ವೃತ್ತಿ - ವೈಯಕ್ತಿಕ ಬದುಕಿನ ಸಮತೋಲನ ಕಾಯ್ದುಕೊಳ್ಳುವ 5 ಬಗೆ...

ಟೀಮ್​​ ವೈ.ಎಸ್​​.ಕನ್ನಡ

ವೃತ್ತಿ - ವೈಯಕ್ತಿಕ ಬದುಕಿನ ಸಮತೋಲನ ಕಾಯ್ದುಕೊಳ್ಳುವ 5 ಬಗೆ...

Wednesday November 25, 2015,

3 min Read

ಉದ್ಯಮದ ಆರಂಭಿಕ ಕೆಲಸಗಳು ಹೇಳಿಕೊಳ್ಳೋಕೆ ತಮಾಷೆಯಾಗಿರುತ್ತವೆ. ನಿಮಗಿಷ್ಟವಾದ ಟಿ-ಶರ್ಟ್ ಧರಿಸಿ ಕಚೇರಿಗೆ ಹೋಗೋದು, ಗ್ರಾಹಕರ ಕರೆಗಾಗಿ ಕಾಯುತ್ತಲೇ ಫುಟ್ಬಾಲ್ ಆಡೋದು ಖುಷಿ ಕೊಡುತ್ತೆ. ವೃತ್ತಿಪರವಾಗಿ ನೀವು ಕೆಲಸ ಮಾಡ್ತಿಲ್ಲ ಅಂತೆಲ್ಲ ಆಕ್ಷೇಪಿಸುವವರು ಇರೋದಿಲ್ಲ. ಇಂತಹ ಆರಂಭಿಕ ಪರಿಸರ ಸಾಕಷ್ಟು ಬೇಡಿಕೆಯನ್ನೂ ಪಡೆಯಬಹುದು. ನಿಗದಿತ ಗಡುವಿನೊಳಗೆ ಕೆಲಸ ಮುಗಿಸಲು ನೀವು ಓವರ್ ಟೈಮ್ ಮಾಡಬೇಕಾಗಿ ಬರಬಹುದು, ಅಥವಾ ಮನೆಯಲ್ಲೂ ಕೆಲಸ ಮಾಡಬೇಕಾಗಬಹುದು. ಸಂಸ್ಥೆ ಅಭಿವೃದ್ಧಿ ಹೊಂದಿದಂತೆಲ್ಲಾ ಕೆಲಸದ ಒತ್ತಾಡ ಹೆಚ್ಚಾಗ್ತಾ ಹೋಗುತ್ತೆ. ಈ ಒತ್ತಡದ ನಡುವೆಯೂ ಗೆಲುವಿನ ಕನಸು ಕಾಣುವುದ ಸಹಜ. ಆದ್ರೆ ನಿಧಾನವಾಗಿ ಮತ್ತು ಖಂಡಿತವಾಗಿ ನೀವು ನಿಮ್ಮ ವೈಯಕ್ತಿಕ ಬದುಕಿನ ಕೆಲ ಸಂತೋಷಗಳನ್ನು ಕಳೆದುಕೊಳ್ಳುತ್ತೀರಾ. ನಿಮ್ಮ ವೃತ್ತಿ ಬದುಕು, ವೈಯಕ್ತಿಕ ಜೀವನಕ್ಕಿಂತ ಹೆಚ್ಚು ಪ್ರಾಧಾನ್ಯತೆ ಪಡೆದುಕೊಳ್ಳುತ್ತದೆ. ಕೆಲಸ ಹಾಗೂ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ನಿಜಕ್ಕೂ ಸವಾಲಾಗಿ ಪರಿಣಮಿಸುತ್ತದೆ. ವೃತ್ತಿ ಮತ್ತು ಬದುಕಿನ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ಇರುವ ಕೆಲ ಅವಕಾಶಗಳನ್ನು ನೋಡೋಣ.

ಮೊದಲ ಕೆಲಸ ಮೊದಲು...

