ಮಹಿಳಾ ಪ್ರವಾಸಿಗರಿಗೆ ಸುರಕ್ಷತೆ, ಸ್ನೇಹ, ಸ್ವಾತಂತ್ರ್ಯ...ಮಹಿಳೆಯೇ ಮುನ್ನಡೆಸುವ `ದಿ ವಾಂಡರ್ ಗರ್ಲ್ಸ್​​ '

ಟೀಮ್​ ವೈ.ಎಸ್​​.

0

ಹೇತಲ್ ದೋಶಿ ಅವರದ್ದು ಅಲೆಮಾರಿ ಬದುಕು. ಊರಿಂದ ಊರಿಗೆ ಪ್ರವಾಸ ಹೋಗುವುದೇ ಅವರ ವೃತ್ತಿ. ತಮ್ಮ ಬೆಸ್ಟ್ ಪ್ರವಾಸ ಅಂದ್ರೆ ಮಹಾನ್ ವಲಸೆ ಅಂತಾ ಹೇತಲ್ ನೆನಪಿಸಿಕೊಳ್ತಾರೆ. ಧೂಳಿನಿಂದ ಆವೃತವಾದ ರಮಣೀಯ ದೃಶ್ಯ...ನೂರಾರು ಕಾಡು ಪ್ರಾಣಿಗಳ ಕಲರವ..ಮಾರಾ ನದಿಯನ್ನು ದಾಟಿ ಸಾಗ್ತಾ ಇರೋ ಝೀಬ್ರಾ, ಜಿಂಕೆ, ಮೊಸಳೆಗಳು...ನದಿಯ ದಡದಲ್ಲಿ ಬೇಟೆಗಾಗಿ ಕಾದು ಕುಳಿತಿರುವ ಹಸಿದ ಚಿರತೆಗಳು, ಇವನ್ನೆಲ್ಲ ಮರೆಯೋದು ಅಸಾಧ್ಯ ಎನ್ನುತ್ತಾರೆ ಹೇತಲ್.

2013ರಲ್ಲಿ ವಾಂಡರ್ ಗರ್ಲ್ಸ್​​ ಎಂಬ ಸಂಸ್ಥೆಯನ್ನು ಆರಂಭಿಸಿದ ಹೇತಲ್, ಅಂದಿನಿಂದಲೂ ಅಲೆಮಾರಿಯಂತೆ ಜೀವಿಸುತ್ತಿದ್ದಾರೆ. ವಾಂಡರ್ ಗರ್ಲ್ಸ್​​ ಮಹಿಳಾ ಪ್ರಯಾಣಿಕರಿಗೆ ಅತ್ಯುತ್ತಮ ಅನುಭವ ನೀಡುವಂಥ ಪ್ರವಾಸಗಳನ್ನು ಆಯೋಜಿಸ್ತಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸುಂದರ ತಾಣಗಳಿಗೆ ಅವರನ್ನು ಕರೆದೊಯ್ಯಲಾಗುತ್ತೆ. ಹೇತಲ್ ಅವರ ಒಂಟಿ ಪ್ರಯಾಣದ ಅನುಭವವೇ ಇದೆಲ್ಲದಕ್ಕೂ ಪೂರಕ. ಪ್ರವಾಸಕ್ಕೆ ಬರುವ ಯುವತಿಯರ ಮಧ್ಯೆ ಸಹಜವಾಗಿಯೇ ಸ್ನೇಹ ಬೆಳೆಯುವುದರಿಂದ ಇದೊಂದು ಸುಂದರ ಅನುಭವವಾಗುವುದರಲಲಿ ಅನುಮಾನವಿಲ್ಲ ಎನ್ನುತ್ತಾರೆ ಹೇತಲ್. ಭಾರತದ ಯುವತಿಯರಿಗೆ ವಿದೇಶದ ವಿಶಿಷ್ಟ ತಾಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತೆ. ವಿದೇಶೀ ಯುವತಿಯರಿಗೆ ಭಾರತವನ್ನು ನೋಡುವ ಸದವಕಾಶ ಸಿಗ್ತಾ ಇದೆ. ಮುಂಬೈನಲ್ಲಿ ವಾಂಡರ್ ಗರ್ಲ್ಸ್​​ ನೆಟ್‍ವರ್ಕಿಂಗ್ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮಹಿಳಾ ಸಮುದಾಯವನ್ನು ನಿರ್ಮಾಣ ಮಾಡ್ತಿದೆ. ಇದನ್ನು ಬೇರೆ ಬೇರೆ ನಗರಗಳಿಗೆ ವಿಸ್ತರಿಸುವ ಯೋಜನೆಯನ್ನೂ ಹಾಕಿಕೊಂಡಿದೆ.

