ತಳ್ಳು ಗಾಡಿಯಿಂದ ಮೊಬೈಲ್ ನಲ್ಲಿ ತರಕಾರಿ ಖರೀದಿಸಿ.. !

ಟೀಮ್ ವೈ.ಎಸ್.

ತಳ್ಳು ಗಾಡಿಯಿಂದ ಮೊಬೈಲ್ ನಲ್ಲಿ ತರಕಾರಿ ಖರೀದಿಸಿ.. !

Saturday September 26, 2015,

3 min Read

ಸಂಜೀವ್ ತಳ್ಳುಗಾಡಿಯವನಿಂದ ತರಕಾರಿ ಖರೀದಿಸಬೇಕಿತ್ತು. ಅದಕ್ಕಾಗಿ ತರಕಾರಿಯವನಿಗೆ ಫೋನ್ ಮಾಡಿದ್ರು. ಆತ ಬ್ಯುಸಿ ಇದ್ದ. ಹೀಗಾಗಿ ವಾಟ್ಸ್ಆ್ಯಪ್ ನಲ್ಲಿ ತರಕಾರಿ ಪಟ್ಟಿ ಕಳುಹಿಸಿ, ಮನೆಗೆ ತರಕಾರಿ ಕಳುಹಿಸುವುದಾಗಿ ಆತ ಹೇಳಿದ. ಅಚ್ಚರಿಯೆಂದರೆ, ಆತ ಹೇಳಿದ ಹಾಗೆ, ಸಂಜೀವ್ ಅವರು ಕಚೇರಿಗೆ ಹೋದ ವೇಳೆಯಲ್ಲಿ ಮನೆಗೆ ತರಕಾರಿ ತಲುಪಿಸಿದ್ದ. ಈ ವಹಿವಾಟು ತುಂಬಾ ಸರಳವಾಗಿತ್ತು.

ಆದರೆ ಸಮಸ್ಯೆ ಎದುರಾಗಿದ್ದು ಹಣಪಾವತಿಸುವ ವೇಳೆ. "ನಾನು ಮನೆಯಲ್ಲಿದ್ದ ವೇಳೆ ಆತ ಹಣ ಪಡೆಯಲು ಯಾರನ್ನಾದರೂ ಕಳುಹಿಸಬೇಕಿತ್ತು. ಆಗ ನನಗೆ ಒಂದು ಯೋಚನೆ ಬಂತು. ಸಣ್ಣಸಣ್ಣ ವ್ಯಾಪಾರಿಗಳಿಗೂ ವಿದ್ಯುನ್ಮಾನ ಮಾಧ್ಯಮದ ಮೂಲಕ ಹಣ ಪಡೆಯುವ ವ್ಯವಸ್ಥೆ ಇದ್ದರೆ ಎಷ್ಟು ಒಳ್ಳೆಯದಿತ್ತು ಅಂತ ಯೋಚಿಸಿದೆ." ಎನ್ನುತ್ತಾರೆ ಸಂಜೀವ್. ಹೀಗೆ ಹುಟ್ಟಿಕೊಂಡಿದ್ದೇ ಎಫ್ ಟಿ ಕ್ಯಾಷ್ ಎಂಬ ಆ್ಯಪ್. ಇದು ಸಣ್ಣವ್ಯಾಪಾರಿಗಳಿಗೆ ತಮ್ಮ ಗ್ರಾಹಕರ ಜೊತೆ ಸಂಪರ್ಕ ಸಾಧಿಸಲು ನೆರವು ನೀಡುತ್ತದೆ. ಇದು ಮೊಬೈಲ್ ಅಪ್ಲಿಕೇಶನ್ ಆಗಿದ್ದು,ಆಫ್ ಲೈನ್ ಚಿಲ್ಲರೆ ವ್ಯಾಪಾರಿಗಳಿಗೆ ಮೊಬೈಲ್ ಮುಖಾಂತರ ಪಾವತಿ ಪಡೆಯಲು, ಜಾಹೀರಾತು ನೀಡಲು ಮತ್ತು ಗ್ರಾಹಕರಿಗೆ ಕೊಡುಗೆಗಳನ್ನು ನೀಡಲು ಸಹಕಾರಿಯಾಗಿದೆ.

