ಸಮಯ ಉಳಿಸುತ್ತೆ `ಮಾಬ್‍ಮೆರ್ರಿ'

ಅಗಸ್ತ್ಯ

ಸಮಯ ಉಳಿಸುತ್ತೆ `ಮಾಬ್‍ಮೆರ್ರಿ'

Wednesday December 16, 2015,

2 min Read

image


ವೇಗದ ಜಗತ್ತಿನಲ್ಲಿ ತಾಳ್ಮೆ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಪ್ರತಿ ವಿಷಯವೂ ಫಟಾಫಟ್ ಆಗಬೇಕೆನ್ನುವ ಮನೋಭಾವ ಎಲ್ಲರದ್ದು. ಅದು ಶಾಪಿಂಗ್ ಮಾಡುವುದರಲ್ಲೂ ಹೊರತಾಗಿಲ್ಲ. ಗಂಟೆಗಟ್ಟಲೆ ಮಾಲ್‍ಗಳಿಗೆ ಹೋಗಿ ಶಾಪಿಂಗ್ ಮಾಡುವ ಪರಿಪಾಠದಿಂದ ಕ್ರಮೇಣ ಹೊರಬರುತ್ತಿರುವ ಜನರು ಇದೀಗ ಆನ್‍ಲೈನ್ ಖರೀದಿಗೆ ಮನಸು ಮಾಡುತ್ತಿದ್ದಾರೆ. ಆದರೆ, ಅಂತಹ ಮನಸುಗಳನ್ನು ಬದಲಿಸಿ ಮಳಿಗೆಗಳತ್ತ ಸೆಳೆಯಲು `ಮಾಬ್‍ಮೆರ್ರಿ' ಎಂಬ ಮೊಬೈಲ್ ಅಪ್ಲಿಕೇಷನ್ ಹುಟ್ಟಿಕೊಂಡಿದೆ.

ಶಾಪಿಂಗ್ ಮಾಲ್‍ನಲ್ಲಿರುವ ಪ್ರತಿ ಮಳಿಗೆಗಳಿಗೂ ಹೊಕ್ಕು ಅಲ್ಲಿ ಏನಿದೆ, ಏನಿಲ್ಲ, ನಮಗೆ ಇಷ್ಟವಾಗುವ ವಸ್ತು ಅಲ್ಲಿ ಸಿಗುತ್ತದೆಯೇ ಎನ್ನುವುದನ್ನು ನೋಡುತ್ತಾ ಕಾಲಹರಣ ಮಾಡುವುದಕ್ಕೆ ಮಾಬ್‍ಮೆರ್ರಿ ಬ್ರೇಕ್ ಹಾಕಲಿದೆ. ನಮಗೆ ಬೇಕಾದದ್ದು ಎಲ್ಲಿ ಸಿಗುತ್ತದೆ ಎಂಬುದನ್ನು ನಾವು ನಿಂತಲ್ಲೇ ತಿಳಿಯುವ ವ್ಯವಸ್ಥೆ ನೂತನ ಅಪ್ಲಿಕೇಷನ್ ಹುಟ್ಟು ಹಾಕಿದೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈ ಪ್ರಯೋಗ ಮಾಡಲಾಗಿದ್ದು, ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಮಾಬ್‍ಮೆರ್ರಿ ಚಮಾತ್ಕಾರ ಶುರುವಾಗಿದೆ.

