Rackಬ್ಯಾಂಕ್ ಎಂಬ ಮಾಹಿತಿ ಕೇಂದ್ರ ಆರಂಭಿಸಿದ ನರೇಂದ್ರ ಸೇನ್‌ರ ಯಶೋಗಾಥೆ

ಟೀಮ್​​ ವೈ.ಎಸ್​​.

0

ಮಧ್ಯಪ್ರದೇಶ ಸಣ್ಣ ಹಳ್ಳಿಯಲ್ಲಿ ಬೆಳೆದ ನರೇಂದ್ರ ಸೇನ್ ರಜಾದಿನಗಳಲ್ಲಿ ಇಂದೋರ್‌ಗೆ ಭೇಟಿ ನೀಡುತ್ತಿದ್ದರು. ಶಾಲಾ ಜೀವವನ ಮುಗಿಸಿದ ಬಳಿಕವೂ ಅವರಿಗೆ ಕಂಪ್ಯೂಟರ್ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿದಿರಲಿಲ್ಲ. ಆದರೆ ರಜಾ ದಿನಗಳಲ್ಲಿ ಫೋಟೋ ಕಾಪಿ ಶಾಪ್‌ಗಳಲ್ಲಿ ನರೇಂದ್ರ ಸೇನ್ ಕೆಲಸ ಮಾಡುತ್ತಿದ್ದರು. ಹೀಗೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಪ್ರಿಂಟ್‌ಔಟ್ ಪಡೆಯಲು ಸೈಬರ್ ಕೆಫೆಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು. ಹೀಗೆ ಅವರು ಮೊದಲ ಬಾರಿಗೆ ಕಂಪ್ಯೂಟರ್ ಬಳಕೆ ಬಗ್ಗೆ ತಿಳಿದುಕೊಂಡರು. ಈ ಹೊಸ ಪ್ರಪಂಚ ನರೇಂದ್ರರಿಗೆ ಆಸಕ್ತಿದಾಯಕ ಎನಿಸಿತ್ತು. ಆದರೂ ಸ್ವಲ್ಪ ಗಲಿಬಿಲಿಗೊಂಡಿದ್ದರು.

ಹೀಗೆ ಶುರುವಾಯಿತು ಕಂಪ್ಯೂಟರ್​​ಗಳೊಂದಿಗೆ ನರೇಂದ್ರರ ಪಯಣ. ಇದೇ ವೇಳೆಯಲ್ಲಿ ಅವರು ಸೈಬರ್ ಕೆಫೆಗಳಲ್ಲಿ ಕೆಲಸ ಮಾಡಲು ಆರಂಭಿಸಿದರು. ಕಂಪ್ಯೂಟರ್‌ ಬಗ್ಗೆ ತೀರಾ ಕಡಿಮೆ ಮಾಹಿತಿ ಹೊಂದಿದ್ದ ನರೇಂದ್ರ ಉದ್ಯೋಗದೊಂದಿಗೆ ಕಲಿಯುತ್ತಾ ಹೋದರು ಮತ್ತು ಹೆಚ್‌ಟಿಎಂಎಲ್ ಅವರ ಆಸಕ್ತಿಯನ್ನು ಕೆರಳಿಸಿತ್ತು.

