ದೆಹಲಿಯಲ್ಲಿ ಕಾರ್ ಪೋಲಿಂಗ್ ವ್ಯವಸ್ಥೆ ಜಾರಿಗೆ ತರಲು ಉಬರ್ ಕ್ಯಾಬ್ ಸರ್ವಿಸ್ ಸಂಸ್ಥೆಯ ಯೋಜನೆ

ಟೀಮ್​ ವೈ.ಎಸ್​. ಕನ್ನಡ

0


ದೆಹಲಿಯಲ್ಲಿ ಸಮ ಬೆಸ ಮಾದರಿಯ ಅನ್ವಯ ಖಾಸಗಿ ವಾಹನಗಳ ಮೇಲೆ ನಿಯಂತ್ರಣ ಹೇರುವ ವಿಚಾರ ಚರ್ಚೆಯಲ್ಲಿರುವಂತೆಯೇ ಕ್ಯಾಬ್‌ ಸರ್ವಿಸ್ ನೀಡುವ ಉಬರ್ ಸಂಸ್ಥೆ ಖಾಸಗಿ ವಾಹನ ಮಾಲೀಕರ ಗಮನವನ್ನು ತನ್ನೆಡೆಗೆ ಸೆಳೆಯಲು ಯೋಜನೆ ರೂಪಿಸುತ್ತಿದೆ. ಈ ಮೂಲಕ ಖಾಸಗಿ ವಾಹನ ಮಾಲೀಕರಿಗೆ ಎದುರಾಗಿರುವ ಸಮಸ್ಯೆಯನ್ನು ನಿವಾರಿಸಲು ತಂತ್ರ ಹೆಣೆದಿದೆ.

ಕೆಲವೇ ದಿನಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಮ ಬೆಸ ಮಾದರಿಯ ಅನ್ವಯ, ಖಾಸಗಿ ವಾಹನಗಳ ಮೇಲೆ ನಿಯಂತ್ರಣ ಹೇರಲು ದೆಹಲಿ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಉಬರ್ ಸಂಸ್ಥೆ ಹಂಚಿಕೆ ಆಧಾರದಲ್ಲಿ ಗ್ರಾಹಕರಿಗೆ ಸೇವೆ ಒದಗಿಸುವತ್ತ ಯೋಜನೆ ರೂಪಿಸಿದೆ. ಇದರಿಂದ ಖಾಸಗಿ ವಾಹನ ಮಾಲೀಕರಿಗೆ ಸಾಕಷ್ಟು ಸಹಾಯ ದೊರೆತಂತಾಗುತ್ತದೆ. ಅಲ್ಲದೇ ಖಾಸಗಿ ವಾಹನಗಳ ಮಾಲೀಕರು ತಮ್ಮ ವಾಹನವನ್ನು ಉಬರ್‌ ಸಂಸ್ಥೆಗೆ ನೋಂದಾಯಿಸಿಕೊಂಡರೆ ಹಂಚಿಕೆಯ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಸಂಸ್ಥೆ 27 ಲಕ್ಷ ಖಾಸಗಿ ವಾಹನ ಮಾಲೀಕರ ಜೊತೆ ಮಾತುಕತೆ ನಡೆಸಿದೆ.

ಅಲ್ಲದೇ ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಅಲ್ಲಲ್ಲಿ ಚೆಕ್‌ಪೋಸ್ಟ್ ಗಳನ್ನು ನಿರ್ಮಿಸುವ ಉದ್ದೇಶವೂ ಉಬರ್‌ಗಿದೆ. ಆದರೆ ಈ ಬಗ್ಗೆ ಉಬರ್ ಸಂಸ್ಥೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನೂ ಇಲ್ಲಿಯವರೆಗೂ ನೀಡಿಲ್ಲ. ಜನವರಿ 1, 2016ರಿಂದ ದೆಹಲಿ ಸರ್ಕಾರ ಬಹುಚರ್ಚಿತ ವಿಷಯ ಸಮ ಬೆಸ ಮಾದರಿ ಅನ್ವಯ ಖಾಸಗಿ ವಾಹನಗಳ ಮೇಲೆ ನಿಯಂತ್ರಣ ಹೇರಲು ನಿರ್ಧರಿಸಿದೆ. ವಾಹನಗಳ ಸಂಖ್ಯೆಯನ್ನು ಆಧರಿಸಿ ಬದಲಿ ದಿನಗಳಲ್ಲಿ ವಾಹನಗಳನ್ನು ರಸ್ತೆಗೆ ತರುವ ವ್ಯವಸ್ಥೆ ಇದಾಗಿದೆ.

