ಫೋನ್​​ನಲ್ಲಿ ಮಾತನಾಡುತ್ತಲೇ ಡ್ರೈವ್ ಮಾಡಬೇಕೇ..? ಔರಾ ಬಳಸಿ

ಟೀಮ್​ ವೈ.ಎಸ್​​.

ಫೋನ್​​ನಲ್ಲಿ ಮಾತನಾಡುತ್ತಲೇ ಡ್ರೈವ್ ಮಾಡಬೇಕೇ..? ಔರಾ ಬಳಸಿ

Wednesday October 14, 2015,

3 min Read

ನ್ಯೂಟನ್​​ನ ತಲೆ ಮೇಲೆ ಆ್ಯಪಲ್ ಜೋರಾಗಿ ಬಿದ್ದಾಗ ಅನ್ವೇಷಣೆಯ ಐಡಿಯಾ ಬಂತಂತೆ. ವಿಜ್ಞಾನ ಪುಸ್ತಕಗಳಲ್ಲಿ ನ್ಯೂಟನ್​​ನ ಸಂಶೋಧನೆಯ ಕಥೆ ತುಂಬಾ ರಸವತ್ತಾಗಿ ಹೇಳಲಾಗುತ್ತದೆ. ಆ ಆ್ಯಪಲ್ ಘಟನೆಯಿಂದಾಗಿ ಗುರುತ್ವಾಕರ್ಷಣೆಯ ಸಿದ್ಧಾಂತಗಳನ್ನು ನ್ಯೂಟನ್ ಜಗತ್ತಿಗೆ ತಿಳಿಸಿದ.

ಬಹುಶ: ಅಂತಹದ್ದೇ ಘಟನೆಯೊಂದು ಹೊಸ ಅನ್ವೇಷಣೆಗೆ ಆಧುನಿಕ ಕಾಲದಲ್ಲೂ ನಾಂದಿಯಾಗಿದೆ. ನ್ಯೂಟನ್ ತಲೆ ಮೇಲೆ ಆ್ಯಪಲ್ ಬಿದ್ದಿದ್ದರೆ, ಇಲ್ಲಿ ಕಾರು ಅಪಘಾತವೊಂದು ಸಂಶೋಧನೆಗೆ ದಾರಿ ಮಾಡಿಕೊಟ್ಟಿದೆ. ಇಂಜಿನಿಯರ್ ಸೌರಭ್ ಪಾಲನ್ ಅವರು ಸಣ್ಣ ಅಪಘಾತದ ಬಳಿಕ ತಮ್ಮ ಸ್ಮಾರ್ಟ್​ಫೋನ್ ಅನ್ನು ಹೇಗೆ ಸುರಕ್ಷಿತವಾಗಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳತೊಡಗಿದರು. ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅಂತಿಮವಾಗಿ ತಾವೇ ಔರಾ ಎನ್ನುವ ಅಪ್ಲಿಕೇಶನ್ ಒಂದನ್ನು ತಯಾರಿಸಿದರು. ಒಂದು ಸಮೀಕ್ಷೆ ಪ್ರಕಾರ 660,000 ಜನರು, ವಾಹನ ಚಲಾಯಿಸುವ ವೇಳೆಗೆ ಸ್ಮಾರ್ಟ್ ಫೋನ್ ಬಳಸುತ್ತಾರೆ. ಅವರೆಲ್ಲರೂ ಅಪಘಾತದ ಅಪಾಯಕ್ಕೆ ಸಿಲುಕುತ್ತಾರೆ. ಇಂತಹ ಚಾಲಕರಿಗೆ ಔರಾ ಸುರಕ್ಷಿತ ಚಾಲನೆಯನ್ನು ಒದಗಿಸುತ್ತಿದೆ. ಆ್ಯಪಲ್ ಬಿದ್ದ ಮೇಲೆ ಮತ್ತೆ ನ್ಯೂಟನ್ ಆ ಮರದ ಕೆಳಗೆ ಕೂತಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ಸೌರಭ್ ಮಾತ್ರ ಒಮ್ಮೆ ಅಪಘಾತವಾದ ಬಳಿಕ ಔರಾ ಇಲ್ಲದೆ ವಾಹನ ಚಾಲನೆ ವೇಳೆ ಸ್ಮಾರ್ಟ್​ಫೋನ್ ಬಳಸಿಲ್ಲ.

image


ಸಿಲಿಕಾನ್ ವ್ಯಾಲಿಯಲ್ಲಿನ ರೊಬೊಟಿಕ್ಸ್ ಕಂಪನಿಯೊಂದನ್ನು ತೊರೆದು ಬಂದು ಮೈಟಿಕರ್ಮಾ, ಇಂಕ್ ಎಂಬ ಕಂಪನಿ ಸ್ಥಾಪಿ ಔರಾ ಸೃಷ್ಟಿಸಿದ ಸೌರಭ್ ಯುವರ್​​ಸ್ಟೋರಿ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಔರಾ ಎಂದರೇನು?

