ಏಕಾಂಗಿ ಬೈಕ್ ಯಾನ ಆನಂದಮಯ...ಸಾಹಸಿ ಪ್ರವಾಸಿ ರುತಾವಿ ಮೆಹ್ತಾರ ರೋಚಕ ಕಹಾನಿ

ಟೀಮ್​ ವೈ.ಎಸ್​​.

0

ರುತಾವಿ ಮೆಹ್ತಾ... ಅಂತರಾಷ್ಟ್ರೀಯ ಪ್ರವಾಸಿ ಬ್ಲಾಗರ್, ಏಕವ್ಯಕ್ತಿ ಸಾಹಸಿ ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಸುವಾರ್ತಾ ಬೋಧಕಿ. ಬಾಲ್ಯದಿಂದ್ಲೇ ರುತಾವಿ ಅವರಿಗೆ ಪ್ರವಾಸದ ಬಗ್ಗೆ ಅಪಾರ ಆಸಕ್ತಿಯಿತ್ತು. ಒಮ್ಮೆ ಒಬ್ಬಂಟಿಯಾಗಿ ರುತಾವಿ ಮೆಹ್ತಾ ಕೊಲ್ಲಾಪುರಕ್ಕೆ ಹೊರಟಿದ್ರು. ಆಗ ಅಪ್ಪಟ ಮರಾಠಿ ಧಿರಿಸಿನಲ್ಲಿ ರಾಜ್‍ದೂತ್ ಬೈಕ್ ಏರಿ ಬಂದ 70ರ ಮಹಿಳೆಯನ್ನು ನೋಡಿ ರುತಾವಿ ವಿಸ್ಮಿತರಾಗಿದ್ರು. ಅವರ ಸಾಹಸಿ ಅನುಭವ ಕೇಳಿ ರುತಾವಿ ಅವರಲ್ಲೂ ಹೊಸ ಉತ್ಸಾಹ ಮೂಡಿತ್ತು.

ಹೋಟೆಲ್ ಉದ್ಯಮದಿಂದ ಬೈಕರ್...ಅಲ್ಲಿಂದ ಒಂಟಿ ಪ್ರವಾಸ...

ಹೋಟೆಲ್ ಉದ್ಯಮದಲ್ಲಿ ರುತಾವಿ ಅವ್ರಿಗೆ ಅಪಾರ ಅನುಭವವಿದೆ. ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿದ್ದ ಅವರು, ಸಾಮಾಜಿಕ ಮಾಧ್ಯಮ ತಂತ್ರಜ್ಞೆ ಹಾಗೂ ಇಂಟರ್ನೆಟ್ ಮಾರ್ಕೆಟರ್ ಆಗಿಯೂ ಕರ್ತವ್ಯ ನಿಭಾಯಿಸಿದ್ದಾರೆ. ಆದ್ರೆ ಪ್ರಯಾಣದ ಬಗ್ಗೆ ಅವರಿಗಿದ್ದ ಪ್ರೀತಿ ಮಾತ್ರ ಕಡಿಮೆಯಾಗಿರಲಿಲ್ಲ. ಮೊದಲು ರುತಾವಿ ಫೋಟೋಗ್ರಫಿ ಕಲಿತರು. ಬೈಕ್ ಓಡಿಸೋದನ್ನು ಕಲಿತಿದ್ದ ರುತಾವಿ ರಾಯಲ್ ಎನ್‍ಫೀಲ್ಡ್ ಜೊತೆ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ರು. ಇದೆಲ್ಲವೂ ರುತಾವಿ ಮೆಹ್ತಾ ಅವರಿಗೆ ಹೊಸದು. ಒಬ್ಬ ರೈಡರ್ ಕ್ಯಾಮರಾ ಜೊತೆ ಏನ್ಮಾಡ್ತಾರೆ ಅನ್ನೋ ಪರಿಕಲ್ಪನೆಯೇ ಅವರಿಗೆ ಅರ್ಥವಾಗಿರ್ಲಿಲ್ಲ. ಒಬ್ಬ ರೈಡರ್ ಹಾಗೂ ಬೈಕರ್‍ಗೆ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಂಡ ಮೇಲೆ ರುತಾವಿ ಛಾಯಾಗ್ರಾಹಕನ ದೃಷ್ಟಿಕೋನದಿಂದ ರೈಡರ್ ಆಗಲು ಬಯಸಿದ್ರು.