image


ಇಂದಿರಾನಗರದಲ್ಲಿ ಮೊದಲ ಪ್ರಯೋಗ

ನೂತನ ಅಪ್ಲಿಕೇಷನ್ ಮೂಲಕ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ನಿಂತುಕೊಂಡರೆ ಆ ರಸ್ತೆಯಲ್ಲಿರುವ ಮಳಿಗೆಗಳಲ್ಲಿ ಯಾವೆಲ್ಲಾ ವಸ್ತುಗಳು ಸಿಗುತ್ತವೆ, ಅವುಗಳ ಬೆಲೆ ಎಷ್ಟು, ಹೊಸದಾಗಿ ಬಂದಿರುವ ವಸ್ತುಗಳು ಯಾವುವು ಎಂಬ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ 30ಕ್ಕೂ ಹೆಚ್ಚಿನ ಮಳಿಗೆಗಳ ಸಹಯೋಗವನ್ನು ಪಡೆಯಲಾಗಿದೆ. ಆಮೂಲಕ ಮಳಿಗೆಗಳಲ್ಲಿ ಸಮಯ ವ್ಯರ್ಥ ಮಾಡುವುದನ್ನು ತಡೆಯುವ ಉಪಾಯ ಹುಡುಕಲಾಗಿದೆ. ಲೀ, ಲಿವೈಸ್, ವ್ಯಾನ್​ಹ್ಯೂಸನ್​​ ಜಾನ್ ಪ್ಲೇಯರ್, ಯುಎಸ್​ಪೋಲೊ ಹೀಗೆ ಬ್ರಾಂಡೆಂಡ್ ಶೂ, ಬಟ್ಟೆ ಮಾರಾಟ ಮಳಿಗೆಗಳು ಇಲ್ಲಿವೆ.

image


ಏನುಂಟು? ಏನಿಲ್ಲ?:

ಮೊದಲಿಗೆ ನೂತನ ಅಪ್ಲಿಕೇಷನ್ ಅನ್ನು ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬೇಕಿದೆ. ನಂತರ ಮೊಬೈಲ್‍ನಲ್ಲಿ ಇಂಟರ್‍ನೆಟ್ ಚಾಲ್ತಿಯಲ್ಲಿಟ್ಟುಕೊಂಡು ಇಂದಿರಾನಗರ 100 ಅಡಿ ರಸ್ತೆಗೆ ಬಂದರೆ, ಅಲ್ಲಿನ ಮಳಿಗೆಗಳಲ್ಲಿ ಅಳವಡಿಕೆ ಮಾಡಲಾಗಿರುವ ಅಪ್ಲಿಕೇಷನ್‍ಗೆ ಸಂಬಂಧಿಸಿದ ಡಿವೈಸ್ ಮೊಬೈಲ್‍ಗೆ ಸಂಪರ್ಕ ಪಡೆದುಕೊಳ್ಳಲಿದೆ. ಆನಂತರ ಅಲ್ಲಿನ ಎಲ್ಲಾ ಮಳಿಗೆಗಳ ವಿವರ ಅಪ್ಲಿಕೇಷನ್‍ನಲ್ಲಿ ದೊರೆಯಲಿದ್ದು, ಯಾವ ಮಳಿಗೆಯಲ್ಲಿ ಯಾವ ವಸ್ತುವಿದೆ, ಅದಕ್ಕೆ ಬೆಲೆ ಎಷ್ಟು, ಅದರ ವಿಶೇಷತೆಗಳೇನು ಎಂಬ ಬಗ್ಗೆಯೂ ತಿಳಿಸಿಕೊಡಲಿದೆ. ಒಂದು ವೇಳೆ ಗ್ರಾಹಕರಿಗೆ ಇಷ್ಟದ ವಸ್ತು ಇರುವುದು ಅಪ್ಲಿಕೇಷನ್ ಮೂಲಕ ತಿಳಿದರೆ, ಆನಂತರ ಬೇಕಾದರೆ ಮಳಿಗೆಗೆ ಹೋಗಬಹುದು. ಅದರೊಂದಿಗೆ ಯಾವ ಮಳಿಗೆಗೆ ಹೊಸ ಉತ್ಪನ್ನ ಮಾರಾಟಕ್ಕೆ ಲಭ್ಯವಿದೆ ಎಂಬುದು ಕೂಡ ತಿಳಿಯಬಹುದಾಗಿದೆ.

ಹೋಲಿಕೆಯನ್ನು ಮಾಡಬಹುದು..!

