ವೈಸೋಬ್ಲೂ- ದು:ಖ ಮರೆಯಲು ಫ್ಯಾಷನ್ ಪೋರ್ಟಲ್

ಟೀಮ್​ ವೈ.ಎಸ್​​.

0

ಎಲ್ಲರೂ ಇಚ್ಚೆಪಟ್ಟು, ಆಸೆ ಪಟ್ಟು ಉದ್ದಿಮೆ ಆರಂಭಿಸುತ್ತಾರೆ. ಆದರೆ, ಶ್ವೇತಾ ಶಿವಕುಮಾರ್ ಯಾವತ್ತೂ ಉದ್ದಿಮೆ ಆರಂಭಿಸುವ ಕನಸು ಕಂಡಿರಲಿಲ್ಲ. ಶ್ವೇತಾ ಅವರ ತಂದೆಯ ಆಕಸ್ಮಾತ್ ನಿಧನ, ಇಡೀ ಕುಟುಂಬವನ್ನೇ ಬೀದಿಗೆ ತಂದು ನಿಲ್ಲಿಸಿತು. ತಂದೆ ತೀರಿಕೊಂಡ ಬಳಿಕ ಬದುಕಿಗಾಗಿ ಏನಾದರೂ ಮಾಡಲೇಬೇಕಾಯಿತು. ಅಮ್ಮನ ಜೊತೆ ಸೇರಿಕೊಂಡು ಶ್ವೇತಾ 2012ರಲ್ಲಿ ಉದ್ಯಮರಂಗಕ್ಕೆ ಧುಮುಕಿದರು.

“ಆ ಸಂದರ್ಭದಲ್ಲಿ ನಾನು ಉನ್ನತ ಶಿಕ್ಷಣ ಪಡೆಯುವುದು ಸಾಧ್ಯವೇ ಇರಲಿಲ್ಲ. ಇದು ನಿಮಗೆ ಬಾಲಿವುಡ್ ಕಥೆ ಎನ್ನಿಸಬಹುದು. ನನ್ನ ಅಮ್ಮನ ದೂರದ ಸಂಬಂಧಿಯೊಬ್ಬರು, ಅಪ್ಪನಿಗೆ ಕೊನೆಯ ನಮನ ಸಲ್ಲಿಸಲು ಬಂದಿದ್ದರು. ಅವರಿಗೆ ಅವರದ್ದೇ ಕಟ್ಟಡದಲ್ಲಿ ವಾಸವಾಗಿದ್ದ, ಔಟ್​​ಲುಕ್ ಬ್ಯುಸಿನೆಸ್ ಪತ್ರಿಕೆಯ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಪರಿಚಯವಿತ್ತು. ಅವರು ಜಾಹೀರಾತು ವಿಭಾಗ ನೋಡಿಕೊಳ್ಳಲು ಸೂಕ್ತ ವ್ಯಕ್ತಿಗಾಗಿ ಹುಡುಕಾಡುತ್ತಿದ್ದರು,” ಎಂದು ವಿವರಿಸುತ್ತಾರೆ ಶ್ವೇತಾ.

ಔಟ್​​ಲುಕ್ ಸಂಸ್ಥೆಯಲ್ಲಿ 13 ತಿಂಗಳುಗಳ ಕಾಲ ಕೆಲಸ ಮಾಡಿದರು. ಅದಾದ ಬಳಿಕ ಮತ್ತೊಂದು ಮೀಡಿಯಾ ಪ್ಲಾನಿಂಗ್ ಕಂಪನಿಯಲ್ಲಿ 6-7 ತಿಂಗಳು ದುಡಿದರು. ಶ್ವೇತಾಗೆ ಸಾಕು ಎನ್ನಿಸಿತ್ತು. ಈ ಮಧ್ಯೆ, ಶ್ವೇತಾ ಫ್ಯಾಷನ್ ಪತ್ರಿಕೆಗಳನ್ನು ಗಮನಿಸಲು ಆರಂಭಿಸಿದ್ದರು. ಬಿಡುವಿನ ವೇಳೆಯಲ್ಲಿ ಫ್ಯಾಷನ್ ಪತ್ರಿಕೆ ಓದುವುದನ್ನೇ ಹವ್ಯಾಸ ಮಾಡಿಕೊಂಡರು. ಫ್ಯಾಷನ್ ಉದ್ಯಮ ಸ್ಥಾಪಿಸುವ ಆಸೆ ಇಲ್ಲದೇ ಇದ್ದರೂ, ಫ್ಯಾಷನ್​ಗೆ ಸಂಬಂಧಿಸಿ ಏನಾದರೂ ಮಾಡಲೇ ಬೇಕು ಎಂದುಕೊಂಡಿದ್ದರು.

