ಸಾವಯವ ಕೃಷಿಯಲ್ಲಿ ಹೊಸ ಶಖೆ- ಇದು ನ್ಯಾಚುರಲಿ ಯುವರ್ಸ್ ಯಶಸ್ಸಿನ ಗಾಥೆ

ಟೀಮ್​​ ವೈ.ಎಸ್​​.

0

ಸಾವಯವ ಹಾಗೂ ನೈಸರ್ಗಿಕ ಪದಾರ್ಥಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆಯಿದೆ. ಇದನ್ನು ಮನಗಂಡು ಈ ವಲಯದಲ್ಲಿ ಸಾಕಷ್ಟು ಹೊಸ ಹೊಸ ಕಂಪನಿಗಳು ತಲೆಯೆತ್ತುತ್ತಿವೆ. ಹೀಗಾಗಿಯೇ ಈ ವರ್ಷಾಂತ್ಯಕ್ಕೆ ಸಾವಯವ ಉತ್ಪನ್ನಗಳ ಮಾರುಕಟ್ಟೆ ಮೌಲ್ಯ 1 ಬಿಲಿಯನ್ ಡಾಲರ್ ಮುಟ್ಟುವ ನಿರೀಕ್ಷೆಯಿದೆ. 24 ಮಂತ್ರ, ಫಲಾಡ, ಕಾನ್ಷಿಯಸ್ ಫುಡ್ ಮತ್ತು ಆರ್ಗಾನಿಕ್ ತತ್ವದಂತಹ ಸಂಸ್ಥೆಗಳು ಸಾವಯವ ಉತ್ಪನ್ನಗಳಿಗೆ ಹೊಸ ರೂಪ ನೀಡಿವೆ.

ಗ್ರಾಹಕರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅದರಂತೆ ಅವರಿಗೆ ಉತ್ತಮ ಉತ್ಪನ್ನ ನೀಡುವ ಪ್ರಯತ್ನ ನಡೆಸುತ್ತಿರುವುದು ನ್ಯಾಚುರಲಿ ಯುವರ್ಸ್ ಸಂಸ್ಥೆಯ ಯಶಸ್ಸಿಗೆ ಕಾರಣ. ಅಂದ್ಹಾಗೆ, ನ್ಯಾಚುರಲಿ ಯುವರ್ಸ್ ಪ್ರಾರಂಭವಾಗಿದ್ದು ಫೆಬ್ರವರಿ 2010ರಲ್ಲಿ. ವಿನೋದ್ ಕುಮಾರ್ ಮತ್ತು ಪ್ರಿಯಾ ಪ್ರಕಾಶ್, ಸಾವಯವ ಹಾಗೂ ನೈಸರ್ಗಿಕ ಆಹಾರ ಉತ್ಪನ್ನಗಳನ್ನು ಒಂದೇ ಸೂರಿನಡಿ ಗ್ರಾಹಕರಿಗೆ ಒದಗಿಸಲು ಪ್ರಾರಂಭಿಸಿದ ಸಂಸ್ಥೆಯಿದು. ಕೇವಲ ಒಂದು ಆಲೋಚನೆ ಇವತ್ತು ಅಕ್ಕಿ, ಬೇಳೆ, ಪೊಂಗಲ್ ಮಿಶ್ರಣ, ಖೀರು ಮಿಶ್ರಣ ಸೇರಿದಂತೆ 100ಕ್ಕೂ ಹೆಚ್ಚು ಉತ್ಪನ್ನಗಳನ್ನು ಒಳಗೊಂಡು ಇ-ಕಾಮರ್ಸ್ ಉದ್ಯಮದ ರೂಪ ಪಡೆದಿದೆ.

