ನಿಂದನೆ ಮತ್ತು ಬೆದರಿಕೆ ಅನುಭವಿಸಿದರೂ, ಶೊವೊನಾ ತಾವೇನೆಂದು ತೋರಿಸಿದಳು

ಆರ್​.ಪಿ.

ನಿಂದನೆ ಮತ್ತು ಬೆದರಿಕೆ ಅನುಭವಿಸಿದರೂ, ಶೊವೊನಾ ತಾವೇನೆಂದು ತೋರಿಸಿದಳು

Friday October 23, 2015,

4 min Read

ಶೊವೊನಾ ಕರ್ಮಾಕರ್ ಶಾಲೆಯಲ್ಲಿ ತನ್ನ ನೋಟಕ್ಕೆ ನಿಂದನೆ ಅನುಭವಿಸಿ, ಹೊಡೆತ ತಿಂದು ಲೇವಡಿಗೆ ಒಳಗಾಗಿದ್ದಳು. ತನ್ನ ಹೃದಯದ ಮಾತನ್ನು ಅನುಸರಿಸಿ, ತನ್ನ ಕನಸನ್ನು ಸಾಕಾರಗೊಳಿಸಿಕೊಂಡು ಛಾಯಾಗ್ರಾಹಕಿಯಾಗುವವರೆಗೆ ಈಕೆ ಅಂತರ್ಮುಖಿಯಾಗಿ ಬೆಳೆದಿದ್ದಳು. ಬೆಂಗಾಲಿ ತಂದೆ ಮತ್ತು ಆಫ್ರಿಕನ್ ತಾಯಿಗೆ ಹುಟ್ಟಿದ ಶೊವೊನಾ ಶಾಲಾ ದಿನಗಳಲ್ಲಿ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ನಾನಾ ನಗರಗಳಲ್ಲಿ ಬೆಳೆದಳು. ಇದಕ್ಕೆ ತಂದೆಯ ವರ್ಗಾವಣೆಗೊಳ್ಳೋ ಕೆಲಸವೂ ಕಾರಣವಾಗಿತ್ತು. 12ನೇ ತರಗತಿವರೆಗೂ ಆಕೆ ಗಣಿತ ಮತ್ತು ಜೀವಶಾಸ್ತ್ರವನ್ನು ಅಭ್ಯಾಸ ಮಾಡಿದಳು. ನಂತ್ರ ತನ್ನ ಕನಸನ್ನು ಹಿಂಬಾಲಿಸಿದಳು. ಆ ಕನಸು ಕಾರಣಾಂತರದಿಂದ ಕೈತಪ್ಪಿ ಹೋಗಿತ್ತು.

ಬಾಲ್ಯದಲ್ಲಿ ಸಾಕಷ್ಟು ತಾರತಮ್ಯ ಅನುಭವಿಸಿದ್ದ ಶೊವೊನಾಗೆ ಮುಂದೆ ತಾನೇನು ಮಾಡಬೇಕೆಂಬ ಸ್ಪಷ್ಟ ಗುರಿ ಇರಲಿಲ್ಲ. ಸಧ್ಯ ಮುಂಬೈನಲ್ಲಿ ಪ್ರಖ್ಯಾತ ಫೋಟೋಗ್ರಾಫರ್ ಆಗಿರೋ ಈಕೆ ಏನಾದರೊಂದು ಸೃಜನಶೀಲವಾದುದನ್ನು ಮಾಡಬೇಕೆಂದು ನಿರ್ಧರಿಸಿಕೊಂಡಿದ್ದಳು. ತಂದೆಗೆ ಮಗಳು ಡಾಕ್ಟರ್ ಆಗಬೇಕೆಂಬ ಆಸೆಯಿತ್ತು, ತಾಯಿ ಮಗಳನ್ನು ಎಂಜಿನಿಯರ್ ಮಾಡಬೇಕೆಂಬ ಕನಸು ಕಾಣುತ್ತಿದ್ದರು. ಆದ್ರೆ ಇದ್ಯಾವುದರ ಬಗ್ಗೆ ಶೊವೊನಾಗೆ ಆಸಕ್ತಿ ಇರಲಿಲ್ಲ. ಬಾಲ್ಯದಲ್ಲಿ ಆಕೆ ಮನೆಯ ಗೋಡೆಗೆ ಬಣ್ಣಗಳನ್ನು ತುಂಬುತ್ತಿದ್ದರಿಂದ ಅನಿಮೇಷನ್ ಮಾಡಬೇಕೆಂದು ಕೆಲ ಸಮಯ ಅಂದುಕೊಂಡ್ರೂ ಆಕೆಯ ಆಸಕ್ತಿ ಬೇರೆಯದ್ದೇ ಆಗಿತ್ತು.

