿದ್ದ ಅಬು ಅಜ್ರೇಲ್. ಬಳಿಕ ಆ ಮೃತ ದೇಹವನ್ನೆತ್ತೆ ನೇತುಹಾಕಿದ್ದ. ಇದನ್ನು ನೋಡಿದ ಹಲವಾರು ಮಂದಿ ಐಸಿಸ್ ಉಗ್ರರಂತೆಯೇ, ಇರಾಕಿ ಶಿಯಾ ಹೋರಾಟಗಾರನಾದ ಅಬು ಅಜ್ರೇಲ್ ಕೂಡ ಮಾನವೀಯತೆ ಮರೆತಿದ್ದಾನೆ ಅಂತ ಕಿಡಿ ಕಾರಿದ್ದರು.

ಆದ್ರೆ ಅಬು ಅಜ್ರೇಲ್ ಮಾತ್ರ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ಐಸಿಸ್ ವಿರುದ್ಧದ ತನ್ನ ಹೋರಾಟವನ್ನು ಧೈರ್ಯಶಾಲಿಯಾಗಿ ಮುಂದುವರಿಸಿದ್ದಾನೆ. ಮುಯ್ಯಿಗೆ ಮುಯ್ಯಿ ಅನ್ನೋ ಹಾಗೆ, ಹಿಂಸೆಗೆ ಹಿಂಸೆಯಿಂದಲೇ, ಕ್ರೌರ್ಯಕ್ಕೆ ಕ್ರೌರ್ಯದಿಂದಲೇ ಉತ್ತರ ಕೊಡಬೇಕು ಅನ್ನೋದು ಆತನ ಪಾಲಿಸಿ. ಈ ನಿಟ್ಟಿನಲ್ಲಿ ‘ಕೊನೆಯ ಐಸಿಸ್ ಉಗ್ರನನ್ನು ಬೂದಿ ಮಾಡುವವರೆಗೂ ತನ್ನ ಹೋರಾಟ ಮುಂದುವರೆಯಲಿದೆ’ ಅಂತ ಖುದ್ದು ಅಬು ಅಜ್ರೇಲ್ ಹೇಳಿಕೊಂಡಿದ್ದಾನೆ.

ಹೀಗೆ ಕೆಲವರಿಗೆ ನಾಯಕನಂತೆಯೂ ಕೆಲವರಿಗೆ ಖಳನಾಯಕನಂತೆಯೂ ಕಾಣುವ ಅಬು ಅಜ್ರೇಲ್ ಸದ್ಯ ವಿಶ್ವದಾದ್ಯಂತ ಸಖತ್ ಸುದ್ದಿ ಮಾಡುತ್ತಿದ್ದಾನೆ.

Related Stories