ಮುಂಬೈಯನ್ನರಿಗೆ ತಾಜಾ ಜ್ಯೂಸ್‌ಗಳ ಮೂಲಕ ಗುಡ್‌ ಮಾರ್ನಿಂಗ್ ಹೇಳುವ ತೇಜೋಮಯ್

ಟೀಮ್​ ವೈ.ಎಸ್​. ಕನ್ನಡ

0


ಹಲವರಿಗೆ ಶುಕ್ರವಾರ ಸಂಜೆಯ ವೇಳೆಗೆ ಏನಾದರೂ ಮಾಡಬೇಕೆಂಬ ಸ್ಫೂರ್ತಿ ಉಕ್ಕಿಹರಿಯುತ್ತಿರುತ್ತದೆ. ಆದರೆ ಸೋಮವಾರ ಬರುವಾಗ ಶುಕ್ರವಾರದ ಸ್ಫೂರ್ತಿ ನೆನಪೇ ಇರುವುದಿಲ್ಲ. ಜೀವನದ ಮತ್ತೊಂದು ವಾರ ಹಾಗೆ ಕಳೆದುಹೋಗುತ್ತದೆ. ಆದರೆ ತೇಜೋಮಯ್ ರಸ್ತೋಗಿಯವರ ಕಥೆ ಸ್ವಲ್ಪ ವಿಭಿನ್ನ. ಆರೋಗ್ಯದ ಬಗ್ಗೆ ಅತೀ ಕಾಳಜಿಯಿರುವ 35 ವರ್ಷದ ಈ ವ್ಯಕ್ತಿ ಅಜ್ಜಿ ಕಾಲದ ಭಿನ್ನವಾದ ಔಷಧಗಳನ್ನು ಬಳಸುವುದರಲ್ಲಿ ಆಸಕ್ತರು. ಅಜ್ಜಿ ಕಾಲದ ವಿಭಿನ್ನ ರೀತಿಯ ಔಷಧಿಗಳನ್ನು ಉತ್ಪಾದಿಸಿ ಅದನ್ನು ಮುಂಬೈನ ಹಲವು ಭಾಗಗಳಲ್ಲಿ ಮಾರಾಟ ಮಾಡಲು ನಿರ್ಧರಿಸಿದರು. ಅಂದಹಾಗೆ ತೇಜೋಮಯ್ ರಸ್ತೋಗಿಯವರಿಗೆ ಬಂದಿದ್ದು 2014ರ ಏಪ್ರಿಲ್‌ನ ಒಂದು ಶುಕ್ರವಾರದಂದು. ಸೋಮವಾರದ ಹೊತ್ತಿಗೆ ಅದಕ್ಕಾಗಿ ಅಗತ್ಯವಿರುವ ಯೋಜನೆಗಳನ್ನು ಕಾಗದದ ಮೇಲಿಳಿಸಿದರು. ಹೀಗೆ ಹುಟ್ಟಿದ್ದೇ ಜ್ಯೂಸಿಫಿಕ್ಸ್ ಸಂಸ್ಥೆ. ಇದರಿಂದ ಇಂದು ಮುಂಬೈನ ಹಲವು ಮಂದಿ ರಸಭರಿತ ಜ್ಯೂಸ್‌ ಅನ್ನು ಕುಡಿಯುತ್ತಿದ್ದಾರೆ.