ಟೀಮ್ ಎಫ್ ಟಿ ಕ್ಯಾಷ್

ಟೀಮ್ ಎಫ್ ಟಿ ಕ್ಯಾಷ್


ಇ-ಕಾಮರ್ಸ್ ಅತಿವೇಗದಲ್ಲಿ ಬೆಳವಣಿಗೆಯಾಗುತ್ತಿದ್ದರೂ, ಒಟ್ಟಾರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ಬಳಕೆದಾರರ ಪ್ರಮಾಣ ಕೇವಲ 1% ಮಾತ್ರ. "ಎಫ್ ಟಿ ಕ್ಯಾಶ್ ನಿಂದಾಗಿ, ಉಳಿದ 99% ವ್ಯಾಪಾರಿಗಳಿಗೆ ಸಹಾಯ ಲಭಿಸಿದೆ." ಎನ್ನುತ್ತಾರೆ ಸಂಜೀವ್. ಸಣ್ಣಪುಟ್ಟ ಆಫ್ ಲೈನ್ ವ್ಯಾಪಾರಿಗಳಾದ ಹಾಲು ಮಾರಾಟಗಾರರು, ತರಕಾರಿ ವ್ಯಾಪಾರಿಗಳ ಜೊತೆಗೆ ನಮ್ಮ ವ್ಯವಹಾರ ನಡೆಯುತ್ತಿದೆ ಎನ್ನುತ್ತಾರೆ ಸಂಜೀವ್.

ವ್ಯಾಪಾರಿಗಳು ಮತ್ತು ಗ್ರಾಹಕರ ಜೊತೆಗಿನ ಸಂಬಂಧ

ತಮ್ಮ ಸಮೀಪದಲ್ಲೇ ಇರುವ ವ್ಯಾಪಾರಿಗಳು, ಸೇವೆ ನೀಡುತ್ತಿರುವವರ ಜೊತೆ ಎಲ್ಲಾ ನಗದು ಪಾವತಿ ವ್ಯವಸ್ಥೆಯನ್ನು ಇದು ಸರಳೀಕರಿಸಿದೆ. ಅಷ್ಟೇ ಅಲ್ಲ, ಎಫ್ ಟಿ ಕ್ಯಾಷ್ ಮೂಲಕ ಆಫ್ಲೈನ್ ಚಿಲ್ಲರೆ ವ್ಯಾಪಾರಿ ಜೊತೆ ವ್ಯವಹರಿಸುವುದು ತುಂಬಾ ಸುಲಭವಾಗಿ ದೆ. ತಮ್ಮ ಮೊಬೈಲ್ಗಳ ಮೂಲಕವೇ ಗ್ರಾಹಕರು ಬಿಲ್ ಪಡೆಯಬಹುದು. "ವ್ಯಾಪಾರಿಗಳು ಈ ಅಪ್ಲಿಕೇಶನ್ ಬಳಸಿಕೊಂಡೇ ತಮ್ಮ ಸ್ಥಳೀಯ ಮಟ್ಟದಲ್ಲಿ ಪ್ರಚಾರ ಪಡೆಯಬಹುದು ಹಾಗೂ ಖಾಯಂ ಗ್ರಾಹಕರಿಗೆ ಕೊಡುಗೆಗಳನ್ನು ಕೊಡಬಹುದು." ಎನ್ನುತ್ತಾರೆ ಸಂಜೀವ್

ಎಫ್ ಟಿ ಕ್ಯಾಷ್ ಕಂಪನಿಯು ಸರಳ ಮತ್ತು, ಕಡಿಮೆ ವೆಚ್ಚದಲ್ಲಿ ಡಿಜಿಟಲ್ ವೇದಿಕೆ ಬಳಸಲು ಅವಕಾಶ ಒದಗಿಸಿದೆ. ವ್ಯಾಪಾರಿಗಳು ತಮ್ಮ ಸನಿಹದಲ್ಲಿರುವ ಗ್ರಾಹಕರನ್ನು ಹುಡುಕಿ, ಅವರಿಗೆ ವಿಶಿಷ್ಟವಾದ ಪ್ರಚಾರ ತಂತ್ರಗಳ ಮೂಲಕ ಕೊಡುಗೆಗಳನ್ನು ಘೋಷಿಸಬಹುದು. ಹಾಗೆಯೇ, ವಿದ್ಯುನ್ಮಾನ ಮಾಧ್ಯಮದ ಮೂಲಕವೇ ಹಣವನ್ನು ಪಡೆಯಬಹುದು. ಇದು ಅವರ ಸಂಪರ್ಕವನ್ನೂ ಹೆಚ್ಚಿಸುತ್ತದೆ.

