99ಬಗೆಯ ದೋಸೆ ನೀಡಿ ಮನಗೆದ್ದಿರು ಯುವಕ

ಉಷಾ ಹರೀಶ್​​

0

ಮೈಸೂರು ಮಸಾಲೆ ದೋಸೆ, ಕಾರ್ನ್ ಮಸಾಲೆ ದೋಸೆ, ಈರುಳ್ಳಿ ದೋಸೆ.. ಪ್ರಕೃತಿ ಸ್ಪೆಷಲ್ ಮಸಾಲೆ ದೋಸೆ,ಸ್ವೀಟ್ ಕಾರ್ನ್ ಪಾಲಕ್ ದೋಸೆ, ತುಪ್ಪದ ದೋಸೆ..ಹೀಗೆ ಪಟ್ಟಿ 99 ಬಗೆ ಬಗೆಯ ದೊಸೆಯವರೆಗೂ ಬೆಳೆಯುತ್ತದೆ.

ಹೀಗೆ ದೋಸೆಯ ಹೆಸರು ಕೇಳಿದ ತಕ್ಷಣ ಎಲ್ಲರ ಬಾಯಲ್ಲಿ ನೀರೂರುವುದು ಸಾಮಾನ್ಯ. ಈ ದೋಸೆಗಳು ಎಲ್ಲಿ ಸಿಗುತ್ತವೆ ಅಂತೀರಾ, ಬಸವನಗುಡಿಯ ಬ್ಯೂಗಲ್ ರಾಕ್ ಬಳಿಯ ಪಾರ್ಕ್ ಪಕ್ಕದಲ್ಲಿರುವ ಪ್ರಕೃತಿ 99 ವೆರೈಟಿ ದೋಸೆ ಮೊಬೈಲ್ ಕ್ಯಾಂಟೀನ್​​ನಲ್ಲಿ. ಪ್ರತೀ ದಿನ 99 ಬಗೆಯ ದೋಸೆಗಳನ್ನು ಮಾಡಲಾಗುತ್ತದೆ.

ಸುಮಾರು 5 ವರ್ಷಗಳಿಂದ ಬ್ಯೂಗಲ್ ರಾಕ್​​ನ ಶಾಮಣ್ಣ ಉದ್ಯಾನದ ಪಕ್ಕದಲ್ಲಿ ಸಂಜೆಯಾದರೆ ಸಾಕು ಹಾಜರಿರುವ ಈ ಮೊಬೈಲ್ ಕ್ಯಾಂಟೀನ್​ನಲ್ಲಿ 99 ಬಗೆಯ ದೋಸೆಗಳು ಸಿಗುತ್ತವೆ. ಸ್ವೀಟ್ ಕಾರ್ನ್ ದೋಸೆ, ಕಾರ್ನ್ ಪಾಲಕ್ ಪನ್ನೀರ್ ಚೀಸ್ ದೋಸೆ,ಆಲೂ ಪಾಲಕ್ ದೋಸೆ, ಆಲೂ ಪಾಲಾಕ್ ಚೀಸ್ ದೋಸೆ, ಹೀಗೆ 99 ದೋಸೆಗಳನ್ನು ಮೆಲ್ಲಬಹುದು.

ಇಲ್ಲಿನ ದೋಸೆಗಳು ಎಷ್ಟು ಫೇಮಸ್ ಎಂದರೆ ಇದನ್ನು ತಿನ್ನುಲು ದೂರದ ಬೆಂಗಳೂರಿನ ವಿವಿಧ ಭಾಗಗಳಾದ ಜಯನಗರ ಜೆಪಿನಗರ, ರಾಜಾಜಿ ನಗರ ವಿಜಯ ನಗರ ಮತ್ತಿತರ ಕಡೆಗಳಿಂದ ಸಂಜೆಯಾದರೆ ಸಾಕು ಜನ ತುಂಬಿಕೊಳ್ಳುತ್ತಾರೆ.

ಐದು ವರ್ಷಗಳಿಂದ ಸಿಲಿಕಾನ್ ವ್ಯಾಲಿ ಬೆಂಗಳೂರಿಗರಿಗೆ ವೆರೈಟಿ ವೆರೈಟಿ ದೋಸೆ ತಿನ್ನಿಸುತ್ತಿರುವ ಮಾಲೀಕ ಚಂದ್ರೇಗೌಡ ಮೂಲತಃ ಚನ್ನರಾಯಪಟ್ಟಣದವರು. ಇದಕ್ಕೂ ಮೊದಲು ಹೊಟ್ಟೆಪಾಡಿಗಾಗಿ ಬಾಂಬೆ, ಸೂರತ್, ಅಹಮದಾಬಾದ್​​ನಲ್ಲಿ ಬೇರೊಬ್ಬರ ಬಳಿ ಕೆಲಸ ಮಾಡಿದ ಅನುಭವವಿದೆ. ಉತ್ತರ ಭಾರತದಲ್ಲಿ ನಾಲ್ಕೈದು ರೀತಿಯ ದೋಸೆಗಳನ್ನು ಮಾಡುವ ಹೊಟೇಲ್​​ಗಳಲ್ಲಿ ಕೆಲಸ ಮಾಡುತ್ತಿದ್ದಾಗ ಈ ರೀತಿಯ 99 ವೆರೈಟಿ ದೋಸೆ ಮಾಡುವ ಐಡಿಯಾ ಬಂದು ತಾಯ್ನಾಡಿಗೆ ವಾಪಾಸ್ಸಾಗಿ ತನ್ನ ಸಹೋದರರ ಸಹಾಯದೊಂದಿಗೆ 5 ವರ್ಷಗಳ ಕೆಳಗೆ ಮೊಬೈಲ್ ಕ್ಯಾಂಟೀನ್ ಪ್ರಾರಂಭ ಮಾಡಿ ಅದರಲ್ಲಿ ಯಶ ಕಂಡಿದ್ದಾರೆ.