image


“ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಗೆ ಸೇರಲು ಸಾಕಷ್ಟು ಪ್ರಯತ್ನಪಟ್ಟೆ. ಫಲ ಕೊಡಲಿಲ್ಲ. ಆದ್ದರಿಂದ ಪುಣೆಯಲ್ಲಿರೋ ಎಂಐಟಿ ಕಾಲೇಜು ಸೇರಿಕೊಂಡೆ. ನಾನೇನನ್ನೋ ಕಳೆದುಕೊಳ್ತಿದ್ದೀನಿ. ನನ್ನ ಜೀವನದ ಗುರಿ ಖಂಡಿತ ಇದಲ್ಲ ಅನ್ನೋದು ಬೇಗ ನನಗೆ ತಿಳಿದುಹೋಯಿತು. ಪ್ರಾಥಮಿಕ ಹಂತ ಮುಗಿಸಿ ಕೋರ್ಸ್ ಗೆ ತಿಲಾಂಜಲಿ ಕೊಟ್ಟೆ” ಅಂತಾಳೆ ಶೊವೊನಾ.

ಇದಾದ ನಂತ್ರ ಆಕೆ ಲಲಿತಕಲೆಗಳಲ್ಲಿ ಹೆಚ್ಚಿನ ಆಸಕ್ತಿವಹಿಸಿ ಶಾಂತಿನಿಕೇತನ್‍ನಲ್ಲಿರೋ ವಿಶ್ವಭಾರತಿ ಯೂನಿವರ್ಸಿಟಿಯ ಕಲಾಭವನಕ್ಕೆ ಸೇರಿಕೊಂಡಳು. ಮೊದಲ ವರ್ಷದ ಕಾಲೇಜಿನಲ್ಲಿ ತನಗೊಂದು ಉತ್ತಮ ಕ್ಯಾಮರಾ ಬೇಕೆಂದು ತಂದೆಗೆ ದಂಬಾಲು ಬಿದ್ದಳು. “ನನ್ನ ತಂದೆ ಆಶ್ಚರ್ಯಚಕಿತರಾಗಿದ್ದರು. ಕ್ಯಾಮರಾ ಏತಕ್ಕೆಂದು ಹಲವಾರು ಬಾರಿ ಕೇಳಿದರು. ನಾನು ಏನೇ ಹೇಳಿದರೂ ಅದಕ್ಕವರು ಒಪ್ಪದಿದ್ರೂ ಒಂದು ಕ್ಯಾಮರಾ ಕೊಡಿಸಿದರು” ಎಂದು ನಗುತ್ತಾ ಹೇಳ್ತಾಳೆ ಶೊವೊನಾ.

ಅದು ಶೊವೊನಾಳ ಅಮೂಲ್ಯ ಸಂಗ್ರಹ

ಬದಲಾಗುವ ತಂತ್ರಜ್ಞಾನದ ಕಾಲದಲ್ಲಿ ಆಕೆ ತನ್ನ ಮೊದಲ ಕ್ಯಾಮರಾ ಕ್ಯಾನನ್ 1000ಡಿ ಅನ್ನು ಅಮೂಲ್ಯ ಸಂಗ್ರಹವಾಗಿಸಿಕೊಂಡಳು. ಕೆಲ ಭಾಗ ಅಸಂಖ್ಯಾತ ಬಣ್ಣಗಳಿಂದ ಕೂಡಿರೋ ಇನ್ನೂ ಕೆಲ ಭಾಗ ಬಂಜರಾಗಿರೋ ಶಾಂತಿನಿಕೇತನವನ್ನು ತನ್ನ ಕ್ಯಾಮರಾದಲ್ಲಿ ಕ್ಲಿಕ್ಕಿಸಲು ಶುರುಮಾಡಿದಳು.