ಸಂಜೀವ್ ಅವರು ಡಚ್ ಬ್ಯಾಂಕ್ ನಲ್ಲಿ ಭಾರತದ ಉಪ ಮುಖ್ಯ ಹಣಕಾಸು ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿದ್ದರು. ಎಫ್ ಟಿ ಕ್ಯಾಶ್ ನ ಸಹ ಸಂಸ್ಥಾಪಕರಾದ ದೀಪಕ್ ಕೊಠಾರಿಯವರು ಗ್ರಾಂಟ್ ಥಾರ್ನ್ ಟನ್ ನಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಇಬ್ಬರೂ ಜೊತೆಗೂಡಿ ಎಫ್ ಟಿ ಕ್ಯಾಷ್ ಆರಂಭಿಸಿದರು. 2014ರಲ್ಲಿ ತಮ್ಮ ಹೊಸ ಪ್ರಯಾಣ ಆರಂಭಿಸಿದ ಈ ಇಬ್ಬರು, ಮೂರು ತಿಂಗಳ ಕಾಲ ಚರ್ಚೆ, ಕ್ಷೇತ್ರ ಸಮೀಕ್ಷೆ, ಗ್ರಾಹಕರು ಮತ್ತು ವ್ಯಾಪಾರಿಗಳ ಜೊತೆ ಸಂವಾದ ನಡೆಸಿದ್ದರು.

ಇವೆಲ್ಲಾ ಹೇಗೆ ಸಾಧ್ಯವಾಯಿತು?

"ಆರಂಭದಲ್ಲಿ ಎಲ್ಲವೂ ಕುತೂಹಲಕಾರಿಯಾಗಿತ್ತು. ಉತ್ಪನ್ನದ ಮಾದರಿಯೂ ಇಲ್ಲದೆ, ಗ್ರಾಹಕರನ್ನು ಮತ್ತು ವರ್ತಕರನ್ನು ಸಂಪರ್ಕಿಸುವುದು, ಅವರಿಗೆ ಅರ್ಥ ಮಾಡಿಸುವುದು ತುಂಬಾ ಕಷ್ಟವಾಗಿತ್ತು. ಚಿಕ್ಕಪುಟ್ಟ ವರ್ತಕರಿಗೆ ಇದನ್ನು ಅರ್ಥಮಾಡಿಸುವುದೇ ಬೆಟ್ಟದಂತಹ ಸವಾಲಾಗಿತ್ತು. ಉತ್ಪನ್ನವನ್ನು ತಯಾರಿಸಿ, ಅದನ್ನು ಜನರಿಗೆ ತೋರಿಸಿದ ಬಳಿಕವೇ ಎರಡೂ ಕಡೆಗಳೂ ಇದನ್ನು ಸ್ವೀಕರಿಸಲು ಆರಂಭಿಸಿದವು" ಎನ್ನುತ್ತಾರೆ ಸಂಜೀವ್.

ಜನರ ಜೊತೆಗೆ ಸಂಪರ್ಕ ಹೆಚ್ಚಾದಂತೆ ತಂಡಕ್ಕೆ ಒಂದು ಧೈರ್ಯವೂ ಬಂತು. ಸಣ್ಣಪುಟ್ಟ ವ್ಯಾಪಾರಿಗಳೂ ತಂತ್ರಜ್ಞಾನದ ಲಾಭ ಪಡೆಯಲು ಇಚ್ಚಿಸುತ್ತಾರೆ ಎನ್ನುವುದು ಅರಿವಿಗೆ ಬಂತು. ಆದರೆ, ಅವರ ಬಳಿ, ತಮ್ಮ ಆಸೆ ಈಡೇರಿಸಿಕೊಳ್ಳುವ ಯಾವುದೇ ಉತ್ಪನ್ನಗಳು ಇರಲಿಲ್ಲ.

