ವಿದ್ಯಾಭ್ಯಾಸವನ್ನ ಅರ್ಧಕ್ಕೇ ಬಿಟ್ಟ ವ್ಯಕ್ತಿ ಇಂದು 200 ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ

ಟೀಮ್​​ ವೈ.ಎಸ್​​. ಕನ್ನಡ

ವಿದ್ಯಾಭ್ಯಾಸವನ್ನ ಅರ್ಧಕ್ಕೇ ಬಿಟ್ಟ ವ್ಯಕ್ತಿ ಇಂದು 200 ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ

Thursday December 17, 2015,

4 min Read

ಅದು 2006. ಅಂದು ದೆಹಲಿಯ ಯಮುನಾ ಬ್ಯಾಂಕ್ ಮೆಟ್ರೋ ಸೇತುವೆಯ ಕೆಳಗೆ ಬಡಮಕ್ಕಳಿಗಾಗಿಯೇ ಶಾಲೆಯೊಂದು ಪ್ರಾರಂಭವಾಯ್ತು. ಇಂದು ಆ ಶಾಲೆ ನೂರಾರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದೆ.

ಈ ಶಾಲೆಗೆ ಹೆಸರಿಲ್ಲ. ಕುಲ, ಗೋತ್ರವೂ ಇಲ್ಲ. ಆದರೂ ಇಲ್ಲಿ ಸುಮಾರು 200ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ಸ್ವಂತ ಕಟ್ಟಡವಿಲ್ಲ. ಮೆಟ್ರೋ ನಿಲ್ದಾಣದ ಒಂದು ಸೇತುವೆಯ ಕೆಳಗೆ ಈ ಶಾಲೆಯು ನಡೆಯುತ್ತಿದೆ. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಯಾವುದೇ ಶುಲ್ಕವನ್ನು ಭರಿಸಬೇಕಾಗಿಲ್ಲ. ಇದರ ರೂವಾರಿಯೇ ರಾಜೇಶ್ ಕುಮಾರ್ ಶರ್ಮ.

image


ಇವರು ಶಕರಪುರದಲ್ಲಿರುವ ಒಂದು ದಿನಸಿ ಅಂಗಡಿಯ ಮಾಲೀಕ. ಇದ್ಹೇಗಪ್ಪಾ ದಿನಸಿ ಅಂಗಡಿ ನಡೆಸುವವರು ಶಾಲೆಯನನು ನಡೆಸೋದಾದ್ರೂ ಹೇಗೆ ಅಂತ ನೀವು ಆಶ್ಚರ್ಯಗೊಳ್ಳಬಹುದು. ಹೌದು, ದಿನಸಿ ಅಂಗಡಿ ಮಾಲೀಕರಾದ ರಾಜೇಶ್, ಬಡ ಮಕ್ಕಳಿಗೆ ವಿದ್ಯೆ ಕಲಿಸುವುದನ್ನ ಒಂದು ಯಜ್ಞದಂತೆ ನಡೆಸಿಕೊಂಡು ಬರುತ್ತಿದ್ದಾರೆ. ಇದಕಕಾಗಿ ಯಾರದೇ ಸಹಾಯ ಯಾಚಿಸದೇ ತಮ್ಮಷ್ಟಕ್ಕೆ ತಾವೇ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜೇಶ್ ಶರ್ಮ 2006ರಲ್ಲಿ ಮಕ್ಕಳಿಗೆ ವಿದ್ಯೆಯನ್ನು ಕಲಿಸಲು ಶುರುಮಾಡಿದ ರೀತಿಯೇ ಕುತೂಹಲ ಮೂಡಿಸುವಂತದ್ದು. ಒಮ್ಮೆ ರಾಜೇಶ್, ದೆಹಲಿಯ ಯಮುನಾ ಬ್ಯಾಂಕ್ ರೈಲ್ವೇ ನಿಲ್ದಾಣದಲ್ಲಿ ತಿರುಗಾಡುತ್ತಿದ್ದಾಗ ಮೆಟ್ರೋ ಕಾಮಗಾರಿಗಾಗಿ ಕೆಲಸಗಾರರು ಮಣ್ಣನ್ನ ಅಗೆಯುತ್ತಿದ್ದರು. ಆ ದೃಶ್ಯವನ್ನು ನೋಡಲು ಅಲ್ಲಿಗೆ ರಾಜೇಶ್ ತೆರಳಿದಾಗ ಕೆಲವು ಮಕ್ಕಳು ಆ ಮಣ್ಣಿನಲ್ಲಿ ಆಟವಾಡುತ್ತಿದ್ದರು ಹಾಗೂ ಕೆಲವರು ಮಣ್ಣು ಅಗೆಯಲು ತಮ್ಮ ತಂದೆ ತಾಯಿಗಳಿಗೆ ನೆರವಾಗುತ್ತಿದ್ದರು. ಇದನ್ನು ಕಂಡ ರಾಜೇಶ್ ಆ ಮಕ್ಕಳ ತಂದೆ ತಾಯಿಯ ಬಳಿಗೆ ತೆರಳಿ, “ಈ ಮಕ್ಕಳು ಶಾಲೆಗೆ ಹೋಗುವುದಿಲ್ಲವೇ” ಎಂದು ಪ್ರಶ್ನಿಸಿದರು.