ಎಲ್ಲರಿಗೂ ಈ ಅಜ್ಜಿಕಾಲದ ಜ್ಯೂಸ್​ಗಳ ಮಹತ್ವ ತಿಳಿದಿರುತ್ತದೆ. ಎಲ್ಲರೂ ತಿಳಿದಿರುವಂತೆ ನೆಲ್ಲಿಕಾಯಿ ಚರ್ಮಕ್ಕೆ ಮತ್ತು ಕೂದಲಿಗೆ ತುಂಬಾ ಒಳ್ಳೆಯದು. ಜೀರಾ ಪಾನಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಈ ಗೃಹೋತ್ಪನ್ನಗಳನ್ನು ಯಾರಾದರೂ ಸರಿಯಾಗಿ ಮೌಲ್ಯೀಕರಿಸಲಿ ಎಂದು ಜನರು ಕಾಯುತ್ತಿರುತ್ತಾರೆ. ಆ ಮೌಲ್ಯೀಕರಿಸುವ ವ್ಯಕ್ತಿ ನಾನಾಗುವ ಮೂಲಕ ನನ್ನನ್ನು ನಾನು ಹುಡುಕಿಕೊಂಡೆ ಎನ್ನುತ್ತಾರೆ ತೇಜೋಮಯ್ ರಸ್ತೋಗಿ. ಇದನ್ನೆಲ್ಲಾ ಅವರಮ್ಮನ ರಹಸ್ಯಗಳನ್ನು ಹುಡುಕಿಕೊಂಡು, ನೆನಪಿಸಿಕೊಂಡು ಮಾಡಲಾರಂಭಿಸಿದರು. ಈ ಮೂಲಕ ಅಮ್ಮನ ಪ್ರೀತಿಯ ನೆನಪನ್ನು ಎಲ್ಲೆಡೆ ಹರಡಿಸುವ ಯತ್ನ ನನ್ನದಾಗಿತ್ತು ಎಂದಿದ್ದಾರೆ ತೇಜೋಮಯ್.

ತಾಜಾ, ತಣ್ಣಗಿನ ಜ್ಯೂಸ್‌ಗಳು ಚಂದಾದಾರಿಕೆ ಆಧಾರದ ಮೇಲೆ ಮುಂಬೈನ ಸಾಮೂಹಿಕ ಉತ್ಪನ್ನವಾಗಿ ಮಾರ್ಪಾಡಾಗಿದೆ ಜ್ಯೂಸಿಫಿಕ್ಸ್. ತಾಜಾತನ ಹೊಂದಿರುವ ಜ್ಯೂಸ್‌ ಅನ್ನು ಮುಂಜಾನೆಯ ಜಾಗಿಂಗ್‌ನ ನಂತರ ಎಲ್ಲರೂ ಕುಡಿಯಲಿಚ್ಛಿಸುತ್ತಾರೆ. ಇದೇ ರೀತಿಯ ಜ್ಯೂಸ್‌ ಅನ್ನು ಜ್ಯೂಸಿಫಿಕ್ಸ್ ಮುಖಾಂತರ ನೀಡಲಾಗುತ್ತದೆ.

ಮೊದಲಿಗೆ ತೇಜೋಮಯ್ ರಸ್ತೋಗಿಯವರು ಮುಂಬೈನ ಬಾಂದ್ರಾದ ಕಾರ್ಟರ್ ರೋಡ್‌ನಲ್ಲಿ ತಮ್ಮ ಕಾರ್‌ನಲ್ಲೇ ಮಾರಾಟ ಮಾಡಲಾರಂಭಿಸಿದರು. ಇದನ್ನು ಬಹಳಷ್ಟು ವಾಯುವಿಹಾರಿಗಳು ಗುರುತಿಸಲಾರಂಭಿಸಿದರು. ಮುಂಜಾನೆ ಕಷ್ಟಪಟ್ಟು ವರ್ಕ್‌ಔಟ್ ಮಾಡುವ ವಾಯು ವಿಹಾರಿಗಳಿಗೆ ಈ ಆರೋಗ್ಯಕರ ಪಾನೀಯ ಇಷ್ಟವಾಗಲಾರಂಭಿಸಿತು.