ವ್ಯಾಪಾರಿಗಳ ದೃಷ್ಟಿಯಿಂದ ಅವರಿಗೆ ಈ ಉತ್ಪನ್ನ ತೀರಾ ಹೊಸದಾಗಿತ್ತು. ಹೀಗಾಗಿ ಆರಂಭದ್ತಲ್ಲಿ ಅಷ್ಟೊಂದು ಸ್ವೀಕರಿಸಲ್ಪಡಲಿಲ್ಲ. ದಶಕಗಳಿಂದಲೂ ಅವರು ಇದೇ ರೀತಿ ವ್ಯಾಪಾರ ಮಾಡುತ್ತಾ ಬಂದಿದ್ದರು, ಅವರು ಹೊಸತನಗಳಿಗೆ ಒಗ್ಗುವುದು ಕಷ್ಟವಾಗಿತ್ತು. ಆದರೆ, ಆರಂಭಿಕ ಗ್ರಾಹಕರು ಇದರಲ್ಲಿ ಯಶಸ್ಸು ಸಾಧಿಸಿದರೆ, ಉಳಿದವರೂ ಜೊತೆಯಾಗುವುದು ಖಚಿತ ಎನ್ನುವ ವಿಶ್ವಾಸ ತಂಡಕ್ಕಿತ್ತು.

ಬೆಳವಣಿಗೆ ಮತ್ತು ವಹಿವಾಟು:

ಜೂನ್ ನಲ್ಲಿ ಉತ್ಪನ್ನವನ್ನು ಆರಂಭಿಸಲಾಯಿತು. ಮುಂಬೈನ ಪೋವೈನಲ್ಲಿ ಇದನ್ನು ಮೊದಲ ಪ್ರಯೋಗಿಸಲಾಗಿದೆ. ಮುಂಬೈನ ಇತರ ಪ್ರದೇಶಗಳಿಗೂ ವಿಸ್ತರಿಸುವ ಚಿಂತನೆ ಇದೆ. ಸಧ್ಯಕ್ಕೆ ಕಂಪನಿ ಬಳಿ 150ಕ್ಕೂ ಹೆಚ್ಚು ವ್ಯಾಪಾರಿಗಳಿದ್ದಾರೆ. ಅಲ್ಲದೆ, 10ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದೆ.

ವ್ಯಾಪಾರಿಗಳು ನಡೆಸುವ ವಹಿವಾಟಿನಲ್ಲಿ ಸ್ವಲ್ಪ ಪಾಲು ಎಫ್ ಟಿ ಕ್ಯಾಶ್ ಗೆ ಹೋಗುತ್ತದೆ. ಅಷ್ಟೇ ಅಲ್ಲ, ಗ್ರಾಹಕರಿಗೆ ಪ್ರಚಾರ ಕೊಡುಗೆಗಳನ್ನು ಘೋಷಿಸಿದಾಗಲೂ ಎಫ್ ಟಿ ಕ್ಯಾಶ್ ಗೆ ಹಣ ನೀಡುತ್ತಾರೆ. ಇದು ಸರ್ವವ್ಯಾಪಿಯಾದರೆ, ಆದಾಯ ಸಂಗ್ರಹಿಸುವ ಬೇರೆಬೇರೆ ದಾರಿಗಳೂ ಲಭ್ಯವಾಗಲಿದೆ ಎಂದು ಎಫ್ ಟಿ ಕ್ಯಾಶ್ ತಂಡ ಅಭಿಪ್ರಾಯಪಡುತ್ತದೆ.

ಕಳೆದ 12-18 ತಿಂಗಳಿನಿಂದ ನಾವು ಗುರಿಯಾಗಿರಿಸಿಕೊಂಡ ವ್ಯಾಪಾರಿಗಳ ವಲಯ ಈ ತಂತ್ರಜ್ಞಾನದತ್ತ ಒಲವು ವ್ಯಕ್ತಪಡಿಸತೊಡಗಿದೆ. 5 ವರ್ಷಗಳ ಹಿಂದೆ ಸ್ಮಾರ್ಟ್ ಫೋನ್ ಕೇವಲ ಉಳ್ಳವರ ಸ್ವತ್ತಾಗಿತ್ತು. ಆದರೆ, ಈಗ ಸಣ್ಣಪುಟ್ಟ ವ್ಯಾಪಾರಿಗಳ ಕೈಯಲ್ಲೂ ಸ್ಮಾರ್ಟ್ ಫೋನ್ ಗಳಿವೆ. ವಾಟ್ಸಾಪ್ ಗ್ರೂಪ್ ಗಳ ಮೂಲಕ ತಮ್ಮ ವಹಿವಾಟಿನ ಪ್ರಚಾರ ಮಾಡುತ್ತಿದ್ದಾರೆ. ಗ್ರಾಹಕರ ಚಿಂತನೆಯೂ ಬದಲಾಗುತ್ತಿದೆ. ಅವರಿಗೆ ಎಲ್ಲವೂ ಸುಲಭದಲ್ಲಿ ದೊರಕಬೇಕು. ಭಾನುವಾರ ಬೆಳಗ್ಗೆ ಮನೆಯಲ್ಲಿ ಕುಳಿತುಕೊಂಡು ತರಕಾರಿಯವನಿಗೆ ಪಾವತಿ ಮಾಡುವ ಬದಲು, ಬೇರೆ ದಿನಗಳಲ್ಲಿ ಕಚೇರಿಯಲ್ಲಿ ಕುಳಿತೇ ಪಾವತಿ ಮಾಡಲು ಇಚ್ಚಿಸುತ್ತಾರೆ ಎನ್ನುವುದು ಸಂಜೀವ್ ಅವರ ಮಾತಿನ ಸಾರಾಂಶ.