image


ಇದಕ್ಕೆ ಅವರು ಕೊಟ್ಟ ಉತ್ತರ ಇಲ್ಲ. ಕೂಲಿ ಕಾರ್ಮಿಕರು ಪದೇ ಪದೇ ತಮ್ಮ ವಾಸಸ್ಥಳವನ್ನು ಬದಲಾಯಿಸಬೇಕಾದ ಅನಿವಾರ್ಯತೆಯಿತ್ತ್ತು ಹಾಗೂ ಅವರಿದ್ದ ಸ್ಥಳದಿಂದ ಶಾಲೆ ತುಂಬಾ ದೂರದಲ್ಲಿತ್ತು. ಈ ಪರಿಸ್ಥಿತಿ ಗಮನಿಸಿದ ರಾಜೇಶ್ ಇವರಿಗಾಗಿ ಏನಾದರೂ ಮಾಡಬೇಕೆಂದು ನಿಶ್ಚಯಿಸಿದರು. ಆ ಮಕ್ಕಳಿಗೆ ತಮ್ಮ ಅಂಗಡಿಯಲ್ಲಿದ್ದ ಚಾಕ್‍ಲೇಟ್‍ಗಳನ್ನ ತಿನ್ನಲು ಕೊಟ್ಟರು. ಆಗ ಆ ಮಕ್ಕಳಿಗಾದ ಖುಷಿ ಅಷ್ಟಿಷ್ಟಲ್ಲ. ಈ ಖುಷಿಯು ಕ್ಷಣ ಮಾತ್ರ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮಕ್ಕಳು ಬಿಸಿಲಿನಲ್ಲಿ ಬೆವರು ಸುರಿಸುತ್ತಾ ಕಾಲ ಕಳೆಯುತ್ತಾರೆ ಎಂದು ಭಾವಿಸಿದ ರಾಜೇಶ್ ಮತ್ತಿನ್ನೇನನ್ನಾದರೂ ಮಾಡಲು ಬಯಸಿದರು. ಈ ಮಕ್ಕಳ ಜೀವನದಲ್ಲಿ ಬದಲಾವಣೆ ತರಲು ನಿರ್ಧರಿಸಿದರು. ಆಗಲೇ ಅವರು ನಿಶ್ಚಯಿಸಿದ್ದು, ಈ ಮಕ್ಕಳನ್ನು ಓದಿಸುತ್ತೇನೆ ಮತ್ತು ಅವರು ಜೀವನದಲ್ಲಿ ಮುಂದೆ ಬರುವ ಮಾರ್ಗವನ್ನು ತೋರಿಸುತ್ತೇನೆ ಅಂತ.