ತನ್ನ ಕೆಲಸದಲ್ಲಿ ತೃಪ್ತಿ ಕಾಣದ ಮಗಳಿಗೆ ಕೆಲಸ ಬಿಟ್ಟು ಬೇರೆ ಏನಾದರೂ ಮಾಡುವಂತೆ ಅಮ್ಮ ಪ್ರೇರೇಪಿಸುತ್ತಿದ್ದರು. ಆದರೆ, ಶ್ವೇತಾ ದುಡುಕಿನ ನಿರ್ಧಾರ ತೆಗೆದುಕೊಳ್ಳಲಿಲ್ಲ. ತನ್ನ ಕೆಲಸಕ್ಕೆ ಗುಡ್​​ಬೈ ಹೇಳುವುದಕ್ಕೂ ಮುನ್ನ ಸಾಕಷ್ಟು ಯೋಚಿಸಿದರು. ಅಂತಿಮವಾಗಿ ನವ್ಯೋದ್ಯಮ ಸ್ಥಾಪಿಸಲು ನಿರ್ಧರಿಸಿದರು.

“ಅಕಾಲಿಕವಾಗಿ ನನ್ನ ತಂದೆ ತೀರಿಕೊಳ್ಳದೇ ಇದ್ದಿದ್ದರೆ ನಾನು ನವ್ಯೋದ್ಯಮದ ಬಗ್ಗೆ ಆಸಕ್ತಿವಹಿಸುತ್ತಿರಲಿಲ್ಲ. ಅವರಿಗೆ ಲಿವರ್ ಇನ್ಫೆಕ್ಷನ್ ಆಗಿತ್ತು. ಸುದೀರ್ಘ ಚಿಕಿತ್ಸೆ ಬಳಿಕ ಅವರು ಸುಧಾರಿಸಿಕೊಂಡರು ಎನ್ನುವಾಗಲೇ ಸಾವನ್ನಪ್ಪಿದರು. ಅವರು ನಮ್ಮ ಜೊತೆಗೆ ಇರುತ್ತಿದ್ದರೆ, ನಾನು ಮತ್ತಷ್ಟು ಕಾಲ ಇದನ್ನು ಮುಂದೂಡುತ್ತಿದ್ದೆ. ನನಗೆ ನವ್ಯೋದ್ಯಮ ಸ್ಥಾಪಿಸುವ ಧೈರ್ಯವೇ ಇರಲಿಲ್ಲ” ಎನ್ನುತ್ತಾ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳುತ್ತಾರೆ ಶ್ವೇತಾ.

ಅಮ್ಮ-ಮಗಳು ಇಬ್ಬರಿಗೂ ಒಂದಂತೂ ಅರಿವಾಗಿತ್ತು- ಇದಕ್ಕಿಂತ ಕೆಟ್ಟ ಪರಿಸ್ಥಿತಿ ಬೇರೆ ಇರಲಾರದು ಎನ್ನುವುದನ್ನು ಅವರು ನಿರ್ಧರಿಸಿಬಿಟ್ಟಿದ್ದರು. ಹೀಗಾಗಿ, ಜನರನ್ನು ಭೇಟಿ ಮಾಡಿ, ಉದ್ಯಮಕ್ಕೆ ಹಣ ಹೊಂದಿಸತೊಡಗಿದರು.

ವೈ ಸೋ ಬ್ಲೂ

ಶ್ವೇತಾ ಮತ್ತು ಅವರ ಸಹೋದರಿ ಇಡೀ ರಾತ್ರಿ ಕುಳಿತು ಯೋಚಿಸಿದಾಗ ಹೊಳೆದ ಹೆಸರೇ ವೈ ಸೋ ಬ್ಲೂ. ಫ್ಯಾಷನ್ ಎಂಬುದನ್ನು ತಮ್ಮ ಸಂಸ್ಥೆಯ ಹೆಸರಿನಿಂದ ದೂರ ಇಡಬೇಕು ಎಂದು ಅವರು ನಿರ್ಣಯಿಸಿದ್ದರು. “ನಮ್ಮ ಬ್ರಾಂಡ್ ಎಲ್ಲದಕ್ಕೂ ಹೊಂದಿಕೊಳ್ಳುವಂತಿರಬೇಕು, ಎಲ್ಲರಿಗೂ ಖುಷಿ ಕೊಡುವಂತಿರಬೇಕು. ಉಟ್ಟುಕೊಂಡ ತಕ್ಷಣವೇ ಅವರ ಮನಸ್ಥಿತಿ ಬದಲಾಗಬೇಕು, ಖುಷಿಖುಷಿಯಾಗಿರಬೇಕು,” ಎನ್ನುತ್ತಾರೆ ಶ್ವೇತಾ.

