ಆನ್‌ಲೈನ್ ಶೈಕ್ಷಣಿಕ ಕಲಿಕಾ ತಾಣ ಡಿಝೈರ್ ಪರಿಚಯಿಸಿದ ಅತ್ಯುತ್ತಮ ಆಯಾಮ ಹ್ಯಾಕರ್ ಡೇ

ಟೀಮ್​ ವೈ.ಎಸ್​​. ಕನ್ನಡ

ಆನ್‌ಲೈನ್ ಶೈಕ್ಷಣಿಕ ಕಲಿಕಾ ತಾಣ ಡಿಝೈರ್ ಪರಿಚಯಿಸಿದ ಅತ್ಯುತ್ತಮ ಆಯಾಮ ಹ್ಯಾಕರ್ ಡೇ

Sunday December 13, 2015,

4 min Read

ಶೈಕ್ಷಣಿಕ ತಜ್ಞರು ಅಂದಾಜಿಸಿರುವಂತೆ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಶೈಕ್ಷಣಿಕ ತಂತ್ರಜ್ಞಾನವನ್ನು ಪೂರೈಸುವ ಯಶಸ್ವಿ ಸ್ಟಾರ್ಟ್ಅಪ್​​ಗಳಿವೆ. ಪ್ರತೀ ವರ್ಷ ಇಂತಹ 100ರಿಂದ 200 ಸ್ಟಾರ್ಟ್ಅಪ್​​​ಗಳು ಲಾಂಚ್ ಆಗುವ ನಿರೀಕ್ಷೆಯಿದೆ. ಇವುಗಳಲ್ಲಿ ಬಹುತೇಕ ಸ್ಟಾರ್ಟ್ಅಪ್​ಗಳು ಗುಣಮಟ್ಟದ ವೃತ್ತಿಪರ ಕೋರ್ಸ್​ಗಳು, ಮಿಡ್ ಕರಿಯರ್ ಶಿಕ್ಷಣವನ್ನು ಪೂರೈಸುತ್ತಿವೆ. ಗುಣಮಟ್ಟದ ಶೈಕ್ಷಣಿಕ ಕಲಿಕೆಯ ಆಯ್ಕೆಗಳಾದ ಕೌಶಲ್ಯ ತರಬೇತಿ, ವಿರಾಮದ ಕಲಿಕೆಗಳು ಹಾಗೂ ಆನ್ಲೈನ್ ಸರ್ಟಿಫೈಡ್ ಕೋರ್ಸ್​ಗಳನ್ನು ಕಲಿಸುತ್ತಿವೆ.

ಸಿಲಿಕಾನ್ ವ್ಯಾಲಿಯಲ್ಲಿ ಈ ತಂತ್ರಜ್ಞಾನದ ಮೂಲಕ ಶಿಕ್ಷಣದ ಕಲಿಕೆಗೆ ಸಿಕ್ಕ ಅಭೂತಪೂರ್ವ ಯಶಸ್ಸು ಕಂಡು ಉತ್ತೇಜಿತಗೊಂಡ ಭಾರತೀಯ ಮಾರುಕಟ್ಟೆ, ಈ ಕ್ಷೇತ್ರದಲ್ಲಿ ದಿಢೀರ್ ಆಸಕ್ತಿ ವಹಿಸಿದೆ. ಹೀಗಾಗಿ ಕಳೆದು ಕೆಲವು ವರ್ಷಗಳಿಂದ ಶೈಕ್ಷಣಿಕ ತಂತ್ರಜ್ಞಾನ ಸಂಬಂಧಿ ಸ್ಟಾರ್ಟ್ಅಪ್​ಗಳು ತೀವ್ರ ಪ್ರಮಾಣದಲ್ಲಿ ಪ್ರಗತಿ ಕಾಣುತ್ತಿವೆ. ಹೀಗಂತ ಒಂದೂವರೆ ವರ್ಷದ ಹಿಂದೆಯೇ ಹೇಳಿದ್ದರು ಡಿಝೈರ್.ಕಾಮ್ ಸಂಸ್ಥೆಯ ಸಹ ಸಂಸ್ಥಾಪಕರಾದ ಬಿನ್ನಿ ಮ್ಯಾಥ್ಯೂಸ್.