ಸಮಯ ಅನ್ನೋದು ಎಲ್ಲಕ್ಕಿಂತ ಅತ್ಯಮೂಲ್ಯವಾದದ್ದು. ನಾವು ಅಂದುಕೊಂಡಿದ್ದನ್ನು ಸಾಧಿಸಲು ದಿನದ 24 ಗಂಟೆ ಕೆಲಸ ಮಾಡಿದ್ರೂ ಸಾಕಾಗೋದಿಲ್ಲ ಅನಿಸೋದುಂಟು. ಹಾಗಾಗಿ ಆ ದಿನದ ಕಾರ್ಯಗಳನ್ನು ಆದ್ಯತೆ ಮೇರೆಗೆ ಮಾಡೋದು ಅತ್ಯವಶ್ಯ. ಒಂದೇ ಸಮಯಕ್ಕೆ, ಒಂದೇ ಬಾರಿಗೆ ಎಲ್ಲ ಕೆಲಸವನ್ನೂ ಮಾಡೋದು ಅಸಾಧ್ಯ ಅನ್ನೋ ಸತ್ಯವನ್ನು ನೀವು ಅರ್ಥಮಾಡಿಕೊಳ್ಳಬೇಕು. ಕಡಿಮೆ ಆದ್ಯತೆಯ ಕೆಲಸಗಳನ್ನು ನೀವು ಬಿಡಬೇಕಾಗಿ ಬರಬಹುದು. ಇದಕ್ಕೆ ಉನ್ನತ ಮಟ್ಟದ ಯೋಜನೆ ಹಾಗೂ ರಚನೆಯ ಅಗತ್ಯವಿದೆ. ಅದರಿಂದ ಯಾವುದೇ ಲೋಪವಾಗದಂತೆ ಕೆಲಸ ಮತ್ತು ಮನರಂಜನೆ ಚಟುವಟಿಕೆ ಎರಡರಲ್ಲೂ ತೊಡಗಿಕೊಳ್ಳಬಹುದು. ನೀವು ಕಚೇರಿಯಲ್ಲಿ ಆದ್ಯತೆ ಮೇರೆಗೆ ಕೆಲಸ ಮಾಡುವುದು ಮಾತ್ರವಲ್ಲ, ಕಚೇರಿ ಕೆಲಸದ ಬಳಿಕ ಮಾಡಬೇಕಾದ ಕೆಲಸಗಳಲ್ಲೂ ತುರ್ತಾದ ಹಾಗೂ ಮಹತ್ವದ್ದಕ್ಕೆ ಪ್ರಾಮುಖ್ಯತೆ ಕೊಡಬೇಕು. ಮೊವಿಯೋ ಆ್ಯಪ್ಸ್‍ನ ಮಾರ್ಕೆಟಿಂಗ್ ಸ್ಟ್ರಾಟಜಿಸ್ಟ್ ಆನಲ್ ಭಟ್ ಅವರ ಅನುಭವದ ಪ್ರಕಾರ, ಅವರು ಪ್ರತಿ ತಿಂಗಳ ಆರಂಭದಲ್ಲಿ ತಾವು ಮಾಡಬೇಕಾದ ಎಲ್ಲ ಕೆಲಸಗಳನ್ನು ಪಟ್ಟಿ ಮಾಡ್ತಾ ಇದ್ರು.

image


1. ದೀರ್ಘಕಾಲದಿಂದ ಬಾಕಿ ಇರುವ ಬಿಲ್‍ಗಳ ಪಾವತಿ

2. ಸಲೂನ್‍ನಲ್ಲಿ ಅಪಾಯಿಂಟ್‍ಮೆಂಟ್ ಫಿಕ್ಸ್ ಮಾಡುವುದು

3. ಸ್ನೇಹಿತರಿಗಾಗಿ ಸಂತೋಷಕೂಟ ಆಯೋಜನೆ, ಕುಟುಂಬದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು

4. ನಮಗಿಷ್ಟವಾದ ಲೇಖಕರ ಇತ್ತೀಚಿನ ಕಾದಂಬರಿಯನ್ನು ಓದಿ ಮುಗಿಸುವುದು

5. ಹೊಸ ಜೀವನ ಕೌಶಲ್ಯ ಕಲಿಕೆ

ಹೀಗೆ ಈ ಎಲ್ಲ ವೈಯಕ್ತಿಕ ಕೆಲಸಗಳನ್ನು ಆದ್ಯತೆಯ ಮೇಲೆ ಆನಲ್ ಮಾಡಿ ಮುಗಿಸ್ತಾರೆ. ಆದ್ರೆ ಇದರಲ್ಲಿ ಎಲ್ಲವನ್ನೂ ಮಾಡುವುದು ಅಸಾಧ್ಯ. ಅದಕ್ಕಾಗಿಯೇ ವೈಯಕ್ತಿತ ಹಾಗೂ ವೃತ್ತಿಪರ ಕೆಲಸಗಳನ್ನು ಆದ್ಯತೆಯ ಮೇರೆಗೆ ಪಟ್ಟಿ ಮಾಡಿಕೊಳ್ಳಬೇಕು.

ನಿಮ್ಮ ಮ್ಯಾನೇಜರ್‍ಗೆ ಎಲ್ಲವೂ ತಿಳಿದಿರಲಿ...

ಉದ್ಯಮದ ಆರಂಭದಲ್ಲಿ ನೀವು ಹತ್ತಾರು ಕೆಲಸಗಳನ್ನು, ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತೆ. ನಿಮ್ಮ ಪಾತ್ರ ವಿಭಿನ್ನವಾಗಿದ್ದರೂ ಅದನ್ನೆಲ್ಲ ನೀವು ಮಾಡಬೇಕಾಗಿ ಬರಬಹುದು. ವೃತ್ತಿ-ವೈಯಕ್ತಿಕ ಬದುಕಿನ ಮಧ್ಯೆ ಸಮತೋಲನ ಕಾಪಾಡಿಕೊಳ್ಳಲು ನಿಮ್ಮ ಮ್ಯಾನೇಜರ್ ಅಥವಾ ತಂಡದ ನಾಯಕರ ಜೊತೆ ಮುಕ್ತವಾಗಿ ಮಾತನಾಡಿ. ನಿಮ್ಮ ಕೆಲಸ ಮತ್ತು ಜವಾಬ್ಧಾರಿಗಳನ್ನು ವೈಯಕ್ತಿಕ ಬದುಕಿನ ಜೊತೆ ಹೇಗೆ ಸಮರ್ಥವಾಗಿ ನಿಭಾಯಿಸುತ್ತೀರಾ ಎಂಬುದನ್ನು ಅವರಿಗೆ ವಿವರಿಸಿ. ನಿಮ್ಮ ಕರ್ತವ್ಯ, ಜವಾಬ್ಧಾರಿ ಹಾಗೂ ಕೆಲಸದ ದೃಷ್ಟಿಕೋನವನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಕೆಲಸದ ಬದ್ಧತೆಗಳೊಂದಿಗೆ ರಾಜಿ ಮಾಡಿಕೊಳ್ಳದೆ ಜವಾಬ್ಧಾರಿಗಳನ್ನು ಸೂಕ್ತವಾಗಿ ನಿರ್ವಹಿಸಲು ಪರಸ್ಪರ ಮಾತುಕತೆ ಅನಿವಾರ್ಯ. ಕೆಲಸಗಳನ್ನು ನಿಯೋಜಿಸುವ, ಜವಾಬ್ಧರಿಗಳನ್ನು ಬದಲಾಯಿಸುವ ಕೆಲಸಕ್ಕೆ ಮಾತುಕತೆ ಪರಸ್ಪರ ಲಾಭದಾಯಕವಾಗಲಿದೆ.

ಮನರಂಜನಾ ಕಾರ್ಯಗಳಿಗೂ ಸ್ಥಳವಿರಲಿ...

``ಆಟವಿಲ್ಲ, ಬರೀ ಕೆಲಸ ಜ್ಯಾಕ್‍ನನ್ನು ಮಂದ ಹುಡುಗನ್ನಾಗಿ ಮಾಡುತ್ತದೆ '' ಎಂಬ ಹಳೆಯ ನಾಣ್ಣುಡಿ ನಿಮ್ಮ ಪಾಲಿಗೆ ಎಚ್ಚರಿಕೆ ಘಂಟೆ. ನಿಮ್ಮ ಎಲ್ಲ ಸಮಯವನ್ನೂ ಕೆಲಸಕ್ಕಾಗಿ ಮೀಸಲಿಡದೆ, ಮನರಂಜನಾ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡ್ರೆ ನಿಮಗೆ ಅನೇಕ ಪ್ರಯೋಜನಗಳಿವೆ.

