ಹೊಸ ದಾಖಲೆಯತ್ತ ಸ್ಟಾರ್ ಶೆಫ್ ಗೇಮ್ : ಇದು ಅಡುಗೆ ಭಟ್ಟರ ಆಟ..!

ಬಿಆರ್​ಪಿ ಉಜಿರೆ

0

ಅಡುಗೆ ಮಾಡುವುದು ಅಷ್ಟು ಸುಲಭದ ವಿಷ್ಯವಲ್ಲ. ಅಡುಗೆ ಮಾಡೋದಿಕ್ಕೆ ಅದಕ್ಕೆ ಅದರದ್ದೇ ಆದ ನೀತಿ ನಿಯಮಗಳಿವೆ. ಅದ್ರಲ್ಲೂ ಹೆಚ್ಚಾಗಿ ತಾಳ್ಮೆ ತುಸು ಹೆಚ್ಚಾಗೇ ಇರಬೇಕು. ಹೀಗಾಗಿ ಅದೆಷ್ಟೋ ಮಂದಿ ರುಚಿ ರುಚಿಯಾದ ಊಟ ಮಾಡಲು ಬಯಸುತ್ತಾರೆ ವಿನಃ ಯಾರೂ ಅಡುಗೆ ಮನೆಗೆ ಹೋಗಿ ತಯಾರು ಮಾಡುವ ಹೊಣೆ ಹೊರುವುದಿಲ್ಲ. ಆದ್ರೆ ಕೆಲವು ಹೆಣ್ಣುಮಕ್ಕಳಿಗೆ ಅಡುಗೆ ಮಾಡುವುದೇ ಖುಷಿಯ ವಿಚಾರ. ಇನ್ನು ಹಲವರು ಅಡುಗೆ ಮಾಡುವುದೇ ಒಂದು ಪೈಪೋಟಿ ಅಂತ ಭಾವಿಸ್ತಾರೆ. ಸಾಲದಕ್ಕೆ ಒಂದು ಪರಿಪೂರ್ಣ ಗೃಹಿಣಿ ಅಂದೆನೆಸಿಕೊಳ್ಳೋದಿಕ್ಕೆ ಅಡುಗೆ ಕಡ್ಡಾಯ ಅನ್ನುವ ಭಾರತೀಯರ ಸಿದ್ಧಾಂತವನ್ನೂ ಮರೆಯುವಂತಿಲ್ಲ. ಹಾಗೇ ಹೆಂಗಸರಿಗೆ ಸ್ಪರ್ಧೆಯಂತೆ ಕೆಲ ಗಂಡಸರು ಕೂಡ ಬಾಣಸಿಗರಾಗುವಲ್ಲಿ ಎತ್ತಿದ ಕೈ. ಅದೆಷ್ಟೋ ಮನೆಗಳಲ್ಲಿ ಗಂಡಸರೇ ರುಚಿ ಶುಚಿಯಾದ ಅಡುಗೆ ತಯಾರಿಸುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಇನ್ನು ಪ್ರತಿಷ್ಠಿತ ಹೋಟೆಲ್ ಗಳಲ್ಲಿ, ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಅಲ್ಲಿ ಅಡುಗೆಯ ಮೇಲುಸ್ತುವಾರಿ ವಹಿಸಿಕೊಳ್ಳುವುದು ಗಂಡಸರೇ.