ಔರಾ ಎನ್ನುವುದು ಚೊಚ್ಚಲ ಸ್ಮಾರ್ಟ್ ಫೋನ್ ಟು ಕಾರ್ ಇಂಟಿಗ್ರೇಷನ್ ಸಾಧನವಾಗಿದೆ. ಪ್ರಸಕ್ತ ಯಾವುದೇ ಸಾಧನಗಳೂ ಚಾಲಕರಿಗೆ ಫೋನ್ ಬಳಸುತ್ತಾ ಸುರಕ್ಷಿತವಾಗಿ ಚಾಲನೆ ಮಾಡುವ ಅವಕಾಶ ಕಲ್ಪಿಸುತ್ತಿಲ್ಲ. ಈಗ ಇರುವ ಎಲ್ಲಾ ಸಾಧನಗಳೂ ಟಚ್​​ಸ್ಕ್ರೀನ್ ಆಧರಿತವಾಗಿದ್ದು, ಒಂದು ಕ್ಷಣವಾದರೂ ಚಾಲಕ ರಸ್ತೆಯಿಂದ ಕಣ್ಣುಗಳನ್ನು ಹೊರಳಿಸುವ ಅನಿವಾರ್ಯತೆ ಇದೆ. ಔರಾ ಅದಕ್ಕೆ ಪರಿಹಾರ ಕಂಡುಕೊಂಡಿದೆ. ಚಾಲನೆಗೆ ಬಾಧಕವಾಗಿರುವ ಸ್ಮಾರ್ಟ್ ಫೋನ್​​ಗಳನ್ನು ಔರಾ, ಚಾಲಕ ಸ್ನೇಹಿಯಾಗಿ ಪರಿವರ್ತಿಸಿದೆ. ಚಾಲನೆಯ ಜೊತೆಗಾರನನ್ನಾಗಿ ಮಾಡಿದೆ.

ನಿಜವಾಗಿಯೂ ಯಾವುದಕ್ಕೆ ನೀವು ಉತ್ತರ ಹುಡುಕುತ್ತಿದ್ದೀರಿ?

ಹಿಂದಿನಿಂದಲೂ ಸುರಕ್ಷಿತ ಚಾಲನೆಯ ಪ್ರಚಾರಕಾರ್ಯಗಳೆಲ್ಲವೂ ಒಂದೇ ತೆರನಾಗಿ ನಡೆದುಕೊಂಡು ಬಂದಿವೆ. ಚಾಲನೆ ಮಾಡುವಾಗ ಫೋನ್ ಬಳಸಬೇಡಿ ಎಂದು ಜಾಹೀರಾತು ಹಾಕುತ್ತಾರೆ. ಕಾನೂನು ಅನುಷ್ಠಾನ, ಅಪಘಾತಗಳ ಭಯದ ಸೃಷ್ಟಿ ಅಥವಾ ಭಾರೀ ದಂಡ ವಿಧಿಸಲಾಗುತ್ತದೆ. ಇಂತಹ ಪ್ರಚಾರ ತಂತ್ರಗಳೆಲ್ಲವೂ ಪರಿಣಾಮಕಾರಿಯಾಗಿರುವುದಿಲ್ಲ, ಅನುಷ್ಠಾನಯೋಗ್ಯವೂ ಅಲ್ಲ. ಇದಕ್ಕೆ ಫೋನ್ ಬಳಕೆಯಿಂದ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯೇ ಸಾಕ್ಷಿ. ಔರಾ, ಫೋನ್ ಬಳಕೆಯಿಂದ ಎದುರಾಗುವ ಅಪಾಯ, ಅಡಚಣೆಯನ್ನು ತಪ್ಪಿಸಿ, ಜೀವವನ್ನು ಉಳಿಸುತ್ತದೆ.

ನಿಮಗೆ ಎದುರಾದ ಸವಾಲುಗಳೇನು?