image


ನವೆಂಬರ್ 2012ರಲ್ಲಿ ಬಿನ್ನಿ ಹಾಗೂ ಒಮೈರ್ ಅಸೀಮ್ ಇದೇ ಸಂಗತಿಯನ್ನು ಮನಗಂಡು ಸ್ಥಾಪಿಸಿದ ಸಂಸ್ಥೆ ಡಿಝೈರ್.ಕಾಮ್. ಕೌಶಲ್ಯ ತರಬೇತಿ ಆಯಾಮಕ್ಕೆ ವೃತ್ತಿಪರತೆಯನ್ನು ಲೇಪಿಸಿ ಎಡ್ ಟೆಕ್ ಅನ್ನು ಅಭಿವೃದ್ಧಿ ಪಡಿಸುವುದು ಇವರ ಗುರಿಯಾಗಿತ್ತು.

ಇದರ ಆನ್ಲೈನ್ ಕಲಿಕಾ ವೇದಿಕೆ 7 ಮುಖ್ಯ ಕೋರ್ಸ್​ಗಳನ್ನು ಆಫರ್ ಮಾಡುತ್ತದೆ. ಅದರಲ್ಲಿ ಬಿಗ್ ಡಾಟಾ ಪ್ರೋಗ್ರಾಮಿಂಗ್ ಹಾಗೂ ಎಂಎಸ್ ಎಕ್ಸೆಲ್​ನಂತಹ ಪಕ್ಕಾ ವೃತ್ತಿಪರ ಕೋರ್ಸ್​ಗಳಿವೆ. ಲೈವ್ ಸ್ಟ್ರೀಮಿಂಗ್ ಮೂಲಕ ಹೇಳಿಕೊಡಲಾಗುವ ಹಡೂಪ್ ಎನ್ನುವ ಬಿಗ್ ಡಾಟಾ ಪ್ರೋಗ್ರಾಮಿಂಗ್ ಲಾಂಗ್ವೇಜ್ ಹೊರತುಪಡಿಸಿದ್ರೆ, ಉಳಿದೆಲ್ಲವೂ ಮೊದಲೇ ರೆಕಾರ್ಡ್ ಆಗಿರುವ ಕೋರ್ಸ್ ಕಲಿಕೆಯಾಗಿರುತ್ತದೆ.

ಡಿಝೈರ್.ಕಾಮ್ ಲಾಂಚ್ ಆಗುತ್ತಿದ್ದಂತೆ ಯುವರ್​ಸ್ಟೋರಿ ಇದರ ಕಾರ್ಯಾಚರಣೆಗಳ ಬಗ್ಗೆ ಬರೆದಿತ್ತು. ಅದಾದ ಒಂದೇ ವರ್ಷದಲ್ಲಿ ಸಂಸ್ಥೆ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ.

ಭಾರತ ಹಾಗೂ ಯುಎಸ್​​ನ ಸುಮಾರು 9 ಸಾವಿರ ಆಸಕ್ತ ವಿದ್ಯಾರ್ಥಿಗಳಿಗೆ ಡಿಝೈರ್ ಶೈಕ್ಷಣಿಕ ಸೇವೆ ನೀಡಿದೆ. ಇತ್ತೀಚೆಗಷ್ಟೆ ಸಂಸ್ಥೆ ಒಂದು ಮಟ್ಟಿನ ಹೂಡಿಕೆಯನ್ನು ಮಾಡಿಕೊಂಡಿದೆ. ಫ್ಲಿಪ್​ಕಾರ್ಟ್​ನ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್, ನ್ಯೂ ಟಾಯ್ನ ಸಹ ಸಂಸ್ಥಾಪಕ ಡೇವಿಡ್ ಬೆಟ್ನರ್ ಹಾಗೂ ಮಿಚೆಲ್ ಚೋ, ಕ್ವಿಕ್ಸಿ ಸಂಸ್ಥೆಯ ಸಿಒಒ ಗುರು ಗೌರಪ್ಪನ್, ಇಮ್ಯಾಜಿನ್ ಕೆ12 ಹಾಗೂ ಹೆಡ್ಜ್ ಫಂಡ್ ಮ್ಯಾನೇಜರ್​ ಶ್ರೀಕಾಂತ್ ರಾಮಮೂರ್ತಿ ಇದಕ್ಕೆ ಬಂಡವಾಳ ಹೂಡಿದ್ದಾರೆ.

