ಲೀಸ್ ಕೊಡೋದಕ್ಕೂ ಕೋಟಿ ಕೋಟಿ ದುಡ್ಡು !

ಟೀಮ್​​ ವೈ.ಎಸ್​​.ಕನ್ನಡ

ಲೀಸ್ ಕೊಡೋದಕ್ಕೂ ಕೋಟಿ ಕೋಟಿ ದುಡ್ಡು !

Friday November 20, 2015,

2 min Read

ಅಸೆಟ್ ಫೈನಾನ್ಸಿಂಗ್ ವೇದಿಕೆಯಾಗಿರುವ ಒರಿಗಾ ಲೀಸಿಂಗ್ ಸಂಸ್ಥೆಯು ಆಹ್ ವೆಂಚರ್ಸ್ ಮತ್ತು 500 ಸ್ಟಾರ್ಟ್ಅಪ್ ಮತ್ತು ಇತರ ಹೂಡಿಕೆದಾರರಿಂದ ಸುಮಾರು 7 ಕೋಟಿ ರೂಪಾಯಿ ಬಂಡವಾಳ ಸಂಗ್ರಹಿಸಿದೆ. ಸ್ವತ್ತುಗಳು, ಮಾನವಸಂಪನ್ಮೂಲ ಮತ್ತು ತಾಂತ್ರಿಕತೆಯನ್ನು ಲೀಸ್​​ಗೆ ನೀಡಲು ಈ ಬಂಡವಾಳ ಬಳಸಲಾಗುವುದು ಎಂದು ಒರಿಗಾ ಲೀಸಿಂಗ್ ಘೋಷಿಸಿದೆ.

2013ರ ಮೇ ತಿಂಗಳಿನಲ್ಲಿ ಶ್ರೀರಂಗ್ ತಾಂಬೆಯವರಿಂದ ಸ್ಥಾಪಿಸಲ್ಪಟ್ಟ ಒರಿಗಾ ಲೀಸಿಂಗ್, ಬೆಳೆಯುತ್ತಿರುವ ಕಂಪನಿಗಳಿಗೆ ಸ್ವತ್ತುಗಳನ್ನು ಲೀಸ್​​ಗೆ ನೀಡುವ ಮೂಲಕ ಮತ್ತು ಪರ್ಯಾಯ ಆರ್ಥಿಕ ವ್ಯವಸ್ಥೆ ಕಲ್ಪಿಸುವ ಮೂಲಕ ಹಲವು ಕಂಪನಿಗಳಿಗೆ ನೆರವಾಗುತ್ತಿದೆ. ಆರೋಗ್ಯ ಕ್ಷೇತ್ರ, ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ, ಪರ್ಯಾಯ ಇಂಧನ, ಉತ್ಪಾದನೆ ಮತ್ತು ಸೇವೆ ಆಧರಿತ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ಅತ್ಯುತ್ತಮ ತಾಂತ್ರಿಕತೆಯ ಅಭಿವೃದ್ಧಿ, ಗ್ರಾಹಕರಿಂದ ಆರಂಭಿಸಿ ಸ್ವತ್ತು ನಿರ್ವಹಣೆಯವರೆಗೆ, ಅರ್ಥಪೂರ್ಣವಾಗಿ ಹೂಡಿಕೆ ಮಾಡುವುದೇ ಒರಿಗಾ ಲೀಸಿಂಗ್​​ನ ಮುಖ್ಯ ಉದ್ದೇಶ ಎನ್ನುತ್ತಾರೆ ಶ್ರೀರಂಗ್. ಲೀಸಿಂಗ್ ಉತ್ಪನ್ನಗಳಲ್ಲೂ ನಾವೀನ್ಯತೆ ಹುಡುಕುವ ಮೂಲಕ ನಾವು ಭಿನ್ನವಾಗಿದ್ದೇವೆ. ನಾವು ಜಗತ್ತಿನ ಅತಿ ದೊಡ್ಡ ಫಿನ್ಟೆಕ್ ಲೀಸಿಂಗ್ ಕಂಪನಿಯಾಗಬೇಕು ಎನ್ನುವ ಗುರಿ ಹಾಕಿಕೊಂಡಿದ್ದೇವೆ. ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಕೇವಲ ಭಾರತದಲ್ಲಿಯೇ 100 ಮಿಲಿಯನ್ ಡಾಲರ್ ಮೌಲ್ಯದಷ್ಟು ಸ್ವತ್ತುಗಳನ್ನು ಹೊಂದಬೇಕು ಎನ್ನುವುದು ಸಂಸ್ಥೆಯ ಗುರಿ ಎನ್ನುತ್ತಾರೆ ಶ್ರೀರಂಗ್.

