ಶಾಲೆ ಬಿಡಲು ಕಾರಣವಾಯ್ತು ಬಡತನ, ಈಗ ಅವರ ಕೈಯಲ್ಲಿದೆ ಬಡಮಕ್ಕಳ ಭವಿಷ್ಯ

ಟೀಮ್​ ವೈ.ಎಸ್​​. ಕನ್ನಡ

ಶಾಲೆ ಬಿಡಲು ಕಾರಣವಾಯ್ತು ಬಡತನ, ಈಗ ಅವರ ಕೈಯಲ್ಲಿದೆ ಬಡಮಕ್ಕಳ ಭವಿಷ್ಯ

Saturday November 28, 2015,

3 min Read

ಆ ಶಾಲೆಗೆ ಹೆಸರಿಲ್ಲ, ಶಾಲೆಗೆ ಯಾವುದೇ ಕಟ್ಟಡ ಇಲ್ಲ. ಫೀಸ್ ನೀಡುವ ಚಿಂತೆ ಇಲ್ಲ. ದೆಹಲಿಯ ಯಮುನಾ ಬ್ಯಾಂಕ್ ಮೆಟ್ರೋ ಸೇತುವೆ ಕೆಳ ಪ್ರದೇಶವೇ ಜ್ಞಾನ ದೇಗುಲ. 200 ಮಕ್ಕಳಿಗೆ ಪಾಠ ಹೇಳಿಕೊಡುವ ಗುರುವೇ ರಾಜೇಶ್ ಕುಮಾರ್ ಶರ್ಮಾ. 2006ರಿಂದ ಶಾಲೆ ನಡೆಯುತ್ತಿದ್ದು, ರಾಜೇಶ್ ಕುಮಾರ್ ಶರ್ಮಾ ಎರಡು ಪಾಳಿಯಲ್ಲಿ ಶಿಕ್ಷಣ ನೀಡುವ ಪುಣ್ಯ ಕೆಲಸ ಮಾಡುತ್ತಿದ್ದಾರೆ. ಶಕರ್​​​ಪುರ್​​​ದಲ್ಲಿ ರಾಜೇಶ್ ಅವರ ಅಂಗಡಿ ಕೂಡ ಇದೆ. ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನು ಅವರು ಯಾರ ಸಹಾಯವೂ ಇಲ್ಲದೆ, ಒಂದು ಮಿಷನ್ ರೂಪದಲ್ಲಿ ಮಾಡ್ತಾ ಇದ್ದಾರೆ.

image


ರಾಜೇಶ್ ಶರ್ಮಾ 2006ನೇ ಇಸವಿಯ ಒಂದು ದಿನ ಯಮುನಾ ಬ್ಯಾಂಕ್ ಮೆಟ್ರೋ ಸೇತುವೆ ಬಳಿ ನಡೆದು ಹೋಗುತ್ತಿದ್ದರು. ಮೆಟ್ರೋ ಸುರಂಗ ಮಾರ್ಗದ ಬಗ್ಗೆ ಅವರು ತಿಳಿಯಬಯಸಿದ್ದರು. ಈ ಸಮಯದಲ್ಲಿ ಮಣ್ಣಿನಲ್ಲಿ ಆಡುತ್ತಿದ್ದ ಮಕ್ಕಳು ರಾಜೇಶ್ ಕಣ್ಣಿಗೆ ಬಿದ್ದರು. ಅವರೆಲ್ಲ ಸುರಂಗ ಮಾರ್ಗ ತೆಗೆಯುತ್ತಿದ್ದ ಕಾರ್ಮಿಕರ ಮಕ್ಕಳಾಗಿದ್ದರು. ಮಕ್ಕಳ ಪಾಲಕರ ಜೊತೆ ರಾಜೇಶ್ ಮಾತನಾಡಿದರು. ಮಕ್ಕಳನ್ನು ಶಾಲೆಗೆ ಏಕೆ ಕಳುಹಿಸುತ್ತಿಲ್ಲ ಎಂದು ಕೇಳಿದ್ರು. ಹತ್ತಿರ ಯಾವುದೇ ಶಾಲೆ ಇಲ್ಲ ಹಾಗೂ ದೂರ ಇರುವ ಶಾಲೆಗೆ ಹೋಗಲು ಸರಿಯಾದ ದಾರಿ ಇಲ್ಲ ಎಂಬ ಉತ್ತರ ಪಾಲಕರಿಂದ ಬಂತು.

