ಕನ್ನಡಕ್ಕಾಗಿ ಕವಿರಾಜ್​​​ "ಕಂಕಣ"

ಪೂರ್ವಿಕಾ

ಕನ್ನಡಕ್ಕಾಗಿ ಕವಿರಾಜ್​​​ "ಕಂಕಣ"

Friday October 30, 2015,

3 min Read

ಕನ್ನಡ ,ಎನ್ನಡ, ಎಕ್ಕಡ.. ಇದು ಈಗಿನ ಕರ್ನಾಟಕದಲ್ಲಿರೋ ಪ್ರಸ್ತುತ ಪರಿಸ್ಥಿತಿ. ನಾವು ಕನ್ನಡಿಗರು ನೀವೂ ಕನ್ನಡಿಗರು.. ಆದ್ರೆ ಮಾತನಾಡೋಕೆ ಮಾತ್ರ ಅಂಜಿಕೆ ..ಅದ್ಯಾಕೆ ಅನ್ನೋ ಕಾರಣ ಕೂಡ ಗೊತ್ತಿಲ್ಲ..ನಾನು ಕನ್ನಡಿಗ ಅನ್ನೋದು ಫೇಸ್ ಬುಕ್ ಟ್ವಿಟರ್​​ಗೆ ಸೀಮಿತ ಆದ್ರೆ ಸಾಕೆ ..ಯಾವುದೇ ರಾಜ್ಯ ದೇಶದಿಂದ ಬಂದವ್ರ ಬಳಿಯೂ ನಾವು ಮಾತನಾಡೋದು ಅವರ ಭಾಷೆಯಲ್ಲೇ . ಆದ್ರೂ ನಾವು ಕನ್ನಡಿಗರು. ಆದ್ರೆ ಕನ್ನಡ ಮಾತನಾಡಲು ಅಂಜಿಕೆ. ನಾವೇ ನಮ್ಮ ಅಮ್ಮನನ್ನ ಪ್ರೀತಿ ಮಾಡಲ್ಲ ಅಂದ್ರೆ ಮತ್ತೊಬ್ಬರು ಕನ್ನಡ ಮಾತನಾಡಬೇಕು ಅನ್ನೋದನ್ನ ನಿರೀಕ್ಷಿಸೋದು ಎಷ್ಟು ಸರಿ.

image


ಇದನ್ನೆಲ್ಲ ನೋಡಿದ ನಿರ್ದೇಶಕ, ಗೀತರಚನಾಕಾರ ಕವಿರಾಜ್ ರಾಜ್ಯದಲ್ಲಿ ಕನ್ನಡದ ಅನಿವಾರ್ಯತೆಯನ್ನ ಹುಟ್ಟುಹಾಕಲು ಮುಂದಾಗಿದ್ದಾರೆ. ಒಮ್ಮೆ ಜಯನಗರದ ಅಂಗಡಿಯೊಂದರಲ್ಲಿ ಶಾಪಿಂಗ್‍ಗೆ ಬೇಟಿ ನೀಡಿದಾಗ ನಡೆದ ಘಟನೆ ಈ ಕನ್ನಡದ ಕಂಕಣ ಕಟ್ಟೋದಕ್ಕೆ ಶುರುವಾಯ್ತು. ಕನ್ನಡ ಮಾತನಾಡಿ ಅಂತ ಹೇಳೋದು ,ಬೇಡೊದನ್ನ ಬಿಟ್ಟು ಕನ್ನಡವನ್ನ ಅನಿವಾರ್ಯ ಮಾಡಿದ್ರೆ ಹೇಗೆ ಅಂತ ಯೋಚನೆ ಮಾಡಿ ಕನ್ನಡದ ಅನಿವಾರ್ಯತೆಯನ್ನ ಹುಟ್ಟುಹಾಕಲು ಕಂಕಣ ಅನ್ನೋ ಒಂದು ಗುಂಪನ್ನ ಹುಟ್ಟುಹಾಕಿದ್ದಾರೆ.