ತಮ್ಮ ಶ್ರೇಷ್ಠ ಗ್ರಾಹಕರೆಲ್ಲ ಸುಶಿಕ್ಷಿತರು, ನಗರದ ಮಹಿಳೆಯರಂತೂ ವಿಶ್ವವನ್ನು ತಮ್ಮದೇ ದೃಷ್ಟಿಕೋನದಲ್ಲಿ ನೋಡಲು ಕಾತರರಾಗಿದ್ದಾರೆ. ಅವರ ಆಕಾಂಕ್ಷೆಗಳನ್ನು ಪೋಷಿಸಬಲ್ಲ ಆರ್ಥಿಕ ಬೆಂಬಲವೂ ಅವರಿಗಿದೆ ಅನ್ನೋದು ಹೇತಲ್ ಅವರ ಅಭಿಪ್ರಾಯ. ಮಹಿಳಾ ಪ್ರವಾಸಿಗರು ಭಾರತದುದ್ದಕ್ಕೂ ಸಂಚರಿಸುವ ಸಂದರ್ಭದಲ್ಲಿ ಅವರ ಸುರಕ್ಷತೆ ಹಾಗೂ ಭದ್ರತೆಗೆ ಪ್ರಮುಖ ಆದ್ಯತೆ ಅಂತಾ ಹೇತಲ್ ಅಭಯ ನೀಡ್ತಾರೆ. ಬೇರೆ ಬೇರೆ ಹವ್ಯಾಸಗಳಿಗಿಂತ ಪ್ರವಾಸ, ಸ್ವಯಂ ಅಭಿವೃದ್ಧಿಗೆ ಹೆಚ್ಚು ಪೂರಕ ಅನ್ನೋದು ಅವರ ಅನುಭವದ ಮಾತು. ಭಾರತ ಪಿತೃಪ್ರಭುತ್ವದ ಸಮಾಜ, ಹೇತಲ್ ಕೂಡ ಅಂಥದ್ದೇ ಕುಟುಂಬದಿಂದ ಬಂದವರು. ಪ್ರತಿಯೊಂದಕ್ಕೂ ಅವಕಾಶವಿದ್ರೂ ಆರಂಭದಲ್ಲಿ ಪ್ರತಿರೋಧ ಎದುರಾಗಿತ್ತು. ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವುದೋ ಅಥವಾ ಒಬ್ಬಂಟಿಯಾಗಿ ಜಗತ್ತು ಸುತ್ತುವುದೋ ಎಂಬ ಗೊಂದಲ ಅವರಲ್ಲಿತ್ತು. ಹೆಣ್ಣು ಎಂಬ ಕಾರಣಕ್ಕೆ ಒಂಟಿ ಪ್ರಯಾಣಕ್ಕೆ ವಿರೋಧ ಎದುರಾಗಿದ್ದು ನಿಜ. ಆದ್ರೆ ಕುಟುಂಬದವರು ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಂಡಮೇಲೆ, ಎಲ್ಲ ಮಹಿಳೆಯರಿಗೂ ಸ್ವತಂತ್ರವಾಗಿ ಪ್ರಯಾಣ ಮಾಡುವ ಅವಕಾಶ ಕಲ್ಪಿಸಬೇಕೆಂಬ ಹಂಬಲ ಶುರುವಾಗಿತ್ತು. ಆದ್ರೆ ಇದಕ್ಕೆ ಭಾರತದಲ್ಲಿ ಸೀಮಿತ ಅವಕಾಶವಿದೆ.