image


ಆ ಕ್ಷಣ ಮಕ್ಕಳಿಗಾಗಿ ತಾನು ಏನಾದರೂ ಮಾಡಬೇಕೆಂದು ರಾಜೇಶ್ ಯೋಚಿಸಿದರು. ಬಳಿ ಇದ್ದ ಅಂಗಡಿಗೆ ಹೋಗಿ ಚಾಕಲೇಟ್ ತಂದು ನೀಡಿದರು. ಈ ಚಾಕಲೇಟ್ ಮಕ್ಕಳಿಗೆ ಈ ಕ್ಷಣವಷ್ಟೇ ಖುಷಿ ನೀಡುತ್ತದೆ. ಚಾಕಲೇಟ್ ಮಕ್ಕಳ ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ. ಮಕ್ಕಳು ಮಣ್ಣಿನಲ್ಲಿ ಆಟವಾಡುತ್ತಲೇ ದಿನ ಕಳೆಯುತ್ತಾರೆಂದು ರಾಜೇಶ್ ಗೆ ಮನವರಿಕೆಯಾಯಿತು. ಮಕ್ಕಳ ಜೀವನ ಬದಲಾಯಿಸಬೇಕೆಂದು ನಿರ್ಧರಿಸಿದರು. ಮಕ್ಕಳಿಗೆ ಶಿಕ್ಷಣ ನೀಡಿ, ಉತ್ತಮ ಜೀವನದ ದಾರಿ ತೋರಿಸಲು ಮುಂದಾದರು.

ರಾಜೇಶ್ ಗೆ ತನ್ನ ಯೋಚನೆ ಸರಿ ಎನಿಸಿತು. ಪ್ರತಿದಿನ 1 ಗಂಟೆ ಶಿಕ್ಷಣ ನೀಡುವ ನಿರ್ಧಾರ ತೆಗೆದುಕೊಂಡರು. ಮರುದಿನ ಪಾಠ ಕಲಿಸಲು ಅಲ್ಲಿಗೆ ಹೋದಾಗ, ಓದುವ ಇಚ್ಛೆಯುಳ್ಳ ಎರಡು ಮಕ್ಕಳು ರಾಜೇಶ್ ಗೆ ಸಿಕ್ಕರು. ನಂತರ ಸುತ್ತಮುತ್ತಲಿನ ಮಕ್ಕಳು ಶಿಕ್ಷಣ ಪಡೆಯಲು ಅಲ್ಲಿಗೆ ಬರಲಾರಂಭಿಸಿದರು. ಹೀಗೆ 2006ರಲ್ಲಿ ಆರಂಭವಾದ ರಾಜೇಶ್ ಶಾಲೆ ಈಗಲೂ ನಡೆಯುತ್ತಿದೆ. ಈಗ 200ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಪಾಠ ಕಲಿಯುತ್ತಿರುವ ಮಕ್ಕಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯೂ ಅಧಿಕವಾಗಿದೆ.

image


ದೆಹಲಿಯ ಯಮುನಾ ಬ್ಯಾಂಕ್ ಮೆಟ್ರೋ ಸೇತುವೆ ಕೆಳಗೆ ರಾಜೇಶ್ ಒಬ್ಬರೇ ಶಾಲೆ ಆರಂಭಿಸಿದ್ದರು. ಈಗ ಅನೇಕರು ರಾಜೇಶ್ ಜೊತೆ ಕೈ ಜೋಡಿಸಿದ್ದಾರೆ. ಅವರು ಸಮಯ ಹೊಂದಿಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಲು ಅಲ್ಲಿಗೆ ಬರ್ತಾರೆ. ವಿದ್ಯಾರ್ಥಿಗಳಿಂದ ಹಿಡಿದು ಶಿಕ್ಷಕರವರೆಗೆ ಅನೇಕರು ಇಲ್ಲಿ ಶಿಕ್ಷಣ ನೀಡ್ತಾರೆ. ಅವರ ಸೇವೆಗೆ ರಾಜೇಶ್ ಅಡ್ಡಿ ಮಾಡಿಲ್ಲ. ಇಲ್ಲಿ ಐದರಿಂದ 16 ವರ್ಷ ವಯಸ್ಸಿನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಉಚಿತವಾಗಿ ಶಿಕ್ಷಣ ನೀಡಲಾಗ್ತಾ ಇದ್ದು, ರಾಜೇಶ್ ಸಮಾಜಸೇವೆ ಮಾಡುತ್ತಿರುವುದರಿಂದ ಮೆಟ್ರೋ ಕಾರ್ಮಿಕರು ಮಧ್ಯ ಪ್ರವೇಶ ಮಾಡುತ್ತಿಲ್ಲ.

ಅನೇಕ ಮಕ್ಕಳನ್ನು ಹತ್ತಿರದ ಶಾಲೆಗೆ ರಾಜೇಶ್ ಸೇರಿಸಿದ್ದಾರೆ. ಸರ್ವ ಶಿಕ್ಷಣ ಅಭಿಯಾನದಡಿ 17 ವಿದ್ಯಾರ್ಥಿನಿಯರನ್ನು ಶಾಲೆಗೆ ಸೇರಿಸಿದ್ದಾರೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳು ಕೂಡ ರಾಜೇಶ್ ಪಾಠ ಶಾಲೆಗೆ ಹಾಜರಾಗುತ್ತಾರೆ. ರಾಜೇಶ್ ಸ್ಕೂಲ್ ದಿನದಲ್ಲಿ ಎರಡು ಬಾರಿ ನಡೆಯುತ್ತದೆ. ಬೆಳಿಗ್ಗೆ 9ರಿಂದ ಹನ್ನೊಂದುವರೆವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ. ಮಧ್ಯಾಹ್ನ 2ರಿಂದ 4ರವರೆಗೆ ವಿದ್ಯಾರ್ಥಿನಿಯರು ಕಲಿಯುತ್ತಾರೆ. ಇಲ್ಲಿನ ಮಕ್ಕಳು 11,12ನೇ ವರ್ಗ ತಲುಪಿದ್ದಾರೆ.