ಕಳೆದೊಂದು ವರ್ಷದಿಂದ ಇದರಲ್ಲಿ ತೊಡಗಿಕೊಂಡಿರುವ ತೇಜೋಮಯ್ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. “ನಾನ್ಯಾವಾಗಲೂ ಹೆಚ್ಚು ಹೆಚ್ಚು ರಿಸ್ಕ್‌ ಗಳನ್ನು ತೆಗೆದುಕೊಳ್ಳುತ್ತಿರುತ್ತೇನೆ. ನಾನೇನು ಸಾಧಿಸಲು ಬಯಸುತ್ತಿದ್ದೇನೆ ಎಂದರೆ ಸದಾ ಕೆಲಸದಲ್ಲಿ ನಿರತರಾಗಿರುವ ಜನರಿಗೆ ಆರೋಗ್ಯಕರ ಪಾನೀಯವನ್ನು ತಲುಪಿಸಲು ಯತ್ನಿಸುತ್ತಿದ್ದೇನೆ ಅಷ್ಟೇ. ಇಂತಹ ಕೆಲಸವನ್ನಾರಂಭಿಸಲು ಇದು ಸರಿಯಾದ ಸಮಯ. ಹೀಗಾಗಿ ಇದಕ್ಕಾಗಿ ಚಾನ್ಸ್ ತೆಗೆದುಕೊಳ್ಳಲು ನಾನು ಹಿಂಜರಿಯುವುದಿಲ್ಲ” ಎಂದಿದ್ದಾರೆ ತೇಜೋಮಯ್.

ಶೀಘ್ರದಲ್ಲೇ ತೇಜೋಮಯ್‌ ಅವರ ಉದ್ಯಮ ಬೆಳೆಯಲಾರಂಭಿಸಿತು. ತೇಜೋಮಯ್ ಅವರಿಗೆ ಮದುವೆಗಳಿಗೆ, ಪಾರ್ಟಿಗಳಿಗೆ ಸೇರಿದಂತೆ ಇತರ ಸಮಾರಂಭಗಳಿಗೆ ಬೇಡಿಕೆ ಬರಲಾರಂಭಿಸಿತು. ಮುಂಬೈನಲ್ಲೆಡೆ ಜ್ಯೂಸಿಫಿಕ್ಸ್ ನೈಬರ್‌ಹೂಡ್‌ಜ್ಯೂಸ್ ಕಾರ್ಟ್ ಆಗಬೇಕು ಎಂಬುದು ತೇಜೋಮಯ್ ಅವರು ಬಯಸಿದ್ದರು. ಆದರೆ ಲಾಜಿಸ್ಟಿಕ್ಸ್ ಮತ್ತು ವಿಜ್ಞಾನ ಅವರ ಯೋಜನೆಯನ್ನು ಒಪ್ಪುವುದಿಲ್ಲ ಎಂದು ಅವರಿಗೆ ತಿಳಿದುಬಂದಿತ್ತು. ಜ್ಯೂಸ್‌ಗಳು ಸದಾ ಅವುಗಳ ತಾಜಾತನದ ಆಧಾರದ ಮೇಲೆ ಜನಪ್ರಿಯಗೊಳ್ಳುತ್ತವೆ. ಆದರೆ ಜ್ಯೂಸಿಫಿಕ್ಸ್‌ ನ ಜ್ಯೂಸ್‌ಗಳು ಟ್ರಾನ್ಸ್‌ ಪೋರ್ಟ್ ವ್ಯವಸ್ಥೆಗೆ ಒಳಪಡುವಾಗ ಅದರ ತಾಜಾತನ ಹೋಗಿಬಿಡುತ್ತದೆ. ಹೀಗಾಗಿ ಸೈನ್ಸ್ ಜ್ಯೂಸಿಫಿಕ್ಸ್‌ ಅನ್ನು ಒಪ್ಪಿಕೊಳ್ಳುವುದಿಲ್ಲ. ಇನ್ನು ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ನೋಡಿದರೆ ಬೇಡಿಕೆಗಳು ಹೆಚ್ಚುತ್ತಾ ಹೋಗುತ್ತದೆ. ಆಗ ಸಮರ್ಪಕವಾದ ಲಾಜಿಸ್ಟಿಕ್ಸ್ ವ್ಯವಸ್ಥೆಗೆ ಇದನ್ನು ಒಳಪಡಿಸಲಾಗುವುದಿಲ್ಲ. ಇದನ್ನು ತಿಳಿದುಕೊಂಡಾಗ ಅವರು ತಮ್ಮ ಜ್ಯೂಸ್‌ನ ಫಾರ್ಮ್ಯಾಟ್ ಅನ್ನು ಬದಲಿಸಿ ವಿಜ್ಞಾನ ಮತ್ತು ಲಾಜಿಸ್ಟಿಕ್ಸ್‌ ನ ಅಗತ್ಯಗಳನ್ನು ತಲುಪುವ ರೀತಿಯಲ್ಲಿ ಯೋಜನೆ ರೂಪಿಸಿಕೊಳ್ಳಲು ನಿರ್ಧರಿಸಿದರು.