`ದಿ ವಾಂಡರ್ ಗರ್ಲ್ಸ್​​ ' ಆರಂಭವಾದಾಗಿನಿಂದ ಪ್ರಯಾಣದ ಪರಾಕಾಷ್ಠೆ, ಕಲಿಕೆ, ಸಂತೋಷ, ಸ್ವಾತಂತ್ರ್ಯ ಎಲ್ಲವೂ ಸಿಕ್ಕಿದೆ ಎನ್ನುತ್ತಾರೆ ಹೇತಲ್ ದೋಶಿ. ಉದ್ಯಮ ಆರಂಭಿಸುವ ಮುನ್ನ ಹೇತಲ್ ಬ್ಯಾಂಕರ್ ಆಗಿ ಕೆಲಸ ಮಾಡಿದ್ದಾರೆ. ಲೇಖಕಿಯಾಗಿ, ಛಾಯಾಗ್ರಾಹಕಿಯಾಗಿ ಅನುಭವ ಸಂಪಾದಿಸಿದ್ದಾರೆ. ಈಗ ಹೇತಲ್ ದೋಶಿ, ಭಾರತದ ಟ್ರಾವೆಲ್ ಇಂಡಸ್ಟ್ರಿಯ ಉತ್ಸಾಹಿ ಭಾಗವಾಗಿದ್ದಾರೆ. ವಿಮಾನ, ರೈಲ್ವೆ ಹಾಗೂ ಬಸ್ ಟಿಕೆಟ್ ಖರೀದಿ, ಉಳಿದುಕೊಳ್ಳುವ ವ್ಯವಸ್ಥೆ, ಪ್ರವಾಸಿ ಪ್ಯಾಕೇಜ್ ಎಲ್ಲದರಲ್ಲೂ ಈಗ ಸುಧಾರಣೆಯಾಗಿದೆ. ಭಾರತೀಯ ಪ್ರವಾಸೋದ್ಯಮ ಬೆಳವಣಿಗೆಯ ದಿಕ್ಕಿನಲ್ಲಿ ಸಾಗ್ತಾ ಇದೆ. ಈ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವುದೇ ಉದ್ಯಮಿಗಳ ಮುಂದಿರುವ ಸವಾಲು ಎನ್ನುತ್ತಾರೆ ಹೇತಲ್ ದೋಶಿ.

