ಮಂಡ್ಯದ ಕಬ್ಬು ಸಿಹಿಯೋ ಸಿಹಿ

ಟೀಮ್​ ವೈ.ಎಸ್​.ಕನ್ನಡ

ಮಂಡ್ಯದ ಕಬ್ಬು ಸಿಹಿಯೋ ಸಿಹಿ

Wednesday February 03, 2016,

3 min Read

ಮಂಡ್ಯ ಜಿಲ್ಲೆಯ ಅವಲೋಕನ

image


ಭಾರತದ ಮೊಟ್ಟಮೊದಲ ಜಲವಿದ್ಯುತ್ ಯೋಜನೆ ಶುರುವಾಗಿದ್ದು ಮಂಡ್ಯದಲ್ಲಿ. ಕರ್ನಾಟಕದ ಅತ್ಯಂತ ಹಳೆಯ ಸಕ್ಕರೆ ಕಾರ್ಖಾನೆ ಇರುವುದು ಮಂಡ್ಯದಲ್ಲಿ. ಜಿಲ್ಲೆಯ ಸಮೃದ್ಧ ಪರಂಪರೆ, ಪ್ರಮುಖ ವ್ಯಕ್ತಿಗಳು ಮಂಡ್ಯದ ಅಭಿವೃದ್ಧಿಗೆ ಪೂರಕವಾಗಿದೆ. ಕರ್ನಾಟಕ ಸರ್ಕಾರ ಪ್ರಸ್ತಾವಿತ ಸಕ್ಕರೆ ವಲಯ ಇಲ್ಲಿ ಬರಲಿದ್ದು ರೇಷ್ಮೆಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದೆ. ಸುಮಾರು 40 ಸಾವಿರ ರೇಷ್ಮೆ ಬೆಳೆಗಾರರು ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯ ಪಡೆಯುತ್ತಿದ್ದಾರೆ. ಮಂಡ್ಯದಲ್ಲಿ ಕೆ.ಆರ್.ಪೇಟೆ, ಮದ್ದೂರು, ಮಳವಳ್ಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲ್ಲೂಕುಗಳಿವೆ. ಇಲ್ಲಿನ ಸಾಕ್ಷರತೆ ಪ್ರಮಾಣ 70.40%.

ಆರ್ಥಿಕ ಸ್ಥಿತಿಗತಿ: ಮಂಡ್ಯದ ಒಟ್ಟು ಜಿಡಿಪಿ ರೂ 58.48 ಶತಕೋಟಿ ಇದ್ದು ರಾಜ್ಯದ ಜಿಎಸ್ಡಿಪಿಗೆ ಇದರ ಕಾಣಿಕೆ 2% ಆಗಿದೆ. 2007-08 ರಿಂದ 2012-13ರ ವರೆಗಿನ ಜಿಡಿಡಿಪಿ ಟ್ರೆಂಡ್ 6.5% ಸಿಎಜಿಆರ್ ದರದಲ್ಲಿ ಬೆಳವಣಿಗೆ ಕಾಣುತ್ತಿದೆ.

ಕೃಷಿಯತ್ತ ಗಮನ: ವ್ಯವಸಾಯ ಮಂಡ್ಯದ ಪ್ರಮುಖ ಕ್ಷೇತ್ರ. ರೇಷ್ಮೆ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣ ಘಟಕಗಳು ಇಲ್ಲಿ ಪ್ರಮುಖವಾಗಿದೆ ಮಂಡ್ಯದಲ್ಲಿ ಒಟ್ಟು 33.91% ಬಿತ್ತನೆ ಭೂಮಿಯಿದ್ದು ಇದರಲ್ಲಿ ರಾಗಿ, ಭತ್ತ, ಜೋಳ, ನವಣೆಯನ್ನು ಮುಖ್ಯ ಬೆಳೆಯಾಗಿ 45.71% ಭೂಮಿಯಲ್ಲಿ ಬೆಳೆಯಲಾಗುತ್ತಿದೆ. ವಾಣಿಜ್ಯ ಬೆಳೆಗಳಾದ ಕಬ್ಬು, ತೆಂಗು ಅಡಿಕೆ ಹಾಗೂ ಧಾನ್ಯಗಳಾದ ಹೆಸರುಕಾಳು, ಅಲಸಂದಿ, ತೊಗರಿ ನಂತರದ ಸ್ಥಾನ ಪಡೆದುಕೊಂಡಿದೆ. ಎಣ್ಣೆ ಬೀಜ, ತರಕಾರಿ, ಹೂ-ಹಣ್ಣುಗಳನ್ನು ಇಲ್ಲಿ ಬೆಳೆಯಲಾಗುತ್ತದೆ.