ಕೋಲ್ಡ್‌ ಪ್ರೆಸ್ಸಿಂಗ್ ವಿಧಾನದಿಂದ 90ರಿಂದ95 ಪ್ರತಿಶತ ನ್ಯೂಟ್ರಿಶನ್ ಲಭಿಸುತ್ತದೆ. ಹಣ್ಣುಗಳನ್ನು, ತರಕಾರಿಗಳನ್ನು ಸರಿಯಾಗಿ ಗ್ರೈಂಡ್ ಮಾಡಲಾಗುತ್ತದೆ ಇದನ್ನು ಟ್ರೈಚುರೇಶನ್ ಎನ್ನುತ್ತಾರೆ. ಇದರಿಂದ ಕಿಣ್ವಗಳು ಸಮರ್ಪಕವಾಗಿ ಉಳಿದುಕೊಳ್ಳುತ್ತದೆ. ಹೀಗಾಗಿ ಜ್ಯೂಸ್‌ಗಳು 3 ದಿನಗಳ ಕಾಲ ತಾಜಾತನವನ್ನು ಉಳಿಸಿಕೊಳ್ಳುತ್ತದೆ. ಇದಕ್ಕೆ ಬೇಕಾಗುವ ಯಂತ್ರಗಳನ್ನು ಅಮೆರಿಕಾದಿಂದ ತರಿಸಿಕೊಳ್ಳಲಾಗಿದೆ. ತೇಜೋಮಯ್ ಮತ್ತು ಅವರ ಗೆಳೆಯ ಅವಿರೋ ರೆಬೆಲ್ಲೋ ಇಬ್ಬರೂ ನವೆಂಬರ್ 2014ರಲ್ಲಿ ಚಂದಾದಾರಿಕೆ ಮಾದರಿಯ ಉದ್ಯಮವನ್ನು ಆರಂಭಿಸಿದರು. ಉದ್ಯಮವನ್ನು ಆರಂಭಿಸಿದ ಕೂಡಲೇ ಅದನ್ನು ಒಪ್ಪಿಕೊಂಡ ಗ್ರಾಹಕರ ಬಗ್ಗೆ ತೇಜೋಮಯ್‌ಗೆ ಸಂತೋಷವಿದೆ. ಇವರ ಗ್ರಾಹಕರಲ್ಲಿ ಬಾಲಿವುಡ್‌ ನಟಿ ಸೋನಮ್ ಕಪೂರ್‌ರ ತಾಯಿ ಸುನೀತಾ ಕಪೂರ್ ಕೂಡ ಒಬ್ಬರು. ಸುನೀತಾ ಅವರಿಗೆ ತೇಜೋಮಯ್ ಅವರ ಗ್ರೀನ್ ಜ್ಯೂಸ್‌ ಎಂದರೆ ತುಂಬಾ ಇಷ್ಟ.