ರಾಜೇಶ್‍ರವರು ಹೇಳುತ್ತಾರೆ, ಈ ಮಕ್ಕಳು ಸ್ಕೂಲ್‍ಗೆ ಹೋಗಲು ಪ್ರಾರಂಭಿಸಿದರೆ ಅವರು ಮುಂದೆ ಜೀವನದಲ್ಲಿ ಏನಾದರೂ ಸಾಧಿಸುತ್ತಾರೆ. ಇಲ್ಲದಿದ್ದರೆ ಅವರ ಜೀವನ ಹೀಗೆಯೇ ಕಳೆದುಹೋಗುತ್ತದೆ. ರಾಜೇಶ್‍ರವರಿಗೆ ತಮ್ಮ ಯೋಚನೆ ಸರಿಯೆನ್ನೆಸಿತು. ಅವರು ಆ ಮಕ್ಕಳಿಗೆ ಪ್ರತಿದಿನ 1 ಗಂಟೆ ಕಾಲ ಓದಲು ಬರುವಂತೆ ಹೇಳಿದರು. ಆದ್ರೆ ಮೊದಲನೇ ದಿನ ಅವರ ಬಳಿ ಪಾಠ ಕೇಳಲು ಬಂದವರು ಕೇವಲ ಇಬ್ಬರು ಮಕ್ಕಳು ಮಾತ್ರ. ಆದ್ರೆ ಮುಂದಿನ ದಿನಗಳಲ್ಲಿ ಆ ಇಬ್ಬರು ಮಕ್ಕಳ ಜೊತೆ ಅಕ್ಕಪಕ್ಕದ ಮಕ್ಕಳು ಸಹ ಬರತೊಡಗಿದ್ರು. ಈ ರೀತಿ 2006 ರಲ್ಲಿ ಕೇವಲ ಇಬ್ಬರು ಮಕ್ಕಳಿಂದ ಪ್ರಾರಂಭವಾದ ರಾಜೇಶ್‍ರವರ ಪಾಠಶಾಲೆಯಲ್ಲಿ ಇಂದು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆಶ್ಚರ್ಯಕರ ಸಂಗತಿ ಅಂದರೆ, ಈ ಶಾಲೆಗೆ ವಿದ್ಯಾಭ್ಯಾಸ ಮಾಡುತ್ತಿರುವವರ ಪೈಕಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ದಿಲ್ಲಿಯ ಯಮುನಾ ಬ್ಯಾಂಕ್ ಮೆಟ್ರೋ ಸ್ಟೇಷನ್ ಹತ್ತಿರ ನಡೆಯುತ್ತಿರುವ ಈ ಶಾಲೆಯಲ್ಲಿ ಮೊದಲಿಗೆ ರಾಜೇಶ್‍ರವರೊಬ್ಬರೇ ಪಾಠ ಮಾಡುತ್ತಿದ್ದರು. ಇಂದು ಅವರ ಜೊತೆ ಕೆಲ ಸ್ಥಳೀಯರು ಕೈಜೋಡಿಸಿದ್ದಾರೆ. ಅವರು ತಮ್ಮ ಬಿಡುವಿನ ಸಮಯದಲ್ಲಿ ಶಾಲೆಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ.

ರಾಜೇಶ್‍ರವರ ಪ್ರಕಾರ, ಈ ಮಕ್ಕಳಿಗೆ ಪಾಠ ಮಾಡಲು ಕಾಲೇಜಿನ ವಿದ್ಯಾರ್ಥಿಗಳು, ಉಪಾಧ್ಯಾಯರು ಸಹ ಬರುತ್ತಾರೆ. ಬಡಮಕ್ಕಳಿಗೆ ಪಾಠ ಮಾಡಲು ಬರುವ ಪ್ರತಿಯೊಬ್ಬರಿಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಮತ್ತೊಂದು ಮುಖ್ಯವಾದ ವಿಷಯವೆಂದರೆ ಈ ಶಾಲೆಗೆ ಬರುವ ಮಕ್ಕಳ ವಯಸ್ಸು 5 ರಿಂದ 16 ವರ್ಷ. ಇಲ್ಲಿ ಮಕ್ಕಳು ಮುಕ್ತವಾಗಿ ವಿದ್ಯೆ ಕಲಿಯಲು ಪ್ರಶಸ್ತವಾದ ವ್ಯವಸ್ಥೆ ಕಲ್ಪಿಸಲಾಗಿದೆ.

ರಾಜೇಶ್‍ರವರ ಈ ಕಾರ್ಯದಿಂದ ಮೆಟ್ರೋದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಬಹಳ ಸಂತಸಗೊಂಡಿದ್ದಾರೆ. ತಮ್ಮ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡುತ್ತಿರುವ ರಾಜೇಶ್ ಅವರನ್ನ ಕಂಡರೆ, ಅವರಿಗೆ ವಿಶೇಷ ಗೌರವ.