ಯುಕೆ (ಬ್ರಿಟನ್‍ನಲ್ಲಿ) ಎಮ್‍ಬಿಎ ಶಿಕ್ಷಣ ಮುಗಿಸಿ ವಿನೋದ್ ಭಾರತಕ್ಕೆ ವಾಪಸ್ಸಾದಾಗ, ಇಲ್ಲಿ ಸಾವಯವ ಆಹಾರೋತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳು ತುಂಬಾ ಕಡಿಮೆ ಇರುವುದನ್ನು ಮನಗಂಡರು. ಇದೇ ನ್ಯಾಚುರಲಿ ಯುವರ್ಸ್ ಪ್ರಾರಂಭಕ್ಕೆ ಮುನ್ನುಡಿ ಬರೆಯಿತು. ಈ ಮೂಲಕ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಒಂದೇ ವೇದಿಕೆ ಕಲ್ಪಿಸಿದ್ದಾರೆ ವಿನೋದ್. ಮೊದಲಿಗೆ ಕೇವಲ 5 ಲಕ್ಷ ರೂಪಾಯಿ ಬಂಡವಾಳದೊಂದಿಗೆ ಮುಂಬೈನಲ್ಲಿ 150 ಚದರ ಅಡಿಯ ಸಣ್ಣ ಸಂಗಡಿಯೊಂದರಲ್ಲಿ ಕಂಪನಿ ಪ್ರಾರಂಭವಾಯ್ತು. ದಿನಕ್ರಮೇಣ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಕಾರಣ ಮುಂಬೈನಲ್ಲೇ ಅಂಗಡಿಗಳ ಸಂಖ್ಯೆಯೂ ಮೂರಕ್ಕೆ ಏರಿತು. ಆದ್ರೆ ಅದೃಷ್ಟ ಇವರ ಕೈ ಕೊಟ್ಟ ಪರಿಣಾಮ ಉತ್ಪನ್ನಗಳ ಮಾರಾಟ ಕುಂಠಿತವಾಯ್ತು. ಇದರಿಂದಾಗಿ ವೆಚ್ಚದಲ್ಲಿ ಏರಿಕೆ ಹಾಗೂ ಲಾಭದಲ್ಲಿ ಇಳಿಕೆಯಾಗಿ, ವಿನೋದ್ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳಬೇಕಾಯ್ತು.

ಹೀಗಾಗಿಯೇ 2014ರಲ್ಲಿ ನ್ಯಾಚುರಲಿ ಯುವರ್ಸ್ ಇ-ಕಾಮರ್ಸ್ ಕಂಪನಿಯಾಗಿ ಹೊಸ ರೂಪ ಪಡೆಯಿತು. www.naturallyyours.in ಎಂಬ ವೆಬ್‍ಸೈಟ್ ಕೂಡ ಪ್ರಾರಂಭವಾಯ್ತು. ಈ ಮೂಲಕ ಎಲ್ಲಾ ರಾಜ್ಯಗಳಿಗೂ ಕಂಪನಿಯನ್ನು ವಿಸ್ತರಿಸಲಾಯ್ತು.

ಉದ್ಯೋಗ ಸೃಷ್ಟಿ

ನ್ಯಾಚುರಲಿ ಯುವರ್ಸ್ ದೇಶದಾದ್ಯಂತ ಸಾವಯವ ಕೃಷಿಕರೊಂದಿಗೆ ಕೈಜೋಡಿಸಿ, ಅವರಿಗೆ ಮಾರುಕಟ್ಟೆ ಒದಗಿಸಿದೆ. ರೈತರಿಂದ ಉತ್ಪನ್ನಗಳನ್ನು ಖರೀದಿಸಿ ನ್ಯಾಚುರಲಿ ಯುವರ್ಸ್ ಬ್ರಾಂಡ್‍ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಯಾವುದೋ ಮೂಲೆಯಲ್ಲಿ ಬೆಳೆಯುವ ಆಹಾರೋತ್ಪನ್ನ ಹಾಗೂ ರೈತರಿಗೆ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಮೆಕ್ಕೆ ಜೋಳ ಬೆಳೆಯಲಾಗುತ್ತೆ. ಅಲ್ಲಿನ ರೈತರನ್ನು ಸಂಪರ್ಕಿಸಿದ ವಿನೋದ್ ಅವರಿಂದ ಜೋಳ ಖರೀದಿಸಿ ತಮ್ಮ ಕಂಪನಿ ಮೂಲಕ ಮಾರಾಟ ಮಾಡತೊಡಗಿದರು. ದಿನಕ್ರಮೇಣ ಗ್ರಾಹಕರಿಗೆ ಈ ಉತ್ಪನ್ನ ಇಷ್ಟವಾಗತೊಡಗಿತು. ಈ ಮೂಲಕ ಮಾರಾಟವೂ ಜಾಸ್ತಿಯಾಯ್ತು. ಈಗ ರೈತರು ಬೆಳೆದ ಜೋಳಕ್ಕೂ ಒಳ್ಳೆ ಬೆಲೆ ಸಿಗುತ್ತಿದೆ, ನ್ಯಾಚುರಲಿ ಯುವರ್ಸ್‍ಗೂ ಲಾಭವಾಗುತ್ತಿದೆ ಹಾಗೂ ಗ್ರಾಹಕರೂ ಸಂತೃಪ್ತರಾಗಿದ್ದಾರೆ.