“ಜ್ಯೂಸಿಫಿಕ್ಸ್‌ ಗೋ ಗ್ರೀನ್ ಜ್ಯೂಸ್ ಒಂದು ಪರ್ಫೆಕ್ಟ್​​ ಮುಂಜಾನೆಯ ಪಾನೀಯ. ನಿತ್ಯ ಜೀವನಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಆ್ಯಂಟಿಆಕ್ಸಿಡಂಟ್ಸ್‌ ಗಳು ಇದರಲ್ಲಿವೆ. ಕಳೆದ 1 ವರ್ಷದಿಂದ ನಾನು ಗೋ ಗ್ರೀನ್ ಜ್ಯೂಸ್‌ ಅನ್ನು ಸೇವಿಸುತ್ತಿದ್ದೇನೆ. ನನಗೆ ಅದೆಂದರೆ ತುಂಬಾ ಇಷ್ಟ” ಎನ್ನುತ್ತಾರೆ ಸುನೀತಾ ಕಪೂರ್.

ಗ್ರಾಹಕರು ಅನೇಕ ರೀತಿಯ ಚಂದಾದಾರಿಕೆಯ ಪ್ಯಾಕ್‌ಗಳನ್ನು ಪಡೆದುಕೊಳ್ಳಬಹುದು. 5, 15, 30 ಅಥವಾ 90 ದಿನಗಳ ಚಂದಾದಾರಿಕೆ ಲಭ್ಯವಿದೆ. ಕೋಲ್ಡ್‌ ಪ್ರೆಸ್ಡ್, ಕೈಯಿಂದಲೇ ಮಾಡಲ್ಪಟ್ಟ, ಚಿಲ್ಡ್ ಬಾಟಲ್‌ಗಳು ಬೆಳಗ್ಗೆ 6ರಿಂದ 9 ಗಂಟೆಯ ಒಳಗೆ ನಿಮ್ಮ ಮನೆಬಾಗಿಲಿಗೆ ತಲುಪುತ್ತವೆ. 275 ಎಂಎಲ್‌ನ ಬಾಟಲ್ ಒಂದಕ್ಕೆ 110 ರೂ.ನಿಂದ 150 ರೂ. ದರ ನಿಗದಿ ಮಾಡಲಾಗಿದೆ. ನಿಮಗೆ ಬೇಕಾದ ಅವಧಿಯವರೆಗೆ ಜ್ಯೂಸಿಫಿಕ್ಸ್‌ನ ಜ್ಯೂಸ್‌ಗಳನ್ನು ಪೂರೈಸಲಾಗುತ್ತದೆ.

ಜ್ಯೂಸಿಫಿಕ್ಸ್‌ ನ ಜನಪ್ರಿಯತೆಗೆ ಕಾರಣ ಎಂದರೆ ಶುದ್ಧೀಕರಿಸಲ್ಪಟ್ಟ ಪ್ಯಾಕೇಜ್‌ಗಳು. ಜನರು ಸಾಮಾನ್ಯವಾಗಿ ಮೊದಲಿಗೆ 5 ರಿಂದ 7 ದಿನದ ಜ್ಯೂಸ್‌ ಪ್ಯಾಕ್‌ಗಳಿಗೆ ಬೇಡಿಕೆ ಇಡುತ್ತಾರೆ. ಈ ಜ್ಯೂಸ್‌ಗಳನ್ನು ಊಟದ ಬದಲಿಗೂ ತೆಗೆದುಕೊಳ್ಳಬಹುದು. ಇವು ಊಟಕ್ಕೆ ಪೂರಕವಾಗಿರುತ್ತದೆ. ಇದು ದೇಹದ ಟಾಕ್ಸಿನ್‌ಗಳನ್ನು(ವಿಷಕಾರಿ ಅಂಶಗಳನ್ನು) ಸಂಪೂರ್ಣವಾಗಿ ತೆಗೆದುಹಾಕುವ ಗುಣಗಳನ್ನು ಹೊಂದಿದೆ. 7 ಮಂದಿ ಗ್ರಾಹಕರ ಚಂದಾದಾರಿಕೆಯೊಂದಿಗೆ ಜ್ಯೂಸಿಫಿಕ್ಸ್ ಸಂಸ್ಥೆ ಆರಂಭವಾಯಿತು. ಈ ಸಂಖ್ಯೆ ಈಗ 350ಕ್ಕೆ ಏರಿಕೆಯಾಗಿದೆ. ಆದಾಯವೂ ಸಹ ಪ್ರತಿ ತಿಂಗಳಿಗೆ 3 ಲಕ್ಷದಿಂದ 5 ಲಕ್ಷದವರೆಗೆ ಬರುತ್ತದೆ.