ಕಳೆದ ವರ್ಷದ ಉತ್ತರಾರ್ಧದಲ್ಲಿ ಸಂಸ್ಥೆ ಐಬಿಎಂ ಸಹಯೋಗದೊಂದಿಗೆ ಬಿಗ್ ಡಾಟಾ ಅನಾಲಿಟಿಕ್ ವಿಷಯದ ಮೇಲೆ 5 ಹೆಚ್ಚುವರಿ ಸರ್ಟಿಫೈಡ್ ಕೋರ್ಸ್​ಗಳನ್ನು ಪರಿಚಯಿಸಿದೆ.

ಈ ಕ್ಷೇತ್ರದಲ್ಲಿ ಅನುಭವ ಹಾಗೂ ಪರಿಣಿತಿ ಹೊಂದಿರುವ ಸಮರ್ಥ ಸಂಸ್ಥೆಗಳಿಂದ ಮಾತ್ರ ಕೌಶಲ್ಯ ತರಬೇತಿ ಕೋರ್ಸ್ ಜಾರಿಯಾಗಬೇಕು. ಅದರ ಬದಲು ಕ್ಲಾಸ್​ ರೂಂನಲ್ಲಿ ಕಲಿಸಬಲ್ಲ ಟೀಚರ್ ಅಥವಾ ಇನ್ಯಾವುದೋ ಶೈಕ್ಷಣಿಕ ಸಿಬ್ಬಂದಿಯಿಂದ ಸಾಧ್ಯವಿಲ್ಲ ಅನ್ನುವುದು ನಮಗೆ ಸ್ವಲ್ಪ ನಿಧಾನವಾಗಿ ಅರ್ಥವಾಯಿತು ಅಂದಿದ್ದಾರೆ ಬಿನ್ನಿ.

ಹೊಸ ಹೊಸ ತಂತ್ರಜ್ಞಾನಗಳನ್ನು ಕಲಿಸುವ ಜೊತೆಗೆ ಸಂಸ್ಥೆ ಈಗಾಗಲೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಉತ್ತೇಜಿಸುತ್ತಿದೆ. ಈ ಕ್ಷೇತ್ರದ ಅಗತ್ಯವನ್ನು ಮನಗಂಡು ಸಬ್​ಸ್ಕ್ರಿಪ್ಷನ್​ ಮಾದರಿಯಲ್ಲಿ ಟ್ರೈನಿಂಗ್ ಪ್ರೋಗ್ರಾಮಿಂಗ್, ಹ್ಯಾಕರ್ ಡೇ ಮುಂತಾದ ಯೋಜನಾಧರಿತ ವರ್ಕ್​ಶಾಪ್​ಗಳನ್ನು ಆಯೋಜಿಸಿ, ತಿಂಗಳಿನಲ್ಲಿ ಎರಡು ವೀಕೆಂಡ್​ನಲ್ಲಿ ಟ್ರೆಂಡ್ ಹಾಗೂ ಟೆಕ್ನಾಲಜಿಗಳ ಬಗ್ಗೆ ಮಾಹಿತಿ ನೀಡುತ್ತಿದೆ.