ಕಂಪ್ಯೂಟರ್​​ಗಳ ಸುತ್ತಲೇ ನಾನು ನನ್ನ ಬಹುತೇಕ ಸಮಯವನ್ನು ಕಳೆಯುತ್ತಿದ್ದೆ. ಜನರು ವೆಬ್​​ಸೈಟ್​​ಗಳನ್ನು ಬಳಸುವ ರೀತಿಯನ್ನು ಗಮನಿಸುತ್ತಿದ್ದೆ ಹಾಗೂ ಇದರಿಂದ ವೆಬ್​ಸೈಟ್​​ಗಳ ಬಳಕೆ ಅಷ್ಟೇನೂ ಕಷ್ಟಕರವಲ್ಲ ಎಂದು ಅರಿತುಕೊಂಡೆ ಎನ್ನುತ್ತಾರೆ ನರೇಂದ್ರ. ತಮ್ಮದೇ ಸ್ವಂತ ವೆಬ್​ಸೈಟ್ ಆರಂಭಿಸುವವರೆಗೂ ನರೇಂದ್ರ ಕಲಿಯುತ್ತಲೇ ಹೋದರು. ಇದೇ ವೇಳೆ 1600 ರೂ.ಗಳ ಪ್ರಾಜೆಕ್ಟ್​​​ ಒಂದನ್ನು ನರೇಂದ್ರ ಪಡೆದುಕೊಂಡರು. ಇದು ತಮ್ಮ ಜೀವನದ ಮಹತ್ವದ ಘಟ್ಟ ಎನ್ನುತ್ತಾರೆ ನರೇಂದ್ರ. ವೆಬ್ ಹೋಸ್ಟಿಂಗ್​​ನ ಮರುಮಾರಾಟಗಾರರಾದ ನರೇಂದ್ರ ಇಲ್ಲಿಯೇ ತಮ್ಮ ದಾರಿಯನ್ನು ಕಂಡುಕೊಂಡರು. ಒಂದಷ್ಟು ಹಣವನ್ನು ಒಗ್ಗೂಡಿಸಿಕೊಂಡು ಸ್ವಂತದ್ದೇ ಒಂದು ಕಂಪನಿಯನ್ನು ಸ್ಥಾಪಿಸುವ ನಿರ್ಧಾರ ಮಾಡಿದರು ನರೇಂದ್ರ.

ಇದು ವೆಬ್ ಡೆವಲಪ್​​ಮೆಂಟ್ ಮತ್ತು ಆನ್​ಲೈನ್ ನಿರ್ವಹಣೆಯ ಸಂಸ್ಥೆ ಇಮ್ಯಾಕ್ಸ್ ಗ್ಲೋಬಲ್​​ನ ಮೊದಲ ಹೆಜ್ಜೆಯಾಯಿತು. ಈ ಕ್ಷೇತ್ರದ ಕೆಲ ಸೇವಾದಾರರು 2000ನೇ ಇಸವಿಯಲ್ಲಿ ತಮ್ಮ ಸೇವೆಯನ್ನು ಹಿಂಪಡೆದರು. ಆದರೆ ನರೇಂದ್ರ ತಮ್ಮ ಉದ್ಯಮವನ್ನು ಬೆಳೆಸಿದರು ಹಾಗೂ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದರು.

ನರೇಂದ್ರರ ಸಂಸ್ಥೆ ತಮ್ಮದೇ ಆದ ಸ್ವಂತ ಡಾಟಾ ಸೆಂಟರ್ ಸ್ಥಾಪಿಸಿಕೊಳ್ಳುವಷ್ಟು ಮಟ್ಟಕ್ಕೆ ಬೆಳೆಯಿತು. ಹೀಗೆ 2012ರಲ್ಲಿ ಹುಟ್ಟಿದ್ದೇ Rack ಬ್ಯಾಂಕ್. ಉತ್ತಮ ಪ್ರದರ್ಶನ, ಭದ್ರತೆ, ಇಮೇಲ್ ಸ್ಥಿರತೆ ಹಾಗೂ ನಿಯಂತ್ರಣಗಳೊಂದಿಗೆ Rack ಬ್ಯಾಂಕ್ ಅತ್ಯುತ್ತಮ ದರ್ಜೆಯ ಸೇವೆಯನ್ನು ಒದಗಿಸುತ್ತಿದೆ. ಬದ್ಧತೆಯ ಸೇವೆ ಒದಗಿಸುವುದರ ಜೊತೆಗೆ ನಿರ್ವಹಣೆ ಮತ್ತು ಸಂಗ್ರಹಣೆಯ ಸೇವೆಯನ್ನೂ ಸಹ Rack ಬ್ಯಾಂಕ್ ಒದಗಿಸುತ್ತಿದೆ. 10,00ಚದರಡಿ ವ್ಯಾಪ್ತಿಯಲ್ಲಿ ಹತ್ತಿರ ಹತ್ತಿರ 2500 ಸರ್ವರ್ ಸಾಮರ್ಥ್ಯವನ್ನು ಇದು ಹೊಂದಿದೆ. ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೆಬ್ ಮತ್ತು ಇಂಟರ್​ನೆಟ್ ಸರ್ವರ್ ವ್ಯವಸ್ಥೆ ಇದಾಗಿದೆ. ರಿಯಲ್ ಎಸ್ಟೇಟ್ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಂತಹ ನಗರಗಳಲ್ಲೂ ತನ್ನ ಮಾಹಿತಿ ಕೇಂದ್ರವನ್ನು ತೆರೆದಿದೆ ಎನ್ನುತ್ತಾರೆ ನರೇಂದ್ರ.