ನಗದುರಹಿತ ವಹಿವಾಟಿನ ಮಾರುಕಟ್ಟೆ

ತಮ್ಮ ಅಭಿವೃದ್ಧಿ, ಬೆಳವಣಿಗೆಗಾಗಿ ಚಿಕ್ಕ ವರ್ತಕರೂ ತಂತ್ರಜ್ಞಾನವನ್ನು ದೊಡ್ಡಮಟ್ಟದಲ್ಲಿ ಬಳಸಿಕೊಳ್ಳಲು ಹೊರಟಿದ್ದಾರೆ. ಇದರಿಂದಾಗಿ ಈ ಮಾರುಕಟ್ಟೆ ಬೆಳವಣಿಗೆ ಸಾಧಿಸುತ್ತಿದೆ. ಎಫ್ ಟಿ ಕ್ಯಾಶ್ ಇಂತಹ ಗ್ರಾಹಕರ ಜೊತೆಗಾರನಾಗಿ ಅವರನ್ನು ಬೆಳೆಯಲು ಪ್ರೋತ್ಸಾಹಿಸುತ್ತದೆ.

"ನಾವು ವೇಗವಾಗಿ ಬೆಳೆಯುತ್ತಿದ್ದೇವೆ. 2016ರ ಮಾರ್ಚ್ ವೇಳೆಗೆ ನಾವು 2000 ಗ್ರಾಹಕರನ್ನು ಹೊಂದಲಿದ್ದೇವೆ. ದೇಶದಲ್ಲಿ ಸಣ್ಣ ವರ್ತಕರು ಎದುರಿಸುತ್ತಿರುವ ದೊಡ್ಡ ಸಮಸ್ಯೆಯೊಂದನ್ನು ನಾವು ಪರಿಹರಿಸಲಿದ್ದೇವೆ. ಆನ್ ಲೈನ್ ವರ್ತಕರ ಜೊತೆ ನಮ್ಮ ಹತ್ತಿರದ ವರ್ತಕರೂ ಸ್ಪರ್ಧೆ ಮಾಡುವಂತೆ ನಾವು ಮಾಡುತ್ತಿದ್ದೇವೆ. ಅವರಿಗಿಂತ ಹೆಚ್ಚಿನ ಸೌಲಭ್ಯ ಇಲ್ಲದಿದ್ದರೂ ಅವರಷ್ಟೇ ಸವಲತ್ತುಗಳನ್ನು ನೀಡುತ್ತೇವೆ," ಎನ್ನುತ್ತಾರೆ ಸಂಜೀವ್.

ಜಾಗತಿಕ ಮಟ್ಟದಲ್ಲಿ ಫ್ಲಿಂಟ್ ಮತ್ತು ಲೆವೆಲ್ಅಪ್ ಎಂಬ ಮೊಬೈಲ್ ಪಾವತಿ ವೇದಿಕೆಗಳಿವೆ. ಆದರೆ, ಭಾರತೀಯ ಮಾರುಕಟ್ಟೆ ಇಂತಹ ವ್ಯವಸ್ಥೆಯನ್ನು ಇನ್ನೂ ಸ್ವೀಕರಿಸಿಲ್ಲ. ಸುಮಾರು 11%ನಷ್ಟು ನಗರದ ನಿವಾಸಿಗಳು ನಗದು ರಹಿತ ಪಾವತಿ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುತ್ತದೆ ಐಡಿಎಫ್ ವರದಿ ಮತ್ತು ಐಎಎಂಎಐ ವರದಿ ಪ್ರಕಾರ ಕೇವಲ 0.43 % ಜನರು ಮಾತ್ರ ನಗದುರಹಿತ ಪಾವತಿ ವ್ಯವಸ್ಥೆ ಬಳಸುತ್ತಿದ್ದಾರೆ.