image


ಈ ನವ್ಯೋದ್ಯಮವು ತನ್ನ ಗ್ರಾಹಕರಿಗೆ ಸ್ವತ್ತುಗಳನ್ನು ಭೋಗ್ಯಕ್ಕೆ ನೀಡುವ ಮೂಲಕ ಅವರಿಗೂ ಆದಾಯ ಬರುವಂತೆ ಮಾಡುತ್ತದೆ. ಇದು ಅಸೆಟ್ ಲೈಫ್ ಸೈಕಲ್ ಮ್ಯಾನೇಜ್ಮೆಂಟ್ ಎಂಬ ಸೊಲ್ಯುಷನ್ ಅನ್ನೂ ಅಭಿವೃದ್ಧಿಪಡಿಸಿದೆ. ಇದರಿಂದ ಒರಿಗಾ ಗ್ರಾಹಕರು ತಮ್ಮ ಬಂಡವಾಳವನ್ನು ದುಡಿಯುವ ಬಂಡವಾಳ ಮತ್ತು ಮಾರ್ಕೆಟಿಂಗ್ ಬಂಡವಾಳ ಎಂದು ವಿಂಗಡಿಸಬಹುದು. ಇತ್ತ ಒರಿಗಾ ಇವರ ಎಲ್ಲಾ ಸ್ವತ್ತುಗಳನ್ನು ನಿರ್ವಹಿಸುತ್ತದೆ. ಹಣಕಾಸು ವ್ಯವಸ್ಥೆಯನ್ನೂ ಇದೇ ವೇದಿಕೆಯಿಂದ ಕಲ್ಪಿಸುವುದು ಇವರ ಮುಂದಿನ ವಿಸ್ತರಣಾ ಚಟುವಟಿಕೆಯಾಗಿದೆ.

ಒಂದು ವರದಿಯ ಪ್ರಕಾರ, ಪರ್ಯಾಯ ಸಾಲಸೌಲಭ್ಯದ ಮಾರುಕಟ್ಟೆಯು ಸಧ್ಯಕ್ಕೆ 50 ಬಿಲಿಯನ್ ಡಾಲರ್ಗಳಷ್ಟಿದೆ. ಸಾಂಪ್ರದಾಯಿಕ ಸಾಲಸೌಲಭ್ಯ ಮತ್ತು ಹೊಸ ಕಂಪನಿಗಳ ಅವಶ್ಯಕತೆಗಳ ಮಧ್ಯೆ ಭಾರೀ ಅಂತರವಿದೆ. ಈ ವೇದಿಕೆಯು ಈ ಅಂತರವನ್ನು ಕಡಿಮೆ ಮಾಡಲು ನೆರವಾಗಲಿದೆ.

ಆಹ್ ! ವೆಂಚರ್ಸ್​ನ ಸಂಸ್ಥಾಪಕರು ಮತ್ತು ಸಿಇಒ ಆಗಿರುವ ಹರ್ಷದ್ ಲಹೋಟಿಯವರು ಹೂಡಿಕೆಯ ಬಗ್ಗೆ ವಿವರಣೆ ನೀಡುತ್ತಾರೆ. ಒರಿಗಾ ಲೀಸಿಂಗ್, ಸ್ವತ್ತುಗಳನ್ನು ಭೋಗ್ಯಕ್ಕೆ ನೀಡುವ ಭಾರತದ ಮೊಟ್ಟಮೊದಲ ಕಂಪನಿಯಾಗಿದೆ. ಬ್ಯಾಂಕ್ ಸಾಲ ಸಿಗದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಇದರಿಂದ ಭಾರೀ ಲಾಭವಾಗಲಿದೆ. ಇವರ ಹೈಬ್ರಿಡ್ ಮಾದರಿಯು ಆರ್ಥಿಕ ಉತ್ಪನ್ನಗಳ ಆನ್ಲೈನ್ ಸಂಶೋಧನೆ ಮತ್ತು ಆಫ್ಲೈನ್ ಸರಬರಾಜನ್ನು ಸರಿದೂಗಿಸುತ್ತಿವೆ. ಒರಿಗಾದ ಪ್ರತಿಯೊಂದ ಅಂಗವೂ ಮಿಲಿಯನ್ ಡಾಲರ್ ವಹಿವಾಟು ನಡೆಸುವ ಸಾಮರ್ಥ್ಯ ಹೊಂದಿವೆ ಎಂದು ನಾವು ಭಾವಿಸುತ್ತೇವೆ. ಒರಿಗಾ ಮುಂದಿನ ದಿನಗಳಲ್ಲಿ ದೊಡ್ಡ ಬ್ಯಾಂಕ್ ಆಗಿ ಬೆಳೆಯಲಿದ್ದು, ಭಾರತದ ಆರ್ಥಿಕ ಸೇರ್ಪಡೆ ಕಾರ್ಯಕ್ರಮಕ್ಕೆ ದೊಡ್ಡ ಕೊಡುಗೆ ನೀಡಲಿದೆ,” ಎನ್ನುತ್ತಾರೆ ಹರ್ಷದ್ ಲಹೋಟಿ.

ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಲ್ಲಿ ಯೂರೋಪ್​​ನಲ್ಲಿ 46 ಶೇಕಡಾ ಸಾಲಸೌಲಭ್ಯ, ಅಸೆಟ್ ಲೀಸಿಂಗ್​​ನಿಂದಲೇ ನಡೆಯುತ್ತಿದೆ. ಭಾರತದಲ್ಲಿ ಇದರ ಪ್ರಮಾಣ ಒಟ್ಟು ಸಾಲದ ಶೇಕಡಾ 1ಕ್ಕಿಂತಲೂ ಕಡಿಮೆ ಇದೆ. ಇದೊಂದು ವಿಭಿನ್ನ ವಹಿವಾಟಿನ ಮಾದರಿಯಾಗಿದ್ದು, ಮಧ್ಯಮ ಗಾತ್ರದ ಉದ್ಯಮಗಳಿಗೆ ಹೆಚ್ಚಿನ ಸಹಾಯ ಮಾಡಲಿದೆ ಎನ್ನುತ್ತಾರೆ ಒರಿಗಾದಲ್ಲಿ ಬಂಡವಾಳ ಹೂಡಿರುವ ಉಲ್ಲಾಸ್ ದೇಶಪಾಂಡೆ.

ಇತ್ತೀಚಿನ ವರ್ಷಗಳಲ್ಲಿ ಫಿನ್ಟೆಕ್ ಕ್ಷೇತ್ರವು ಜಾಗತಿಕವಾಗಿ ಭಾರೀ ಬೆಳವಣಿಗೆ ಸಾಧಿಸಿದೆ. ಅಸೆಂಚರ್ ನೀಡಿರುವ ಇತ್ತೀಚಿನ ವರದಿ ಪ್ರಕಾರ, 2014ರಲ್ಲಿ ಫಿನ್ಟೆಕ್ ಕಂಪನಿಗಳಲ್ಲಿ ಹೂಡಿಕೆ ಪ್ರಮಾಣವು ಶೇಕಡಾ 201ರಷ್ಟು ಹೆಚ್ಚಾಗಿದೆ. ವೆಂಚರ್ ಬಂಡವಾಳ ಹೂಡಿಕೆ ಕ್ಷೇತ್ರದಲ್ಲಿ ಕೇವಲ 63 ಶೇಕಡಾ ಬೆಳವಣಿಗೆ ಸಾಧಿಸಿರುವುದು ಇಲ್ಲಿ ಗಮನಾರ್ಹ. 2014ರಲ್ಲಿ ಫಿನ್ಟೆಕ್ ಕ್ಷೇತ್ರದಲ್ಲಿ ಜಾಗತಿಕ ಹೂಡಿಕೆಯು 12.21 ಬಿಲಿಯನ್ ಡಾಲರ್​​ಗಳಿಗೆ ಏರಿದೆ. 2013ರಲ್ಲಿ ಈ ಪ್ರಮಾಣ 4.05 ಬಿಲಿಯನ್ ಡಾಲರ್​​ಗಳಷ್ಟಿತ್ತು.

ಫಿನ್ಟೆಕ್ ಕ್ಷೇತ್ರದಲ್ಲಿನ ಭಾರೀ ಸಂಚಲನದ ಪರಿಣಾಮವಾಗಿ ಒರಿಗಾ ಲೀಸಿಂಗ್​ನಲ್ಲಿ ಈ ಪ್ರಮಾಣದಲ್ಲಿ ಹೂಡಿಕೆಯಾಗಿದೆ. ಅಸೆಟ್ ಲೀಸಿಂಗ್ ಮೂಲಕ ಸಾಲ ಸೌಲಭ್ಯ ಒದಗಿಸುವುದು ಸಾಮರ್ಥ್ಯ ವೃದ್ಧಿಗೆ ಕಾರಣವಾಗಿತ್ತದೆ. ಸಾಮರ್ಥ್ಯವು ಉದ್ಯೋಗ ಮತ್ತು ಆದಾಯ ಸೃಷ್ಟಿಸುತ್ತದೆ. ಇವೆಲ್ಲವೂ ಅಂತಿಮವಾಗಿ ದೇಶದ ಜಿಡಿಪಿಗೆ ಕಾಣಿಕೆ ನೀಡುತ್ತವೆ. ನಾವು ಹೊಸ ಯೋಚನೆಯನ್ನು ಜಾರಿಗೆ ತರುತ್ತಿದ್ದೇವೆ. ಬಿ2ಬಿ ಮಟ್ಟದಲ್ಲೂ ಆರ್ಥಿಕ ಸೇರ್ಪಡೆಯೇ ನಮ್ಮ ಗುರಿ ಎನ್ನುತ್ತಾರೆ ಶ್ರೀರಂಗ್.