ಕುರಿಗಳಿವೆಯಾ...? Olx ನಲ್ಲಿ ಮಾರಿಬಿಡಿ..!

ಕೃತಿಕಾ

0

ಈಗೇನಿದ್ದರೂ ಆನ್​​​ಲೈನ್ ಜಮಾನ. ಕುಡಿಯೋ ನೀರಿನಿಂದ ಹಿಡಿದು ಎಲ್ಲವೂ ಈಗ ಆನ್​​ಲೈನ್​​ನಲ್ಲೇ ಸಿಗುವ ಜಮಾನ. ಮಾರ್ಕೆಟ್​​ಗೆ ಹೋಗಿ ವ್ಯಾಪಾರ, ವ್ಯವಹಾರ ಮಾಡುವ ಕಾಲ ಈಗಿಲ್ಲ. ಕೈಯಲ್ಲಿ ಮೊಬೈಲ್ ಹಿಡಿದು ಬೆರಳ ತುದಿಯಲ್ಲೇ ಎಲ್ಲವೂ ಮನೆ ಬಾಗಿಲಿಗೆ ತರಿಸಿಕೊಳ್ಳೋದು ಈಗಿನ ಟ್ರೆಂಡ್. ಈ ಟ್ರೆಂಡ್ ಗೆ ಹೊಸ ಸೇರ್ಪಡೆ ಕುರಿಗಳ ಮಾರಾಟ. ಹೌದು OLX, ಕ್ವಿಕರ್ ಸೈಟ್ ಗಳಲ್ಲಿ ನೀವೀಗ ಮೇಕೆ, ಕುರಿಗಳ ಕೊಳ್ಳುವ, ಮಾರುವ ಮೂಲಕ ಸುಲಭವಾಗಿ ಹಣ ಗಳಿಸಬಹುದು. ಈ ಬಾರಿ ಬಕ್ರೀದ್ ಸಮಯದಲ್ಲಿ ಆನ್ ಲೈನ್ ಮಾರಾಟ ಹೆಚ್ಚಾಗಿದೆ. ಓಎಲ್​​ಎಕ್ಸ್​​ನಲ್ಲಿ ತಳಿ ಮತ್ತು ತೂಕದ ಆಧಾರದ ಮೇಲೆ 5 ಸಾವಿರದಿಂದ ಒಂದು ಲಕ್ಷದ ವರೆಗೆ ಕುರಿಗಳ ಮಾರಾಟ ನಡೆಯುತ್ತದೆ. ಕೆಲವು ಮಾರಾಟಗಾರರು ಕುರಿಗಳ ಪೋಟೊಗಳನ್ನು ಹಾಕಿ ದಿನವೊಂದಕ್ಕೆ ಹತ್ತರಿಂದ ಹದಿನೈದು ಕುರಿಗಳನ್ನು ಮಾರಟ ಮಾಡುತ್ತಾರೆ.