ಅಮ್ಮನ ಪ್ರೀತಿಯ ಒತ್ತಡದಿಂದಾಗಿ, ಶ್ವೇತಾ ಕೊನೆಗೂ ಉದ್ದಿಮೆ ಆರಂಭಿಸಿದರು. “ಮನೆಯಲ್ಲಿ ಸಂಪಾದನೆ ಮಾಡೋ ಏಕೈಕ ವ್ಯಕ್ತಿಯಾಗಿದ್ದುದರಿಂದ, ಆಕೆ ಏನೋ ಒಂದು ಕೆಲಸ ಮಾಡಿಕೊಂಡಿರಲಿ ಎಂದು ನಾನು ಇಚ್ಚಿಸಲಿಲ್ಲ. ಅವಳು ಆಕೆಯ ಕನಸುಗಳನ್ನು ಬೆನ್ನತ್ತಿ ಹೋಗಬೇಕು, ಫ್ಯಾಷನ್​ಗೆ ಸಂಬಂಧಿಸಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದೆ.” ಎನ್ನುತ್ತಾರೆ ಜಯಾ.

ಅಪ್ಪನನ್ನು ಕಳೆದುಕೊಂಡ ಬಳಿಕ ಇಡೀ ಮನೆಯನ್ನು ನಿಭಾಯಿಸುವ ಜವಬ್ದಾರಿ ಹೊತ್ತುಕೊಂಡಿದ್ದ ಮಕ್ಕಳಿಗೆ ಜಯಾ ಸದಾ ಸ್ಫೂರ್ತಿಯ ಸೆಳೆಯಾಗಿದ್ದರು.

“ಉದ್ಯಮ ಸ್ಥಾಪಿಸಲು ನಿರ್ಧರಿಸಿದ ಬಳಿಕ ನಾವು ಯಾರಲ್ಲೂ ಸಾಲ ಪಡೆಯದೆ ಹಣ ಒಟ್ಟುಗೂಡಿಸಿದೆವು. ನಾವು ನಿಧಾನಕ್ಕೆ ಬೆಳೆಯಲು ನಿರ್ಧರಿಸಿದೆವು. ಅಗತ್ಯ ಬಿದ್ದರೆ ಮಾತ್ರ ಸಾಲ ತೆಗೆದುಕೊಳ್ಳಬೇಕೆಂದು ಗಟ್ಟಿ ಮನಸ್ಸು ಮಾಡಿದ್ದೆವು” ಎನ್ನುತ್ತಾರೆ ಜಯಾ. ಸರಿಯಾದ ಸಮಯಕ್ಕೆ ಕಾಯದೆ ತಕ್ಷಣವೇ ಉದ್ಯಮ ಸ್ಥಾಪಿಸಬೇಕೆಂದು ಹಠ ಹಿಡಿದವರೇ ಜಯಾ.