ಹೀಗೆ ಭಾರೀ ಸವಾಲು ಅಂತ ಅನಿಸಿಕೊಂಡಿರುವ ಅಡುಗೆ ಅದೆಷ್ಟೋ ಮಂದಿಗೆ ಬರೀ ಕಲ್ಪನೆ ಮಾತ್ರ. ಇನ್ನು ಕೆಲವರಿಗೆ ಹವ್ಯಾಸ. ಆದ್ರೆ ಅಡುಗೆ ಮಾಡಲು ಬರದೇ ಇದ್ದವರೂ ಅಡುಗೆ ತಯಾರಿಯಲ್ಲಿ ತೊಡಗಿಸಿಕೊಳ್ಳಬೇಕು ಅಂದುಕೊಳ್ಳುತ್ತಾರೆ. ಅದೆಷ್ಟೋ ಮಂದಿ ಇದನ್ನೇ ಗೇಮ್ ಆಗಿ ಆಡಿದರೆ ಇನ್ನೂ ಸೂಪರ್ ಅನ್ನೋದು ಹಲವರ ಲೆಕ್ಕಾಚಾರ. ಇಂತಹ ಮೊಬೈಲ್ ಗೇಮ್ ನಳರಿಗಾಗೇ ಉಡುಪಿ ಮೂಲದ ಕಂಪನಿಯೊಂದು ಗೇಮ್ ಒಂದನ್ನ ಅಭಿವೃದ್ಧಿ ಪಡಿಸಿದೆ. ಇಲ್ಲಿ ಅಭಿವೃದ್ಧಿಪಡಿಸಿರುವ ಗೇಮ್ ಸಖತ್ ಹವಾ ಸೃಷ್ಟಿಸಿದೆ. ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಅಂಗಸಂಸ್ಥೆ 99 ಗೇಮ್ಸ್ ಸ್ಟುಡಿಯೋ ರೂಪಿಸಿರುವ ಈ ಗೇಮ್ ಭಾರತದಾದ್ಯಂತ ಗಮನ ಸೆಳೆಯುತ್ತಿದೆ. ಅದೇ ಸ್ಟಾರ್ ಶೆಫ್ ಆಟ.

ರೋಬೋಸಾಫ್ಟ್ ಟೆಕ್ನಾಲಜೀಸ್ ಅಂಗಸಂಸ್ಥೆ 99 ಗೇಮ್ಸ್ ಸ್ಟುಡಿಯೋ ತಯಾರಿಸಿರುವ ಈ ಗೇಮ್ ಆಗಸ್ಟ್ 2014ರಲ್ಲಿ ಬಿಡುಗಡೆಯಾಗಿದೆ. ವಿಶೇಷ ಅಂದರೆ ಗೇಮ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರೀ ಹವಾ ಸೃಷ್ಠಿಸಿದೆ.

“ ಸ್ಟಾರ್ ಶೆಫ್ ಆಟವನ್ನ ನಾನು ತುಂಬಾ ಎಂಜಾಯ್ ಮಾಡ್ತೀನಿ. ಒಮ್ಮೆ ಆಟ ಶುರುಮಾಡಿದ್ರೆ ನಿಲ್ಲಿಸೋದಿಕ್ಕೆ ಮನಸ್ಸಾಗುವುದಿಲ್ಲ. ಇದ್ರಲ್ಲಿರುವ ವಿವಿಧ ಹಂತಗಳನ್ನ ಮೀರಬೇಕು ಅಂತ ಅನಿಸುತ್ತದೆ. ಸ್ಟಾರ್ ಶೆಫ್ ನಲ್ಲಿರುವ ಅತ್ಯುತ್ತಮ ಗ್ರಾಫಿಕ್ಸ್ ಗಳು ಮೊಬೈಲ್ ನಲ್ಲೂ ಸ್ಪಷ್ಟವಾಗಿದ್ದು, ಆಟವನ್ನ ಇಂಟರೆಸ್ಟಿಂಗ್ ಮಾಡುತ್ತದೆ ” ಅಭಿಷೇಕ್, ಸ್ಟಾರ್ ಶೆಫ್ ಪ್ಲೇಯರ್