ಸದಾ ಇಂಟರ್‍ನೆಟ್ ಬಳಸುತ್ತಿದ್ದ ಈ ಯುವತಿ ಒಂದಿಲ್ಲೊಂದು ಆನ್‍ಲೈನ್ ಪೋರ್ಟಲ್‍ಗಳನ್ನು ನೋಡುತ್ತಾ ಆಸಕ್ತಿದಾಯಕ ವಿಷಯಗಳನ್ನು ಕಲೆಹಾಕುತ್ತಿದ್ದಳು. ಒಮ್ಮೆ ಅನ್ನಾಗೇ ಎಂಬಾಕೆಯ ಅಂತರ್ಜಾಲ ಪುಟವನ್ನು ನೋಡಬೇಕಾದ್ರೆ ಶೊವೊನಾ ಅನೇಕ ಕುತೂಹಲಕಾರಿ ಅಂಶಗಳನ್ನು ಗಮನಿಸುತ್ತಾಳೆ. ಅನ್ನಾಗೇ ಪ್ರತಿದಿನವೂ ತಾನೇ ತೆಗೆದುಕೊಂಡ ಫೋಟೋಗಳನ್ನು ಅಪ್‍ಲೋಡ್ ಮಾಡ್ತಿದ್ದಳು. ಇದು ಎರಡನೇ ವರ್ಷಕ್ಕೆ ಕಾಲಿಟ್ಟಿತ್ತು. “ಸಾಮಾನ್ಯ ವ್ಯಕ್ತಿಯೊಬ್ಬರು ಪ್ರತಿದಿನವೂ ಯಾಕೆ ತನ್ನ ಫೋಟೋಗಳನ್ನು ತಾನೇ ತೆಗೆದುಕೊಳ್ತಾರೆ ಎಂದು ತಿಳಿದುಕೊಳ್ಳೋ ಕುತೂಹಲ ಇತ್ತು. ಆಕೆಯಿಂದ ವಶೀಕರಣಕ್ಕೆ ಒಳಗಾದವಳಂತೆ ನಾನೂ ಆಕೆಯನ್ನು ಅನುಸರಿಸಲು ಶುರುಮಾಡಿದೆ” ಅಂತಾಳೆ ಶೊವೊನಾ. ಈ ಯುವತಿ ಅನ್ನಾಗೇ ಶೈಲಿಯನ್ನು ಮೂರು ತಿಂಗಳ ಕಾಲ ಅನುಸರಿಸಿ ತನ್ನದೇ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಅದನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಳು.

ಶೋಧನೆಯ ರೀತಿ

ತನ್ನ ಫೋಟೋ ತಾನೇ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡುವ ಪರಿಕಲ್ಪನೆಯನ್ನು ಶೊವೊನಾ ಇಷ್ಟಪಟ್ಟಿದ್ದು ಆಕೆಗೇ ಆಶ್ಚರ್ಯವನ್ನುಂಟುಮಾಡಿತ್ತು. ವರ್ಷಾನುಗಟ್ಟಲೆ ತೆರೆಮರೆಯಾಗಿದ್ದುದರ ಗಾಯ ಇನ್ನೂ ಮಾಗಿಲ್ಲ ಎನ್ನುತ್ತಾಳೆ ಶೊವೊನಾ. ನಾನು ಮಗುವಾಗಿದ್ದಾಗ “ನೀನೊಬ್ಬಳು ನೀಗ್ರೋ” ಎಂದು ನಿಂದನೆ ಅನುಭವಿಸಿದ್ದೆ. “ನಿಮ್ಮ ಪ್ರದೇಶಕ್ಕೆ ಯಾಕೆ ಹೋಗಲ್ಲ” ಎಂಬ ಮಾತುಗಳನ್ನೂ ಕೇಳಬೇಕಾಯಿತು. ನನ್ನ ನೋಟಕ್ಕೆ ಜನರು ನನ್ನನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳದೇ ತಿರಸ್ಕರಿಸುತ್ತಿದ್ದರು. ಮುದುಡಿ ಕೂರಬೇಕಿದ್ದ ನಾನು ನನ್ನಲ್ಲಿದ್ದ ಬಂಡಾಯದ ಗುಣದಿಂದ ಒಳಗಿನಿಂದ ಗಟ್ಟಿಯಾದೆ. ಇದರಿಂದಲೇ ನಾನು ನನ್ನ ಫೋಟೋ ನೋಡಿಕೊಂಡಾಗಲೆಲ್ಲಾ ಉತ್ಸಾಹ ಬರುತ್ತಿತ್ತು. ಯಾರೂ ನನ್ನ ಫೋಟೋ ತೆಗೆಯುತ್ತಿರಲಿಲ್ಲ. ಭಾರತೀಯರ ಸೌಂದರ್ಯಕ್ಕೆ ಕಲ್ಪನೆಗೆ ನಾನು ಸರಿಹೊಂದಲ್ಲ ಎಂದು ನನಗೆ ಅನ್ನಿಸುತ್ತಿತ್ತು.