ಕೈಗಾರಿಕಾ ಭೂ ಸಮೀಕ್ಷೆ: ಕೃಷಿ ಮತ್ತು ಆಹಾರ ಸಂಸ್ಕರಣೆ ಉದ್ಯಮವು ಮಂಡ್ಯ ಜಿಲ್ಲೆಯುಲ್ಲಿ ಅಭಿವೃದ್ಧಿ ಹೊಂದುತ್ತಿದೆ. ದಿನಕ್ಕೆ 5 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯದ ಹಳೆಯ ಸಕ್ಕರೆ ಕಾರ್ಖಾನೆ ಇಲ್ಲಿಯೇ ಇದೆ. ಇಲ್ಲಿನ ಸಕ್ಕರೆ ಕಾರ್ಖಾನೆಗಳಲ್ಲಿ 26 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನೂ, 10 ಲಕ್ಷ ಮೆಟ್ರಿಕ್ ಟನ್ ಬೆಲ್ಲವನ್ನೂ ವಾರ್ಷಿಕವಾಗಿ ಉತ್ಪಾದನೆ ಮಾಡಲಾಗುತ್ತದೆ. 35 ಅಕ್ಕಿ ಗಿರಣಿ, 4 ಸಕ್ಕರೆ ಕಾರ್ಖಾನೆ ಮತ್ತು ಬೆಲ್ಲ ಉತ್ಪಾದನಾ ಘಟಕಗಳ ಸಮೂಹ ಮಂಡ್ಯವನ್ನು ಪ್ರಮುಖ ಸಣ್ಣ ಕೈಗಾರಿಕೆಗಳ ತಾಣವನ್ನಾಗಿ ಮಾಡಿದೆ. 22 ತಾಂತ್ರಿಕ ಕೇಂದ್ರಗಳ ಸಹಾಯದಿಂದ ಸುಮಾರು 40ಸಾವಿರ ಕೃಷಿಕರು 24 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಸೊಪ್ಪು ಬೆಳೆಯುತ್ತಿದ್ದಾರೆ. ಕೈಮಗ್ಗದಲ್ಲೂ ಮಂಡ್ಯ ಹಿಂದೆ ಬಿದ್ದಿಲ್ಲ. ಆಧುನಿಕ ಸ್ವಯಂಚಾಲಿತ ನೂಲು ಯಂತ್ರದ ಪರಿಚಯದೊಂದಿಗೆ ಇಲ್ಲಿನ ಜನರು ತಮ್ಮ ಉದ್ದಿಮೆಯನ್ನು ಬಲಗೊಳಿಸಿಕೊಂಡಿದ್ದಾರೆ. ಗೋಕುಲ್​ದಾಸ್​, ಶಾಹಿ ಎಕ್ಸ್​ಪೋರ್ಟ್ಸ್​ಗಳಂತಹ ದೈತ್ಯ ಜವಳಿ ಉದ್ದಿಮೆಗಳು ಇಲ್ಲಿವೆ.

30 ಶತಕೋಟಿ ರೂಪಾಯಿ ಹೂಡಿಕೆಯೊಂದಿಗೆ 15 ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ ಇಲ್ಲಿದೆ. ಜತೆಗೆ ರೂ 1.6 ಶತಕೋಟಿ ಹೂಡಿಕೆಯಲ್ಲಿ 3,689 ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು 4 ಕೈಗಾರಿಕಾ ಪ್ರದೇಶ ಮತ್ತು 6 ಕೈಗಾರಿಕಾ ಎಸ್ಟೇಟ್​ಗಳಲ್ಲಿ ಬದುಕು ಕಟ್ಟಿಕೊಂಡಿವೆ. ಆರೋಮ್ಯಾಟಿಕ್, ಆಯುರ್ವೇದ ಔಷಧಿ, ಟೂಲ್ಸ್ ಮತ್ತು ಡೈ, ಹೈಟೆಕ್ ಬಸ್ ಬಾಡಿ ಬಿಲ್ಡಿಂಗ್ ಮತ್ತು ಎಳನೀರು ಟೆಟ್ರಾ ಪ್ಯಾಕಿಂಗ್ ಉದ್ಯಮ ಇಲ್ಲಿ ಕಾರ್ಯೋನ್ಮುಖವಾಗಿದೆ.

ಮೂಲ ಸೌಕರ್ಯ ಮತ್ತು ಸಂಪನ್ಮೂಲಗಳು

ಭೂಮಿ ಮತ್ತು ಮಣ್ಣು: ಮಂಡ್ಯದಲ್ಲಿ ವ್ಯವಸಾಯಕ್ಕೆ 33.91% ಭೂಮಿ ಉಪಯೋಗವಾಗಿದೆ. 27.53% ಕೃಷಿಮಾಡದ ಜಮೀನು, 4.26% ಅರಣ್ಯ ಭೂಮಿಯಿದೆ. ಗ್ರಾನೈಟ್, ಕಲ್ಲು, ಮರಳು ಇಲ್ಲಿ ಸಿಗುವ ಇತರೆ ಪ್ರಮುಖ ವಸ್ತುಗಳು.