ವಿಲ್ಸನ್ ಗಾರ್ಡನ್​​ನ ಲಕ್ಷ್ಮಣ್ ನಿಯಮಿತವಾಗಿ ಆನ್​​ಲೈನ್ ಕುರಿಗಳ ಮಾರಾಟ ಮಾಡುತ್ತಿದ್ದಾರೆ. ಬನ್ನೂರು ಮತ್ತು ಕಿರುಗಾವಲು ಸೇರಿ ಹಲವೆಡೆ ನಡೆಯುವ ಸಂತೆಗಳಲ್ಲಿ ಕುರಿಗಳನ್ನು ಕೊಂಡು ಬೆಂಗಳೂರಿಗೆ ತರುತ್ತಾರೆ. ಆ ನಂತ್ರ ಓಎಲ್​​ಎಕ್ಸ್​​​ನಲ್ಲಿ ಹಾಕಿ ಕುರಿಗಳನ್ನು ಮಾರಾಟ ಮಾಡ್ತಾರೆ. ಈ ಬಗ್ಗೆ ಯೂವರ್​​ಸ್ಟೋರಿ ಕನ್ನಡ, ಲಕ್ಷ್ಮಣ್ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು. ಈಗ ಎಲ್ಲರಿಗೂ ಸುಲಭವಾಗಿ ಶಾಪಿಂಗ್ ಮಾಡಬೇಕು ಅನ್ನಿಸುತ್ತದೆ. ಸಮಯದ ಅಭಾವದಿಂದ ಕುಳಿತಲ್ಲೇ ಆನ್​​​ಲೈನ್ ಮೂಲಕ ವ್ಯಾಪಾರ, ವಹಿವಾಟು ಮಾಡ್ತಾರೆ. ನಾನು ಆರಂಭದಲ್ಲಿ ಅನುಮಾನದಲ್ಲೇ ಓಎಲ್​​​ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದೆ. ಆದ್ರೆ ನನಗೆ ಅಲ್ಲಿಂದ ಉತ್ತಮ ಪ್ರತಿಕ್ರಿಯೆ ಸಿಕ್ತು. ಅದರ ಜೊತೆಗೆ ಮಾರಟವೂ ಕೂಡ ಜಾಸ್ತಿ ಆಯ್ತು. ಈಗ ನಾನು ಆನ್ ಲೈನ್ ಮೂಲ ದಿನವೊಂದಕ್ಕೆ ಹತ್ತು ಕುರಿಗಳನ್ನು ಮಾರಾಟ ಮಾಡುತ್ತೇನೆ ಎಂದು ಸಂತಸ ಹಂಚಿಕೊಂಡರು.

ಆನ್ ಲೈನ್ ನಲ್ಲಿ ಕುರಿಗಳನ್ನು ಕೊಳ್ಳಲು ಬಯಸುವವರು ಜಾಹೀರಾತು ನೋಡಿ ಕುರಿಗಳ ಬೆಲೆಯ ಬಗ್ಗೆ ವ್ಯವಹಾರ ಕುದುರಿಸಬಹುದು. ಕುರಿಗಳನ್ನು ಪ್ರತ್ಯಕ್ಷವಾಗಿ ನೋಡಬೇಕೆಂದರೆ ಗ್ರಾಹಕರು ಇದ್ದಲ್ಲಿಗೇ ಕುರಿಗಳನ್ನು ಕರೆದೊಯ್ದು ಕೊಳ್ಳುವವರಿಗೆ ತೋರಿಸಲಾಗುತ್ತದೆ. ಆದ್ರೆ ಕೆಲವೊಮ್ಮೆ ಜನರು ಕೊಳ್ಳದೇ ಹಾಗೆಯೇ ಕಳಿಸುತ್ತಾರೆ. ಆಗ ಬೇಜಾರಾಗುತ್ತದೆ. ಆದ್ರೆ ವ್ಯವಹಾರದಲ್ಲಿನಿದೆಲ್ಲವೂ ಮಾಮೂಲಿ ಅಂತಾರೆ ಮತ್ತೊಬ್ವ ಕುರಿ ಆನ್ ಲೈನ್ ಮಾರಾಟಗಾರ ಪ್ರಕಾಶ್.

ಒಟ್ಟಿನಲ್ಲಿ ಈಗ ಕುರಿಗಳಿಗೂ ಕಾಲ ಬಂದಿದೆ. ಆನ್ ಲೈನ್ ಭಾಗ್ಯದಿಂದ ಕುರಿ ಮಾರಾಟಗಾರರೂ ಕೂಡ ಹೆಚ್ಚಿನ ಹಣ ಗಳಿಸ್ತಾಯಿದ್ರೆ, ಕುಲಿತಲ್ಲೇ ಮನೆಯ ಮುಂದೆ ಕುರಿ ತರಿಸಿಕೊಳ್ಳುವ ಭಾಗ್ಯ ಮಾಂಸ ಪ್ರಿಯರಿಗೆ ಸಿಕ್ಕಿದೆ.

Related Stories