ಮೊದಲಿಗೆ ಉತ್ಪನ್ನಗಳ ಗುಣಮಟ್ಟ ಹಾಗೂ ನೈಜತೆಗೆ ಸಂಬಂಧಿಸಿದಂತೆ ವಿನೋದ್ ಮತ್ತು ಪ್ರಿಯ ಹಲವು ಸವಾಲುಗಳನ್ನು ಎದುರಿಸಬೇಕಾಯ್ತು. ನ್ಯಾಚುರಲಿ ಯುವರ್ಸ್ ಬ್ರಾಂಡ್‍ಅನ್ನು ಕಟ್ಟಲು ಸಾಕಷ್ಟು ಬೆವರು ಹರಿಸಬೇಕಾಯ್ತು. ಗ್ರಾಹಕರ ವರ್ತನೆ, ಹೂಡಿಕೆ, ಬಂಡವಾಳ, ಉದ್ಯಮದ ಕುರಿತ ಆಲೋಚನೆಯನ್ನು ಅತ್ಯುತ್ತಮ ರೀತಿಯಲ್ಲಿ ಕಾರ್ಯರೂಪಕ್ಕೆ ತರಲು ಹೆಣಗಾಡಿದ್ದಾರೆ.

ವಿಶೇಷ ಅಂದ್ರೆ ತಮ್ಮ 26ನೇ ವಯಸ್ಸಿಗೇ ಬೇರೆ ಬೇರೆ ಉದ್ಯಮಗಳ ಕಾರ್ಯವೈಖರಿ ಬಗ್ಗೆ ವಿನೋದ್ ಸಾಕಷ್ಟು ಅನುಭವ ಪಡೆದಿದ್ದರು. ನ್ಯಾಚುರಲಿ ಯುವರ್ಸ್ ಪ್ರಾರಂಭಕ್ಕೂ ಮುನ್ನ ವಿನೋದ್, ಗ್ಲೋಬಲ್ ಗ್ರೂಪ್‍ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ 3 ವಿಭಾಗಗಳ 300ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅವರು ಮಾರ್ಗದರ್ಶನ ನೀಡುತ್ತಿದ್ದರು. ಪ್ರಿಯಾ ಕೂಡ ಆಂಥಮ್ ಬಯೋಸೈನ್ಸ್​​​ನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ರು.

ನ್ಯಾಚುರಲಿ ಯುವರ್ಸ್‍ನಲ್ಲಿ ವಿನೋದ್ ಹಾಗೂ ಪ್ರಿಯಾ ಸೇರಿದಂತೆ ಕೇವಲ 8 ಜನರ ಪುಟ್ಟ ತಂಡವಿದೆ. ಪ್ರಿಯಾ ಹೊಸ ಉತ್ಪನ್ನಗಳ ಅಭಿವೃದ್ಧಿ ಹಾಗೂ ರೈತರು ಮತ್ತು ಮಾರಾಟಗಾರರ ನಡುವಿನ ಬಾಂಧವ್ಯ ವೃದ್ಧಿಸುವತ್ತ ಗಮನ ಹರಿಸುತ್ತಾರೆ. ಇನ್ನು ವಿನೋದ್ ಉತ್ಪನ್ನಗಳ ಮಾರಾಟ, ಬಂಡವಾಳ ಹಾಗೂ ಮಾರ್ಕೆಟಿಂಗ್ ವಿಭಾಗಗಳನ್ನು ನೋಡಿಕೊಳ್ಳುತ್ತಾರೆ.