ರಾಜೇಶ್‍ರವರು ತಮ್ಮ ಶಾಲೆಯಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ ನಡೆಸಿದ ಕೆಲ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಇತರೆ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ. ಪ್ರಸ್ತುತ ಸರ್ವಶಿಕ್ಷಾ ಅಭಿಯಾನದಡಿ 17 ಬಾಲಕಿಯರನ್ನ ದೆಹಲಿ ನಗರ ನಿಗಮದ ಶಾಲೆಯಲ್ಲಿ ದಾಖಲಿಸಿದ್ದಾರೆ. ಆ ಮಕ್ಕಳು ಶಾಲೆಗೆ ಹೋದರೂ ಸಹ ನಿಯಮಿತವಾಗಿ ಓದಲು ಇಲ್ಲಿಗೂ ಸಹ ಬರುತ್ತಾರೆ.

image


ರಾಜೇಶ್‍ರವರು ತಮ್ಮ ಶಾಲೆಯನ್ನು ಪ್ರತಿನಿತ್ಯ 2 ಪಾಳಿಯಲ್ಲಿ ನಡೆಸುತ್ತಾರೆ. ಮೊದಲನೇ ಪಾಳಿ ಬೆಳಗ್ಗೆ 9 ರಿಂದ 11.30 ರವರೆಗೆ ಹುಡುಗರಿಗಾಗಿ ನಡೆಸಲಾಗುತ್ತೆ. ಹಾಗೂ 2 ನೇ ಪಾಳಿ ಮಧ್ಯಾಹ್ನ 2 ರಿಂದ 4.30 ರವೆರೆಗೆ ಹುಡುಗಿಯರಿಗಾಗಿ ಶಾಲೆ ನಡೆಸುತ್ತಾರೆ. ಪ್ರತಿ ಭಾನುವಾರ ಶಾಲೆಗೆ ರಜೆ. ಈಗ ಅವರಲ್ಲಿ ಓದಿರುವ ಮಕ್ಕಳು 11 ಮತ್ತು 12 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇಂದು ರಾಜೇಶ್‍ರವರ ಕಾರ್ಯವನ್ನು ಅಕ್ಕಪಕ್ಕದ ಶಾಲೆಯವರು ಶ್ಲಾಘಿಸುತ್ತಿದ್ದಾರೆ. ಈ ಕಾರಣದಿಂದ ಅವರ ಶಾಲೆಯಲ್ಲಿ ಓದುತ್ತಿರುವ ಬಡಮಕ್ಕಳಿಗೆ ಇತರೆ ಶಾಲೆಗಳಲ್ಲಿ ಸುಲಭವಾಗಿ ಪ್ರವೇಶ ಸಿಗುತ್ತಿದೆ.

ಇಷ್ಟೇ ಅಲ್ಲ, ಕಳೆದ 10 ವರ್ಷಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿರುವ ರಾಜೇಶ್ ಕೆಲ ವಿಶೇಷ ಪರಿಣತಿಯನ್ನು ಪಡೆದುಕೊಂಡಿದ್ದಾರೆ. ಮಕ್ಕಳ ಜೊತೆಗೆ ಹೇಗೆ ವರ್ತಿಸಬೇಕು ? ಅವರ ಆಸಕ್ತಿಗಳೇನು ? ಯಾರ ಒಲವು ಯಾವ ಕಡೆಗೆ ? ಹಾಗೂ ಹೇಗೆ ಪಾಠ ಮಾಡಬೇಕೆಂದು ಅವರು ಚೆನ್ನಾಗಿ ಅರಿತುಕೊಂಡಿದ್ದಾರೆ.

ರಾಜೇಶ್‍ರ ಸೇವಾಕಾರ್ಯವನ್ನ ಮೆಚ್ಚಿದ ಸ್ಥಳೀಯ ಜನ ಅವರಿಗೆ ಸಹಾಯ ಮಾಡಲು ಬರುತ್ತಾರೆ. ಆದ್ರೆ, ಯಾರ ಹತ್ತಿರವೂ ರಾಜೇಶ್‍ರವರು ಹಣ ಪಡೆಯುವುದಿಲ್ಲ. ಯಾರಾದರೂ, ಸಹಾಯ ಮಾಡಲು ಬಂದರೆ, ಈ ಮಕ್ಕಳಿಗೆ ಊಟ, ತಿಂಡಿ, ಮೂಲಭೂತ ಸೌಲಭ್ಯಗಳು ಹಾಗೂ ಬರವಣಿಗೆ ಸಾಮಗ್ರಿಗಳನ್ನ ನೀಡಲು ಕೋರುತ್ತಾರೆ.