ಈ ಸ್ವಂತ ಪ್ರಜ್ಞೆಯಿಂದಲೇ ಶೊವೊನಾ ಜಿಮ್ ಗೆ ಸೇರಿ ತೂಕ ಕಡಿಮೆ ಮಾಡಿಕೊಂಡಳು. ಆರುತಿಂಗಳಲ್ಲಿ 85 ಕಿಲೊ ತೂಗುತ್ತಿದ್ದವಳು 20 ಕಿಲೋ ಕಳೆದುಕೊಂಡಿದ್ದಳು. ಶೊವೊನಾ ತನ್ನ ವಿಶ್ವಾಸವನ್ನು ಮರಳಿ ಪಡೆದಿದ್ದಳು. ಇದೇ ಸಮಯದಲ್ಲಿ ಶೊವೊನಾಳ ಪ್ರಿಯತಮ ಆಕೆಯನ್ನು ಬಿಟ್ಟಿದ್ದ. “ನನ್ನ ನೋಟಕ್ಕೆ ಪ್ರಾಮುಖ್ಯತೆ ಕೊಟ್ಟ ಆತ ನಮ್ಮ ಸಂಬಂಧಕ್ಕೆ ಪೋಷಕರು ಒಪ್ಪೋದು ಕಷ್ಟವೆಂದು ಹಿಂದೆ ಸರಿದಿದ್ದ” ಅಂತಾಳೆ ಶೊವೊನಾ. ವ್ಯಕ್ತಿಗಿಂತ ಫೋಟೋಗ್ರಫಿಯೇ ನನ್ನ ನಿಜವಾದ ಬಾಯ್ ಫ್ರೆಂಡ್ ಎಂದು ಆಕೆ ವರ್ಷಗಳನ್ನು ಕಳೆದಳು.

ಮುಂಬೈ ಕೈಬೀಸಿ ಕರೆಯಿತು

ಕಲೆಗಾಗಿ ಕಲೆ ತತ್ವವನ್ನು ಅಳವಡಿಸಿಕೊಂಡಿದ್ದ ಕಾಲೇಜು, ಶೊವೊನಾಳ ಛಾಯಾಗ್ರಹಣವನ್ನು ಅಷ್ಟೇನೂ ಮೆಚ್ಚಿಕೊಂಡಿರಲಿಲ್ಲ. “ಛಾಯಾಗ್ರಹಣ ಊಟವನ್ನು ಸಂಪಾದನೆ ಮಾಡಿಕೊಳ್ಳೋದು ಹೇಗೆಂದು ಯಾರೂ ಹೇಳಿಕೊಟ್ಟಿಲ್ಲ. ಕ್ಯಾಮರಾ ತಂತ್ರಗಳನ್ನು ಹೇಳಿಕೊಡ್ತಾರೆ ಹೊರತು ಸಂಪಾದನೆ ಮಾರ್ಗ ಅಲ್ಲಿಲ್ಲ” ಎಂದು ಹೇಳ್ತಾಳೆ ಶೊವೊನಾ. ಶೊವೊನಾ ಗುರು ಮುಂಬೈನ ಖ್ಯಾತ ಫೊಟೋಗ್ರಾಫರ್ ರೀತಮ್ ಬ್ಯಾನರ್ಜಿ ಈಕೆಯ ಕೆಲಸ ನೋಡಿ ಕರೆಮಾಡ್ತಾರೆ. ಹೆಚ್ಚಾಗಿ ಹೊರದೇಶದಲ್ಲೇ ತಿರುಗಾಡೋ ರೀತಮ್ ಮುಂಬೈನಲ್ಲಿ ತನ್ನನ್ನು ಬಂದು ನೋಡು ಎಂದು ಹೇಳ್ತಾರೆ. ಆಗ ಶೊವೊನಾ ಕಾಲೇಜಿನ ಎರಡನೇ ವರ್ಷದಲಿದ್ದು, ಒಂದು ತಿಂಗಳು ರೀತಮ್ ಬಳಿ ಅಭ್ಯಾಸ ಮಾಡಿ ಪದವಿ ಮುಗಿಸಲು ಮತ್ತೆ ಕಾಲೇಜಿಗೆ ಹೋಗ್ತಾಳೆ.