ಇನ್ನು ಕಂಪನಿ ಮಾಲೀಕತ್ವದ ಕುರಿತು ಮಾತನಾಡುವ ವಿನೋದ್, ‘ನ್ಯಾಚುರಲಿ ಯುವರ್ಸ್‍ನ ಅತ್ಯುತ್ತಮ ಭಾಗವೆಂದ್ರೆ, ಕಂಪನಿಯ ಮಾಲೀಕತ್ವ. ಇದರಿಂದಾಗಿಯೇ ಕಳೆದ 5 ವರ್ಷಗಳಿಂದ ಇಲ್ಲಿಯವರೆಗೂ ನಮ್ಮ ನಡುವೆ ಯಾವುದೇ ಸಂಘರ್ಷ ನಡೆದಿಲ್ಲ’ ಅಂತಾರೆ.

ಮಾರಾಟ

ಕಳೆದ ವರ್ಷ ನ್ಯಾಚುರಲಿ ಯುವರ್ಸ್ 1.40 ಕೋಟಿ ರೂಪಾಯಿಯಷ್ಟು ವಹಿವಾಟು ನಡೆಸಿತ್ತು. ಈ ವರ್ಷ 5 ಕೋಟಿ ರೂಪಾಯಿ ದಾಟುವ ನಿರೀಕ್ಷೆಯಿದೆ. ಪ್ರತಿ ತಿಂಗಳು ತಮ್ಮ ವೆಬ್‍ಸೈಟ್, ಅಮೇಜಾನ್, ಫ್ಲಿಪ್‍ಕಾರ್ಟ್ ಹಾಗೂ ಬೇರೆ ಇ-ಕಾಮರ್ಸ್ ತಾಣಗಳ ಮೂಲಕ 2000 ಆರ್ಡರ್‍ಗಳನ್ನು ಪೂರೈಸಲಾಗುತ್ತಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು 10000 ಆರ್ಡರ್‍ಗಳನ್ನು ತಲುಪುವ ಗುರಿ ಕಂಪನಿಯದು. ಹೀಗೆ ಆನ್‍ಲೈನ್‍ನಲ್ಲಿ ಸಿಕ್ಕ ಯಶಸ್ಸಿನಿಂದ ಸ್ಫೂರ್ತಿ ಪಡೆದಿರುವ ನ್ಯಾಚುರಲಿ ಯುವರ್ಸ್, ಭವಿಷ್ಯದಲ್ಲಿ ಐದಾರು ನಗರಗಳಲ್ಲಿ ಆಧುನಿಕ ಸಾವಯವ ಕೃಷಿ ಆಹಾರ ಉತ್ಪನ್ನಗಳ ಅಂಗಡಿಗಳನ್ನು ಪ್ರಾರಂಭಿಸುವ ಯೋಜನೆ ರೂಪಿಸಿದೆ.

‘ಮುಂದಿನ ಎರಡು, ಮೂರು ವರ್ಷಗಳಲ್ಲಿ ನ್ಯಾಚುರಲಿ ಯುವರ್ಸ್‍ಅನ್ನು 100 ಕೋಟಿ ಕಂಪನಿಯನ್ನಾಗಿ ಅಭಿವೃದ್ಧಿ ಪಡಿಸುವುದು ಹಾಗೂ 200ಕ್ಕೂ ಹೆಚ್ಚು ಉತ್ಪನ್ನಗಳಿಗೆ ಮಾರುಕಟ್ಟೆ ನೀಡುವುದು ನಮ್ಮ ಗುರಿ’ ಅಂತ ತಮ್ಮ ಭವಿಷ್ಯದ ಯೋಜನೆಗಳನ್ನು ಬಿಚ್ಚಿಡುತ್ತಾರೆ ವಿನೋದ್.

Related Stories