ಬಿನ್ನಿ ಹೇಳುವಂತೆ ಹ್ಯಾಕರ್​ಡೇ, ಜಗತ್ತಿನ ಮೊದಲ ಕರಿಯರ್ ಬೆಳವಣಿಗೆ ಮಾಡಬಲ್ಲ ಶೈಕ್ಷಣಿಕ ಸೇವೆ. ತಿಂಗಳಿಗೆ ಕೇವಲ 9 ಡಾಲರ್ ಹಣ ಪಾವತಿಸಿದರೇ ಈ ಸೇವೆ ನಿಮಗೆ ಲಭ್ಯವಿದೆ. ಸದ್ಯ ಬೇಟಾ ಫೇಸ್​ನಲ್ಲಿರುವ ಈ ಸೇವೆ ಮುಂದೆ ಪ್ರತಿಯೊಬ್ಬರಿಗೂ ಲಭ್ಯವಾಗಲಿದೆ ಅನ್ನುವುದು ಬಿನ್ನಿಯವರ ಯೋಜನೆ.

ವೃತ್ತಿಪರತೆಯನ್ನು ಉತ್ತೇಜಿಸಿ ಕರಿಯರ್ ಅಭಿವೃದ್ಧಿಗೊಳಿಸಿಕೊಳ್ಳಲು ಹ್ಯಾಕರ್ ಡೇನಂತಹ ಸೇವೆಗಳು ಅತ್ಯಂತ ಸಹಕಾರಿ. ಇದಕ್ಕೂ ಮೊದಲು ನಿರಂತರವಾಗಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಬಲ್ಲ ಗುಣಮಟ್ಟದ ವೃತ್ತಿಪರ ಹಾಗೂ ಸರಳ ಕಲಿಕೆ ಇರಲಿಲ್ಲ. ಒಬ್ಬ ಡೇಟಾ ಅನಾಲಿಸ್ಟ್ ಆದ ನನಗೆ ಈ ರೀತಿಯ ಸೇವೆಗಳು ಅತ್ಯಂತ ಉಪಕಾರಿ. ನನ್ನಂತಹ ಅನೇಕ ಗ್ರಾಹಕರಿಗೆ ಹ್ಯಾಕರ್ ಡೇ ಉತ್ಪನ್ನ ನೆರವಾಗ್ತಿದೆ ಎಂದು ಹ್ಯಾಕರ್ ಡೇ ನಿರ್ವಹಿಸುತ್ತಿರುವ ಸುಮನ್ ಕುಮಾರ್ ಹೇಳಿದ್ದಾರೆ.

ನವೆಂಬರ್ 21ರಂದು ಮೊದಲ ಹ್ಯಾಕರ್ ಡೇ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಾಗಾರದಲ್ಲಿ ಟೈಟಾನಿಕ್ ದುರಂತದ ಕಾಲ್ಪನಿಕ ಚಿತ್ರಣವಿಟ್ಟುಕೊಂಡು ಬದುಕುಳಿದವರನ್ನು ಲೆಕ್ಕ ಹಾಕುವ ಪ್ರಯೋಗ ನಿರ್ವಹಿಸಲಾಗಿತ್ತು. ಹ್ಯಾಕರ್ ಡೇ ತಂತ್ರಜ್ಞಾನದಿಂದ ಟೈಟಾನಿಕ್ ಅವಘಡದಲ್ಲಿ ಬದುಕುಳಿದವರ ಬಗ್ಗೆ ಮಾಹಿತಿ ಪಡೆಯಲು ಡೇಟಾ ಸೆಟ್ ಮಾಡಲಾಯಿತು.

ನಮಗೆ ತಿಳಿದಂತೆ ಟೈಟಾನಿಕ್‌ನಲ್ಲಿದ್ದ ಮೇಲ್ವರ್ಗದ ಮಹಿಳೆಯರು ಮತ್ತು ಮಕ್ಕಳನ್ನು ಲೈಫ್ ಬೋಟ್‌ನಲ್ಲಿ ತುಂಬಿಸಿ ಕಳಿಸಲಾಗಿತ್ತು. ಹೀಗಾಗಿ ಈ ವರ್ಕ್ ಶಾಪ್‌ನಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಮೆಷಿನ್ ಟೂಲ್ ಮೂಲಕ ಟೈಟಾನಿಕ್‌ನಲ್ಲಿದ್ದ ಪ್ರಯಾಣಿಕರಲ್ಲಿ ಬದುಕುಳಿದವರು ಎಷ್ಟು? ಎನ್ನುವುದನ್ನು ಸರಳ ಮಾದರಿಯಲ್ಲಿ ಅರ್ಥಮಾಡಿಸಲಾಯಿತು. ಇದು ಹ್ಯಾಕರ್ ಡೇ ಬಗ್ಗೆ ಬಿನ್ನಿ ನೀಡಿದ ಮಾಹಿತಿ.