ರಾಜೇಶ್ ಸಮಾಜ ಸೇವೆ ಬಗ್ಗೆ ಅಕ್ಕಪಕ್ಕದ ಶಾಲೆಗಳಿಗೆ ತಿಳಿದಿದೆ. ಹಾಗಾಗಿ ಮಕ್ಕಳನ್ನು ಶಾಲೆಗೆ ಸೇರಿಸುವುದು ರಾಜೇಶ್ ಗೆ ಸುಲಭವಾಗಿದೆ. ಇಷ್ಟು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತ ಬಂದಿರುವುದರಿಂದ, ಯಾವ ಮಕ್ಕಳ ಜೊತೆ ಹೇಗೆ ಮಾತನಾಡಬೇಕು?, ಯಾವ ಮಕ್ಕಳು ಕಲಿಕೆಯಲ್ಲಿ ಮುಂದಿದ್ದಾರೆ, ಯಾವ ಮಕ್ಕಳಿಗೆ ಆಸಕ್ತಿ ಇಲ್ಲ? ಮಕ್ಕಳಿಗೆ ಹೇಗೆ ಕಲಿಸಬೇಕು ಎನ್ನುವ ಬಗ್ಗೆ ರಾಜೇಶ್ ಗೆ ಅನುಭವವಾಗಿದೆ. ರಾಜೇಶ್ ಸಹಾಯಕ್ಕೆ ಸಾಕಷ್ಟು ಜನ ಬರುತ್ತಾರಂತೆ. ರಾಜೇಶ್ ಮಾತ್ರ ಅವರಿಂದ ಹಣ ಪಡೆಯುತ್ತಿಲ್ಲ. ಸೇವೆ ಮಾಡುವುದಾದರೆ ಮಕ್ಕಳಿಗೆ ಮಾಡಿ ಎಂದು ರಾಜೇಶ್ ಹೇಳುತ್ತಾರಂತೆ. ಕೆಲವರು ಸ್ಟೇಷನರಿಗಳನ್ನು ಮಕ್ಕಳಿಗೆ ನೀಡುತ್ತ ಬಂದಿದ್ದಾರೆ.

image


ರಾಜೇಶ್ ಉತ್ತರ ಪ್ರದೇಶದ ಅಲಿಗಢದವರು. ಸರ್ಕಾರಿ ಶಾಲೆಯಲ್ಲಿ ಅವರು ಶಿಕ್ಷಣ ಪಡೆದಿದ್ದಾರೆ. ಬಿಎಸ್ಸಿ ಓದಲು ರಾಜೇಶ್ ಮುಂದಾಗಿದ್ದರು. ಆದರೆ ಒಂದೇ ವರ್ಷಕ್ಕೆ ಕಾಲೇಜು ಬಿಡಬೇಕಾಯಿತು. ಮನೆಯಲ್ಲಿ ದೊಡ್ಡ ಮಗನಾಗಿದ್ದ ರಾಜೇಶ್ ಕಾಲೇಜು ಬಿಟ್ಟು,ದೆಹಲಿಗೆ ಬಂದರು. ಮೊದಲು ರಾಜೇಶ್ ಸಣ್ಣಪುಟ್ಟ ಕೆಲಸ ಮಾಡಿದರು. ಕಾಲ ಬದಲಾದಂತೆ ಅವರ ಕೆಲಸವೂ ಬದಲಾಯಿತು. ಈಗ ಶಕರ್ಪುರದಲ್ಲಿ ರಾಜೇಶ್ ಸ್ವಂತ ಅಂಗಡಿ ಇದೆ. ಆದರೂ ರಾಜೇಶ್ ಶಿಕ್ಷಣ ನೀಡುವುದನ್ನು ಬಿಟ್ಟಿಲ್ಲ. ಅಂಗಡಿ,ಶಾಲೆ ಎರಡನ್ನೂ ನೋಡಿಕೊಳ್ಳುವ ಅವರು ಸಮಯ ಸಿಕ್ಕಾಗ ಸಾಹಿತ್ಯದ ಪುಸ್ತಕಗಳನ್ನು ಓದುತ್ತಾರೆ.

ಲೇಖಕರು: ಹರೀಶ್​​ ಬಿಶ್ತ್​​

ಅನುವಾದಕರು: ರೂಪಾ ಹೆಗಡೆ