ಹಳ್ಳಿ ಹುಡುಗಿಯ ಚಿನ್ನದ ಸಾಧನೆ

ಉಷಾ ಹರೀಶ್​​

0

ಇದು ಹಳ್ಳಿ ಹುಡುಗಿಯೊಬ್ಬಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರದ ಕಥೆ. ಬೆಳಗಾವಿ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಭಾರವಾದ ವಸ್ತುಗಳನ್ನು ಲೀಲಾ ಜಾಲವಾಗಿ ಎತ್ತುತ್ತಿದ್ದ ಆ ಹುಡುಗಿ ಮುಂದೊಂದು ದಿನ ದೇಶವೇ ಮೆಚ್ಚುವಂತಹ ವೇಟ್​ಲಿಫ್ಟರ್​​ ಆಗುತ್ತಾಳೆ ಎಂದು ಯಾರು ಅಂದುಕೊಂಡಿರಲಿಲ್ಲ.

ಮನೆಯಲ್ಲಿ ಕೃಷಿ ಬಿಟ್ಟರೆ ಬೇರೆ ಉದ್ಯೋಗ ಗೊತ್ತಿರದ ತಂದೆತಾಯಿ ಶಾಲೆ ಮುಗಿದ ಮೇಲೆ ಕೃಷಿಯಲ್ಲಿ ತಂದೆ ತಾಯಿಗೆ ಸಹಾಯ ಮಾಡುತ್ತಾ, ಭಾರವಾದ ವಸ್ತುಗಳನ್ನು ಎತ್ತಿ ಆತ್ಮವಿಶ್ವಾಸ ಹೆಚ್ಚಿಕೊಂಡು, ವೇಟ್​​ಲಿಫ್ಟರ್ ಆಗಬೇಕೆಂದು ಕನಸು ಕಂಡಿದ್ದ ಬೆಳಗಾವಿಯ ಬಸ್ತಿವಾಡಿಯ ಕಾಂಚನಾ ಇತ್ತೀಚಿಗೆ ಪುಣೆಯಲ್ಲಿ ನಡೆದ ಕಾಮನ್​ವೆಲ್ತ್ ವೇಟ್​​​ಲಿಫ್ಟಿಂಗ್​​​ನ ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

2009ರಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಕಾಂಚಾನ ನಿಧಾನವಾಗಿ ಒಂದೊಂದೇ ಮೆಟ್ಟಿಲು ಹತ್ತಿ ಈಗ ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾರೆ. ರಾಜ್ಯ ಮಟ್ಟದ ಸಾಧನೆಯನ್ನು ಗಮನಿಸಿದ ಭಾರತೀಯ ಕ್ರೀಡಾ ಪ್ರಾಧಿಕಾರದ ಹಿರಿಯ ಕೋಚ್ ಶ್ಯಾಮಲಾ ಶೆಟ್ಟಿ ಅವರು ಆಯ್ಕೆ ಟ್ರಯಲ್ಟ್​​ನಲ್ಲಿ ಕಾಂಚನಾಗೆ ಅವಕಾಶ ಕಲ್ಪಿಸಿದರು. ಗುರುವಿನ ಪ್ರೋತ್ಸಾಹಕ್ಕೆ ತಕ್ಕ ಬೆಲೆ ನೀಡಿದ ಕಾಂಚನಾ ಕಳೆದ ಫೆಬ್ರವರಿಯಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕ್ರೀಡಾ ಪ್ರಾಧಿಕಾರವನ್ನು ಪ್ರತಿನಿಧಿಸಿದ ಚಿನ್ನ ಗೆದ್ದಿದ್ದಾರೆ. ವೇಟ್​​ಲಿಫ್ಟಿಂಗ್​​ನಲ್ಲಿ ಸಾಧನೆ ಮಾಡಿ ಬದುಕಿಗೊಂದು ಆಧಾರ ಕಂಡುಕೊಳ್ಳಬೇಕೆಂಬ ಗುರಿ ಹೊಂದಿದ್ದಾರೆ ಕಾಂಚನಾ.