ಉದ್ಯಮಕ್ಕೆ ಶಕ್ತಿಯಾದ ಜಯಾರ ನೇಯ್ಗೆ ಕೌಶಲ್ಯ

ಸೂಜಿಯಿಂದ ಮಾಡುವ ಕೆಲಸಗಳಲ್ಲಿ ಜಯಾ ಸಿದ್ಧಹಸ್ತರಾಗಿದ್ದರು. ಅವರು ಸುಮಾರು 25 ವರ್ಷಗಳ ಕಾಲ ಇದೇ ವೃತ್ತಿ ಮಾಡಿಕೊಂಡಿದ್ದು, ತಮ್ಮ ಮಕ್ಕಳಿಗೆ ಪಾಶ್ಚಾತ್ಯ ಶೈಲಿಯಲ್ಲಿ ಬಟ್ಟೆಗಳನ್ನು ರೂಪಿಸಿದ್ದರು. ವೈಸೋ ಬ್ಲೂ ಆರಂಭಗೊಂಡಾಗ, ಬೇರೆಯವರಿಗಿಂತ ಭಿನ್ನವಾಗಿ ನಿಲ್ಲಬೇಕೆಂದು ಯೋಜನೆ ರೂಪಿಸಿದರು. ಶ್ವೇತಾ ಅವರು ಬಟ್ಟೆಗಳನ್ನು ತಂದು, ಡಿಸೈನ್ ಮಾಡುವುದು, ಹಾಗೂ ಮಾರ್ಕೆಟಿಂಗ್ ನೋಡಿಕೊಂಡರೆ, ತಾಯಿ ಜಯಾ ಹೊಲಿಗೆ ಮತ್ತು ಇತರ ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ತಮ್ಮದೇ ಸ್ವಂತ ಉತ್ಪಾದನಾ ಘಟಕ ಹೊಂದಿದ್ದು, ಪ್ರತಿಯೊಂದು ಉತ್ಪನ್ನದ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸುತ್ತಾರೆ. ಗ್ರಾಹಕರ ಕೋರಿಕೆಗೆ ತಕ್ಕಂತೆಯೂ ವಿನ್ಯಾಸಗೊಳಿಸುತ್ತಾರೆ. ಹೊಸ ಹೊಸ ವಿನ್ಯಾಸಗಳಿಂದ ಆರಂಭಿಸಿ, ವೈಸೋ ಬ್ಲೂ ನಲ್ಲಿ ಎಲ್ಲವನ್ನೂ ನವೀನ ರೀತಿಯಲ್ಲಿ ಮಾಡುತ್ತಿದ್ದಾರೆ. ಪ್ರತಿ ಫ್ಯಾಷನ್ ಅನ್ನು ಕೂಡಾ ಅವರು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ತೀರಾ ಇತ್ತೀಚೆಗಷ್ಟೇ ಬ್ರ್ಯಾಂಡ್ ಆರಂಭಿಸಿರುವ ಇವರು ತೀವ್ರ ವೇಗದಲ್ಲಿ ವಿಸ್ತರಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ.

ಮಗಳ ಬೆನ್ನ ಹಿಂದೆ ಅಮ್ಮನ ಶ್ರಮ

“ನನ್ನ ಗಂಡ ತೀರಿಕೊಂಡಾಗ ನಾವು ಆರ್ಥಿಕವಾಗಿ ಸ್ಥಿರವಾಗಿರಲಿಲ್ಲ. ನಾನು ಅವಳಿಗೆ ಕೆಲಸ ಬಿಡುವಂತೆ ಹೇಳಿದರೂ, ನನಗೆ ನಿಜ ಏನು ಎನ್ನುವುದು ಗೊತ್ತಿತ್ತು. ನಾನು ಜೀವನದ ಅತಿ ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಹೊರಟಿದ್ದೆವು. ಆದರೆ, ಅವಳಿಗೆ ಹಿಂದಿನ ಕೆಲಸದಲ್ಲೂ ತೃಪ್ತಿ ಇರಲಿಲ್ಲ. ಅಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿರಲಿಲ್ಲ. ನಾವು ಜೊತೆಯಾಗಿ ಬಂಡಿ ಎಳೆಯಲು ನಿರ್ಧರಿಸಿದೆವು,” ಎನ್ನುತ್ತಾರೆ ಶ್ವೇತಾ ತಾಯಿ. ಹಲವು ವರ್ಷಗಳ ಕಾಲ ತನ್ನ ಮಕ್ಕಳಿಗೆ ಮತ್ತು ಗೆಳೆಯರಿಗೆ ಬಟ್ಟೆ ಹೊಲಿದುಕೊಡುತ್ತಿದ್ದ ಅವರಿಗೆ, ಆತ್ಮವಿಶ್ವಾಸ ತುಂಬಿದ್ದು ಮಾತ್ರ ಹೊಸ ಉದ್ಯಮ. ಗ್ರಾಹಕರು ವಿನ್ಯಾಸವನ್ನು ಹೊಗಳಿದರೆ ಅದೇ ಅವರಿಗೆ ತೃಪ್ತಿ.

ನನ್ನ ಮಕ್ಕಳು ಬೆಳೆಯುತ್ತಿರುವಾಗಲೇ, ಅವರಿಗೆ ಪಾಶ್ಚಾತ್ಯ ಧಿರಿಸುಗಳನ್ನು ತಯಾರಿಸಿ ಪ್ರಯೋಗ ಮಾಡುತ್ತಿದ್ದೆ ಎನ್ನುತ್ತಾರೆ ಜಯಾ. ಜಯಾ ಅವರಲ್ಲಿ ಉದ್ಯಮಶೀಲತೆಯು ಬಾಲ್ಯದಿಂದಲೇ ಇತ್ತು. ಆದರೆ ಅದನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ತನ್ನ ಮಗಳ ಮೇಲೆ ಒತ್ತಡ ಹೇರಿ, ತಮ್ಮ ಕನಸನ್ನು ಮಕ್ಕಳ ಮೂಲಕ ಈಡೇರಿಸಿಕೊಂಡರು.

Related Stories