image


ಸದ್ಯ ಕಂಕಣಕ್ಕೆ ಇನ್ನ ಕೆಲವೇ ದಿನಗಳಲ್ಲಿ ಒಂದು ವರ್ಷದ ಸಂಭ್ರಮ. ಕಂಕಣ ಕನ್ನಡ ಪ್ರೇಮಿಗಳಿಂದ ಸೃಷ್ಠಿಯಾಗಿರೋ ಗುಂಪು. ಇಲ್ಲಿ ಯಾವುದೇ ಕಿರುಚಾಟ ಕೂಗಾಟ ಇಲ್ಲದೆ ಕನ್ನಡ ಮಾತಾಡಿ ಅನ್ನೋದ್ರ ಬಗ್ಗೆ ಅರಿವು ಮೂಡಿಸುವ ಕೆಲಸ ಆಗ್ತಿದೆ. ಆರಂಭದಲ್ಲಿ ಕವಿರಾಜ್ ಅವರಿಗೆ ಈ ಯೋಚನೆ ಬಂದಾಗ ಇದನ್ನ ಕಾರ್ಯರೂಪಕ್ಕೆ ತರಲು ಸಹಾಯವಾಗಿದ್ದು ಫೇಸ್​ಬುಕ್. ಫೇಸ್‍ಬುಕ್​​ನಲ್ಲಿ ಇಂತದೊಂದು ಕೆಲಸಕ್ಕೆ ಮುಂದಾಗಿದ್ದೇನೆ ಅಂತ ಸ್ಟೇಟಸ್ ಹಾಕಿದ್ರು. ನಂತ್ರ ಅದೆಷ್ಟೋ ಜನರು ಕವಿರಾಜ್ ಜೊತೆಯಾಗಿ ಇಂದು ಈ ಕಂಕಣ ಗುಂಪಿನಲ್ಲಿ 200 ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

image


ಕಂಕಣ, ಕನ್ನಡಕ್ಕಾಗಿ ಕನ್ನಡಕ್ಕೋಸ್ಕರ ಹುಟ್ಟಿಕೊಂಡಿರೋ ಸಂಘಟನೆ ಅಂದ್ರೆ ತಪ್ಪಿಲ್ಲ..ಪ್ರತಿ ತಿಂಗಳು ಒಂದೊಂದು ಅಭಿಯಾನವನ್ನ ಮಾಡೋ ಈ ಕಂಕಣ ಟೀಂ ಪ್ರತಿ ಅಭಿಯಾನದಲ್ಲೂ ಕನ್ನಡ ಮಾತನಾಡಿ ಅನ್ನೋ ಸಂದೇಶವನ್ನ ಸಾರುತ್ತೆ. ವಿಶೇಷ ಅಂದ್ರೆ ಕಂಕಣ ಟೀಂ ಎಲ್ಲಾ ಕನ್ನಡ ಪರ ಸಂಘಟನೆಗಳ ರೀತಿಯಲ್ಲಿ ಘೋಷಣೆ ಕೋಗಿ ರ್ಯಾಲಿ ಮಾಡಿ ಕನ್ನಡದ ಬಗ್ಗೆ ಸಂದೇಶ ಸಾರೋದಿಲ್ಲ. ಪ್ರತಿ ತಿಂಗಳು ಒಂದೊಂದು ಸ್ಥಳವನ್ನ ಆಯ್ಕೆ ಮಾಡಿಕೊಂಡು ಅಲ್ಲಿ ಕನ್ನಡದ ಸಂದೇಶ ಸಾರೋ ಫಲಕಗಳನ್ನ ಹಿಡಿದು ಎರಡು ಘಂಟೆಗಳ ಕಾಲ ನಿಂತಲ್ಲೇ ನಿಂತು ಕನ್ನಡದ ಅನಿವಾರ್ಯ ಹುಟ್ಟುಹಾಕ್ತಾರೆ.

image


11 ಅಭಿಯಾನ ಮುಗಿಸಿರೋ ಕಂಕಣ ತಂಡ ಮುಂದಿನ ತಿಂಗಳು ಮತ್ತೋಂದು ವಿಶೇಷ ಅಭಿಯಾನವನ್ನ ಮಾಡೋ ಪ್ಲಾನ್ ಮಾಡ್ತಿದೆ. ಇದಾದ ನಂತ್ರ ಮತ್ತೊಂದು ಹೊಸ ಅಭಿಯಾನವನ್ನ ಪ್ರಾರಂಭ ಮಾಡಲು ಕಂಕಣ ತಯಾರಿ ನಡೆಸಿದೆ. ಕನ್ನಡದ ಅನಿವಾರ್ಯತೆ, ಕನ್ನಡ ಬೇಕು, ಕನ್ನಡ ಇರಬೇಕು ಹೀಗೆ ಈ ರೀತಿಯ ವಿಚಾರಗಳನ್ನ ಜನರಿಗೆ ಮನದಟ್ಟು ಮಾಡೋ ಉದ್ದೇಶ ಕಂಕಣ ತಂಡದ್ದು . 200ಕ್ಕೂ ಹೆಚ್ಚು ಜನರು ಸೇರಿರೋ ಈ ತಂಡದಲ್ಲಿ ಆಯಾ ನಗರಗಳ ಪ್ರಕಾರ ಗಂಗಾ,ಕಾವೇರಿ,ತುಂಗಾ ,ಭದ್ರ ಅನ್ನೋ ಟೀಂ ಅನ್ನ ಮಾಡಲಾಗಿದೆ. ಐದು ತಂಡವಾಗಿ ಕೆಲಸ ಮಾಡುತ್ತಿರೋ ಇವರುಗಳು ಪ್ರತೀ ತಿಂಗಳು ಸಭೆ ಸೇರೋದು ಹಾಗೂ ಮುಂದಿನ ಅಭಿಯಾನಗಳ ಬಗ್ಗೆ ಚರ್ಚೆ ನಡೆಸೋ ಕೆಲಸವನ್ನ ಮಾಡುತ್ತಾರೆ.