2013ರಲ್ಲಿ ಆಕೆ ಮುಂಬೈಗೆ ಶಿಫ್ಟ್ ಆಗ್ತಾಳೆ. ತಾನೇ ಸ್ವತಃ ಫೋಟೋ ಎಡಿಟಿಂಗ್ ಕಲಿಯುತ್ತಾಳೆ. “ಮುಂಬೈ ಬೆದರಿಸೋ ನಗರ. ಒಂದೆಡೆ ಫ್ಯಾಂಟಸಿ ಇದ್ರೆ, ಮತ್ತೊಂದೆಡೆ ಕಠಿಣ ಪರಿಸ್ಥಿತಿ ಇದೆ. ಜೀವನ ಕಂಡುಕೊಳ್ಳಲು ಇದೇ ಸರಿಯಾದದ್ದು” ಎಂದು ಹೇಳ್ತಾಳೆ ಶೊವೊನಾ.

ಶೊವೊನಾ ಮೊದಮೊದಲು ಮುಂಬೈನಲ್ಲಿ ತನ್ನನ್ನು ತಾನು ಬುಸಿನೆಸ್ ಮಹಿಳೆ ಎಂದು ಗುರುತಿಸಿಕೊಳ್ಳೋಕೆ ಕಷ್ಟಪಡ್ತಾಳೆ. ಇಲ್ಲಿನ ಗ್ರಾಹಕರು ಫೋಟೋಗ್ರಾಫರ್‍ಗಳಿಗೆ ಕೊಡೊ ಹಣ ಸಾಕಾಗುತ್ತಾ ಇಲ್ಲವಾ ಎಂದು ಯೋಚನೆಯನ್ನೂ ಮಾಡಲ್ಲ ಎಂದು ವ್ಯಥಪಡುತ್ತಾಳೆ. ಶೊವೊನಾ ನಿಧಾನವಾಗಿ ವಾಣಿಜ್ಯ ಛಾಯಾಗ್ರಹಣದಲ್ಲಿ ತನ್ನದೇ ಹೆಜ್ಜೆ ಮೂಡಿಸುತ್ತಿದ್ದಾಳೆ. ಆಹಾರ, ಬಟ್ಟೆ, ಆಭರಣ, ಕಾರ್ಪೊರೇಟ್, 3ಡಿ ಫೊಟೋಗ್ರಾಫಿ ಮತ್ತು ಮೋಷನ್ ಫೊಟೋಗ್ರಫಿಯಲ್ಲಿ ಹಿಡಿತ ಸಾಧಿಸುತ್ತಿದ್ದಾಳೆ. “ಮೊದಲಿಗೆ ನಾನು ಅಂತರ್ಜಾಲದಲ್ಲಿ ಅನೇಕ ಸಾಫ್ಟ್‍ವೇರ್ ಬಳಸೋದನ್ನು ಕಲಿತುಕೊಂಡೆ. ನಂತ್ರ ಕೆಲವರ ಶೈಲಿಯನ್ನು ಅನುಸರಿಸುತ್ತಾ ನನ್ನದೇ ಶೈಲಿಗೆ ಒಗ್ಗಿಕೊಂಡೆ” ಎಂದು ಹೇಳ್ತಾಳೆ ಶೊವೊನಾ.