ಅಪ್ಲಿಕೇಷನ್‍ನಲ್ಲಿ ಒಂದು ಮಳಿಗೆಯಲ್ಲಿ ಯಾವೆಲ್ಲಾ ವಸ್ತುಗಳಿವೆ ಎಂಬುದು ತಿಳಿದ ಕೂಡಲೆ ಇನ್ನೊಂದು ಮಳಿಗೆಯಲ್ಲಿನ ವಸ್ತುವಿನ ನಡುವೆ ಹೋಲಿಕೆಯನ್ನು ಮಾಡಬಹುದು. ಹೋಲಿಕೆ ನಂತರ ಯಾವ ವಸ್ತು ಖರೀದಿಸುವುದು ಸೂಕ್ತ ಎಂಬುದನ್ನು ನೋಡಿಕೊಂಡು ಆ ಮಳಿಗೆಗೆ ನೀವು ಹೊಕ್ಕರೆ ಸಾಕು. ಅಲ್ಲದೆ, ಯಾವ ವಸ್ತು ಏನು ವಿಶೇಷತೆ ಹೊಂದಿದೆ ಎಂಬುದನ್ನು ಅಪ್ಲಿಕೇಷನ್ ತಿಳಿಸಿಕೊಡಲಿದೆ. ಹಾಗೆಯೇ, ವಿಶೇಷ ಸಂದರ್ಭದಲ್ಲಿ ಮಳಿಗೆಗಳು ನೀಡುವ ಕೊಡುಗೆಗಳ ವಿವರವೂ ಅಪ್ಲಿಕೇಷನ್‍ನಲ್ಲಿ ಸಿಗಲಿದೆ.

image


ಮಳಿಗೆದಾರರಿಗೆ - ಗ್ರಾಹಕರಿಗೆ ಉಪಯುಕ್ತ

ಮಾಬ್‍ಮೆರ್ರಿ ಅಪ್ಲಿಕೇಷನ್ ಬಗ್ಗೆ ಇಂದಿರಾನಗರ 100 ಅಡಿ ರಸ್ತೆಯ ಮಳಿಗೆದಾರರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. `ಗ್ರಾಹಕರು ಮಳಿಗೆಯೊಳಗೆ ಬರದೆಯೇ ನಮ್ಮಲ್ಲಿ ಯಾವ ರೀತಿಯ ಬಟ್ಟೆಗಳಿಗೆ ಎಂಬುದನ್ನು ತಿಳಿದುಕೊಳ್ಳಬಹುದು. ಹೀಗಾಗಿ ಗ್ರಾಹಕರಿಗೆ ಸಮಯ ಉಳಿಯುವುದರೊಂದಿಗೆ, ನಾವು ಪ್ರತಿ ಗ್ರಾಹಕರಿಗೂ ಬಟ್ಟೆಗಳ ಬಗ್ಗೆ ವಿವರಿಸುವುದು ತಪ್ಪುತ್ತದೆ. ಅಲ್ಲದೆ, ನಮ್ಮ ಮಳಿಗೆಯಲ್ಲಿನ ಕೊಡುಗೆಗಳನ್ನು ಪ್ರತಿ ಬಾರಿ ಗ್ರಾಹಕರಿಗೆ ತಿಳಿ ಹೇಳುವ ಗೋಜಲು ಕೂಡ ನಿವಾರಣೆಯಾಗುತ್ತಿದೆ ಎಂದು ಇಲ್ಲಿನ ಲೀ ಬಟ್ಟೆ ಮಳಿಗೆಯ ಮಾರ್ಕೇಟಿಂಗ್ ಮುಖ್ಯಸ್ಥ ವಿಪುಲ್ ಮಾಥುರ್ ಹೇಳುತ್ತಾರೆ. ಅಲ್ಲದೆ, ಗ್ರಾಹಕರು ಕೂಡ `ಮಾಬ್‍ಮೆರ್ರಿಯಿಂದ ಎಲ್ಲಾ ಮಳಿಗೆಗೂ ಹೋಗಿ ನಮಗೆ ಇಷ್ಟದ ವಸ್ತು ಖರೀದಿಸುವ ಜಂಜಡಕ್ಕೆ ಬ್ರೇಕ್ ಬಿದ್ದಿದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.