ರುಚಿಯ ಗುಟ್ಟು

ದೋಸೆ ಮೃದುವಾಗಿ ಬರಬೇಕೆಂದರೆ ಸೋಡಾ ಹಾಕಬೇಕು. ಆದರೆ ಈ ಮೊಬೈಲ್ ಕ್ಯಾಂಟೀನ್​​ನಲ್ಲಿ ಮಾತ್ರ ಸೋಡಾ ಹಾಕದೇ ಹದವಾಗಿ ಹಿಟ್ಟನ್ನು ಕಲಸಲಾಗುತ್ತದೆ. ಇಲ್ಲಿನ ದೋಸೆಗೆ ಎಣ್ಣೆಯನ್ನು ಬಳಸುವುದಿಲ್ಲ ತುಪ್ಪ ಮತ್ತು ಬೆಣ್ಣೆಯನ್ನು ಮಾತ್ರ ಬಳಸಲಾಗುತ್ತದೆ. ಗ್ಯಾಸ್ ಬಳಸದೇ ಕೆಂಡದಿಂದ ದೋಸೆಯನ್ನು ಬೇಯಿಸುವುದರಿಂದ ಈ ದೋಸೆಯ ರುಚಿ ಹೆಚ್ಚಾಗುತ್ತದೆ. ಸಂಜೆ 5 ಗಂಟೆಗೆ ದೋಸೆ ಕೊಡಲು ಪ್ರಾರಂಭಿಸಿದರೆ ರಾತ್ರಿ 9.30 ರವರೆಗೆ ನಿರಂತರವಾಗಿ ದೋಸೆ ಬೇಯುತ್ತಲೇ ಇರುತ್ತದೆ. ದಿನವೊಂದಕ್ಕೆ ಸುಮಾರು 200 ರಿಂದ 250 ದೋಸೆಯನ್ನು ಖಾಲಿ ಮಾಡುತ್ತಾರೆ ಎಂದರೆ ಈ ಪ್ರಕೃತಿ ವೆರೈಟಿ ದೋಸೆಯ ಖ್ಯಾತಿ ಎಷ್ಟಿದೆ ಎಂದು ತಿಳಿಯುತ್ತದೆ.

ವಿವಿಧ ಹೆಸರಿನ ದೋಸೆಗಳು

ಮಶ್ರೂಮ್ ಪನ್ನೀರ್​ ದೋಸಾ, ಗ್ರೀನ್ ಪೀಸ್ ದೋಸಾ, ಮೈಸೂರ್ ಬೇಬಿ ಕಾರ್ನ್ ದೋಸಾ, ಪಾವ್ ಬಾಜಿ ದೋಸಾ, ಕಾಲಿ ಫ್ಲವರ್ ದೋಸಾ, ಸೇಜ್ವಾನ್ ನೂಡಲ್ಸ್ ದೋಸಾ, ಸ್ಪ್ರೀಂಗ್ ರೋಲ್ ದೋಸಾ, ಜೆನ್ನಿ ರೋಲ್ ದೋಸಾ, ಸ್ವೀಟ್ ಕಾರ್ನ್ ಮಶ್ರೂಮ್ ದೋಸಾ. ಹೀಗೆ ಒಟ್ಟು 99 ಬಗೆಯ ದೋಸೆಗಳು ಇಲ್ಲಿ ಸಿಗುತ್ತವೆ. ನೀವು ದೋಸೆ ಸವಿಯಬೇಕೆಂದರೆ ಬಸವನಗುಡಿಯ ಬ್ಯೂಗಲ್ ರಾಕ್ ಬಳಿಯ ಶಾಮಣ್ಣ ಉದ್ಯಾನದ ಪಕ್ಕಕ್ಕೆ ಹೋದರೆ ಸಾಕು. ಸಂಜೆ ಮೇಲೆ ದೋಸೆ ರೆಡಿಯಾಗಿರುತ್ತದೆ.

Related Stories

Stories by usha harish