ಕಳವಳಕಾರಿಯಾಗಿ ಹಬ್ಬುತ್ತಿರುವ ಕ್ಯಾನ್ಸರ್..! ಪರಿಸ್ಥಿತಿ ಎದುರಿಸಲು ನಾವು ಸಿದ್ಧರಾಗಿದ್ದೇವೇಯೇ..?

ಟೀಮ್​ ವೈ.ಎಸ್​. ಕನ್ನಡ

0

ಕ್ಯಾನ್ಸರ್ ಈ ಪದ ಕೇಳಿದ ತಕ್ಷಣ ಪ್ರತಿಯೊಬ್ಬರೂ ಬೆಚ್ಚಿ ಬೀಳುತ್ತಾರೆ. ಯಾರಿಗೆ ಯಾವ ಸಂದರ್ಭದಲ್ಲಿ ಈ ರೋಗ ಬರುತ್ತದೆ ಎಂದು ಊಹಿಸಲು ಅಸಾಧ್ಯವಾಗಿದೆ. ಇದೀಗ ಅತ್ಯಂತ ಕಳವಳಕಾರಿಯಾದ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಕಳೆದ 20 ವರ್ಷಗಳಲ್ಲಿ ಕ್ಯಾನ್ಸರ್ ಪ್ರಮಾಣ ಶೇಕಡ 75ರಷ್ಟು ಹೆಚ್ಚಳ ದಾಖಲಿಸಿದೆ. ಇದು ಪ್ರತಿಯೊಬ್ಬರನ್ನು ಚಿಂತೆಗೀಡು ಮಾಡಿದೆ. ಇದಕ್ಕೆ ಕಾರಣ ಏನು.. ಯಾಕಾಗಿ ಕ್ಯಾನ್ಸರ್ ಮಾರಣಾಂತಿಕ ರೀತಿಯಲ್ಲಿ ವ್ಯಾಪಿಸುತ್ತಿದೆ.. ಇದು ಎಲ್ಲರನ್ನು ಆತ್ಮವಾಲೋಕನಕ್ಕೆ ದಾರಿ ಮಾಡಿಕೊಟ್ಟಿದೆ.

ಇತ್ತೀಚೆಗೆ ಕ್ಯಾನ್ಸರ್ ಕುರಿತಾದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವೊಂದು ನಡೆಯಿತು. ಇದರಲ್ಲಿ ಪಾಲ್ಗೊಂಡು ಮಾತನಾಡಿದ ಆರ್ಯ ವೈದ್ಯ ಫಾರ್ಮಸಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ. ಆರ್​​. ಕೃಷ್ಣ ಕುಮಾರ್ ಬೆಚ್ಚಿ ಬೀಳಿಸುವ ಮಾಹಿತಿ ನೀಡಿದರು. ಇದು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವದಾದ್ಯಂತ ಕ್ಯಾನ್ಸರ್ ಮಾರಣಾಂತಿಕ ಪ್ರಮಾಣದಲ್ಲಿ ಹಬ್ಬುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. 2030ರ ಹೊತ್ತಿಗೆ ಹೊಸತಾಗಿ 21.7 ಮಿಲಿಯನ್ ಹೊಸ ಕ್ಯಾನ್ಸರ್ ರೋಗಿಗಳು ಕಂಡು ಬರಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಅವಾನಿಶಿಲ್ಲಿಂಗಮ್ ವಿಶ್ವವಿದ್ಯಾನಿಲಯ ಓಹಿಯೋ ವಿಶ್ವ ವಿದ್ಯಾನಿಲಯ ಸಂಯುಕ್ತವಾಗಿ ಈ ವಿಚಾರ ಸಂಕಿರ್ಣವನ್ನು ಏರ್ಪಡಿಸಿತ್ತು. ಪ್ರತಿವರ್ಷ 11 ಮಿಲಿಯನ್ ಮಂದಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದು, ಅವರಲ್ಲಿ 7 ಮಿಲಿಯನ್ ಮಂದಿ ಈ ರೋಗದಿಂದ ಸಾವನ್ನಪ್ಪುತ್ತಿದ್ದಾರೆ ಎಂಬ ಅಂಶ ಸ್ಪಷ್ಟವಾಯಿತ್ತು.

ಇದರಲ್ಲಿ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಸೇರಿದ ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ತೀರಾ ಕಳವಳಕಾರಿಯಾದ ವಿದ್ಯಮಾನವಾಗಿದೆ. ಹೆಚ್ಐವಿ, ಮಲೇರಿಯಾಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಜನರು ತುತ್ತಾಗುತ್ತಿದ್ದಾರೆ.

ಕ್ಯಾನ್ಸರ್ ರೋಗವನ್ನು ಗುಣಪಡಿಸುವ ನಿಟ್ಟಿನಲ್ಲಿ ಪರಂಪರಾಗತ ವೈದ್ಯ ಪದ್ಧತಿ ಮತ್ತು ಆಧುನಿಕ ವೈದ್ಯ ಪದ್ಧತಿಯನ್ನು ಸಮ್ಮಿಲನಗೊಳಿಸಿ ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ. ರೋಗಿಗಳನ್ನು ಕ್ಯಾನ್ಸರ್ ನಿಂದ ಪಾರು ಮಾಡಲು ಈ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನದ ಅಗತ್ಯ ಇದೆ ಎನ್ನುತ್ತಾರೆ ಕೃಷ್ಣ ಕುಮಾರ್.

ವಿಚಾರ ಸಂಕಿರಣದಲ್ಲಿ ಮಾತನಾಡಿದ ಖ್ಯಾತ ವೈದ್ಯ ಡಾ. ತಂಗರಾಜನ್ ರಾಜ್ ಕುಮಾರ್ , ಮೂಳೆ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದರು. ಮಕ್ಕಳಲ್ಲಿ ಮತ್ತು ಯುವಕರಲ್ಲಿ ಮೂಳೆ ಕ್ಯಾನ್ಸರ್ ಹೆಚ್ಚಾಗುತ್ತಿದೆ ಎಂದು ಪ್ರತಿಪಾದಿಸಿದರು. ತಮ್ಮ ನೇತೃತ್ವದ ಸಂಶೋಧನಾ ತಂಡ ಈ ರೋಗ ಗುಣಪಡಿಸುವ ಔಷಧಿ ಅಭಿವೃದ್ದಿಪಡಿಸಿದೆ ಎಂದು ನುಡಿದರು.

ಅನುವಾದಕರು: ಎಸ್​ಡಿ