ದಿಟ್ಟ ಧೀರೆ ಈ ಪುಟ್ಟ ದಿಯಾ..!

ಟೀಮ್​ ವೈ.ಎಸ್​. ಕನ್ನಡ

1

ದಿಯಾ, ಮೈಸೂರಿನ ಈ ಪುಟ್ಟ ಪೋರಿ ಇಂದು ದೇಶವೇ ಹೆಮ್ಮೆ ಪಡುವಂತ ಧೀರೆ. ಮೈಸೂರಿನ ಕುವೆಂಪುನಗರ ನಿವಾಸಿಗಳಾದ ಶ್ರೀನಾಥ್ ಅರಸ್, ಶಿಲ್ಪಾ ಅರಸ್ ಅನ್ನೋ ದಂಪತಿಯ ಒಬ್ಬಳೇ ಮಗಳು ದಿಯಾ ಅರಸ್. ಈಗಿನ್ನೂ ಮೈಸೂರಿನ ವಿಧ್ಯಾವರ್ಧಕ ಬಿ.ಎಂ.ಶ್ರೀ. ಶಾಲೆಯಲ್ಲಿ 10ನೇ ತರಗತಿ ಓದುತ್ತಿರೋ ದಿಯಾಗೆ ಅಪ್ಪ, ಅಮ್ಮನೇ ಸ್ಪೂರ್ತಿ. ಕರಾಟೆಪಟು ಅಪ್ಪನ ಕರಾಟೆ ಮೇಲಿನ ಪ್ರೀತಿ ಮಗಳನ್ನು ಆಕರ್ಷಿಸಿತ್ತು. 4 ವರ್ಷದವಳಿರುವಾಗಲೇ ದಿಯಾ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಳು. ದಿಯಾಳ ಪ್ರತಿಭೆ ಕೇವಲ ಕರಾಟೆಯಲ್ಲೆ ಮುಗಿಯಲಿಲ್ಲ. ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ವಿಭಾಗದಲ್ಲಿ ತಾಂತ್ರಿಕ ಸಹಾಯಕನಾಗಿ ಕೆಲಸ ಮಾಡ್ತಿರೋ ಅಪ್ಪ ಶ್ರೀನಾಥ್ ಅರಸ್ ಮಗಳಿಗೆ ಪರ್ಸನಲ್ ಕೋಚ್ ಅಂದ್ರೆ ನೀವು ನಂಬಲೇಬೇಕು. ಚಿಕ್ಕಂದಿನಿಂದಲೂ ಮಗಳನ್ನು ಯಾವುದೇ ಭಯ ಇಲ್ಲದಂತೆ, ಹೆಚ್ಚು ಸ್ಪೋರ್ಟಿವ್ ಆಗಿ ಬೆಳೆಸಿದೋರು ಶ್ರೀನಾಥ್. ಈ ಪೋರಿಯ ಬಾಯಲ್ಲಿ ಕೇಳಿದ್ರು ತನ್ನ ಸಾಧನೆಯ ಕ್ರೆಡಿಟ್‍ಅನ್ನೆಲ್ಲಾ ಅಪ್ಪನಿಗೆ ಕೊಡ್ತಾಳೆ. ಅಪ್ಪನ ಆಸೆಯಂತೆ ಕರಾಟೆ ಕಲಿತ ದಿಯಾಗೆ, ಅಮ್ಮನ ಒಲವಿನ ನಟನೆಯಲ್ಲೂ ಆಸಕ್ತಿ ಬೆಳೆದಿತ್ತು. ಅದರಂತೆ ಸಾಕಷ್ಟು ಸ್ಟೇಜ್ ಶೋಗಳಲ್ಲೂ ಪರ್ಫಾರ್ಮ್ ಮಾಡಿದ್ದಾಳೆ ದಿಯಾ.

ಎಲ್ಲಕ್ಕೂ ಸೈ ಈ ಪುಟ್ಟ ಬಾಲೆ..!