ಕಿರಿಯರ ವಿಭಾಗ ಮತ್ತು ಹಿರಿಯರ ವಿಭಾಗದಲ್ಲೂ ಸ್ಪರ್ಧೆ

20 ವರ್ಷ ವಯಸ್ಸಿನ ಕಾಂಚನಾ ಪುಣೆಯಲ್ಲಿ ನಡೆದ ಕಾಮನ್​​ವೆಲ್ತ್ ಚಾಂಪಿಯನ್​​ಶಿಪ್​​ನಲ್ಲಿ ಹಿರಿಯರ ಹಾಗೂ ಕಿರಿಯರ ವಿಭಾಗ ಎರಡರಲ್ಲೂ ಸ್ಪರ್ಧಿಸಿ ಅಚ್ಚರಿ ಮೂಡಿಸಿದ್ದಾರೆ. ಹಿರಿಯರ ಕಿರಿಯರ ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ ಕಿರಿಯರು ಹಿರಿಯರ ವಿಭಾಗದಲ್ಲಿ ಸವಾಲನ್ನೊಡ್ಡಬಹುದು. ಈ ಸವಾಲನ್ನು ಸ್ವೀಕರಿಸಿದ ಬೆಳಗಾವಿಯ ದಿಟ್ಟ ಯುವತಿ 113 ಕೆಜಿ ಭಾರವೆತ್ತಿ ಅಚ್ಚರಿಯೊಂದಿಗೆ ಬೆಳ್ಳಿ ಪದಕ ಗೆದ್ದರು. ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ ಸೇರಿಕೊಳ್ಳುವಾಗ 50 ಕೆಜಿ ಭಾರವೆತ್ತುತ್ತಿದ್ದ ಕಾಂಚನಾ ಇಂದು 113 ಕೆಜಿ ಭಾರವೆತ್ತಿ ಸಾಧನೆ ಮಾಡಿದ್ದಾರೆ. ಕಿರಿಯರ ವಿಭಾಗದಲ್ಲಿ ಇಷ್ಟೇ ಭಾರವನ್ನು ಎತ್ತಿ ಚಿನ್ನದ ಯಶಸ್ಸು ಕಂಡರೆ ಹಿರಿಯರ ವಿಭಾಗದಲ್ಲಿ ಬೆಳ್ಳಿಯ ಫಲ ದೊರಕಿತು.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದುವರೆಗೂ 10ಕ್ಕೂ ಹೆಚ್ಚು ಪದಕ ಗೆದ್ದಿರುವ ಕಾಂಚನಾ ಪ್ರತಿಯೊಂದು ವಿಭಾಗದಲ್ಲೂ ಯಶಸ್ಸು ಕಂಡು ರಾಜ್ಯಕ್ಕೆ ಕೀರ್ತಿ ತಂದಿರುವ ಈ ಬೆಳಗಾವಿಯ ಸಾಧಕಿ ಈ ಬಾರಿ ಏಕಲವ್ಯ ಪ್ರಶಸ್ತಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಸಿಕ್ಕ ತರಬೇತಿ ನನ್ನ ಬದುಕಿನಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸುವಂತೆ ಮಾಡಿತು. ಹಳ್ಳಿಯಿಂದ ಬಂದ ನನಗೆ ಇಲ್ಲಿ ಸಿಕ್ಕ ಪ್ರೋತ್ಸಾಹ ಸ್ಮರಣೀಯ. ಮುಂದಿನ ವರ್ಷ ಇನ್ನೂ ಹೆಚ್ಚಿನ ಪದಕ ಗೆಲ್ಲುತ್ತೇನೆಂಬ ನಂಬಿಕೆ ಇದೆ ಎನ್ನುತ್ತಾರೆ ಕಾಂಚನಾ ಎಂ. ಪಿ.