ಹಾರ್ಡ್​ವೇರ್ ಸಾಧನವನ್ನು ತಯಾರಿಸುವುದು ತುಂಬಾ ಸವಾಲಿನ ಕೆಲಸ. ವ್ಯಾವಹಾರಿಕವಾಗಿ ಇದನ್ನು ಆರಂಭಿಸಲು ದೊಡ್ಡ ಪ್ರಮಾಣದ ಬಂಡವಾಳ ಬೇಕಾಗುತ್ತದೆ. ಸಾಫ್ಟ್​​ವೇರ್​​ನಂತಲ್ಲ. ಇನ್ನು ಒಮ್ಮೆ ಕಳುಹಿಸಿಕೊಟ್ಟರೆ, ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಇದನ್ನು ಹಾರ್ಡ್​ವೇರ್ ಎಂದು ಕರೆಯಲಾಗುತ್ತದೆ. ಹೀಗಾಗಿ ಉತ್ಪಾದನೆ ಮತ್ತು ಬಂಡವಾಳ ಎರಡೂ ಕೂಡಾ ದೊಡ್ಡ ಸವಾಲು. ಹೊಸ ಉದ್ಯಮಿಯಾಗಿರುವ ಕಾರಣ, ನಾನು ಎಲ್ಲವನ್ನೂ ಮಾಡಿಯೇ ಕಲಿಯಬೇಕಾಗಿತ್ತು. ಇದರಿಂದಾಗಿ, ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತಿತ್ತು.

ನೀವೀಗ ಯಾವ ಪರಿಸ್ಥಿತಿಯಲ್ಲಿ ಇದ್ದೀರಿ?

ಕಿಕ್ ಸ್ಟಾರ್ಟರ್ ಮೂಲಕ ಕ್ರೌಡ್ ಫಂಡಿಂಗ್​​ನಿಂದ ನಾವು ಬಂಡವಾಳ ಸಂಗ್ರಹಿಸುತ್ತಿದ್ದೇವೆ. ನಮ್ಮ ಉತ್ಪನ್ನವನ್ನು ಬಳಸಲು ಇಚ್ಛಿಸುವವರು, ನಮಗೆ ಹಣ ಸಹಾಯ ಮಾಡಬಹುದು. ನಾವು ಉತ್ಪನ್ನ ತಯಾರಾಗುತ್ತಿದ್ದಂತೆಯೇ, ಅವರಿಗೆ ಕಳುಹಿಸಿಕೊಡುತ್ತೇವೆ.

ನಿಮ್ಮ ಯೋಜನೆಗಳೇನು?

ನಾವು ಚಿಲ್ಲರೆ ವ್ಯಾಪಾರದ ಮೂಲಕ ನೇರವಾಗಿ ಗ್ರಾಹಕರನ್ನು ತಲುಪಲು ಉದ್ದೇಶಿಸಿದ್ದೇವೆ. ಅಲ್ಲದೆ, ನಾವು ಲಾಭರಹಿತ ಸಂಸ್ಥೆಗಳ ಮೂಲಕ ಸುರಕ್ಷಿತ ಚಾಲನೆಯನ್ನು ಪ್ರಚಾರ ಮಾಡಲು ಉದ್ದೇಶಿಸಿದ್ದೇವೆ. ಆಟೋಮೊಬೈಲ್ ಸಂಸ್ಥೆಗಳೊಂದಿಗೂ ಮಾತುಕತೆ ನಡೆಸಿ, ಅವರ ವಾಹನಗಳಲ್ಲಿ ನಮ್ಮ ತಂತ್ರಜಾನವನ್ನು ಅಳವಡಿಸುವಂತೆ ಮನವಿ ಮಾಡುತ್ತೇವೆ.

ಮೈಟಿಕರ್ಮಾದ ಬಗ್ಗೆ ಹೇಳಿ?

ಮೈಟಿಕರ್ಮಾದಲ್ಲಿ ನಾವು 7 ಅದ್ಬುತ ಇಂಜಿನಿಯರ್​​ಗಳನ್ನು ಹೊಂದಿದ್ದೇವೆ. ಅವರು ಇಂಟೆಲ್, ಗೂಗಲ್,ಎನ್ವಿಡಿಯಾ ಮತ್ತು ಡೆಲ್ ಮೊದಲಾದ ಕಂಪನಿಗಳಲ್ಲಿ ಸಾಫ್ಟ್​​ವೇರ್​​, ನೆಟ್​​ವರ್ಕಿಂಗ್, ಹಾರ್ಡ್​ವೇರ್​​ ಮತ್ತು ಮೆಕಾನಿಕಲ್ ಡಿಸೈನ್​​ನಲ್ಲಿ ಅಳವಾದ ಅನುಭವ ಹೊಂದಿದ್ದಾರೆ.