ಆದರೂ ಅವರ ಮುಂದಿನ ಕಾರ್ಯಾಚರಣೆಯಲ್ಲಿ ಗಮನವಿರುವುದು ಮಾಹಿತಿ ತಂತ್ರಜ್ಞಾನ ಹಾಗೂ ಬಿಗ್ ಡಾಟಾ ಅನಾಲಿಟಿಕ್ಸ್ ಕುರಿತಂತೆ. ವೆಬ್ ಡೆವಲಪ್‌ಮೆಂಟ್ ಹಾಗೂ ಡಿಜಿಟಲ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದಂತೆ ಮುಂದಿನ ತಿಂಗಳು ಸಂಸ್ಥೆ ವರ್ಕ್ ಶಾಪ್ ಒಂದನ್ನು ಆಯೋಜಿಸಿದೆ.

ಒಂದು ವೇಳೆ ನೀವು ಎಕನಾಮಿಸ್ಟ್ ಅಥವಾ ಫೋರ್ಬ್ಸ್ ಪತ್ರಿಕೆ ಮಾಸಿಕ ಚಂದಾದಾರಿಕೆ ಹೊಂದಿದ್ದರೆ, ನೀವು ಬಯಸಿದಷ್ಟು ಕಾಲ ಆ ಪತ್ರಿಕೆ ಚಂದಾದಾರಿಕೆ ಉಳಿದಿರುತ್ತದೆ. ಡಿಝೈರ್‌ನ ಕಾರ್ಯಾಚರಣೆ ಸಹ ಚಂದಾದಾರಿಕೆ ಮಾದರಿಯಲ್ಲಿದೆ. ಡಿಝೈರ್ ನೂತನ ತಂತ್ರಜ್ಞಾನ, ಕ್ರಾಫ್ಟಿಂಗ್ ಮುಂತಾದ ಅನನ್ಯ ಕಲಿಕೆಗಳನ್ನು ಒದಗಿಸುತ್ತಿದೆ. ಈ ಉದ್ಯಮದಲ್ಲಿ ಹೊಸ ಹೊಸ ಅನುಭವಗಳಾಗಬೇಕಿದ್ದರೆ, ಉದ್ಯಮದ ಆಯಾಮಗಳನ್ನು ಆಗಾಗ ಅಪ್‌ಗ್ರೇಡ್ ಮಾಡುತ್ತಿರಬೇಕು ಎಂದಿದ್ದಾರೆ ಬಿನ್ನಿ.

ಯುವರ್ ಸ್ಟೋರಿ ನಿಲುವು

ಈ ರೀತಿಯ ಸ್ಟಾರ್ಟ್ ಅಪ್ ಸಂಸ್ಥೆಗಳ ವ್ಯಾಪ್ತಿ ದೊಡ್ಡದಿದೆ. ವೃತ್ತಿಪರ ಸಮುದಾಯಗಳಿಗೆ ಇಂತಹ ಸಂಸ್ಥೆಗಳ ಅಗತ್ಯವೂ ಇದೆ.

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಗ್ಲೋಬಲ್ ಇಂಡಸ್ಟ್ರಿ ಅನಾಲಿಸ್ಟ್ ಪ್ರಕಾರ ಆನ್‌ಲೈನ್ ಕಲಿಕೆಯ ಮಾರುಕಟ್ಟೆ 2015ರ ಅಂತ್ಯದ ನಂತರ ಸುಮಾರು 107 ಬಿಲಿಯನ್ ಡಾಲರ್ ದಾಟುತ್ತದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಕೌಶಲ್ಯ ಒದಗಿಸುವ ಅನೇಕ ಸ್ಟಾರ್ಟ್ ಅಪ್ ಸಂಸ್ಥೆಗಳು ನಮ್ಮಲ್ಲಿವೆ.

