ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ದೇಶದಲ್ಲಿ 3ನೇ ಸ್ಥಾನ

ಅಗಸ್ತ್ಯ

0

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲದೆ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಕೆಂಪೇಗೌಡ ವಿಮಾಣ ನಿಲ್ದಾಣ ದೇಶದ ಮೂರನೇ ದೊಡ್ಡ ವಿಮಾನ ನಿಲ್ದಾಣವಾಗಿ ಮಾರ್ಪಟ್ಟಿದೆ. ಇದಕ್ಕೆಲ್ಲಾ ಕಾರಣ ಬೆಂಗಳೂರಿನಿಂದ ದೇಶ-ವಿದೇಶಗಳಲ್ಲಿ ಹಾರಾಡಿದ ಪ್ರಯಾಣಿಕರ ಸಂಖ್ಯೆ. ಈ ವರ್ಷವೊಂದರಲ್ಲೇ 1.80 ಕೋಟಿ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ.

1,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜನರ ಸೇವೆಗೆ ದೊರಕಿದ್ದು 2008ರಲ್ಲಿ. ಈವರೆಗೆ 6 ಕೋಟಿಗೂ ಹೆಚ್ಚಿನ ಪ್ರಯಾಣಿಕರಿಗೆ ಸೇವೆ ನೀಡಿದೆ. ಆದರೆ ಈ ವರ್ಷದಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಈ ನಿಲ್ದಾಣದಿಂದ ವಿಮಾನಗಳು ಹೊತ್ತೊಯ್ದಿದ್ದು ಅದು ಬರೋಬ್ಬರಿ 1.8 ಕೋಟಿ ಜನರನ್ನು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಲಿಮಿಟೆಡ್ (ಬಿಐಎಎಲ್) ಪ್ರಕಟಿಸಿರುವ 2015ರ ವಾರ್ಷಿಕ ಸಾರಿಗೆ ಅಂಕಿ-ಅಂಶಗಳಲ್ಲಿ ಇದು ಬಹಿರಂಗವಾಗಿದೆ.

ಸ್ವದೇಶಿ-ವಿದೇಶಿ ಎರಡಲ್ಲೂ ಹೆಚ್ಚಳ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ವದೇಶ ಮತ್ತು ವಿದೇಶ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವದೇಶ ಪ್ರಯಾಣಿಕರ ಸಂಖ್ಯೆ ಶೇ. 27.4ರಷ್ಟು ಹೆಚ್ಚಳವಾಗಿದೆ. ಅದೇ ರೀತಿ ಅಂತಾರಾಷ್ಟ್ರೀಯ ಪ್ರಯಾಣ ಶೇ. 15.8 ಏರಿಕೆಯಾಗಿದೆ. ಒಟ್ಟಾರೆ ಪ್ರಯಾಣಿಕರ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ.25.2 ಹೆಚ್ಚಳವಾಗಿರುವುದು ದಾಖಲಾಗಿದೆ.

ಸರಾಸರಿ 50 ಸಾವಿರ ಪ್ರಯಾಣಿಕರು

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗಿಂತ ಸ್ವದೇಶಿ ಪ್ರಯಾಣಿಕರು ಹೆಚ್ಚಾಗಿ ಸಂಚರಿಸಿದ್ದಾರೆ. ಪ್ರಯಾಣಿಕರ ಓಡಾಟದ ಅನುಪಾತದಲ್ಲಿ ಸ್ವದೇಶಿ ಪ್ರಯಾಣಿಕರು ಶೇಕಡ 81.9ರಷ್ಟಿದ್ದರೆ, ವಿದೇಶಿ ಪ್ರಯಾಣಿಕರ ಸಂಖ್ಯೆಶೇಕಡ 18.1ರಷ್ಟಿದೆ. ಅಲ್ಲದೆ ಈ ವಿಮಾನ ನಿಲ್ದಾಣದಲ್ಲಿ ಪ್ರತಿದಿನ ಸರಾಸರಿ 50,500 ಪ್ರಯಾಣಿಕರು ಸಂಚರಿಸಿದ್ದಾರೆ. ಡಿಸೆಂಬರ್​​ 4ರಂದು ಒಂದೇ ದಿನ 63,769 ಪ್ರಯಾಣಿಕರು ಸಂಚರಿಸಿದ್ದು ಈವರೆಗಿನ ಹೆಚ್ಚಿನ ಪ್ರಯಾಣಿಕರು ಸಂಚರಿಸಿದ ದಾಖಲೆಯಾಗಿದೆ. ಹಾಗೆಯೇ ಡಿಸೆಂಬರ್​ 24 ರಂದು 457 ವಿಮಾನಗಳ ಆಗಮನ ಮತ್ತು ನಿರ್ಗಮನವಾಗಿರುವುದು ಹೆಚ್ಚು ವಿಮಾನಗಳ ಹಾರಾಟದ ದಾಖಲೆಯಾಗಿದೆ.