image


ಕನ್ನಡ ರಾಜ್ಯೋತ್ಸವಕ್ಕೆ ಅಥವಾ ಅನಿವಾರ್ಯ ಬಂದಾಗ ಮಾತ್ರ ಕನ್ನಡ ಅನ್ನೋ ಬದಲು ಸದಾ ಕನ್ನಡಕ್ಕಾಗಿ ಕೈಲಾಗುವ ಕೊಡುಗೆ ನೀಡೋದು ಒಳ್ಳೆದು ಅನ್ನೋದು ಕವಿರಾಜ್ ಅವರ ಅಭಿಪ್ರಾಯ. ಈ ತಂಡದಲ್ಲಿ ನಿರ್ದೇಶಕರಿಂದ ಹಿಡಿದು ವೈದ್ಯರು,ಎಂಜಿನಿಯರ್​​ಗಳು,ಲಾಯರ್​​ಗಳು ,ಪ್ರಾಧ್ಯಾಪಕರು.. ಹೀಗೆ ಇನ್ನೋ ಹಲವು ಕ್ಷೇತ್ರದವರು ಸೇರಿ ಕನ್ನಡಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಅನ್ನೋದು ಕೂಡ ಇಲ್ಲಿ ವಿಶೇಷ. ಇನ್ನು ಈ ತಂಡದಲ್ಲಿ ಸಾಮಾನ್ಯರು ಕೂಡ ಸೇರಿಕೊಳ್ಳಬಹುದು ಆದ್ರೆ ಸಮಾನ ಮನಸ್ಸಿನವರಿಗೆ ಮೊದಲ ಆಧ್ಯತೆ. ಆದ್ದರಿಂದಲೇ ವರ್ಷವಾದ್ರೂ ಕೂಡ ಕಂಕಣ ಟೀಂ ನಲ್ಲಿರೋದು 200 ಸದಸ್ಯರು ಮಾತ್ರ. ಕನ್ನಡದ ಬಗ್ಗೆ ಪ್ರೀತಿ ,ಅಭಿಮಾನ ಹಾಗೂ ಕನ್ನಡಿಗ ಅನ್ನೋ ಸ್ವಾಭಿಮಾನ ಇರೋ ಪ್ರತಿಯೊಬ್ಬರಿಗೂ ಕಂಕಣ ಟೀ ಸೇರಿಕೊಳ್ಳಲು ಮುಕ್ತ ಅವಕಾಶವಿದೆ. ಫೇಸ್ ಬುಕ್​ನಲ್ಲಿರೋ ಕಂಕಣ ಅನ್ನೋ ಪೇಜ್ ನಲ್ಲಿ ನಿಮ್ಮ ಸಂದೇಶ ರವಾನಿಸಿದ್ರೆ ಆಯ್ತು, ಕಂಕಣ ಟೀಂ ಆದಷ್ಟು ಬೇಗ ನಿಮ್ಮನ್ನ ಭೇಟಿ ಮಾಡುತ್ತೆ.

ಕನ್ನಡ ಕನ್ನಡ ಅಂತ ಕೇವಲ ಬಾಯಲ್ಲಿ ಹಾಡಿ ಸುಮ್ಮನಾಗುವ ಬದಲು ಎಲ್ಲವನ್ನೂ ಕೊಟ್ಟಿರೋ ಕನ್ನಡ ತಾಯಿಗಾಗಿ ತಿಂಗಳಲ್ಲಿ ಒಂದು ದಿನವನ್ನ ಸೀಮಿತವಾಗಿರಿಸೋದು ಲೇಸು ಅಲ್ಲವೆ. ಇಂಥದೊಂದು ಹೊಸ ರೀತಿಯ ಯೋಜನೆಗೆ ಆರಂಭದಿಂದಲೇ ಒಳ್ಳೇ ಅಭಿಪ್ರಾಯ ಹಾಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿರೋದು ಕವಿರಾಜ್ ಅವರಿಗೆ ಕಂಕಣದ ಮೂಲಕ ಕನ್ನಡದ ಬಗ್ಗೆ ಮತ್ತಷ್ಟು ಅಭಿಯಾನಗಳನ್ನ ಮಾಡೋ ಉತ್ಸಾಹ ಹೆಚ್ಚಾಗಿದೆ. ಇಂತಹ ಗುಂಪಗಳು ರಾಜ್ಯಕ್ಕೆ ಸಾಕಷ್ಟು ಅವಶ್ಯಕತೆ ಇದೆ ಇಂತದೊಂದು ಹೊಸ ಯೋಜನೆಗೆ ನಾವು ಕೈ ಜೋಡಿಸೋಣ…

    Share on
    close