ಆನ್‌ಲೈನ್ ಕೌಶಲ್ಯ ತರಬೇತಿ ನೀಡುವ ಕೆಲವು ಅತ್ಯುತ್ತಮ ಸಂಸ್ಥೆಗಳು ನಮ್ಮ ಮಾರುಕಟ್ಟೆಯಲ್ಲಿವೆ :

ಯುಡೇಸಿಟಿ, ಇತ್ತೀಚೆಗಷ್ಟೇ ಸುಮಾರು 105 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ ಸ್ಟಾರ್ಟ್ ಅಪ್ ಸಂಸ್ಥೆ. ಲಿಂಕ್‌ದಿನ್​ನಿಂದ ಖರೀದಿಸಲ್ಪಟ್ಟ ಲಿಂಡಾ ಸಂಸ್ಥೆ 1.5 ಬಿಲಿಯನ್ ಡಾಲರ್ ಹೂಡಿಕೆಯನ್ನು ಪ್ರತಿವರ್ಷ ನಿರ್ವಹಿಸುತ್ತಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಭಾಗದಲ್ಲಿ ತರಬೇತಿ ನೀಡುವ ಹೈಬ್ರೀಡ್ ವೇದಿಕೆ ಜನರಲ್ ಅಸೆಂಬ್ಲಿ. ಈ ಪಟ್ಟಿಯಲ್ಲಿ ಇನ್ನೊಂದು ಪ್ರಮುಖ ಹೆಸರು ಸ್ಕಿಲ್ಲಬಲಿ.

ಕಳೆದರಡು ವರ್ಷಗಳಿಂದ ಓಪನ್ ಆನ್‌ಲೈನ್ ಕಲಿಕಾ ಕೇಂದ್ರಗಳ ಮಾರುಕಟ್ಟೆಗೆ ಗಣನೀಯ ಪ್ರಮಾಣದಲ್ಲಿ ಉತ್ತೇಜನ ಹಾಗೂ ಹೂಡಿಕೆ ಕಂಡುಬಂದಿವೆ. ಕೋರ್ಸ್ ಎರಾ ಹಾಗೂ ಎಡ್‌ಎಕ್ಸ್ ವೆಬ್‌ಸೈಟ್‌ನಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಮಿಡ್ ಕರಿಯರ್ ವೃತ್ತಿಪರ ಕೌಶಲ್ಯ ತರಬೇತಿ ಇನ್ನೂ ಕೆಲವು ಕಾಲ ಕಾಯಬೇಕಿದೆ. ಏಕೆಂದರೆ ಇದರ ಬಗ್ಗೆ ಈಗಾಗಲೇ ಅರಿವು ಮೂಡತೊಡಗಿದ್ದು, ಭವಿಷ್ಯದಲ್ಲಿ ಅತ್ಯುತ್ತಮ ಅವಕಾಶಗಳೂ ಇದರಲ್ಲಿವೆ.

ಯಾವುದೇ ಬಗೆಯ ಪ್ರಚಾರವಿಲ್ಲದೆ ಸುಮಾರು 10ಕ್ಕೂ ಹೆಚ್ಚು ಯುವರ್ ಸ್ಟೋರಿ ಓದುಗರು ಹ್ಯಾಕರ್ ಡೇ ಗೆ ನೋಂದಾಯಿಸಿಕೊಂಡಿದ್ದಾರೆ. ಹ್ಯಾಕರ್‌ ಡೇ ತಂತ್ರಜ್ಞಾನ ಯಶಸ್ವಿಯಾಗಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ.


ಲೇಖಕರು: ಅಪರ್ಣಾ ಘೋಶ್​​

ಅನುವಾದಕರು: ವಿಶ್ವಾಸ್​​