ದೆಹಲಿಯ ಮೆಟ್ರೋ ನಿಲ್ದಾಣಗಳ ಬಳಿ ಕೂಲಿ ಕೆಲಸ ಮಾಡಿಕೊಂಡಿರಬೇಕಿದ್ದ ನೂರಾರು ಮಕ್ಕಳು, ಇಂದು ಅಕ್ಷರ ಕಲಿತು ಬದುಕು ಹಸನಾಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣರಾದ ರಾಜೇಶ್‍ರವರು ಮೂಲತಃ ಉತ್ತರಪ್ರದೇಶದ ಅಲಿಘಡದವರು. ಇವರದ್ದು ತುಂಬು ಕುಟುಂಬ. ಮನೆಯ ಹಿರಿಯ ಮಗನಾಗಿದ್ದ ರಾಜೇಶ್ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ. ಆದರೆ, ಅನಿವಾರ್ಯ ಕಾರಣಗಳಿಂದ ಕುಟುಂಬ ನೊಗ ಹೊರಬೇಕಾದ ಸ್ಥಿತಿ ಬಂದೊದಗಿತು. ಇದರಿಂದ ರಾಜೇಶ್ ತಮ್ಮ ವಿದ್ಯಾಭ್ಯಾಸಕ್ಕೆ ಬಿಎಸ್ಸಿ ಮೊದಲನೇ ವರ್ಷದಲ್ಲೇ ಪುಲ್‍ಸ್ಟಾಪ್ ಹಾಕಬೇಕಾಯಿತು. ಜೀವನೋಪಾಯಕ್ಕಾಗಿ ಅಲಿಘಡದಿಂದ ದೆಹಲಿಗೆ ತಮ್ಮ ಕುಟುಂಬವನ್ನು ವರ್ಗಾವಣೆ ಮಾಡಿದ ರಾಜೇಶ್‍ರವರು ಅಲ್ಲಿ ಮೊದಮೊದಲು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದರು. ಹಲವಾರು ಕೆಲಸಗಳನ್ನು ಬದಲಾಯಿಸಿದರು. ಕೊನೆಗೆ ದಿನಸಿ ಅಂಗಡಿಯೊಂದನ್ನು ಪ್ರಾರಂಭಿಸಿದ್ರು. ಬದುಕಿಗೊಂದು ದಾರಿಯಾಗುತ್ತಿದ್ದಂತೆ, ಬಡಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವ ಮಹತ್ವದ ಕೆಲಸಕ್ಕೆ ಕೈ ಹಾಕಿದರು ರಾಜೇಶ್. ಅವರಿಗಿದ್ದ ಓದಿನ ಆಸಕ್ತಿಯೇ ಹಲವಾರು ಬಡಮಕ್ಕಳ ವ್ಯಾಸಂಗಕ್ಕೆ ದಾರಿ ದೀಪವಾಯ್ತು. ಈಗ ಆ ಮಕ್ಕಳನ್ನು ಓದಿಸುವುದರೊಂದಿಗೆ ತಮ್ಮ ಅಂಗಡಿಯನ್ನು ನಡೆಸಿಕೊಂಡು ಸಮಯ ಸಿಕ್ಕಾಗಲೆಲ್ಲಾ ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳ ಓದಿನೊಂದಿಗೆ ಮಗ್ನರಾಗುತ್ತಾರೆ.

ಇಂದು ರಾಜೇಶ್‍ರವರ ಸೇವಾ ಕಾರ್ಯವನ್ನ ಕಂಡ ದೆಹಲಿಯ ಬಹಳಷ್ಟು ಜನ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಕೈಲಾದ ಸೇವೆ ಮಾಡಲು ಮುಂದಾಗಿದ್ದಾರೆ. ಬಡಮಕ್ಕಳಿಗೆ ಓದಿಲು ಅವಕಾಶ ಕಲ್ಪಿಸಿ, ಅವರಿಗೆ ಬದುಕು ಕಟ್ಟಿಕೊಡಲು ಪ್ರಯತ್ನಿಸುತ್ತಿರುವ ರಾಜೇಶ್‍ರ ಕಾರ್ಯ ಶ್ಲಾಘನೀಯ.

ಲೇಖಕರು: ಹರೀಶ್​ ಬಿಶ್ತ್​​

ಅನುವಾದಕರು: ಬಾಲು