ಸುಮಾರು 35ಕ್ಕೂ ಹೆಚ್ಚು ಉದ್ಯೋಗಿಗಳನ್ನು (15 ಮಂದಿ ಹೊರಗುತ್ತಿಗೆ ಕೆಲಸಗಾರರು ಸೇರಿ) ಹೊಂದಿರುವ Rackಬ್ಯಾಂಕ್ ಸಂಸ್ಥೆ ವೇಗವಾಗಿ ಬೆಳೆಯುತ್ತಿದೆ. ಈಗಾಗಲೇ ಭಾರತದಲ್ಲಿ 20 ಮಾಹಿತಿಕೇಂದ್ರಗಳನ್ನು ಈ ಸಂಸ್ಥೆ ಹೊಂದಿದೆ. ಪ್ರತಿಯೊಂದನ್ನು ಮಾಹಿತಿ ಕೇಂದ್ರವನ್ನು ಸಂಭಾಳಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ನಮ್ಮ ಎಲ್ಲಾ ಉದ್ಯೋಗಿಗಳು ಸಮರ್ಪಕ ರೀತಿಯಲ್ಲಿ ತರಬೇತಿ ಪಡೆದಿದ್ದಾರೆ. ಕೆಲಸಕ್ಕೆ ತೆಗೆದುಕೊಳ್ಳುವಾಗ ತುಂಬಾ ಜಾಗ್ರತೆಯಿಂದ ಆಯ್ದ ಕೆಲಸಗಾರರನ್ನೇ ತೆಗೆದುಕೊಳ್ಳುತ್ತೇವೆ ಹಾಗೂ ಅವರಿಗೆ ಸರಿಯಾದ ತರಬೇತಿ ನೀಡಿ ಮಾಹಿತಿ ಕೇಂದ್ರಗಳನ್ನು ನೋಡಿಕೊಳ್ಳಲು ಬಿಡುತ್ತೇವೆ ಎನ್ನುತ್ತಾರೆ ನರೇಂದ್ರ. ನೆಟ್ ಮ್ಯಾಜಿಕ್ ಸಂಸ್ಥೆ ನೀಡುವಂಥದ್ದೇ ಸೇವೆಯನ್ನು ಇನ್ನೂ ಕಡಿಮೆ ದರದಲ್ಲಿ ನೀಡುತ್ತೇವೆ ಎಂದು ನರೇಂದ್ರ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾರೆ. ಉದ್ಯಮವಲಯದಲ್ಲಿ ಈಗಾಗಲೇ ತನ್ನ ಹೆಜ್ಜೆಗುರುತನ್ನುRack ಬ್ಯಾಂಕ್ ಸಂಸ್ಥೆ ಮೂಡಿಸಿದೆ. ಅಲ್ಲದೇ ಕೆಲವು ಹೂಡಿಕೆದಾರರೊಂದಿಗೆ ಹೂಡಿಕೆಯ ಏರಿಕೆ ಕುರಿತು ಮಾತುಕತೆ ನಡೆಸುತ್ತಿದೆ.

ಕೆಳಮಟ್ಟದಿಂದ ಬೆಳೆದು ಬಂದವರ ಇಂತಹ ಯಶೋಗಾಥೆಗಳು ಪ್ರೋತ್ಸಾಹಪೂರಿತ ಮತ್ತು ಸ್ಪೂರ್ತಿದಾಯಕವಾಗಿರುತ್ತದೆ. ಇಂಥದ್ದೇ ಹಲವು ಕಥೆಗಳನ್ನು ನೋಡಿದಾಗ ಭಾರತದಲ್ಲಿ ಉದ್ಯಮಶೀಲತೆ ಅತ್ಯುತ್ತಮ ಗತಿಯತ್ತ ಸಾಗುತ್ತಿದೆ ಎಂಬುದನ್ನು ಘಂಟಾಘೋಷವಾಗಿ ಹೇಳಬಹುದಾಗುತ್ತದೆ.

Related Stories