1. ಒತ್ತಡವನ್ನು ಕಡಿಮೆ ಮಾಡಲು ಸಹಕಾರಿ

2. ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ

3. ನಿಮ್ಮ ಸಾಮಾಜಿಕ ವಲಯ ವಿಸ್ತರಿಸಲಿದೆ

4. ನಿಮ್ಮಲ್ಲಿ ಕಾಂರ್ತಿ ವರ್ಧಿಸಲಿದೆ

5. ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲಿದೆ

6. ನೀವು ಪ್ರತಿದಿನ ಎದುರುನೋಡುವಂಥದ್ದೇನಾದ್ರೂ ಸಿಗಲಿದೆ

ಯೋಜನಾಬದ್ಧವಾಗಿ ನಿಮ್ಮ ಬಾಕಿ ಉಳಿದಿರುವ ಕೆಲಸಗಳನ್ನು ಪೂರೈಸಿದ್ರೆ, ವಿಶ್ರಾಂತಿ ಸಮಯವನ್ನು ಮನರಂಜನಾ ಚಟುವಟಿಕೆಗಳಲ್ಲಿ ಕಳೆಯಬಹುದು. ಅದು ನಿಮ್ಮ ದೀರ್ಘ ಸಮಯವನ್ನೇನೂ ತೆಗೆದುಕೊಳ್ಳುವುದಿಲ್ಲ. ಮಲಗುವ ಮುನ್ನ ಪುಸ್ತಕ ಓದುವುದು, ಪದಬಂಧ ಬಿಡಿಸುವುದು, ವಾಕಿಂಗ್ ಹೋಗೋದು, ಪ್ರೀತಿಯ ಸಾಕು ಪ್ರಾಣಿಗಳೊಂದಿಗೆ ಸಮಯ ಕಳೆಯೋದು ಹೀಗೆ ಈ ಎಲ್ಲಾ ಕೆಲಸಗಳು ನಿಮ್ಮ ಕಠಿಣ ಪರಿಶ್ರಮಕ್ಕೆ ನೆರವಾಗುತ್ತವೆ.

ಕಾರ್ಯಕ್ಷೇತ್ರಕ್ಕೆ ಸೂಕ್ತ ವಿನ್ಯಾಸವಿರಲಿ...

ಬಹುತೇಕ ಉದ್ಯಮಗಳು ಆರಂಭದಲ್ಲಿ ಫ್ರೀಲಾನ್ಸರ್‍ಗಳು ಹಾಗೂ ವೃತ್ತಿಪರರಿಗೆ ಕೆಲಸವನ್ನು ಹೊರಗುತ್ತಿಗೆಗೆ ನೀಡುವುದು ಸಾಮಾನ್ಯ. ನೀವೇನಾದ್ರೂ ಇಂತಹ ವೃತ್ತಿಪರರ ಕೈಕೆಳಗೆ ಕೆಲಸ ಮಾಡಬೇಕಾಗಿ ಬಂದಲ್ಲಿ ನಿಮ್ಮ ಕಾರ್ಯಕ್ಷೇತ್ರಕ್ಕೆ ಸೂಕ್ತ ವಿನ್ಯಾಸ ಇರಲೇಬೇಕು. ನಿಮ್ಮ ಕೆಲಸದ ಮೇಲೆ ಹೆಚ್ಚಿನ ಗಮನಹರಿಸಲು ಇದು ನೆರವಾಗುತ್ತದೆ. ಈ ಮೂಲಕ ನೀವು ಕೆಲಸ - ಹಾಗೂ ವೈಯಕ್ತಿಕ ಬದುಕಲ್ಲಿ ಸಮತೋಲನ ಸಾಧಿಸಬಹುದು. ಅದು ಯಾವುದೇ ಸ್ಥಳವಾಗಿರಲಿ, ನಿಮ್ಮ ಮನೆಯ ಮೂಲೆಯಾಗಿರಲಿ, ಉತ್ಪಾದಕತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಬಾಕಿ ಇರುವ ಕೆಲಸ ಪೂರೈಸುವವರೆಗೂ ಜಾಗ ಬಿಟ್ಟು ಕದಲದಿರಿ. ಒಮ್ಮೆ ಕೆಲಸ ಮುಗಿಯಿತು ಎಂದಾಕ್ಷಣ, ಅದನ್ನೆಲ್ಲ ಬದಿಗಿಟ್ಟು ಕುಟುಂಬದವರನ್ನು ಕೂಡಿಕೊಳ್ಳಿ.