3ನೇ ದೊಡ್ಡ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ, ಮಾರ್ಗಗಳ ಸಂಖ್ಯೆ ಹಾಗೂ ಉತ್ತಮ ಸೇವಾ ಸೌಲಭ್ಯದ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಅತಿಹೆಚ್ಚು ಜನಸಂದಣಿ ವಿಮಾನನಿಲ್ದಾಣ ಮತ್ತು ಭಾರತದ ಮೂರನೇ ಅತಿದೊಡ್ಡ ವಿಮಾನನಿಲ್ದಾಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಾರಿಗೆ ಹಾಗೂ ವಾಯುಯಾನ ಪಾಲುದಾರಿಕೆಯಲ್ಲಿ ಮಾತ್ರವಲ್ಲ, ಪ್ರಯಾಣಿಕರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅನುಭವ ಒದಗಿಸಲು ಹೆಚ್ಚಿನ ಗಮನಹರಿಸಿದ್ದೇವೆ ಎಂದು ಬಿಐಎಎಲ್ ಅಧಿಕಾರಿಗಳು ಹೇಳುತ್ತಿದ್ದಾರೆ.

32ಕ್ಕೂ ಹೆಚ್ಚಿನ ವಿಮಾನಯಾನ ಸೇವೆ

ಈ ನಿಲ್ದಾಣಾದಲ್ಲಿ ಪ್ರತಿದಿನ ಏರ್ ಏಶಿಯಾ, ಏರ್ ಪೆಗಾಸಸ್, ಲುಫ್ತಾನ್ಸಾ ಸೇರಿದಂತೆ 32ಕ್ಕೂ ಹೆಚ್ಚಿನ ವಿಮನಯಾನ ಸಂಸ್ಥೆಗಳು ತಮ್ಮ ಸೇವೆಯನ್ನು ನೀಡುತ್ತಿವೆ. ಕೆಐಎಬಿಯಿಂದ ದೆಹಲಿ, ಮುಂಬೈ ಮತ್ತು ಪುಣೆ ನಗರಗಳಿಗೆ ಹೆಚ್ಚಿನ ಜನರು ಪ್ರಯಾಣಿಸಿದ್ದಾರೆ. ಪ್ರತಿದಿನ 44 ವಿಮಾನಗಳಿಂದ ದೇಶಾದ್ಯಂತ ಹಾಗೂ ಜಾಗತಿಕವಾಗಿ 67 ಸ್ಥಳಗಳಿಗೆ ಈ ನಿಲ್ದಾಣಗಳಿಂದ ಸೇವೆ ನೀಡುತ್ತಿವೆ. ಅದೇ ರೀತಿ ಸ್ಯಾನ್‍ಫ್ರಾನ್ಸಿಸ್ಕೋ, ಕಠ್ಮಂಡು, ಕೊಲಂಬೋ, ಕುವೈತ್, ಕೌಲಾಲಂಪುರ, ಅಬುದಾಬಿ ಸೇರಿದಂತೆ 20ಕ್ಕೂ ಹೆಚ್ಚಿನ ವಿದೇಶಗಳಿಗೆ ಹಾಗೂ ದೆಹಲಿ, ಹೈದರಾಬಾದ್, ಚೆನೈ, ಅಹಮದಾಬಾಅದ್‍ನಂತಹ ದೇಶಿ ನಗರಗಳಿಗೆ ಕಾರ್ಗೋ ಸೇವೆಯನ್ನು ನೀಡಲಾಗುತ್ತಿದೆ. ಈ ರೀತಿಯ ಸೇವೆ ಹೀಗೆ ಮುಂದುವರೆಸುವುದಾಗಿ ಬಿಐಎಎಲ್ ಅಧಿಕಾರಿಗಳು ಹೇಳುತ್ತಾರೆ.