ಟ್ರಾವೆಲ್ ಇಂಡಸ್ಟ್ರಿಯ ಭಾಗವಾಗಲು ಇದು ಸುಸಮಯ. ಹೊಸ ತಲೆಮಾರಿನ ಪ್ರವಾಸಿಗರಿಗೆ ಬೇಕಾದ ವ್ಯವಸ್ಥೆ ಕಲ್ಪಿಸುವುದೇ ಈಗ ಮೊದಲ ಆದ್ಯತೆ. ಸುಶಿಕ್ಷಿತ ಹಾಗೂ ಸ್ವಾಭಿಮಾನಿ ಭಾರತೀಯ ಮಹಿಳೆಯರು ಜಗತ್ತು ಸುತ್ತಲು ಬಯಸಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚುತ್ತಿರುವುದು ಸ್ವಾಗತಾರ್ಹ. ಪ್ರಸ್ತುತ ಸ್ಥಿತಿಗೆ ತಕ್ಕಂತೆ ಇರುವುದೇ ಒಂದು ದೊಡ್ಡ ಸವಾಲು. ಇದಕ್ಕೆ ಬೇಕಾದ ಕಸರತ್ತನ್ನೆಲ್ಲ ಹೇತಲ್ ಮಾಡ್ತಿದ್ದಾರೆ. ಸದ್ಯ ವಾಂಡರ್ ಗಲ್ರ್ಸ್‍ನ ಮುಖ್ಯ ಕಚೇರಿ ಮುಂಬೈನಲ್ಲಿದ್ದು, ದೆಹಲಿ ಮತ್ತು ಬೆಂಗಳೂರಲ್ಲಿ ಮ್ಯಾನೇಜರ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ದೆಹಲಿ ಮತ್ತು ಬೆಂಗಳೂರಲ್ಲೂ ಕಚೇರಿ ತೆರೆಯಲು ಹೇತಲ್ ಮುಂದಾಗಿದ್ದಾರೆ. ಭಾರತದಲ್ಲಿ ಅನ್ವೇಷಣೆ ಮಾಡಲು ಬಯಸುವ ವಿದೇಶೀ ಮಹಿಳೆಯರಿಗೂ ಅವಕಾಶ ಕಲ್ಪಿಸುವ ಆಲೋಚನೆಯಿದೆ. ಸಂಸ್ಥೆಯ ಬೆಳವಣಿಗೆಗೆ ತಕ್ಕಂತೆ ವೇಗವನ್ನು ಸರಿದೂಗಿಸಲು ತಂಡದ ಬಲವನ್ನು ದುಪ್ಪಟ್ಟುಗೊಳಿಸಬೇಕು ಎನ್ನುತ್ತಾರೆ ಹೇತಲ್.

ಹೇತಲ್ ತಾವು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಸಂಸ್ಥೆಯನ್ನು ಮುನ್ನಡೆಸ್ತಿದ್ದಾರೆ. ಕಂಪನಿಗೆ ಸಿಕ್ಕ ಪ್ರತಿಕ್ರಿಯೆಯಿಂದ ಅವರು ಖುಷಿಯಾಗಿದ್ದಾರೆ. ಇದಿನ್ನೂ ಪಯಣದ ಆರಂಭ ಅಷ್ಟೆ. ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಬಹುತೇಕ ಉದ್ಯಮಿಗಳು ವಾರದಲ್ಲಿ 80 ಗಂಟೆಗಳಿಗೂ ಅಧಿಕ ಕೆಲಸ ಮಾಡುತ್ತಾರೆ. ಅದರಿಂದ ಹೇತಲ್ ಕೂಡ ಹೊರತಾಗಿಲ್ಲ. ಇದೊಂದು ತ್ಯಾಗ ಎಂದು ಹೇತಲ್ ಅಂದುಕೊಂಡಿಲ್ಲ, ಕೆಲಸದ ಬಗ್ಗೆ ಅವರಿಗಿರುವ ಪ್ರೀತಿ ಅಷ್ಟೆ. ``ಪರಿಶ್ರಮಪಡಿ - ಸಾಧಿಸಿ, ಕ್ರಮ ಕೈಗೊಳ್ಳಿ - ಅದನ್ನು ಕಾರ್ಯರೂಪಕ್ಕೆ ತನ್ನಿ, ತರಾತುರಿಯ ಬದಲು ಮಹತ್ವದ್ದು ಯಾವುದೆಂದು ಅರಿತುಕೊಳ್ಳಿ, ಶಿಸ್ತು ನಿಮ್ಮ ಬದುಕಿನ ಭಾಗವಾಗಲಿ'' ಇದು ವಾಂಡರ್ ಗರ್ಲ್ಸ್​​ ಅಭಿಮಾನಿಗಳಿಗೆ ಹೇತಲ್ ದೋಶಿ ಕೊಡುವ ಅತ್ಯಮೂಲ್ಯ ಸಲಹೆ.

Related Stories