ಜಲಾಶಯಗಳು: ಮಂಡ್ಯಕ್ಕೆ ಕಾವೇರಿ ಜೀವನದಿ. ಕೃಷ್ಣ ಸಾಗರ ಅಣೆಕಟ್ಟೆಯ ಮೂಲಕ ಕೃಷಿ ಬಳಕೆಗಾಗಿ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತದೆ. ವರ್ಷದ ಎಲ್ಲ ದಿನವೂ ಇಲ್ಲಿ ನೀರಿಗೆ ಬರ ಇಲ್ಲ. ಇದರಿಂದಲೇ ಸಮೃದ್ಧ ಭತ್ತ ಮತ್ತು ಕಬ್ಬನ್ನು ಇಲ್ಲಿ ಬೆಳೆಯಲಾಗುತ್ತದೆ. ಇಲ್ಲಿನ ಪ್ರಮುಖ ನದಿಗಳೆಂದರೆ ಕಾವೇರಿ, ಹೇಮಾವತಿ, ಲೋಕಪಾವನಿ, ಲಕ್ಷ್ಮಣ ತೀರ್ಥ ಮತ್ತು ಶಿಂಶಾ.

ವಿದ್ಯುತ್ ಪೂರೈಕೆ: ಚಾಮುಂಡೇಶ್ವರಿ ಎಲೆಕ್ಟ್ರಿಕಲ್ ಸಪ್ಲೈ ಕಂಪನಿ ಮಂಡ್ಯಜಿಲ್ಲೆಗೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಇದರ ಜತೆ ಜಿಲ್ಲೆಯಲ್ಲಿ ಹಲವಾರು ಜಲವಿದ್ಯುತ್ ಯೋಜನೆಗಳು ಜಾರಿಯಲ್ಲಿದೆ. ಹೇಮಾವತಿ ನದಿಗೆ ಕಟ್ಟಲಾಗಿರೋ ಗೊರೂರು ಅಣೆಕಟ್ಟೆಯಿಂದ ಮಂದಗೆರೆ ಹೈಡಲ್ ಸ್ಕೀಂನ 3.5 ಮೆಗವಾಟ್ ಯೋಜನೆ, 1902ರಲ್ಲಿ ಪ್ರಾರಂಭವಾದ ಶಿವನಸಮುದ್ರ ಜಲವಿದ್ಯುತ್ ಯೋಜನೆಯಿಂದ 42 ಮೆಗಾವಾಟ್ ವಿದ್ಯುತ್, ಶಿಂಶಾ ಜಲವಿದ್ಯುತ್ ಯೋಜನೆಯಿಂದ 17.2ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಆರೋಗ್ಯ ಸಂಪನ್ಮೂಲ: 385 ಖಾಸಗೀ ಆಸ್ಪತ್ರೆಗಳು ಜಿಲ್ಲೆಯಲ್ಲಿದ್ದು ಅತ್ಯುತ್ತಮ ಆರೋಗ್ಯ ಸೇವೆ ಲಭ್ಯವಿದೆ. 114 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜತೆ 14 ಅಲೋಪತಿ ಆಸ್ಪತ್ರೆ, 4 ಆಯುರ್ವೇದ ಆಸ್ಪತ್ರೆ, 7 ಸಮುದಾಯ ಆರೋಗ್ಯ ಕೇಂದ್ರಗಳಿವೆ.

ಸಂಪರ್ಕ ವ್ಯವಸ್ಥೆ: 73 ಕಿಮೀ ಉದ್ದದ ಎನ್ಎಚ್48 ಮತ್ತು ಎನ್ಎಚ್209 ಜಿಲ್ಲೆಯಲ್ಲಿ ಹಾದುಹೋಗಿದೆ. ಅಲ್ಲದೇ 15 ರೈಲ್ವೆ ನಿಲ್ದಾಣಗಳಿರೋ 97 ಕಿಮೀ ರೈಲ್ವೇ ಲೇನ್ ಸಹ ಬೇರೆ ಬೇರೆ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಮಂಡ್ಯಕ್ಕೆ ಹತ್ತಿರವಾಗಿ 3 ಅಂತರಾಷ್ಟ್ರೀಯ, 2 ದೇಶೀಯ ವಿಮಾನ ನಿಲ್ದಾಣಗಳು ಹಾಗೂ 4 ಬಂದರುಗಳು ಸಂಪರ್ಕಕ್ಕೆ ಸಿಗುತ್ತವೆ.

ಕೊನೆಯ ಮಾತು: ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದು ಈ ಬಾರಿಯ ಸಮಾವೇಶದಲ್ಲಿ ಉತ್ತಮ ಬಂಡವಾಳ ಹರಿದು ಬರೋ ನಿರೀಕ್ಷೆಯಿದೆ.