ಮಹಿಳಾ ಬೈಕರ್‍ಗಳ ಸಂಘ `ದಿ ಬೈಕರ್ನಿ'ಯನ್ನು ಸೇರಿದ ರುತಾವಿಗೆ ಅಲ್ಲಿ ಊರ್ವಶಿ ಪತೋಲೆ ಜೊತೆಯಾದ್ರು. ಹೋಟೆಲ್ ಇಂಡಸ್ಟ್ರಿಯಲ್ಲಿದ್ದಾಗಲೇ ರುತಾವಿ ಇದನ್ನೆಲ್ಲ ಮಾಡ್ತಾ ಇದ್ರು. ಸ್ವಪ್ರಯತ್ನದಿಂದ ಹೊಸದೇನನ್ನಾದ್ರೂ ಮಾಡಬೇಕು ಅನ್ನೋ ಉತ್ಸಾಹದಲ್ಲಿದ್ದ ರುತಾವಿ, ಉದ್ಯೋಗಕ್ಕೆ ಗುಡ್‍ಬೈ ಹೇಳಿ ತಮ್ಮ ಸಹೋದರಿಯನ್ನು ಭೇಟಿಯಾಗಲು ಕತಾರ್‍ಗೆ ತೆರಳಿದ್ರು. ಅಲ್ಲಿ ಪ್ರವಾಸ ಹಾಗೂ ಪ್ರಯಾಣದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯವಾಯ್ತು ಅಂತಾರೆ ರುತಾವಿ. ಕತಾರ್ ಪ್ರವಾಸೋದ್ಯಮ ಇಲಾಖೆಯ ಪ್ರಾಜೆಕ್ಟ್ ಒಂದನ್ನು ರುತಾವಿ ಕೈಗೆತ್ತಿಕೊಂಡ್ರು. `ಕೈರಳ ಬ್ಲಾಗ್ ಎಕ್ಸ್​​ಪ್ರೆಸ್' ಕೂಡ ಅವುಗಳಲ್ಲೊಂದು. ಕೇರಳದಲ್ಲಿ ಸುತ್ತಾಡಿದ 25 ಬ್ಲಾಗರ್‍ಗಳು ಅದರಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಜವಾಬ್ದಾರಿಯುತ ಪ್ರಯಾಣ...

ಒಂಟಿಯಾಗಿ ಪ್ರಯಾಣ ಮಾಡೋದು ಒಂದು ಸುಂದರ ಅನುಭವ ಎನ್ನುತ್ತಾರೆ ರುತಾವಿ. ಗುಂಪಿನಲ್ಲಿರಲಿ ಅಥವಾ ಒಂಟಿಯಾಗಿರಲಿ, ಪ್ರಯಾಣ ಅನ್ನೋದು ಆತ್ಮ ಶೋಧನೆ ಅನ್ನೋದು ಅವರ ಅಭಿಪ್ರಾಯ. ಅಷ್ಟೇ ಅಲ್ಲ ಜವಾಬ್ದಾರಿಯುತ ಪ್ರಯಾಣದ ಬಗ್ಗೆ ಅವರಿಗೆ ಅಪಾರ ನಂಬಿಕೆ. ಪ್ರತಿವರ್ಷ ಲಡಾಕ್‍ನಲ್ಲಿ ಒಂದು ತಿಂಗಳು ತಂಗುವ ರುತಾವಿ ತಮ್ಮ ಅನುಭವಗಳನ್ನು ಶಾಲಾ ಮಕ್ಕಳ ಜೊತೆ ಹಂಚಿಕೊಳ್ತಾರೆ. ಅಲ್ಲಿ ಕಿಲೋಮೀಟರ್‍ಗಟ್ಟಲೆ ದೂರದಲ್ಲಿರುವ ಶಾಲೆಗಳಿಗೆ ಅವರು ನಡೆದೇ ಸಾಗುವುದು ವಿಶೇಷ. ಪುಸ್ತಕ ಓದುವುದು ಹೇಗೆ? ಅದನ್ನು ನೆನಪಿನಲ್ಲಿರಿಸಿಕೊಳ್ಳುವುದು ಹೇಗೆ ಅನ್ನೋದನ್ನು ಕೂಡ ಮಕ್ಕಳಿಗೆ ರುತಾವಿ ಹೇಳಿಕೊಡ್ತಾರೆ. 2001ರಿಂದ್ಲೂ ರುತಾವಿ ಅವರ ಲಡಾಕ್ ಭೇಟಿ ನಡೆಯುತ್ತಲೇ ಇದೆ. ನಾವು ಭೇಟಿ ನೀಡುವ ಪ್ರತಿಯೊಂದು ಪ್ರದೇಶದಿಂದ್ಲೂ ಅನುಭವಗಳನ್ನು ನಾವು ಬಾಚಿಕೊಳ್ತೇವೆ, ಅದೇ ರೀತಿ ಮರಳಿ ಏನನ್ನಾದ್ರೂ ಕೊಡಬೇಕು ಅನ್ನೋದು ರುತಾವಿ ಅವರ ಅಭಿಪ್ರಾಯ.

ಇನ್ನೊಮ್ಮೆ ರುತಾವಿ ಲಕ್ಷದ್ವೀಪದಲ್ಲೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡ್ರು. ಸಮುದ್ರ ಮಾರ್ಗದ ಮೂಲಕ ದ್ವೀಪದಲ್ಲಿರುವ ನಿವಾಸಿಗಳು ಸಾಮಾನು - ಸರಂಜಾಮುಗಳನ್ನು ಹೇಗೆ ಸಾಗಿಸ್ತಾರೆ ಅನ್ನೋದು ತೀವ್ರ ಕುತೂಹಲ ಕೆರಳಿಸಿತ್ತು. ಆದ್ರೆ ಅಲ್ಲಿರುವ ಬುಡಕಟ್ಟು ಜನಾಂಗದವರ ಜೀವನ ಎಲ್ಲರಂತಿತ್ತು. ದ್ವೀಪ ಕೇವಲ 5 ಕಿಲೋಮೀಟರ್ ವಿಸ್ತಾರವಾಗಿತ್ತು. ದ್ವೀಪದ ಬಗ್ಗೆ ಸಂಶೋಧನೆ ನಡೆಸಿ ಒಂದು ಸಾಕ್ಷ್ಯಚಿತ್ರ ಮಾಡುವ ಆಸೆ ಅವರಿಗಿತ್ತು. ಆದ್ರೆ ದುರದೃಷ್ಟವಶಾತ್ ಯೋಜನೆಯನ್ನು ಕೈಬಿಡಬೇಕಾಯ್ತು.

ಎವರೆಸ್ಟ್ ತಳದಲ್ಲಿ...

ಸದ್ಯ ಮುಂಬೈ ಟ್ರಾವೆಲ್ ಮ್ಯಾಸಿವ್‍ನ ಮುಖ್ಯಸ್ಥರಾಗಿರೋ ರುತಾವಿ ಮೆಹ್ತಾಗೆ ದೇಶದ ವಿಭಿನ್ನ ಪ್ರದೇಶಗಳಿಗೆ ಭೇಟಿ ಕೊಡುವ ಬಯಕೆಯಿದೆ. ರುತಾವಿ ಎವರೆಸ್ಟ್ ಸವಾಲಿನ ಭಾಗವೂ ಆಗಿದ್ದು ವಿಶೇಷ. ರುತಾವಿ ಕ್ರೀಡಾಪಟುವಲ್ಲ, ಎವರೆಸ್ಟ್ ಬೇಸ್ ಕ್ಯಾಂಪ್ ಬಗ್ಗೆ ಅವರಿಗೆ ತಿಳಿದೇ ಇರ್ಲಿಲ್ಲ. ಆದ್ರೂ ರುತಾವಿ ಫೈನಲಿಸ್ಟ್ ಆಗಿ ಸ್ಥಾನ ಗಿಟ್ಟಿಸಿಕೊಂಡಿದ್ರು. ಇನ್ನು ರಾಜಸ್ಥಾನ ಪ್ರವಾಸಕ್ಕೂ ರುತಾವಿ ಆಯ್ಕೆಯಾಗಿದ್ರು. ಈ ಪ್ರಯಾಸಕರ ಪ್ರಯಾಣದಲ್ಲಿ ರುತಾವಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ರುತಾವಿ ಅವರಿಗೆ ಸಹಪ್ರಯಾಣಿಕರು ನೀಡಿದ ಬೆಂಬಲವಂತೂ ಅದ್ಭುತ. ಈ ಪ್ರಯಾಣದಲ್ಲಿ ಬದುಕಿನ ಹೊಸ ಪಾಠ ಕಲಿತೆ ಎನ್ನುತ್ತಾರೆ ಅವರು.

ರಿಕ್ಷಾ ಏರಿದ ರುತಾವಿ...

ಕಳೆದ ಏಪ್ರಿಲ್‍ನಲ್ಲಿ ನಡೆದ ರಿಕ್ಷಾ ರನ್‍ನಲ್ಲೂ ರುತಾವಿ ಪಾಲ್ಗೊಂಡಿದ್ರು. ಈ ಸ್ಪರ್ಧೆಯನ್ನು ಭಾರತದಲ್ಲೇ ಆಯೋಜಿಸಲಾಗಿತ್ತಾದ್ರೂ, ಅಲ್ಲಿ ಭಾರತೀಯ ಸ್ಪರ್ಧಿಗಳೇ ಇಲ್ಲದಿರೋದು ಅವರಿಗೆ ಅಚ್ಚರಿ ಮೂಡಿಸಿತ್ತು. ಸ್ಪರ್ಧೆ ಆಯೋಜಕರು ಭಾರತೀಯರನ್ನು ಟಾರ್ಗೆಟ್ ಮಾಡಿರಲೇ ಇಲ್ಲ. ವಿದೇಶೀಯರನ್ನು ಆಕರ್ಷಿಸಲು ಸ್ಪರ್ಧೆ ಹಮ್ಮಿಕೊಳ್ತಿದ್ರು. ಹಾಗಾಗಿ 2007ರಿಂದ ಇದುವರೆಗೂ ಭಾರತೀರೊಬ್ಬರೂ ಅದರಲ್ಲಿ ಪಾಲ್ಗೊಂಡಿರ್ಲಿಲ್ಲ. ಕೊನೆಗೆ ಸ್ಪರ್ಧಾ ಕಣಕ್ಕಿಳಿದ ರುತಾವಿ ಶಿಲ್ಲಾಂಗ್ ವರೆಗಿನ ಪ್ರಯಾಣವನ್ನು 12 ದಿನಗಳಲ್ಲಿ ಪೂರೈಸಿದ್ರು. ರಿಕ್ಷಾ ರನ್‍ನಲ್ಲಿ ಪಾಲ್ಗೊಂಡ ಮೊದಲ ಭಾರತೀಯ ಟ್ರಾವೆಲ್ ವುಮೆನ್ ಬ್ಲಾಗರ್ ಎಂಬ ಹೆಗ್ಗಳಿಕೆಗೆ ರುತಾವಿ ಪಾತ್ರರಾಗಿದ್ದಾರೆ. ಅವರ ಸಾಹಸಿ ಪ್ರಯಾಣ ಹೀಗೆ ಮುಂದುವರಿಯಲ್ಲಿ ಅನ್ನೋದೇ ಎಲ್ಲರ ಹಾರೈಕೆ.

Related Stories