ಆದರೆ ತೇಜೋಮಯ್ ಅವರ ಹಾದಿಯೂ ಸುಗಮವಾದದ್ದೇನೂ ಆಗಿರಲಿಲ್ಲ. ಅದನ್ನೆಲ್ಲಾ ಮೀರಿ ತೇಜೋಮಯ್ ಬೆಳೆದಿದ್ದಾರೆ. ಬ್ರಾಂಡ್ ನಿರ್ಮಿಸುವಲ್ಲಿ ಹಾಕಿಕೊಂಡ ಯೋಜನೆಯೊಂದಿಗೆ ಅವರು ಯಾವುದೇ ರೀತಿಯ ಹೊಂದಾಣಿಕೆಯನ್ನೂ ಮಾಡಿಕೊಳ್ಳಲಿಲ್ಲ. ತೇಜೋಮಯ್ ಪ್ರತಿದಿನ ಮುಂಜಾನೆ 4 ಗಂಟೆಗೆ ಏಳುತ್ತಿದ್ದರು. ಅವರೇ ಸ್ವತಃ ಎಷ್ಟಾಗುತ್ತೋ ಅಷ್ಟು ಜ್ಯೂಸ್‌ ಅನ್ನು ತಯಾರಿಸುತ್ತಾರೆ. ಅವರು ಸದಾ ಗಾಜಿನ ಬಾಟಲಿಗಳನ್ನೇ ಉಪಯೋಗಿಸುತ್ತಾರೆ. ತಮ್ಮ ಗ್ರಾಹಕರಿಗೆ ಗಾಜಿನ ಬಾಟಲ್‌ಗಳನ್ನು ರಿಸೈಕಲ್ ಮಾಡುವಂತೆ ಪ್ರೇರೇಪಿಸುತ್ತಾರೆ. ತಮ್ಮ ಜ್ಯೂಸ್‌ಗಳಿಂದ ತೂಕ ಕಡಿಮೆಯಾಗುತ್ತದೆ ಎಂಬ ಭ್ರಮೆಯನ್ನು ಅವರು ಯಾರಲ್ಲೂ ಮೂಡಿಸಿಲ್ಲ.

ಕೋಲ್ಡ್ ಪ್ರೆಸ್ಡ್ ಜ್ಯೂಸ್‌ ಮಾರುಕಟ್ಟೆಗೆ 2010ರಲ್ಲಿ 9,000 ಕೋಟಿ ಮೌಲ್ಯವಿತ್ತು. 2015ರ ಅಂತ್ಯದ ವೇಳೆಗೆ ಇದರ ಗಾತ್ರ 22,500 ಕೋಟಿಗೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರದಲ್ಲಿ ಜ್ಯೂಸಿಫಿಕ್ಸ್‌ ಗೆ ಇರುವ ಇತರ ಸ್ಪರ್ಧಿಗಳೆಂದರೆ ರಾವ್ ಪ್ರೆಶರಿ, ಜಸ್ ಡಿವೈನ್ ಮತ್ತು ಜಸ್ ಪ್ರೆಸ್ಡ್. ಇವುಗಳು ನೇಚರ್ಸ್ ಬ್ಯಾಸ್ಕೆಟ್ ನಂತಹ ಸೂಪರ್ ಮಾರ್ಕೆಟ್‌ಗಳಿಗೆ ವಿತರಣೆ ಮಾಡುತ್ತಿದೆ. ತೇಜೋಮಯ್ ತಮ್ಮ ಜ್ಯೂಸಿಫಿಕ್ಸ್ ನ ಜ್ಯೂಸ್‌ಗಳು ಮಧ್ಯಮ ಮಟ್ಟದಲ್ಲೇ ಉಳಿಸಿಕೊಳ್ಳಲು ಇಚ್ಛಿಸಿದ್ದಾರೆ. ಈ ಮೂಲಕ ಅವರ ಗ್ರಾಹಕರೊಂದಿಗೆ ನಿರಂತರ ಸಂಪರ್ಕದಲ್ಲಿರಲು, ಆ ಮೂಲಕ ಉತ್ಪನ್ನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದ್ದಾರೆ.