ಸೈಕ್ಲಿಂಗ್, ಸಂಗೀತ, ಚಿತ್ರಕಲೆ, ಚಾರಣ, ಈಜು, ಕೃತಕ ಗೋಡೆ ಹತ್ತುವುದು, ಛಾಯಾಚಿತ್ರ ಹಾಗೂ ಸಾಹಸ ಕ್ರೀಡೆ ಈಕೆಯ ಪ್ರಮುಖ ಹವ್ಯಾಸಗಳು. ಕರಾಟೆ, ಕಿಕ್‍ಬಾಕ್ಸಿಂಗ್‍ಗಳನ್ನು ಸಾಧನೆಯ ಕ್ಷೇತ್ರ ಮಾಡಿಕೊಂಡಿರೋ ದಿಯಾ ಅದರಲ್ಲೇ ಮುಂದುವರಿಯೋ ಮನಸ್ಸಲ್ಲಿದ್ದಾಳೆ. ಕರಾಟೆಯಲ್ಲಿ 2ನೇ ಡಾನ್ ಬ್ಲ್ಯಾಕ್ ಬೆಲ್ಟ್ ಪಡೆದಿದ್ದು, ಕಿಕ್‍ಬಾಕ್ಸಿಂಗ್‍ನಲ್ಲೂ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾಳೆ. ದಿಯಾಳ ಸಾಧನೆಗಳನ್ನು ಕೇಳಿದ್ರೆ ನಿಮಗೆ ಆಶ್ಚರ್ಯ ಆಗಬಹುದು. ಹಣೆಯಿಂದ 1 ನಿಮಿಷದಲ್ಲಿ 31 ಮಂಗಳೂರು ಹೆಂಚು ಒಡೆದ ದೇಶದಲ್ಲೇ ಅತ್ಯಂತ ಕಿರಿಯ ಬಾಲಕಿ ಹಾಗೂ ಏಕೈಕ ಬಾಲಕಿ ಈಕೆ..!

ಹಲವು ಪ್ರಶಸ್ತಿಗಳ ಗರಿ

ವಾಕೊ ವರ್ಲ್ಡ್​  ಜ್ಯೂನಿಯರ್ ಕಿಕ್‍ಬಾಕ್ಸಿಂಗ್ ಚ್ಯಾಂಪಿಯನ್‍ಷಿಪ್‍ನ ಕೆ-1 ವಿಭಾಗದಲ್ಲಿ ಭಾರತವನ್ನು ಪ್ರ್ರತಿನಿಧಿಸುತ್ತಿರುವ ಕರ್ನಾಟಕದ ಪ್ರಥಮ ಹಾಗೂ ಏಕೈಕ ಬಾಲಕಿ. ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗೆ  ‘ಪ್ರತಿಭಾ ಪುರಸ್ಕಾರ’ ಪ್ರಶಸ್ತಿ. ಕರ್ನಾಟಕ ರಾಜ್ಯ ರಾಜ್ಯಪಾಲರಾದ ಶ್ರೀ ವಾಜುಬಾಯ್ ವಾಲಾ ಅವರಿಂದ ಗೈಡಿಂಗ್‍ನಲ್ಲಿ ಉತ್ತಮ ಸಾಧನೆಗಾಗಿ ಭಾರತ್ ಸ್ಕೌಟ್ಸ್ & ಗೈಡ್ಸ್​ನ ರಾಜ್ಯ ಪುರಸ್ಕಾರ. ವಾಕೊ ಇಂಡಿಯಾ ನ್ಯಾಷನಲ್ ಜ್ಯೂನಿಯರ್ ಕಿಕ್‍ಬಾಕ್ಸಿಂಗ್ ಚ್ಯಾಂಪಿಯನ್‍ಷಿಪ್‍ನ ಕೆ-1 ವಿಭಾದಲ್ಲಿ ಚಿನ್ನ ಪದಕ ಪಡೆದ ಕರ್ನಾಟಕದ ಪ್ರಥಮ ಮತ್ತು ಏಕೈಕ ಬಾಲಕಿ.

ಅಂತಾರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ 5 ಚಿನ್ನ, 3 ಬೆಳ್ಳಿ, 2 ಬಾರಿ ರಾಷ್ಟ್ರ ಮುಕ್ತ ಆಯುಧ ಕಟಾ ಚಾಂಪಿಯನ್. 8 ಬಾರಿ ರಾಷ್ಟ್ರ ಕಟಾ ಚಾಂಪಿಯನ್, 2 ಬಾರಿ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಗೆ ಕರ್ನಾಟಕ ರಾಜ್ಯವನ್ನು ಪತಿನಿಧಿಸಲು ಆಯ್ಕೆಯಾಗಿದ್ದಳು. 2007 ರಲ್ಲಿ ಝೀ-ಟಿವಿ ಆಯೋಜಿಸಿದ್ದ ಪ್ರಚಂಡ ಪುಟಾಣಿಗಳು ರಿಯಾಲಿಟಿ ಶೋ ಫೈನಲಿಸ್ಟ್. ಕರ್ನಾಟಕ ರಾಜ್ಯದಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಪ್ರಥಮ ಬಹುಮಾನ ಗಳಿಸಿ ನವದೆಹಲಿಯಲ್ಲಿ ಅಕ್ಟೋಬರ್ 2014 ರಂದು ನಡೆದ ರಾಷ್ಟ್ರ ಮಟ್ಟದ ಸಿ.ಬಿ.ಎಸ್.ಎ ವಿಜ್ಞಾನ ಪ್ರದರ್ಶನಕ್ಕೆ ಆಯ್ಕೆಯಾಗಿದ್ದಳು ದಿಯಾ. ವಾಕೊ ಇಂಡಿಯಾ ನ್ಯಾಷನಲ್ ಜ್ಯೂನಿಯರ್ ಕಿಕ್‍ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೊದಲ ಬಹುಮಾನ. ಇವುಗಳ ಜೊತೆ ಏಕ ವ್ಯಕ್ತಿ ನಟನೆ, ನೃತ್ಯ, ಶ್ಲೋಕ ಪಟನ, ಭಾವಗೀತೆ, ಸಮೂಹ ನೃತ್ಯ, ಪ್ರಶ್ನಾವಳಿ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ನಾಟಕ ಸ್ಪರ್ಧೆ ಉದ್ದ ಜಿಗಿತ, ಎತ್ತರ ಜಿಗಿತ, ವಾಲಿಬಾಲ್, ಥ್ರೋಬಾಲ್, ಒಂದಾ ಎರಡಾ ಈಕೆ ಸಾಧನೆ ಮಾಡದ ಕ್ಷೇತ್ರಗಳನ್ನು ಹುಡುಕೋದೆ ಕಷ್ಟ ಎನ್ನವಷ್ಟರ ಮಟ್ಟಕ್ಕೆ ದಿಯಾ ಅತಿ ಚಿಕ್ಕ ವಯಸ್ಸಲ್ಲೇ ಸಾಧನೆ ಮಾಡಿದ್ದಾಳೆ.