ಯಾವಾಗ ಡಿಸ್‍ಕನೆಕ್ಟ್ ಮಾಡಬೇಕೆಂಬುದು ಗೊತ್ತಿರಲಿ...

ತಂತ್ರಜ್ಞಾನ ಹಾಗೂ ಶಬ್ಧದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಆದ್ರೆ ಎಲ್ಲದಕ್ಕೂ ಆಫ್ ಬಟನ್ ಇರುತ್ತೆ ಅನ್ನೋದೇ ಸಮಾಧಾನಕರ ವಿಷಯ. ನಿಮ್ಮ ಕಾರ್ಯಕ್ಷೇತ್ರದಿಂದ ಹೊರಡುವ ಮುನ್ನ ನೀವು ಮಾಡಬೇಕಾಗಿದ್ದಷ್ಟೆ, ಸಿಸ್ಟಮ್ ಅನ್ನು ಸ್ವಿಚ್ ಆಫ್ ಮಾಡೋದು. ಆದ್ರೆ ಸದಾಕಾಲ ಆನ್‍ಲೈನ್‍ನಲ್ಲೇ ಇರಬೇಕಾದಂತಹ ಕೆಲಸವಿದ್ರೆ ನಿಜಕ್ಕೂ ಕಷ್ಟಕರ. ಆದ್ರೂ ಕೆಲಸ ಮತ್ತು ವೈಯಕ್ತಿಕ ಬದುಕಿನ ಸಮೀಕರಣಕ್ಕಾಗಿ ನೀವು ಅದನ್ನು ಆಫ್ ಮಾಡಲೇಬೇಕು. ತಂತ್ರಜ್ಞಾನ ಇಷ್ಟೊಂದು ಮುಂದುವರಿಯದ ಆ ದಿನಗಳನ್ನು ನೆನಪಿಸಿಕೊಳ್ಳಿ, ಪದೇ ಪದೇ ಮೊಬೈಲ್ ಅಪ್‍ಡೇಟ್‍ಗಳನ್ನು ಚೆಕ್ ಮಾಡೋದನ್ನು ಬಿಟ್ಟು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಬೆರೆಯಿರಿ. ಮನೆಗೆ ಬಂದ ತಕ್ಷಣ ನಿಮ್ಮ ಕಚೇರಿಯ ಇಮೇಲ್ ಅನ್ನು ಲಾಗ್‍ಔಟ್ ಮಾಡಿ, ಮೊಬೈಲ್ ಅನ್ನು ಸೈಲೆಂಟ್ ಮೋಡ್‍ಗೆ ಹಾಕ್ಬಿಡಿ. ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಕೆಲಸದ ಬಗ್ಗೆ ಮಾತನಾಡದೇ ಇರುವುದು ಒಳಿತು. ನಿಮ್ಮ ಕಾರ್ಯಕ್ಷೇತ್ರದಲ್ಲೇ ಕೆಲಸದ ವಿಚಾರಗಳನ್ನು ಬಿಟ್ಟು ಬನ್ನಿ.

ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಬದುಕು ಪರಸ್ಪರ ಜೊತೆಯಾಗಿರುವುದರಿಂದ ಪರಿಪೂರ್ಣ ಬದುಕು ನಡೆಸುವುದು ಅಷ್ಟು ಸುಲಭವಲ್ಲ. ಅದರಲ್ಲಿ ಯಶಸ್ವಿಯಾಗುವವರೆಗೂ ನೀವು ವಿಭಿನ್ನ ಪ್ರಯತ್ನಗಳನ್ನು ಮಾಡಲೇಬೇಕು.

ಲೇಖಕರು: ಆನಲ್​​ ಭಟ್​​

ಅನುವಾದಕರು: ಭಾರತಿ ಭಟ್​​​