ಸ್ಟಾರ್ ಶೆಫ್ ಮೊಬೈಲ್ ಗೇಮ್ ನಲ್ಲಿ ಸಾಮಾನ್ಯ ಅಡುಗೆಯವನಿಂದ ಅತ್ಯುತ್ತಮ ಅಡುಗೆಯವನವರೆಗೆ ಟಾಸ್ಕ್ ಮಾಡಬಹುದಾಗಿದೆ. ಇಂತಹ ಅಡುಗೆ ಮಾಡುವ ಗೇಮ್ ಗಳನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗಿದೆ. ಈ ಸ್ಟಾರ್ ಶೆಫ್ ಮೊಬೈಲ್ ಸೋಷಿಯಲ್ ಗೇಮ್ ಅನ್ನು ಆ್ಯಪಲ್ ಆ್ಯಪ್ ಸ್ಟೋರ್ ನಲ್ಲಿ 46 ಲಕ್ಷ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಇದರಿಂದಾಗಿ ಬರೋಬ್ಬರಿ 33 ಕೋಟಿ ರೂ. ಗಿಂತಲೂ ಹೆಚ್ಚಿನ ಆದಾಯ ಹರಿದು ಬಂದಿದೆ.

ವಿಶೇಷ ಅಂದ್ರೆ ಈ ಸ್ಟಾರ್ ಶೆಫ್ ಆಟವನ್ನ ಅಮೆರಿಕಾ ಹಾಗೂ ಏಷ್ಯಾ ಫೆಸಿಪಿಕ್ ಭಾಗದ ಜನರ ಹೆಚ್ಚು ಮೆಚ್ಚುಗೆ ಗಳಿಸಿದೆ. ಗೇಮ್ ನ ರೂವಾರಿ ರೋಹಿತ್ ಭಟ್ ಗೆ ಈ ಸ್ಟಾರ್ ಶೆಫ್ ಆಟವನ್ನ ಆಂಡ್ರಾಯ್ಡ್ ಮೊಬೈಲ್ ಗೂ ಪರಿಚಯಿಸುವ ಲೆಕ್ಕಾಚಾರದಲ್ಲಿದ್ದಾರೆ. ಅಲ್ಲದೆ ಚೈನಾ, ಜಪಾನ್ ಹಾಗೂ ಲ್ಯಾಟಿನ್ ಅಮೆರಿಕಾಕ್ಕೂ ವಿಸ್ತರಿಸುವ ಯೋಜನೆ ಹೊಂದಿದ್ದಾರೆ. ಈ ಮೂಲಕ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ 65 ಲಕ್ಷ ಡಾಲರ್ ಆದಾಯ ಗಳಿಸುವ ಅಂದಾಜಿದೆ ಎಂದು ಹೇಳಲಾಗಿದೆ.

“ ಸ್ಟಾರ್ ಶೆಫ್ ಆಟ ಅಡುಗೆ ಮಾಡಲು ಇಚ್ಛಿಸುವ ಹುಡುಗಿಯರ ಅಚ್ಚುಮೆಚ್ಚಿನ ಆಟವಾಗಿದೆ. ನಿಜವಾಗಿ ಅಡುಗೆ ಮಾಡಲು ಸಾಧ್ಯವಾಗದೇ ಇದ್ರೂ, ಗೇಮ್ ಮಾಡ್ತಾ ಇರೋದು ಖುಷಿ ಕೊಡುತ್ತದೆ. ಆದ್ರೆ ಆಪಲ್ ಮೊಬೈಲ್ ನಲ್ಲಿ ಮಾತ್ರ ಇದು ಸಿಗುತ್ತಿದೆ. ಇತರೆ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಸಿಕ್ಕರೆ ಹೆಚ್ಚು ಖುಷಿ ಕೊಡುತ್ತದೆ ” ತಾರಾ ಕಿರಿಮನೆ, ಸ್ಟಾರ್ ಶೆಫ್ ಗೇಮ್ ಪ್ಲೇಯರ್

ಹೀಗೆ ಮೊಬೈಲ್ ಗೇಮ್ ಗಳಲ್ಲಿ ಹೊಸ ದಾಖಲೆ ಬರೆಯುತ್ತಿರುವ ಸ್ಟಾರ್ ಶೆಫ್ ಗೇಮ್ ಮೊಬೈಲ್ ಗೇಮ್ಸ್ ಆ್ಯಪ್ ಗಳಲ್ಲೇ ಹೊಸ ದಾಖಲೆ ಬರೆಯುತ್ತಿದೆ.

Related Stories