ಟಿವಿ ಶೋಗಳಲ್ಲೂ ನಂಬರ್​​ ವನ್​..!

ಝೀ-ಕನ್ನಡ ಟಿವಿ ಚಾನಲ್ ಏರ್ಪಡಿಸಿದ್ದ ‘ಪ್ರಚಂಡ ಪುಟಾಣಿ’ ಕಾರ್ಯಕ್ರಮಕ್ಕೆ ರಾಜ್ಯಾದಂತ ವಿವಿಧ ಕ್ಷೇತ್ರದ ಸಾಧನೆಗೆ ಆಯ್ಕೆಗೊಂಡ 24 ಮಕ್ಕಳಲ್ಲಿ ಈಕೆ ಕೂಡ ಒಬ್ಬಳು. ಈ ಟಿವಿ ಕನ್ನಡದ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್‍ನಲ್ಲೂ ಹೆಜ್ಜೆ ಹಾಕಿ, ಫೈನಲ್ ತಲುಪಿ ಗೋಲ್ಡನ್ ಹ್ಯಾಟ್ ಪಡೆದ ಖ್ಯಾತಿ ದಿಯಾಳಿಗೆ ಸಲ್ಲುತ್ತದೆ. ಈಕೆ ಸುವರ್ಣ ಟಿವಿಯ ಮಲ್ಟಿ ಟ್ಯಾಲೆಂಟ್ ಶೋ ಪುಟಾಣಿ ಪಂಟ್ರು ಕಾರ್ಯಕ್ರಮದ ಫೈನಲಿಸ್ಟ್ ಕೂಡ ಹೌದು. ಶಾಲೆ, ಓದು ಬಿಟ್ಟು ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡ್ರ್ರೆ ಮಕ್ಕಳು ಓದೋದಿಲ್ಲ ಅನ್ನೋರಿಗೆ ದಿಯಾ ಸ್ಪೂರ್ತಿಯಾಗ್ತಾಳೆ. ಸದ್ಯ 15 ವರ್ಷದ ಈ ದಿಯಾ ಅರಸ್ ಅಂತಾರಾಷ್ಟ್ರೀಯ ಕಿರಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸೋಕೆ ಸಿದ್ಧವಾಗ್ತಿದ್ದಾಳೆ. ಇದ್ರ ಜೊತೆ ಕರ್ನಾಟಕದಿಂದ ಆಯ್ಕೆಯಾದ ಮೊದಲ ಮಹಿಳಾ ಬಾಕ್ಸರ್ ಅನ್ನೋ ಕೀರ್ತಿಗೂ ಪಾತ್ರವಾಗಿದ್ದಾಳೆ. ಆಕೆಗೆ ಶುಭವಾಗಲಿ. 

ಇದನ್ನು ಓದಿ:

1. ಎಲ್ಲರಿಗೂ ಮಾದರಿ, ಭಾರತದಲ್ಲಿರುವ ಮೆಕ್ಸಿಕೋ ರಾಯಭಾರಿ!

2. "ಗ್ರೀನ್ ಬಯೋಟೆಕ್" ಚಿಕ್ಕಮಗಳೂರಿನ ಪಿಎಚ್​ಡಿ ಪದವೀಧರನ ಸಾಹಸ

3. ಸರಕು ಸಾಗಣಿಕೆಯ ಚಿಂತೆ ನಿಮಗೇಕೆ- ಪೋರ್ಟರ್​ ಆ್ಯಪ್​ನಲ್ಲಿ ಸಿಗುತ್ತೆ ಉತ್ತರ

Related Stories