ಈ ಯೋಜನೆ ಜಾರಿಯಾದ 15 ದಿನಗಳ ನಂತರ ಪುನರ್‌ ಪರಿಶೀಲನೆಗೊಳಪಡಿಸಲಾಗುತ್ತದೆ. ಅದರ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿ ಯೋಜನೆಯನ್ನು ಮುಂದುವರೆಸಬೇಕೇ ಬೇಡವೇ ಎಂಬುದರ ಬಗ್ಗೆ ದೆಹಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಅಕ್ಟೋಬರ್‌ನಲ್ಲಿ ಉಬರ್ ಸಂಸ್ಥೆ ಪಂಜಾಬ್‌ ಸರ್ಕಾರದೊಂದಿಗೆ ಹಂಚಿಕೆ ಮಾದರಿಯ ವಾಹನ ವ್ಯವಸ್ಥೆ ಬಗ್ಗೆ ಪರೀಕ್ಷಿಸುವ ಸಲುವಾಗಿ ಒಪ್ಪಂದವೊಂದಕ್ಕೆ ಸಹಿ ಮಾಡಿದೆ.

ಈ ಹಂಚಿಕೆ ಮಾದರಿಯ ಪ್ರಯಾಣ ವ್ಯವಸ್ಥೆ ಅಮೆರಿಕಾದಲ್ಲಿ ಕ್ಯಾಬ್ ಸರ್ವಿಸ್ ನೀಡುವ ಮಾರುಕಟ್ಟೆಯ ಕಾನ್ಸೆಪ್ಟ್. ಈ ಟ್ರೆಂಡ್‌ ಭಾರತದಲ್ಲಿ ಇನ್ನಷ್ಟೇ ಪ್ರಖ್ಯಾತವಾಗಬೇಕಿದೆ. ಪ್ರಸ್ತುತ ಉಬರ್ ಸಂಸ್ಥೆಯಲ್ಲಿ ಕಮರ್ಷಿಯಲ್ ಲೈಸೆನ್ಸ್ ಪಡೆದಿರುವ ಕಾರುಚಾಲಕರಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ.

ಉಬರ್ ಸಂಸ್ಥೆಯ ಬಗ್ಗೆ, ಅಲ್ಲಿನ ಚಾಲಕರ ವರ್ತನೆಯ ಬಗ್ಗೆ ಸಾಕಷ್ಟು ವಿವಾದಗಳಿವೆ. ಆದರೂ ಸಂಸ್ಥೆಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಕಾರು ಚಾಲಕರು ನೋಂದಾಯಿಸಿಕೊಂಡಿದ್ದಾರೆ. ಉಬರ್ ಸಂಸ್ಥೆ ಸದ್ಯಕ್ಕೆ ಭಾರತದ 22 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಮೆರಿಕಾವನ್ನು ಹೊರತುಪಡಿಸಿ ಭಾರತದಲ್ಲಿಯೇ ಅತೀ ಹೆಚ್ಚು ನಗರಗಳಲ್ಲಿ ಕ್ಯಾಬ್ ಸೇವೆ ಒದಗಿಸುತ್ತಿದೆ ಉಬರ್.

ಉಬರ್ ಸಂಸ್ಥೆಗೆ ಸಾಕಷ್ಟು ಪ್ರತಿಸ್ಪರ್ಧಿಗಳೂ ಇದ್ದಾರೆ. ಓಲಾ, ಮೇರು ಸೇರಿದಂತೆ ಇತರ ಕ್ಯಾಬ್ ಸರ್ವಿಸ್ ಸಂಸ್ಥೆಗಳಿಗೆ ಉಬರ್ ಪ್ರತಿಸ್ಪರ್ಧಿಯಾಗಿದೆ. ಓಲಾ, ಮೇರು ಸಂಸ್ಥೆಗಳೂ ಸಹ ಉಬರ್ ನಂತೆಯೇ ಕಾರ್ ಪೂಲಿಂಗ್ ವ್ಯವಸ್ಥೆಗೆ ಮುಂದಾಗಿದೆ. ಹಂಚಿಕೆ ಆಧಾರದಲ್ಲಿ ವಾಹನಗಳ ಸೇವೆ ನೀಡುವ ನಗರಗಳಲ್ಲಿ ಉಬರ್ ಸೇರಿದಂತೆ ಓಲಾ, ಮೇರು ಕ್ಯಾಬ್‌ ಸಂಸ್ಥೆಗಳೂ ಸೇವೆ ಒದಗಿಸುವ ಸಾಧ್ಯತೆ ಇದೆ. ಉಬರ್ ಪೂಲ್ ವ್ಯವಸ್ಥೆ ಬೆಂಗಳೂರಿನಲ್ಲೂ ಜಾರಿಯಲ್ಲಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ, ನ್ಯೂಯಾರ್ಕ್ ಸಿಟಿ, ಬೋಸ್ಟನ್, ಆಸ್ಟಿನ್ ಮತ್ತು ಪ್ಯಾರಿಸ್‌ನಲ್ಲೂ ಜಾರಿಯಲ್ಲಿದೆ.


ಅನುವಾದಕರು: ವಿಶ್ವಾಸ್​