“ಸದ್ಯಕ್ಕೆ ನಮ್ಮ ಗುರಿ ನಂಬರ್‌ಗಳನ್ನು ಹೆಚ್ಚಿಸಿಕೊಳ್ಳುವುದಲ್ಲ. ಗ್ರಾಹಕರ ನಿಷ್ಠೆಯನ್ನು ಗಳಿಸಿಕೊಳ್ಳುವುದು. ಒಮ್ಮೆ ರುಚಿ ನೋಡಿದ ಯಾವ ಗ್ರಾಹಕನೂ ಸಹ ಇಲ್ಲಿಯವರೆಗೆ ಜ್ಯೂಸ್‌ನ ಚಂದಾದಾರಿಕೆಯನ್ನು ನಿಲ್ಲಿಸಿಲ್ಲ. ಗ್ರಾಹಕರು ಜ್ಯೂಸಿಫಿಕ್ಸ್‌ ನ ಪೈನಾಪಲ್ ಎಕ್ಸ್ ಪ್ರೆಸ್ ಮತ್ತು ಗ್ರೀನ್ ಜ್ಯೂಸ್‌ಗೆ ಕಾಯುತ್ತಿರುತ್ತಾರೆ” ಎನ್ನುತ್ತಾರೆ ತೇಜೋಮಯ್. ಇತರ ಪುಣೆ, ಬೆಂಗಳೂರು, ಚೆನ್ನೈ, ದೆಹಲಿಯಂತಹ ಮೆಟ್ರೋ ಸಿಟಿಗಳಲ್ಲಿ ತಮ್ಮ ಸೇವೆಯನ್ನು ಆರಂಭಿಸುವುದಕ್ಕೂ ಮೊದಲು ಮುಂಬೈನಲ್ಲಿ ಗಟ್ಟಿಯಾಗಿ ನೆಲೆಯೂರುವ ಯೋಜನೆಯನ್ನು ಅವರು ಹಾಕಿಕೊಂಡಿದ್ದಾರೆ.

ಸದ್ಯಕ್ಕೆ ಮನೆಬಾಗಿಲಿಗೆ ತಾಜಾ ಜ್ಯೂಸ್‌ಗಳನ್ನು ತಲುಪಿಸುವುದು ಮತ್ತು ಚಂದಾದಾರಿಕೆಯ ಯೋಜನೆಯನ್ನು ಕಾರ್ಪೋರೇಟ್ ವಲಯಕ್ಕೆ ಮತ್ತು ರೆಸ್ಟೋರೆಂಟ್‌ಗಳಿಗೆ ವಿಸ್ತರಿಸುವುದೇ ಜ್ಯೂಸಿಫಿಕ್ಸ್‌ ನ ಉದ್ದೇಶ. ನಂತರವಷ್ಟೇ ಚಿಲ್ಲರೆ ಮಾರುಕಟ್ಟೆಯನ್ನು ಪ್ರವೇಶಿಸಲು ಸಂಸ್ಥೆ ನಿರ್ಧರಿಸಿದೆ.


ಲೇಖಕರು: ಬಿಂಜಾಲ್​ ಷಾ

ಅನುವಾದಕರು: ವಿಶ್ವಾಸ್​

Related Stories