ಇತ್ತೀಚೆಗೆ ಫಿಲ್ಮಂ ಎಡಿಟಿಂಗ್ ಮತ್ತು ವಿಡಿಯೋ ಮೇಕಿಂಗ್ ನಲ್ಲೂ ತೊಡಗಿಸಿಕೊಂಡು ಹೊಸ ವಿಷಯಗಳನ್ನು ಕಲಿಯುತ್ತಿದ್ದಾಳೆ. “ಚಿತ್ರವನ್ನು ರಚಿಸಿದಾಗ ಅದು ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ. ಅದನ್ನು ಪ್ರಪಂಚದ ಬೇರಾವುದೇ ವಸ್ತುವಿಗೂ ವ್ಯಾಪಾರ ಮಾಡಬಾರದು ಅನ್ನೋ ಭಾವನೆ ಉಂಟಾಗುತ್ತದೆ” ಎನ್ನುತ್ತಾಳೆ ಶೊವೊನಾ. ತನ್ನ 365 ಚಿತ್ರ ಸರಣಿಯಿಂದಲೇ ಈ ಹಂತ ತಲುಪಿದ್ದು, ಆಗಿನಿಂದ ಶೊವೊನಾ ಹಿಂದೆ ನೋಡಿದ್ದೇ ಇಲ್ಲ.

ಇಂಡಸ್ಟ್ರಿಯ ಟಾಪ್ ಫೋಟೋಗ್ರಾಫರ್ ಆಗಬೇಕೆಂಬ ಬಯಕೆ

ಭಾರತದ ಅತ್ಯುತ್ತಮ ಮಹಿಳಾ ಛಾಯಾಗ್ರಾಹಕರ ಪಟ್ಟಿಯಲ್ಲಿ ತಾನು ಮೊದಲ ಸ್ಥಾನ ಪಡೆಯದಿದ್ರೂ ಮುಂಚೂಣಿಯಲ್ಲಿರಬೇಕು ಅನ್ನೋದು ಶೊವೊನಾಳ ಅಪೇಕ್ಷೆ. ತಂದೆ ತನ್ನ ಮೇಲಿಟ್ಟಿದ್ದ ನಂಬಿಕೆಗೆ ಮತ್ತು ತನ್ನದೇ ಫೊಟೋಗ್ರಫಿ ಶೈಲಿಯನ್ನು ಬೆಳೆಸಿಕೋ ಎಂದು ಸಲಹೆ ನೀಡಿದ ಗುರು ರೀತಮ್ ಬ್ಯಾನರ್ಜಿಗೆ ವಂದನೆ ಸಲ್ಲಿಸ್ತಾಳೆ ಶೊವೊನಾ. ಅವಕಾಶ ಪಡೆಯೋದ್ರಲ್ಲೂ ಆಕೆ ಮಾದರಿಯಾಗಿದ್ದಾಳೆ. ತನ್ನ ಇತರೆ ಸಹೋದ್ಯೋಗಿಗಳು ತಿಂಗಳಿಗೆ ಒಂದು ಅವಕಾಶ ಪಡೆದ್ರೆ, ಶೊವೊನಾ ವರ್ಷಕ್ಕೆ ಪಡೆಯೋ ಅವಕಾಶ ಒಂದೇ.

ಒಂದು ಮಗುವಿಗೆ ಪ್ರಾಯೋಜಕತ್ವ ಕೊಡಬೇಕೆಂಬ ಧೃಡ ಹಂಬಲ ಶೊವೊನಾಳಿಗೆ ಇದೆ. “ಮೊದಲು ನಾನು ಇಂಡಸ್ಟ್ರಿಯಲ್ಲಿ ತನ್ನ ಹೆಜ್ಜೆ ಊರಬೇಕು. ನಂತ್ರ ಒಂದಾದ್ರೂ ಮಗುವಿನ ಜೀವನ ¨ಬದಲಾಯಿಸೋ ಆಸೆ ಇದೆ” ಎಂದು ಹೇಳ್ತಾಳೆ ಈ ಫೋಟೋಗ್ರಾಫರ್. ಇನ್ನೂ ಕಲಿಯುವ ಮನಸ್ಸಿರೋ ಶೊವೊನಾ, ಪ್ರಪಂಚ ಸುತ್ತಬೇಕು ತನ್ನ ಅಸ್ತಿತ್ವ ತೋರಿಸಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದಾಳೆ.