ಈ SINS ಪಾಪವಲ್ಲ, ಫ್ಯಾಷನ್ ಪ್ರೇಮ...

ಟೀಮ್​ ವೈ.ಎಸ್​​.

0

ಫ್ಯಾಷನ್ ಡಿಸೈನಿಂಗ್‍ಅನ್ನೇ ಕಲಿತು, ಹಲವು ಫ್ಯಾಷನ್ ಬ್ರಾಂಡ್‍ಗಳೊಂದಿಗೆ ಕೆಲಸ ಮಾಡಿದ ಬಳಿಕ ಶಿಖರ್ ವೈದ್ಯ, ಸ್ಮೃತಿ ದುಬೆ, ಪ್ರತ್ಯುಶ್ ಸಿಂಗ್ ಹಾಗೂ ತಸ್ಲೀಮ್ ಸಿದ್ದಿಕಿಗೆ ಒಂದು ವಿಷಯ ಗೊತ್ತಾಯ್ತು. ಅದೇನಂದ್ರೆ ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಹೊಸ ಡಿಸೈನರ್ ಲೇಬಲ್‍ಅನ್ನು ಪ್ರಾರಂಭಿಸಲು ಹಲವು ಅಡೆತಡೆಗಳಿವೆ ಅನ್ನೋದು. ಬಂಡವಾಳ ಹೂಡಿಕೆ, ಉತ್ಪಾದನೆ, ಚಿಲ್ಲರೆ ಅಂಗಡಿಗಳೊಂದಿಗೆ ಒಪ್ಪಂದ ಸೇರಿದಂತೆ ಹತ್ತು ಹಲವು ಗಡಿಗಳನ್ನು ದಾಟಿ, ಭಾರತೀಯ ಮಾರುಕಟ್ಟೆಯಲ್ಲಿ ನಮ್ಮದೇ ಒಂದು ಬ್ರಾಂಡ್ ಅಥವಾ ಇರುವಿಕೆಯನ್ನು ಸೃಷ್ಟಿಸಿಕೊಳ್ಳುವುದು ತುಂಬಾ ಕಠಿಣ ಅಂತ ತಿಳಿಯಲು ಅವರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ.

ಅವರ ಕಾಲೇಜ್ ಸೀನಿಯರ್‍ಗಳು ತಮ್ಮದೇ ಡಿಸೈನರ್ ಕಲೆಕ್ಷನ್‍ಅನ್ನು ಬಿಡುಗಡೆ ಮಾಡಿ, ಕೈ ಸುಟ್ಟಿಕೊಂಡಿದ್ದನ್ನು ಅವರು ನೋಡಿದ್ದರು. ಜನರನ್ನು ಸೆಳೆಯಲಾಗದೇ, ಸರಿಯಾದ ಬೆಂಬಲ ಸಿಗದೇ, ಬ್ರ್ಯಾಂಡ್‍ಗೆ ಸರಿಯಾದ ಪ್ರಚಾರ ಸಿಗದೇ ನಷ್ಟ ಅನುಭವಿಸಿದ್ದನ್ನು ಕಣ್ಣಾರೆ ಕಂಡಿದ್ದರು. ಹೊಸ ಕಲ್ಪನೆಗಳೊಂದಿಗೆ, ಹೊಸ ಬದಲಾವಣೆಗಳೊಂದಿಗೆ ಮಾರ್ಕೆಟಿಂಗ್ ಮಾಡದ ಕಾರಣ, ತಮ್ಮ ಉತ್ಪನ್ನಗಳ ಮಾರಾಟ ಮಾಡಲಾಗದೇ ಅವರ ಸೀನಿಯರ್‍ಗಳು ಸೋತಿದ್ದರು.

ಪ್ರಾರಂಭವಾಯ್ತು ಸಿನ್ಸ್ (SINS)

ಈ ವಲಯದಲ್ಲಿನ ಸವಾಲುಗಳನ್ನು ನೋಡಿ, ಶಿಖರ್ ವೈದ್ಯ, ಸ್ಮೃತಿ ದುಬೆ, ಪ್ರತ್ಯುಶ್ ಸಿಂಗ್ ಹಾಗೂ ತಸ್ಲೀಮ್ ಸಿದ್ದಿಕಿ ಎಲ್ಲರೂ ಕೈಜೋಡಿಸಿ ವಿನ್ಯಾಸ ಕೇಂದ್ರಿತ ಸಿದ್ಧ ಉಡುಪುಗಳ ಇ-ಕಾಮರ್ಸ್ ವೇದಿಕೆ ಪ್ರಾರಂಭಿಸಿದ್ರು. ಅದೇ ಸಿನ್ಸ್ (SINS -Synonym of Indian Style). ವಿಭಿನ್ನ ಗ್ರಾಫಿಕ್ ಕಲೆ ಮತ್ತು ವಿಶೇಷ ವಿನ್ಯಾಸಗಳುಳ್ಳ ಪುರುಷ ಮತ್ತು ಮಹಿಳೆಯರ ಬಟ್ಟೆಗಳನ್ನು ಮಾರಾಟ ಮಾಡುವುದು ಇದರ ಉದ್ದೇಶವಾಗಿತ್ತು.

‘ಮೊದ ಮೊದಲು ನಾವು ತುಂಬಾ ತಲೆಕೆಡಿಸಿಕೊಂಡಿದ್ದೆವು. ಫ್ಯಾಷನ್, ವಿನ್ಯಾಸ ಮತ್ತು ತಂತ್ರಜ್ಞಾನಗಳನ್ನು ಒಂದೆಡೆ ತಂದು, ಅವುಗಳ ಸಹಾಯದಿಂದ ಗ್ರಾಹಕರು ಆನ್‍ಲೈನ್‍ನಲ್ಲಿ ಬಟ್ಟೆ ಖರೀದಿಸುವ ಶೈಲಿಯನ್ನೇ ಬದಲಿಸುವ ಪ್ರಯತ್ನ ಮಾಡಿದೆವು’ ಅಂತಾರೆ ಸ್ಮೃತಿ. ಪಾಪ್ ಇಂಡಿಯನ್ ಮತ್ತು ಬೆಡಗು, ವಯ್ಯಾರಗಳ ಉಡುಪು ವಿನ್ಯಾಸಗೊಳಿಸುವ ಡಿಸೈನರ್‍ಗಳು ತುಂಬಾ ಜನ ಇರೋದನ್ನು ಸಿನ್ಸ್ ತಂಡ ಗಮನಿಸಿತು. ಹಾಗೇ ಲೈಫ್‍ಸ್ಟೈಲ್ ಮತ್ತು ಫ್ಯಾಷನ್ ಸಾಮಗ್ರಿಗಳನ್ನು ಮಾರಾಟ ಮಾಡುವ ಬ್ರಾಂಡ್‍ಗಳು ತುಂಬಾ ಇದ್ದರೂ, ಗ್ರಾಹಕರಿಗೆ ಆಯ್ಕೆ ಮಾತ್ರ ಕಡಿಮೆಯಿದೆ ಅಂತಲೂ ಇವರು ಅರಿತುಕೊಂಡರು.

ಮೊದಲು ಟಿ-ಶರ್ಟ್‍ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರೂ, ಈ ಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳಿವೆ ಅಂತ ಇವರಿಗೆ ಮೊದಲಿಂದಲೂ ಅನ್ನಿಸುತ್ತಿತ್ತು. ಹೀಗಾಗಿಯೇ ಸಣ್ಣ-ಪುಟ್ಟ ಪ್ರತಿಭಾನ್ವಿತ ಡಿಸೈನರ್‍ಗಳನ್ನು ತಮ್ಮೊಂದಿಗೆ ಸೇರಿಸಿಕೊಂಡ ಸಿನ್ಸ್ ಟೀಮ್, ಕ್ರಮೇಣ ಹೊಸ ಬಗೆಯ ಭಾರತೀಯ ವಿನ್ಯಾಸದ ಸಿದ್ಧ ಉಡುಪುಗಳನ್ನು ಮಾರತೊಡಗಿದರು. ಹಾಗೇ ಭಾರತ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾರುಕಟ್ಟೆ ವಿಸ್ತರಿಸಿಕೊಂಡರು.

ಉದ್ಯೋಗ ಮತ್ತು ಮಾರಾಟ

ಈ ತಂಡದಲ್ಲಿ ಡಿಸೈನರ್‍ಗಳು, ಕಲಾವಿದರು, ಕಾರ್ಟೂನಿಸ್ಟ್​​ಗಳು, ಸಚಿತ್ರಕಾರರು, ಫೋಟೋಗ್ರಾಫರ್‍ಗಳು ಸೇರಿ ಪ್ರತಿ ತಿಂಗಳು 3 ಸಾವಿರಕ್ಕೂ ಹೆಚ್ಚು ಡಿಸೈನರ್ ಸಿದ್ಧ ಉಡುಪುಗಳನ್ನು ಬಿಡುಗಡೆ ಮಾಡ್ತಾರೆ.

‘ಹಾಗೇ ನಾವು ಗ್ರಾಹಕರಿಗೆ ಅದ್ಭುತವಾದ ಆನ್‍ಲೈನ್ ಶಾಪಿಂಗ್ ಅನುಭವ ನೀಡುತ್ತೇವೆ. ಪ್ರಯಾಣ ಅಥವಾ ಆಹಾರ ತಿನಿಸುಗಳ ಕುರಿತ ಬ್ಲಾಗ್‍ಗಳನ್ನು ಬರೆಯುವವರು, ಸಾಹಸಪ್ರಿಯರು, ಸಂಗೀತಗಾರರು ಮತ್ತು ಫ್ಯಾಷನ್ ಪ್ರಿಯರು ಬರೆದಿರುವ, ಒಂದೇ ಸೋಷಿಯಲ್ ಪೇಜ್‍ಅನ್ನು ನಾವು ಗ್ರಾಹಕರಿಗೆ ಒದಗಿಸುತ್ತೇವೆ. ಇದರಿಂದಾಗಿ ಗ್ರಾಹಕರು ನಮ್ಮ ಡಿಸೈನರ್ ಉತ್ಪನ್ನಗಳನ್ನು ತಾವೇ ಧರಿಸಿರುವಂತೆ ವಾಸ್ತವ ಅನುಭವ ನೀಡುತ್ತೆ.’ ಅಂತ ತಮ್ಮ ಮಾತನ್ನು ಮುಂದುವರಿಸುತ್ತಾರೆ ಸ್ಮøತಿ.

ಹೆಚ್ಚಾಗಿ ಆನ್‍ಲೈನ್ ಶಾಪಿಂಗ್ ಕುರಿತು ತಿಳಿದುಕೊಂಡಿರುವ, ಶ್ರೀಮಂತ, ಮೌಲ್ಯಯುತ ಉತ್ಪನ್ನಗಳ ಬಗ್ಗೆ ಹೆಚ್ಚು ಆಸಕ್ತಿಯಿರುವ, ಒಳ್ಳೆಯ ವಿನ್ಯಾಸದ ಬಗ್ಗೆ ರುಚಿಯಿರುವ, ಡಿಸ್ಕೌಂಟ್ ಬಗ್ಗೆ ತಲೆಕೆಡಿಸಿಕೊಳ್ಳದ ಹಾಗೂ ಚೌಕಾಸಿ ಮಾಡದ ನಗರ ಪ್ರದೇಶಗಳ 25ರಿಂದ 35 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರೇ ಸಿನ್ಸ್‍ನ ಟಾರ್ಗೆಟ್. ‘ನಾವು ಡಿಸೈನರ್‍ಗಳಿಗೂ ಸೂಕ್ಷ್ಮ ಉದ್ಯಮಶೀಲತೆಯಲ್ಲಿ ಭಾಗವಹಿಸುವ ಒಂದು ಅವಕಾಶ ಕೊಡುತ್ತೇವೆ. ಉತ್ಪಾದನೆ, ಮಾರ್ಕೆಟಿಂಗ್ ಹಾಗೂ ಮಾರಾಟ ಮಾಡುವ ಕಷ್ಟಗಳನ್ನು ದೂರ ಮಾಡಿ, ನಾವೇ ಆನ್‍ಲೈನ್‍ನಲ್ಲಿ ವೇದಿಕೆಯನ್ನೂ ಕಲ್ಪಿಸುತ್ತೇವೆ.’ ಅಂತಾರೆ ಸ್ಮೃತಿ.

ಮುಂದಿನ ದಿನಗಳಲ್ಲಿ ಸಿನ್ಸ್‍ಅನ್ನು ಪ್ರತಿಭಾನ್ವಿತ ವಿನ್ಯಾಸಗಾರರ ಒಂದು ಕೇಂದ್ರವನ್ನಾಗಿ ಮಾರ್ಪಾಡು ಮಾಡುವ ಗುರಿ ಅವರದು. ಅದ್ಭುತ ವಿನ್ಯಾಸಗಳ ಸಿದ್ಧ ಉಡುಪುಗಳಿರುವ, ಅಂತಾರಾಷ್ಟ್ರೀಯ ಗುಣಮಟ್ಟದ ಉಡುಪುಗಳ ಜೊತೆಗೆ ಉತ್ಪನ್ನಗಳು ಹಾಗೂ ವೆಬ್‍ಸೈಟ್‍ಅನ್ನು ಮತ್ತಷ್ಟು ಸುಂದರವಾಗಿಸಲು ಪ್ರಯತ್ನಗಳು ನಡೀತಿವೆ.

ಬೆಳವಣಿಗೆ

ಸದ್ಯ ಸಿನ್ಸ್ ವೆಬ್‍ಸೈಟ್‍ನಲ್ಲಿ ಮಹಿಳೆಯರು ಮತ್ತು ಪುರುಷರ ವಿನ್ಯಾಸಗೊಂಡ ‘ಬೊಹ್‍ಇಂಡಿಯಾ’ ಮತ್ತು ‘ಬೊಹಿಮಿ’ ಎಂಬ ಎರಡು ಇನ್-ಹೌಸ್ ಬ್ರಾಂಡ್‍ಗಳಿವೆ. ಅವುಗಳನ್ನು ಕಲಾವಿದರೊಂದಿಗೆ ಸೇರಿ ಇದೇ ತಿಂಗಳು ಬಿಡುಗಡೆ ಮಾಡಲಿದ್ದಾರೆ.

ವಿಶೇಷ ಅಂದ್ರೆ ಬಾಲಿವುಡ್ ಸ್ಟಾರ್‍ಗಳಾದ ಪ್ಲೇಬಾಯ್ ರಣವೀರ್ ಸಿಂಗ್, ಇರ್ಫಾನ್ ಖಾನ್, ಆಯುಷ್ಮಾನ್ ಖುರಾನಾ, ಅಂತಾರಾಷ್ಟ್ರೀಯ ಫುಟ್‍ಬಾಲ್ ಆಟಗಾರ ಮಿಶೆಲ್ ಡಿನ್ಜೇ, ನಟಿ ಮಹ್ನಾಜ್ ದಮನಿಯಾ ಮತ್ತು ದರ್ಶನ್ ಕುಮಾರ್, ಸಿನ್ಸ್ ವಿನ್ಯಾಸಗೊಳಿಸಿದ ಜ್ಯಾಕೆಟ್‍ಗಳನ್ನು ಧರಿಸಿ ಭಾರತದಾದ್ಯಂತ ವಿವಿಧ ಸಿನಿಮಾ ಸಂಬಂಧೀ ಕಾರ್ಯಕ್ರಮಗಳು ಮತ್ತು ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಸಿನ್ಸ್​​ನಂತಹ ಉದಯೋನ್ಮುಖ ಕಂಪನಿಗೆ ಇದೊಂದು ದೊಡ್ಡ ಸಾಧನೆ ಅನ್ನೋದಂತೂ ನಿಜವೇ ಸರಿ. ‘ಇಂಡಿಯಾ ರೆಸಾರ್ಟ್‍ನಲ್ಲಿ ನಡೆದ 2013 ಫ್ಯಾಷನ್ ವೀಕ್‍ನಲ್ಲಿ, ಪ್ರಾಣಿದಯಾ ಸಂಘವಾದ ಪೇಟಾ ಆಯೋಜಿಸಿದ್ದ ‘ಅಗೇನ್ಸ್ಟ್ ಅನಿಮಲ್ ಕ್ರೂಯೆಲ್ಟಿ ಅಥವಾ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ವಿರೋಧಿಸುವ ಕ್ಯಾಂಪೇನ್‍ನಲ್ಲಿ ಸಿನ್ಸ್ ಕೂಡ ಭಾಗವಹಿಸಿತ್ತು. ಈ ಮೂಲಕ ಪ್ರತಿಷ್ಠಿತ ಜೂಮ್ ಟಿವಿಯಲ್ಲಿಯೂ ಸಿನ್ಸ್ ಕುರಿತ ಕಾರ್ಯಕ್ರಮ ಪ್ರಸಾರವಾಗಿದ್ದು, ನನಗೆ ಇದುವರೆಗಿನ ರೋಮಾಂಚನಕಾರಿ ಅನುಭವ ಅಂತ ಸಂತಸ ವ್ಯಕ್ತಪಡಿಸುತ್ತಾರೆ ಸ್ಮೃತಿ.

ಭವಿಷ್ಯದ ಯೋಜನೆಗಳು

ಫ್ಯಾಷನ್ ಪ್ರಿಯರ ಹಾಗೂ ಫ್ಯಾಷನ್ ಡಿಸೈನರ್‍ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಇದೆ. ಆದ್ರೆ ತಮ್ಮ ಪ್ರತಿಭೆಯನ್ನು ಪ್ರಪಂಚದ ಮುಂದೆ ಪ್ರದರ್ಶಿಸಲು ಸಾಧ್ಯವಾಗುತ್ತಿರುವುದು ಕೆಲವು ಮಂದಿಗೆ ಮಾತ್ರ. ಕೆಲವರು ತಮ್ಮ ಪ್ರತಿಭೆ ಪ್ರದರ್ಶಿಸಿದ್ರೂ, ಅದರಿಂದ ಲಾಭ ಮಾಡಿಕೊಳ್ಳುವುದು ಹೇಗೆ ಅಂತ ಗೊತ್ತಿರಲ್ಲ. ಅಂಥವರಿಗೆ ಸಿನ್ಸ್ ವೇದಿಕೆ ಕಲ್ಪಿಸಲಿದೆ. ಈ ಮೂಲಕ ಪ್ರತಿ ತಿಂಗಳು 300 ಡಿಸೈನರ್‍ಗಳ 3000 ಡಿಸೈನರ್ ಸಿದ್ಧ ಉಡುಪು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವ ಯೋಜನೆ ಈ ಆನ್‍ಲೈನ್ ಶಾಪಿಂಗ್ ಕಂಪನಿಯದು. ಮುಂಬೈ, ದೆಹಲಿ ಹಾಗೂ ಬೆಂಗಳೂರಿನಂತಹ ನಗರಗಳೇ ಇದರ ಪ್ರಮುಖ ಟಾರ್ಗೆಟ್.

ಹಾಗೇ ಭಾರತೀಯತೆಯನ್ನು, ಇಲ್ಲಿನ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಸಿದ್ಧ ಉಡುಪುಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದಷ್ಟೇ ಕಲೆಕ್ಷನ್ ಒನ್ ಎಂಬ ಸಿದ್ಧ ಉಡುಪಗಳ ಬ್ರಾಂಡ್‍ಅನ್ನು ಚುಂಬಕ್ ಕಂಪನಿ ಬಿಡುಗಡೆ ಮಾಡಿದೆ. ಇದು ಚಳಿಗಾಲದಲ್ಲಿ ಧರಿಸುವಂತಹ 350 ವಿಭಿನ್ನ ಸ್ಟೈಲ್‍ಗಳನ್ನು ಒಳಗೊಂಡಿದೆ. ವಿನೂತನ, ಫ್ಯಾಷನ್ ಕುರಿತು ಅರಿವಿರುವ ಅಂತಾರಾಷ್ಟ್ರೀಯ ಗ್ರಾಹಕರನ್ನು ಸೆಳೆಯುವುದೇ ಕಲೆಕ್ಷನ್ ಒನ್‍ನ ಉದ್ದೇಶವಾಗಿದೆ.

ಶೇಕಡಾ 70ರಷ್ಟು ಉಡುಪಗಳ ಶ್ರೇಣಿ ಮಹಿಳೆಯರಿಗಾಗಿ ಉಳಿದ 30 ಶೇಕಡಾ ಪುರುಷರ ಉಡುಪುಗಳಿಂದ ಕೂಡಿರುತ್ತದೆ. ಹಾಗೇ ವುಪ್ಲರ್ (Wooplr), ಜಬಾಂಗ್, ಮಿಂತ್ರಾ ಹಾಗೂ ಕೂವ್ಸ್ ಜೊತೆಗೆ ಟೈ-ಅಪ್ ಮಾಡಿಕೊಳ್ಳಲು ಮಾತುಕತೆ ನಡೀತಿದೆ.

Related Stories

Stories by YourStory Kannada