image


ನಿಮ್ಮ ಬಗ್ಗೆ ಸ್ವಲ್ಪ ಹೇಳಿ

ನಾನು ರೊಬೊಟಿಕ್ಸ್ ಇಂಜಿನಿಯರ್, ಪೆನಿಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ರೊಬೊಟಿಕ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ನಾನು 3 ವರ್ಷಗಳ ಕಾಲ ಸಿಲಿಕಾನ್ ವ್ಯಾಲಿಯಲ್ಲಿ ಕೆಲಸ ಮಾಡಿದ್ದೆ. ಉದ್ಯಮ ಹಾಗೂ ನವ್ಯೋದ್ಯಮ ಎರಡರಲ್ಲೂ ಕೆಲಸ ಮಾಡಿದ್ದೆ. ಸಿಲಿಕಾನ್ ವ್ಯಾಲಿ ರೊಬೊಟಿಕ್ಸ್ ಸಂಸ್ಥೆ ಸ್ಥಾಪಿಸುವಲ್ಲಿ ಸಕ್ರಿಯನಾಗಿದ್ದೆ. ಈ ಸಂಸ್ಥೆಯು ಸ್ಯಾನ್ ಫ್ರಾನ್ಸಿಸ್ಕೋ ಬೇ ನಲ್ಲಿ ರೊಬೊಟಿಕ್ಸ್​​ನಲ್ಲಿ ನವ್ಯೋದ್ಯಮ ಸ್ಥಾಪಿಸುವವರಿಗೆ ನೆರವು ನೀಡುತ್ತಿದೆ.

ನಿಮಗೆ ಪ್ರೇರಣೆ ಏನು?

ನಮ್ಮ ಬದುಕನ್ನು ಸುರಕ್ಷಿತವಾಗಿಸುವ ತಂತ್ರಜಾನದ ಬಳಕೆ ಬಗ್ಗೆ ಸದಾ ಚಿಂತನೆ ನಡೆಸುತ್ತಿದ್ದೆ. ನಮ್ಮ ಜಾನ ಮತ್ತು ತಾಂತ್ರಿಕ ಕೌಶಲ್ಯನ್ನು ಜನರು ಉತ್ತಮ , ಸುರಕ್ಷಿತ ಮತ್ತು ಸುಲಭದ ಜೀವನ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಬಳಸಬೇಕು ಎಂದುಕೊಂಡಿದ್ದೆ. ಮಿಲಿಯನ್​​ಗಟ್ಟಲೆ ಸ್ಮಾರ್ಟ್​ಫೋನ್ ಬಳಕೆದಾರರು, ಡ್ರೈವರ್​​ಗಳು ಮತ್ತು ಪಾದಚಾರಿಗಳನ್ನು ಸುರಕ್ಷಿತವಾಗಿಡುತ್ತೇವೆ ಎನ್ನುವ ಒಂದೇ ಒಂದು ವಿಚಾರವೇ, ನಾನು ಮೈಟಿಕರ್ಮಾ ಆರಂಭಿಸಲು ಪ್ರೇರಣೆ ಎನ್ನುತ್ತಾರೆ ಸೌರಭ್.

ನವ್ಯೋದ್ಯಮದ ಆರಂಭಕ್ಕೆ ಅಗತ್ಯವಾದ ಮೂರು ಸಿದ್ಧಾಂತಗಳೇನು?

1. ದಾರಿ ಕಾಣದೇ ಇದ್ದಾಗಲೂ ಮುನ್ನಡೆಯುತ್ತಲೇ ಇರಿ, ನಡೆಯುತ್ತಲೇ ಇರಿ, ನಿಮಗೆ ದಾರಿ ಸಿಕ್ಕೇ ಸಿಗುತ್ತದೆ

2. ನೀವು ಸರಳವಾಗಿರಿ, ತಗ್ಗಿಬಗ್ಗಿ ನಡೆಯಿರಿ, ಸ್ಪರ್ಧೆಯಲ್ಲಿ ನೀವೇ ಮುಂದೆ ಸಾಗುತ್ತೀರಿ

3. ಹಣವು ಬಹುತೇಕ ಸಮಸ್ಯೆಯನ್ನು ಪರಿಹರಿಸುತ್ತದೆ, ಹಣವಿಲ್ಲದೆ ಪರಿಹರಿಸುವುದೇ ದೊಡ್ಡ ಸವಾಲು